HomeUncategorized2024ರಲ್ಲಿ ಮೋದಿ ಸೋಲಿಸಲು AAP, TMC ಜೊತೆ ಮೈತ್ರಿ: ಸಂದರ್ಶನದಲ್ಲಿ ಅಖಿಲ್‌ ಗೊಗೊಯ್

2024ರಲ್ಲಿ ಮೋದಿ ಸೋಲಿಸಲು AAP, TMC ಜೊತೆ ಮೈತ್ರಿ: ಸಂದರ್ಶನದಲ್ಲಿ ಅಖಿಲ್‌ ಗೊಗೊಯ್

ಬಿಜೆಪಿ ರಾಜಕೀಯವಾಗಿ ಪ್ರಬಲವಾದಷ್ಟು ದೇಶದಲ್ಲಿ ದೌರ್ಜನ್ಯಗಳು ಹೆಚ್ಚುತ್ತಿವೆ. ಬಿಜೆಪಿಯ ಪ್ರಾಬಲ್ಯವನ್ನು ಮುರಿಯುವುದೇ ನಮ್ಮ ಮುಂದಿನ ಗುರಿ.

- Advertisement -
- Advertisement -

NIA ಕೋರ್ಟ್‌ನಿಂದ ತಮ್ಮ ಮೇಲಿನ ಎಲ್ಲಾ ಆರೋಪಗಳಿಂದ ದೋಷಮುಕ್ತಗೊಂಡ ಕೆಲವೇ  ಗಂಟೆಗಳಲ್ಲಿ ಅಸ್ಸಾಂನ ಶಾಸಕ ಮತ್ತು ರೈತ ಹೋರಾಟಗಾರ ಅಖಿಲ್ ಗೊಗೋಯ್ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಮುಂದಿನ ರಾಜಕೀಯ ನಡೆಗಳನ್ನು ತೆರೆದಿಟ್ಟರು. ಗುರುವಾರ ಗುವಾಹಟಿಯಲ್ಲಿ ಕೃಷಿಕ ಮುಕ್ತಿ ಸಂಗ್ರಾಮ್ ಸಮಿತಿ (KMSS) ಯ ಅಂಗಸಂಸ್ಥೆಯಾದ ರೈಜೋರ್‌ ದಳದ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತುಕತೆ ನಡೆಸಿದರು. ಈ ಸಮದಯಲ್ಲಿ ರಾಷ್ಟ್ರೀಯ ಸುದ್ದಿ ಸಂಸ್ಥೆ ದಿ ವೈರ್ ಗೊಗೋಯ್ ಅವರನ್ನು ಸಂದರ್ಶನ ನಡೆಸಿದೆ. ಅದರ ತುಣುಕು ಇಲ್ಲಿದೆ..

ಅಖಿಲ್ ಗೊಗೋಯ್ ಅಸ್ಸಾಂನಲ್ಲಿ ಸಿಎಎ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹೋರಾಟಗಾರ. UAPA ಕಾಯ್ದೆಯಡಿಯಲ್ಲಿ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ NIA ಗೊಗೋಯ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು. ಜೈಲಿನಿಂದಲೇ ಅಖಿಲ್ ಗೊಗೋಯ್‌ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಶಾಸಕರಾಗಿ ಆಯ್ಕೆಯಾದ ಗೊಗೋಯ್ ಅವರನ್ನು ಮಾನಸಿಕ ಅಸ್ವಸ್ಥ ಎಂದು ಮುಖ್ಯಂಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಅಸ್ಸಾಂ ವಿಧಾನಸಭೆಯಲ್ಲಿ ಅವಮಾನಿಸಿದ್ದರು. ನಿನ್ನೆ ಜುಲೈ 1 ರ ಗುರುವಾರ ಗುವಾಹಟಿಯ NIA ನ್ಯಾಯಾಲಯ ಗೊಗೋಯ್ ಅವರನ್ನು ಬಿಡುಗಡೆಗೊಳಿಸಿದೆ.

ಇದನ್ನೂ ಓದಿ: ಹೋರಾಟಗಾರ ಅಖಿಲ್ ಗೊಗೋಯ್‌ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಕೈಬಿಟ್ಟ ಎನ್‌ಐಎ ನ್ಯಾಯಾಲಯ

ವೈರ್ : ನೀವು 18 ತಿಂಗಳುಗಳ ಕಾಲ ಜೈಲಿನಲ್ಲಿ ಕಳೆದಿರಿ. ಸರ್ಕಾರ ಒಂದಾದ ಮೆಲೊಂದರಂತೆ ನಿಮ್ಮ ಮೇಲೆ ಪ್ರಕರಣಗಳನ್ನು ದಾಖಲಿಸುತ್ತ ಹೋಯಿತು. ಅಂತಿಮವಾಗಿ ನ್ಯಾಯ ನಿಮ್ಮ ಪರವಾಗಿಯೇ ಇತ್ತು. ಕಳೆದುಕೊಂಡ 18 ತಿಂಗಳುಗಳನ್ನು ಮರಳಿ ಪಡೆದುಕೊಳ್ಳಲು ನೀವು ಏನಾದರೂ ಉಪಾಯ ಮಾಡಿದ್ದೀರಾ?

ಅಖಿಲ್: ನಾನು ಜೈಲಿನಲ್ಲಿ ಕಳೆದ 18 ತಿಂಗಳುಗಳನ್ನು ಬಿಜೆಪಿ ತನ್ನ ಉಪಯೋಗಕ್ಕಾಗಿ ಬಳಸಿಕೊಂಡಿತು. ಅಸ್ಸಾಮ್‌ನಲ್ಲಿ ನಡೆಯುತ್ತಿದ್ದ CAA ವಿರೋಧಿ ಪ್ರತಿಭಟನೆಗಳನ್ನು ಸರ್ಕಾರ ವ್ಯವಸ್ಥಿತವಾಗಿ ಹತ್ತಿಕ್ಕಿತು. ಎರಡನೇಯದಾಗಿ 2021ರ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಿತು. ಹಾಗೆ 3ನೇಯದಾಗಿ ಬಿಜೆಪಿ ಮತ್ತು RSS ಅಸ್ಸಾಮಿ ಅಸ್ಮಿತೆಯ ವಿರುದ್ಧವಾದ ತನ್ನ ಚಟುವಟಿಕೆಗಳನ್ನು ವ್ಯಾಪಕವಾಗಿ ಹೆಚ್ಚಿಸಿಕೊಂಡವು. ಕಳೆದುಕೊಂಡ 18 ತಿಂಗಳುಗಳ ನಷ್ಟ ಭರ್ತಿ ಮಾಡಿಕೊಳ್ಳಲು ಬಿಜೆಪಿ ಮತ್ತು RSS ಅಜೆಂಡಾಗಳ ವಿರುದ್ಧ ನಮ್ಮೆಲ್ಲ ಶಕ್ತಿ ಒಗ್ಗೂಡಿಸಿ ಹೋರಾಡುವುದೊಂದೇ ಪರಿಹಾರ. ಒಂದಷ್ಟು ಚಿಂತನೆಗಳ ಮೂಲಕ ನಮ್ಮ ಸಾಮರ್ಥ್ಯವನ್ನು ಮೀರಿ ಹೋರಾಡುವುದೊಂದೇ ಬಿಜೆಪಿ ವಿರುದ್ಧ ನಿಲ್ಲಲು ಇರುವ ದಾರಿ.

ವೈರ್‌: ನೀವು ಬಿಜೆಪಿ ಮತ್ತು ಆಲ್‌ ಇಂಡಿಯಾ ಯುನೈಟೆಡ್ ಡೆಮೊಕ್ರಾಟಿಕ್ ಫ್ರಂಟ್‌ ಎರಡನ್ನೂ ಕೋಮುವಾದಿ ಸಂಘಟನೆಗಳೆಂದು ಕರೆದಿದ್ದೀರಿ. ಹಾಗಾದರೆ ಅಸ್ಸಾಂನ ಅಲ್ಪ ಸಂಖ್ಯಾತ ಮತ್ತು ಬಹು ಸಂಖ್ಯಾತ ಸಮುದಾಯಗಳೆರಡನ್ನು ತಲುಪಲು ನಿಮ್ಮ ಮುಂದಿರುವ ಮಾರ್ಗಗಳೇನು?

ಅಖಿಲ್: ಬಿಜೆಪಿ ಕೋಮುವಾದಿ ಫ್ಯಾಸಿಸ್ಟ್ ಪಕ್ಷವಾಗಿದ್ದರೆ AIUDF ಮತೀಯ ಮೂಲಭೂತವಾದಿ ರಾಜಕೀಯ ಸಂಘಟನೆ. ಅಸ್ಸಾಂನಲ್ಲಿ ಪ್ರಜಾಪ್ರಭುತ್ವವಾದಿ ಆಡಳಿತ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕೆಂದರೆ ಮೊದಲು ಇವೆರಡು ರಾಜಕೀಯ ಶಕ್ತಿಗಳನ್ನು ಕೊನೆಗಾಣಿಸಬೇಕು. ಅಸ್ಸಾಂನ ಸಾಮಾಜಿಕ-ಸಾಂಸ್ಕೃತಿಕ ವಾತಾವರಣದಿಂದ ಈ ಎರಡು ವಿಘಟಕಗಳನ್ನು ಬೇರುಸಹಿತ ಕಿತ್ತೆಸೆಯುವುದು ನಮ್ಮ ಮೊಟ್ಟ ಮೊದಲ ಕರ್ತವ್ಯವಾಗಿದೆ. ಇಂದು ಅಲ್ಪ ಸಂಖ್ಯಾತ ಸಮುದಾಯ AIUDF ಜೊತೆ ನಿಂತಿದ್ದಾರೆ ಎಂದರೆ ಅವರು ಆ ಪಕ್ಷದ ಮೇಲಿನ ಪ್ರೀತಿಯಿಂದಾಗಿ ಅಲ್ಲ. ಅವರಿಗೆ ಬೇರೆ ಆಯ್ಕೆಗಳಿಲ್ಲ. ನಾವು  ಜಾತ್ಯಾತೀತ, ಪ್ರಗತಿಪರ ಮತ್ತು ಪ್ರಜಾಪ್ರಭುತ್ವವಾದಿ ರಾಜಕೀಯ ಸಂಘಟನೆಯಾಗಿ ರೂಪುಗೊಳ್ಳುತ್ತಿರುವುದರಿಂದ ಅಸ್ಸಾಂನ ಎಲ್ಲಾ ಅಲ್ಫಸಂಖ್ಯಾತರು ಮುಂದೆ ನಮ್ಮೊಂದಿಗೆ ಹೆಜ್ಜೆ ಹಾಕಲಿದ್ದಾರೆ.

ವೈರ್: ಗುರುವಾರ ನಿಮ್ಮನ್ನು ಖುಲಾಸೆ ಗೊಳಿಸಿದ NIA ನ್ಯಾಯಾಲಯದ ತೀರ್ಪು ಐತಿಹಾಸಿಕವಾದದ್ದು. ದೇಶದಲ್ಲಿ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯ ಮಹತ್ವವನ್ನು ಈ ತೀರ್ಪು ಎತ್ತಿ ಹಿಡಿದಿದೆ. BJP ವಿರುದ್ಧ ಸತತವಾಗಿ ಧ್ವನಿ ಎತ್ತಿದ ಹೋರಾಟಗಾರರಲ್ಲಿ ನೀವೂ ಒಬ್ಬರು. ನಕ್ಸಲ್, ಮಾವೋವಾದಿ ಹಣೆಪಟ್ಟಿಗಳನ್ನು ಕಟ್ಟಿ ಎಲ್ಗರ್‌ ಪರಿಷತ್ ಪ್ರಕರಣದಲ್ಲಿ ಸುಧಾ ಭಾರದ್ವಾಜ್, ಸ್ಟಾನ್ ಸ್ವಾಮಿ ಮುಂತಾದವರನ್ನು ಜೈಲಿಗೆ ಹಾಕಲಾಗಿದೆ. ಅವರಿನ್ನು ಜೈಲಿನಲ್ಲಿಯೇ ದಿನ ದೂಡುತ್ತಿದ್ದಾರೆ. ಇದರ ಕುರಿತು ನಿಮ್ಮ ಅಭಿಪ್ರಾಯವೇನು?

ಅಖಿಲ್ : ಸರ್ಕಾರ ದೇಶದಲ್ಲಿ ಹೋರಾಟಗಾರರ ವಿರುದ್ಧ ದಾಖಲಿಸಲಾಗಿರುವ ಗಂಭೀರ ಪ್ರಕರಣಗಳೆಲ್ಲವೂ ನಕಲಿ ಮತ್ತು ಸುಳ್ಳು ಆರೋಪಗಳಾಗಿವೆ ಎಂಬುದೇ ನನ್ನ ಭಾವನೆಯಾಗಿದೆ. ನಾವು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದ್ದರೆ ಎಲ್ಲಾ ಹೋರಾಟಗಾರರಿಗೂ ನ್ಯಾಯ ಸಿಗುತ್ತದೆ. ಗುವಾಹಟಿಯ ನ್ಯಾಯಾಲಯದ ಉದಾಹರಣೆಯೇ ನಿಮ್ಮ ಮುಂದಿದೆ. ಕೆಲವು ಪ್ರಕರಣಗಳಲ್ಲಿ ನ್ಯಾಯಾಂಗ ಮತ್ತು ತನಿಖಾ ಸಂಸ್ಥೆಗಳ ದೌರ್ಜಲ್ಯದ ಕಾರಣದಿಂದ ಅನೇಕ ಹೋರಾಟಗಾರರು ವರ್ಷಗಳಿಂದ ಜೈಲಿನಲ್ಲಿ ಇರುವಂತಾಗಿದೆ. ಅತ್ಯಂತ ಸಮರ್ಥವಾದ ನ್ಯಾಯವಾದಿಗಳ ಸಹಾಯ ಪಡೆದು ನಿಮ್ಮ ಹೋರಾಟವನ್ನು ಮುಂದುವರೆಸಿ. ಕಾನೂನಿನ ಆಯಾಮದ ಜೊತೆಗೆ ಪ್ರಕರಣಗಳನ್ನು ರಾಜಕೀಯವಾಗಿ ಹೋರಾಡುವ ನ್ಯಾಯವಾದಿಗಳು ಮಾತ್ರ ಹೋರಾಟಗಾರರಿಗೆ ನ್ಯಾಯ ಒದಗಿಸಬಲ್ಲರು ಎಂದು ದೇಶದ ಎಲ್ಲಾ ಹೋರಾಟಗಾರ ಸಂಗಾತಿಗಳಿಗೆ ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ.

ಇದನ್ನೂ ಓದಿ: ಸಾಲಿಟರ್‌ ಜನರಲ್‌ ಹುದ್ದೆಯಿಂದ ತುಷಾರ್‌ ಮೆಹ್ತಾರನ್ನು ಕಿತ್ತು ಹಾಕಿ: ಮೋದಿಗೆ ಟಿಎಂಸಿ ಪತ್ರ

ವೈರ್:  ಗುರುವಾರ ಗುವಾಹಟಿಯ NIA ನ್ಯಾಯಾಲಯ ನೀಡಿರುವ ತೀರ್ಪು ಇತರ UAPA ಮತ್ತು ದೇಶದ್ರೋಹದ ಪ್ರಕರಣಗಳಲ್ಲಿ ಪೂರ್ವ ನಿರ್ಣಯ ಮಾನದಂಡವಾಗಿ ಬಳಕೆಯಾಗುವ ಸಾಧ್ಯತೆ ಇದೆಯೇ ?

ಅಖಿಲ್: ನಿನ್ನೆಯ ತೀರ್ಪು ಇತರ ಪ್ರಕರಣಗಳಿಗೂ ಮೂಲ ಆಧಾರವಾಗಲಿದೆ ಎಂದು ನಾನು ಈ ಸಂದರ್ಭದಲ್ಲಿ ಭಾವಿಸುತ್ತೇನೆ. ನಿನ್ನೆ ನನ್ನನ್ನು ಪ್ರಕರಣಗಳಿಂದ ಖುಲಾಸೆಗೊಳಿಸಿದ ತೀರ್ಪು ಐತಿಹಾಸಿಕವಾಗಿದ್ದು ಮುಂದೆ ದೇಶದ್ರೋಹ ಮತ್ತು ಮತ್ತು UAPA  ಪ್ರಕರಣಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ. ಈ ತೀರ್ಪಿನ ನಂತರ UAPA ಕಾಯ್ದೆಯಡಿ ಜೈಲುಶಿಕ್ಷೆ ಅನುಭವಿಸುತ್ತಿರುವ ಅನೇಕ ಹೋರಾಟಗಾರರು ಬಿಡುಗಡೆಯಾಗುವ ಸಾಧ್ಯತೆಯಿದೆ.

ವೈರ್: ಮೊದಲು ನೀವು RTI ಹೋರಾಟಗಾರರಾಗಿದ್ದಿರಿ. ನಂತರ ಕೃಷಿ ಹೋರಾಟಗಾರರಾದಿರಿ. ನಂತರ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಿಸಿದಿರಿ. ಈಗ ಅಸ್ಸಾಮ್ ವಿಧಾನಸಭೆಯ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದೀರಿ. ಹಾಗಾದರೆ ಅಖಿಲ್ ಗೊಗೋಯ್ ನಿಜವಾದ ಸ್ವರೂಪ ಯಾವುದು?

ಅಖಿಲ್: ಹೋರಾಟಗಾರ, ಎಂಎಲ್‌ಎ, ತಂದೆ, ಗಂಡ ಎಲ್ಲಾ ಆಗಿರುವ ಅಖಿಲ್ ಗೊಗೊಯ್ ನಾನೇ. ಅಖಿಲ್ ಗೊಗೋಯ್ ಮೂಲದಲ್ಲಿ ಒಬ್ಬ ಪ್ರಜಾಪ್ರಭುತ್ವವಾದಿ. ಗಣತಂತ್ರವಾದಿ ಮೌಲ್ಯಗಳು ಮತ್ತು ತತ್ವಗಳ ಪರವಾದ ಹೋರಾಟಕ್ಕೆ ಸದಾ ನನ್ನ ಮನಸ್ಸು ತುಡಿಯುತ್ತಿರುತ್ತದೆ. ಇದೇ ಮೌಲ್ಯಗಳನ್ನು ಮನೆಯಲ್ಲಿಯೂ ಅಳವಡಿಸಿಕೊಂಡಿದ್ದೇನೆ. ಇತ್ತೀಚೆಗೆ ನನ್ನ ಪತ್ನಿ ಹಣೆಗೆ ಕುಂಕುಮ ಹಚ್ಚಲಿಲ್ಲ ಎಂಬ ವಿವಾದವೆದ್ದಿತ್ತು. ನಾನು ಎಂದೂ ನನ್ನ ಸರ್‌ ನೇಮ್‌ ಸೇರಿಸಿಕೊಳ್ಳುವಂತೆಯಾಗಲೀ ಅಥವಾ ಸಿಂಧೂರವನ್ನು ಇಟ್ಟುಕೊಳ್ಳುವಂತೆಯಾಗಲಿ ನನ್ನ ಪತ್ನಿಯನ್ನು ಒತ್ತಾಯಿಸಿಲ್ಲ. ಪ್ರತಿಯೊಬ್ಬ ಮಹಿಳೆ ಸ್ವತಂತ್ರ ವ್ಯಕ್ತಿತ್ವವಾಗಿ ನಿಲ್ಲಬೇಕೆಂದು ಬಯಸುತ್ತೇನೆ. ನಮ್ಮ ಪಕ್ಷ ಯಾರ ಮೇಲೆ ಏನನ್ನೂ ಹೇರಿಕೆ ಮಾಡುವುದಿಲ್ಲ. ಒಬ್ಬ ತಂದೆ, ಪತಿ, ಶಾಸಕ, ಹೋರಾಟಗಾರನಾಗಿ ನಾನು ಸಮಾನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದೇನೆ.

ವೈರ್: ಭಾರತದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತು ನಿಮ್ಮ ನಿಲುವೇನು ?

ಅಖಿಲ್ : ನಮ್ಮ ದೇಶದಲ್ಲಿ ಸದ್ಯ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇಂದಿನ ತುರ್ತು ಪರಿಸ್ಥಿತಿಯ ತೀವ್ರತೆ 1975ರ ಘೋಷಿತ ತುರ್ತು ಪರಿಸ್ಥಿತಿಗಿಂತ ಕಡಿಮೆಯೇನಿಲ್ಲ. ಪ್ರಧಾನಿ ಮೋದಿ ಮತ್ತು ಬಿಜೆಪಿ ದೇಶವನ್ನು ಪ್ರಜಾಪ್ರಭುತ್ವ ವಿರೋಧಿ, ಸರ್ವಾಧಿಕಾರಿ, ಮತೀಯವಾದಿ ರಾಷ್ಟ್ರವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ನಾವು ಬಿಜೆಪಿ, ಮೋದಿ, ಶಾ ಅವರ ಈ ಕನಸು ಸಾಧ್ಯವಾಗಗೊಡುವುದಿಲ್ಲ. ನನ್ನನ್ನು ಜೈಲಿಗೆ ಹಾಕಲಿ ಅಥವಾ ನನಗೆ ಗುಂಡಿಕ್ಕಲಿ ನಾನು ನಿರಂತರವಾಗಿ ಬಿಜೆಪಿ ಮತ್ತು RSS ವಿರುದ್ಧದ ಹೋರಾಟವನ್ನು ಮುಂದುವರೆಸುತ್ತೇನೆ. ಪ್ರಸ್ತುತ ಅಸ್ಸಾಂನಲ್ಲಿ ಪ್ರಜಾಪ್ರಭುತ್ವ ವಿರೊಧಿ, ಫ್ಯಾಸಿಸ್ಟ್ ಸರ್ವಾಧಿಕಾರಿ ಸರ್ಕಾರ ಅಸ್ತಿತ್ವದಲ್ಲಿ ಇದ್ದು ಅದರ ವಿರುದ್ಧ ಉಗ್ರ ಹೋರಾಟ ಮುಂದುವರೆಯುತ್ತದೆ.

ವೈರ್: ಪ್ರಧಾನಿ ಮೋದಿಯವರ ಕೋವಿಡ್‌ ಸಾಂಕ್ರಾಮಿಕದ ನಿರ್ವಹಣೆ ಕುರಿತು ನಿಮ್ಮ ಅಭಿಪ್ರಾಯವೇನು ?

ಅಖಿಲ್ : ಪ್ರಧಾನಿ ಮೋದಿ ಮತ್ತು ಅವರ ಬಿಜೆಪಿ ಸರ್ಕಾರ ಕೊರೊನಾ ಸಾಂಕ್ರಾಮಿಕವನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ವಲಸೆ ಕಾರ್ಮಿಕರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ವ್ಯಾಕ್ಸಿನೇಶನ್ ನೀಡುವಲ್ಲಿ ಸರ್ಕಾರ ಸೋತಿದೆ. ಪ್ರಧಾನಿ ಮೋದಿಯವರು ಕೇವಲ ಒಬ್ಬ ಒಳ್ಳೆಯ ಭಾಷಣಗಾರರೇ ಹೊರತು ಒಳ್ಳೆಯ ಆಡಳಿತಗಾರರಲ್ಲ ಎಂಬುದನ್ನು ಕೊರೊನಾ ಸಾಂಕ್ರಾಮಿಕ ಮತ್ತೊಮ್ಮೆ ಸಾಬೀತುಪಡಿಸಿದೆ. ಕೇವಲ ಪ್ರಚಾರಕ್ಕಾಗಿ ಮಾತ್ರ ದೇಶದಲ್ಲಿ ಪ್ರಧಾನ ಮಂತ್ರಿಗಳು ಇರುವುದು ಎಂಬ ಭಾವನೆ ಜನರಲ್ಲಿ ಬೆಳೆಯತೊಡಗಿದೆ. ಲಾಕ್‌ಡೌನ್‌ನಿಂದ ಕೋಟ್ಯಾಂತರ ಜನರು ಬದುಕು ಕಳೆದುಕೊಂಡಿದ್ದಾರೆ. ಇವರೆಲ್ಲರ ನೊಂದ ಧ್ವನಿಗಳನ್ನು ಒಗ್ಗೂಡಿಸಿ ಸಧ್ಯದಲ್ಲಿಯೇ ಅಸ್ಸಾಂ ಮೂಲಕ ನಮ್ಮ ಹೋರಾಟ ಆರಂಭವಾಗಲಿದೆ.

ವೈರ್:  ಪ್ರಧಾನಿ ಮೋದಿ, ಗೃಹ ಮಂತ್ರಿ ಅಮಿತ್‌ ಶಾ, ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಇವರಿಗೆ ಈ ಸಂದರ್ಭದಲ್ಲಿ ಏನಾದರೂ ಹೇಳ ಬಯಸುತ್ತೀರಾ ? ಸಂದೇಶವೇನಾದರೂ ಇದೆಯೇ ?

ಅಖಿಲ್: ಗುರುವಾರದ ಗುವಾಹಟಿ NIA ನ್ಯಾಯಾಲಯದ ತೀರ್ಪಿನ ನಂತರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಯನ್ನು ನೀಡಬೇಕು. ಅವರ ಗೃಹ ಇಲಾಖೆಯೇ ಈ ಎಲ್ಲ ಸುಳ್ಳು ಪ್ರಕರಣಗಳನ್ನು ದಾಖಲಿಸಿರುವುದು. NIA ನಿರ್ದೇಶಕ, ಅಸ್ಸಾಂ ಮುಖ್ಯಮಂತ್ರಿ ಸೇರಿದಂತೆ ಹಲವರು ಕರ್ತವ್ಯ ಲೋಪ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ನ್ಯಾಯಾಲಯದ ತೀರ್ಪಿನ ಮೂಲಕ ಸಾಬೀತಾಗಿದೆ. ಗೃಹ ಮಂತ್ರಿಗಳನ್ನು ಸೇರಿ ಇವರೆಲ್ಲರೂ ರಾಜೀನಾಮೆಯನ್ನು ನೀಡಬೇಕೆಂದು ಆಗ್ರಹಿಸುತ್ತೇನೆ.

ಇದನ್ನೂ ಓದಿ: ಅಸ್ಸಾಂ ಹೋರಾಟಗಾರ ಅಖಿಲ್ ಗೊಗೋಯ್ ಚಿತ್ರ ಬಿಡಿಸಿದ ಕಲಾವಿದರ ಬಂಧನ!

ವೈರ್‌: ನೀವೇ ಹುಟ್ಟುಹಾಕಿದ ರಾಜಕೀಯ ಸಂಘಟನೆ ರೈಜೋರ್‌ ದಳ. ರಾಜಕೀಯ ಪಕ್ಷವಾಗಿ ಅದರ ವಿಸ್ತರಣೆ ಹೇಗೆ ?

ಅಖಿಲ್ : ಮುಂದಿನ ಒಂದು ವರ್ಷದಲ್ಲಿ ನಾವು ಬೂತ್‌ಮಟ್ಟದಿಂದ ಆರಂಭಿಸಿ ರಾಜ್ಯವ್ಯಾಪಿಯಾಗಿ ಪಕ್ಷ ಸಂಘಟನೆಯನ್ನು ಮಾಡುತ್ತೇವೆ. ಅದು ಪ್ರಬಲ ರಾಜಕೀಯ ಶಕ್ತಿಯನ್ನಾಗಿ ನಮ್ಮ ಪಕ್ಷವನ್ನು ಬೆಳೆಸುವ ಪ್ರಯತ್ನ ಮುಂದಿನ ದಿನಗಳಲ್ಲಿ ನಡೆಯಲಿದೆ. ಬಿಜೆಪಿ ಮತ್ತು ಇತರ ಮೂಲಭೂತವಾದಿಗಳನ್ನು ರಾಜಕೀಯ ಮಾರ್ಗದಲ್ಲಿ ಮಾತ್ರ ಹಿಮ್ಮೆಟ್ಟಿಸಲು ಸಾಧ್ಯ. ಬಿಜೆಪಿ ರಾಜಕೀಯವಾಗಿ ಪ್ರಬಲವಾದಷ್ಟು ದೇಶದಲ್ಲಿ ದೌರ್ಜನ್ಯಗಳು ಹೆಚ್ಚುತ್ತಿವೆ. ಬಿಜೆಪಿಯ ಪ್ರಾಬಲ್ಯವನ್ನು ಮುರಿಯುವುದೇ ನಮ್ಮ ಮುಂದಿನ ಗುರಿ. ದೇಶದ ನನ್ನ ಎಲ್ಲಾ ಹೋರಾಟಗಾರರಲ್ಲೂ ಬಿಜೆಪಿ ವಿರುದ್ಧ ರಾಜಕೀಯವಾಗಿ ಸಂಘಟಿತ ಹೋರಾಟ ನಡೆಸುವಂತೆ ಮನವಿ ಮಾಡುತ್ತೇನೆ.

ವೈರ್‌: ಶಿವಸಾಗರ ಜಿಲ್ಲೆಯನ್ನು ನೀವು UNESCO ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಪ್ರಯತ್ನಿಸುತ್ತೇನೆ ಎಂದು ಹೆಳಿದ್ದೀರಿ. ಈ ಕುರಿತು ನಿಮ್ಮ ಮುಂದಿನ ಯೋಜನೆಯೇನು ?

ಅಖಿಲ್ : ಶಿವಸಾಗರ ಜಿಲ್ಲೆಯು ಅಹೋಮ್ ಸಾಮ್ರಾಜ್ಯದ ರಾಜಧಾನಿ. ಇಲ್ಲಿ ಹಲವಾರು ಐತಿಹಾಸಿಕ ಕಟ್ಟಡಗಳಿವೆ. ಪಾರಂಪರಿಕ ವಾಸ್ತುಶೈಲಿಯ ಸಾಂಸ್ಕೃತಿಕ ವೈಭವವಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ನಿರ್ಲಕ್ಷ್ಯದಿಂದ ಎಲ್ಲವೂ ಅಳಿವಿನಂಚಿಗೆ ಸರಿದಿವೆ. ಈ ಸಂಬಂಧ ಅಸ್ಸಾಂ ವಿಧಾನಸಭಾ ಸ್ಪೀಕರ್‌ ಗೆ ಪತ್ರ ಬರೆದು ಶಿವಸಾಗರ್ ನಗರವನ್ನು ಪಾರಂಪರಿಕ ತಾಣವೆಂದು ಘೋಷಿಸುವಂತೆ ಮನವಿ ಮಾಡಿದ್ದೇನೆ. ಹಂತಹಂತವಾಗಿ ಅಸ್ಸಾಂ ಅನ್ನು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಪ್ರಯತ್ನ ಮಾಡಲಾಗುವುದು.

ವೈರ್‌: ನೀವು ಹಿಂದೆ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಹಾಗೆ ಹುಟ್ಟಿಕೊಂಡ ರಾಜಕೀಯ ಪಕ್ಷ ಆಮ್ ಆದ್ಮಿ ಪಾರ್ಟಿ(AAP). ಈಗ ನೀವೂ ರಾಜಕೀಯ ಪ್ರವೇಶಿಸಿದ್ದೀರಿ. ಆಮ್ ಆದ್ಮಿ ನಾಯಕರೊಂದಿಗೇನಾದರೂ ಚರ್ಚೆ ನಡೆಸುವ ಉದ್ಧೇಶವಿದೆಯೇ ?

ಅಖಿಲ್‌ : ನಾನು ಮುಖ್ಯವಾಗಿ ಎರಡು ಪಕ್ಷಗಳೊಂದಿಗೆ ಚರ್ಚೆ ನಡೆಸುತ್ತಿದ್ದೇನೆ. ಆಮ್‌ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್‌ (TMC) ನಾಯಕರ ಜೊತೆ ಬಿಜೆಪಿ ವಿರುದ್ಧ ಹೋರಾಟದ ಕುರಿತು ಚರ್ಚೆ ನಡೆಸಬೇಕೆಂದಿದ್ದೇನೆ. ಅರವಿಂದ್ ಕೇಜ್ರಿವಾಲ್ ಮತ್ತು ಮನಿಶ್ ಸಿಸೋಡಿಯಾ ನನ್ನ ಆತ್ಮೀಯ ಸ್ನೇಹಿತು. ಮೊದಲು ಆಮ್‌ ಆದ್ಮಿ ಪಕ್ಷದ ಜೊತೆ ಚರ್ಚಿಸಿ ನಂತರ ಮಮತಾ ಬ್ಯಾನರ್ಜಿ ಅವರೊಂದಿಗೆ 2024ರ ಲೋಕಸಭೆ ಚುನಾಣೆಯಲ್ಲಿ ಬಿಜೆಪಿಯನ್ನು ಎದುರಿಸುವ ಕುರಿತು ಚರ್ಚೆಯನ್ನು ಮಾಡಲಿದ್ದೇನೆ.

ವೈರ್‌: ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ನಿಮ್ಮನ್ನು ಜೈಲಿಗೆ ಕಳುಹಿಸಿವೆ. ಎರಡೂ ಪಕ್ಷಗಳ ನಡುವೆ ಇರುವ ವ್ಯತ್ಯಾಸವೇನು ?

ಅಖಿಲ್ : ಬಿಜೆಪಿ ಸರ್ವಾಧಿಕಾರಿ ಮತ್ತು ಫ್ಯಾಸಿಸ್ಟ್‌ ಪಕ್ಷ. ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವವಾದಿ ಮೌಲ್ಯಗಳಲ್ಲಿ ನಂಬಿಕೆ ಇಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳನ್ನು ತುಲನೆ ಮಾಡಿದರೆ ಕಾಂಗ್ರೆಸ್‌ ಕಡಿಮೆ ಅಪಾಯಕಾರಿಯಾಗಿ ನನಗೆ ತೋರುತ್ತದೆ.

ಇದನ್ನೂ ಓದಿ: ರೈತ ಹೋರಾಟಗಾರ ಅಖಿಲ್ ಗೊಗೋಯ್‌ಗೆ ಎನ್‌ಐಎ ಕೋರ್ಟ್ ಜಾಮೀನು

ವೈರ್‌ : ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ಎರಡು ತಿಂಗಳ ಹಿಂದೆ ಅಖಿಲ್ ಗೊಗೋಯ್‌ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಂಡಿರುವ ವ್ಯಕ್ತಿ ಎಂದು ವಿಧಾನಸಭೆಯಲ್ಲಿ ತಮ್ಮ ಕುರಿತು ಅವಹೇಳನವನ್ನು ಮಾಡಿದ್ದರು. ಅವರ ವಿರುದ್ಧ ಯಾವುದಾದರೂ ಕಾನೂನು ಹೋರಾಟವನ್ನು ನಡೆಸುವ ಯೋಚನೆ ಇದೆಯೇ ?

ಅಖಿಲ್ : ಹಿಮಂತ್ ಬಿಸ್ವಾಸ್ ಶರ್ಮ ಅವರು ಹಿಂದೆ ಆರೋಗ್ಯ ಮಂತ್ರಿಯಾಗಿದ್ದವರು. ಅವರಿಗೆ ಮಾನಸಿಕ ಆರೋಗ್ಯದ ಕುರಿತಾಗಿ ತಿಳುವಳಿಕೆಯಿಲ್ಲ. ಯಾವುದಾದರೂ ಒಳ್ಳೆಯ ವೈದ್ಯರಿಂದ ಅವರು ಮಾನಸಿಕ ಆರೋಗ್ಯದ ಶಿಕ್ಷಣವನ್ನು ಪಡೆದರೆ ಒಳ್ಳೆಯದು. ನಾನು ಅವರನ್ನು ಕ್ಷಮಿಸಿದ್ದೇನೆ.

ವೈರ್‌: CAA ವಿರೊಧಿ ಹೋರಾಟದಲ್ಲಿ ನಿಮ್ಮ ಜೊತೆ ಬೆಂಬಲವಾಗಿದ್ದ ಕೆಲವು ಸ್ಥಳೀಯ ನಾಯಕರು ಒಂದೇ ತಿಂಗಳಿನಲ್ಲಿ ಬಿಜೆಪಿ ಸೇರಿದ್ದಾರೆ. ಇವರ ಕುರಿತು ನಿಮ್ಮ ಅಭಿಪ್ರಾಯವೇನು ?

ಅಖಿಲ್ : ಹೋರಾಟದ ಹಿಂದಿನ ಉದ್ಧೇಶಗಳು ಅರ್ಥವಾಗುವವರೆಗೆ ಯಾರೂ ಕೂಡ ಹೋರಾಟದ ಜೊತೆ ಸೇರಬಾರದು. ಹೋರಾಟ ಯಾವ ಉದ್ಧೇಶಗಳಿಗೆ ನಡೆಯುತ್ತಿದೆ. ಅದರ ಹಿಂದಿನ ಸೈದ್ಧಾಂತಿಕ ಉದ್ಧೇಶವೇನು ಎಂಬುದನ್ನು ಅರಿತು ಯಾರಾದರೂ ಹೋರಾಟಕ್ಕೆ ಧುಮುಕಬೇಕು. ಇಲ್ಲವಾದಲ್ಲಿ ಸಾಮಾನ್ಯ ಜನರಲ್ಲಿ ಅಪನಂಬಿಕೆಗಳನ್ನು ಹುಟ್ಟಿಸಿದಂತೆ ಆಗುತ್ತದೆ. ಇಂತಹ ವ್ಯಕ್ತಿಗಳಲ್ಲಿ ನನ್ನದೊಂದು ಮನವಿ, ನಿಮ್ಮಲ್ಲಿ ಸೈದ್ಧಾಂತಿಕ ತಿಳುವಳಿಕೆಯ ಕೊರತೆಯಿದ್ದರೆ ಸಮಸ್ಯೆಯಿಲ್ಲ. ವಿನಾಕಾರಣ ಸೈದ್ಧಾಂತಿಕ ಬದ್ಧತೆಯ ನಕಲಿ ಪ್ರದರ್ಶನವನ್ನು ನಿಲ್ಲಿಸಿಬಿಡಿ.

ವೈರ್ : CAA ಮತ್ತು NRC ಕಾಯ್ದೆಯ ವಿರುದ್ಧದ ಹೋರಾಟವನ್ನು ಮತ್ತೆ ಆರಂಭಿಸುವ ಯೋಚನೆಯಿದೆಯೇ ?

ಅಖಿಲ್ : ನಾನು CAA ವಿರುದ್ಧ ಹೋರಾಟವನ್ನು ನಡೆಸಿ ಜೈಲಿಗೆ ಹೋದಮೇಲೆ ಹೋರಾಟದ ನಾಯಕತ್ವವನ್ನು ವಹಿಸಿಕೊಂಡವರು ಜನರಿಗೆ ದ್ರೋಹವನ್ನು ಬಗೆದರು. ನಾನೀಗ ಮತ್ತೆ ಸ್ವತಂತ್ರನಾಗಿ ಬಂದಿದ್ದೇನೆ. CAA ವಿರುದ್ಧದ ನನ್ನ ಹೋರಾಟ ಮುಂದುವರೆಯಲಿದೆ. ಯಾವೊಬ್ಬ ವಿದೇಶಿ ವ್ಯಕ್ತಿಯೂ ಅಸ್ಸಾಂನಲ್ಲಿ ಉಳಿಯಲು ಸಾಧ್ಯವಿಲ್ಲ. ಅಸ್ಸಾಂ ಜನರ ಮೇಲಿನ ಅನ್ಯಾಯದ ವಿರುದ್ಧ ನನ್ನ ಹೋರಾಟದಲ್ಲಿ ಯಾವುದೇ ಬದಲಾವಣೆಗಳಿಲ್ಲ.

ನಿನ್ನೆ NIA ನ್ಯಾಯಾಲಯದಿಂದ ದೋಷಮುಕ್ತಗೊಂಡಿದ್ದ ಅಖಿಲ್ ಗೊಗೋಯ್ ಇಂದು ಗುವಾಹಟಿ ನಗರದಿಂದ ತಮ್ಮ ಊರಾದ ಶಿವಸಾಗರ್ ಜಿಲ್ಲೆಗೆ ಪ್ರಯಾಣ ಬೆಳೆಸಿದರು. 400 ಕಿಲೋ ಮೀಟರ್ ಪ್ರಯಾಣ ಮಾರ್ಗದಲ್ಲಿ ಅನೇಕ ಕಡೆ ಗೊಗೋಯ್‌ ಅವರನ್ನು ಕಾಣಲು ನೂರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. 19 ತಿಂಗಳ ಜೈಲು ವಾಸದ ನಂತರ ಇಷ್ಟು ಪ್ರಮಾಣದ ಜನ ಬೆಂಬಲವನ್ನು ನೋಡಿ ಒಂದುಕ್ಷಣ ಭಾವುಕರಾದ ಗೊಗೋಯ್ ನಿಮ್ಮೆಲ್ಲರ ಬೆಂಬಲದಿಂದಾಗಿ ಗೊಗೋಯ್ ಇಂದು ಸ್ವತಂತ್ರವಾಗಿದ್ದಾನೆ. ಇಷ್ಟು ಜನರು ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಯನ್ನು ಕಾಣಲಿಕ್ಕೆ ನೆರೆದಿದ್ದಾರೆಂದರೆ ನನ್ನ ಬಂಧನ ದುರುದ್ಧೇಶದಿಂದ ಕೂಡಿತ್ತೆಂಬುದು ದೇಶದ ಮುಂದೆ ಜಗಜ್ಜಾಹೀರಾಗಿದೆ. ಬಿಜೆಪಿ ವಿರುದ್ಧದ ಹೋರಾಟ ಮತ್ತು ಸಿಎಎ ವಿರುದ್ಧದ ಹೋರಾಟವನ್ನು ಮುಂದುವರೆಯಲಿದೆ ಎಂದು ಅವರು ಹೇಳಿದ್ದಾರೆ.

ಮೂಲ: ದಿ ವೈರ್

ಅನುವಾದ: ರಾಜೇಶ್ ಹೆಬ್ಬಾರ್


ಇದನ್ನೂ ಓದಿ: ಅಧಿಕಾರ ವಹಿಸಿದ ಕೆಲವೇ ತಿಂಗಳಲ್ಲಿ ರಾಜೀನಾಮೆಗೆ ಮುಂದಾದ ಉತ್ತರಾಖಂಡ ಸಿಎಂ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...