2024-25ರ ಅವಧಿಯಲ್ಲಿ ನಾಗರಿಕ ಸೇವೆಗಳಿಗೆ ಆಗುವ ಲ್ಯಾಟರಲ್ ಎಂಟ್ರಿ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿ ಪರಿಶೀಲನೆ ನಡೆಸಲಿದೆ ಎಂದು ಪಿಟಿಐ ಭಾನುವಾರ ವರದಿ ಮಾಡಿದೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯಾಂಗ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಇದನ್ನು ಪರಿಶೀಲನೆ ನಡೆಸಲಿದೆ ಎಂದು ವರದಿಗಳು ಹೇಳಿವೆ.
ಗುತ್ತಿಗೆ ಆಧಾರದ ಮೇಲೆ ಲ್ಯಾಟರಲ್ ಎಂಟ್ರಿ ಮೂಲಕ 24 ಕೇಂದ್ರ ಸಚಿವಾಲಯಗಳ ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿಗಳ 45 ಹುದ್ದೆಗಳಿಗೆ ಖಾಸಗಿ ವಲಯದಿಂದ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳಲು ಕೇಂದ್ರ ಲೋಕಸೇವಾ ಆಯೋಗ ಜಾಹೀರಾತು ನೀಡಿತ್ತು. ಕೇಂದ್ರ ಸರ್ಕಾರದ ಈ ನೀತಿಯು ಮೀಸಲಾತಿ ವಿರೋಧಿಯಾಗಿದ್ದು, ಮೀಸಲಾತಿ ನೀಡುವ ಬದಲು ಮತ್ತೆ ಬಲಿಷ್ಠ ಸಮುದಾಯಗಳಿಗೆ ಮಣೆ ಹಾಕಲು ಹೀಗೆ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿತ್ತು. ಆಗಸ್ಟ್ 17ರಂದು ಈ ಜಾಹೀರಾತು ಪ್ರಕಟವಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ಜಾಹೀರಾತು ಭಾರಿ ವಿವಾದವಾಗಿ ವಿಪಕ್ಷಗಳು ಸೇರಿದಂತೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅಷ್ಟೆ ಅಲ್ಲದೆ, ಆಡಳಿತರೂಢ ಎನ್‌ಡಿಎಯ ಮಿತ್ರಪಕ್ಷವಾದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಕೂಡಾ ಇದನ್ನು ವಿರೋಧಿಸಿತು. ಸರ್ಕಾರದ ಈ ನಿರ್ಧಾರವು ಸಂವಿಧಾನವು ಖಾತರಿಪಡಿಸುವ ಮೀಸಲಾತಿ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಆರೋಪಿಸಿತ್ತು.
ಲ್ಯಾಟರಲ್ ಎಂಟ್ರಿ ಮೂಲಕ ಸಾರ್ವಜನಿಕ ಸೇವಕರನ್ನು ನೇಮಿಸಿಕೊಳ್ಳುವ ನಿರ್ಧಾರವು “ದೇಶ ವಿರೋಧಿ ಹೆಜ್ಜೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ತಳಮಟ್ಟದ ಸಮುದಾಯಗಳ ಮೀಸಲಾತಿಗಳನ್ನು ಈ ಮೂಲಕ “ಬಹಿರಂಗವಾಗಿ ಕಸಿದುಕೊಳ್ಳಲಾಗುತ್ತಿದೆ” ಎಂದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಕೇಂದ್ರ ಲೋಕಸೇವಾ ಆಯೋಗ ಅಡಿಯಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ನೇಮಿಸುವುದು “ಸಂಪೂರ್ಣವಾಗಿ ತಪ್ಪು” ಹೆಜ್ಜೆಯಾಗಿದೆ ಎಂದು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಹೇಳಿದೆ. ಪಕ್ಷದ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಈ ಬಗ್ಗೆ ಪ್ರತಿಕ್ರಿಯಿಸಿ ತಮ್ಮ ಪಕ್ಷವು ಅಂತಹ ನೇಮಕಾತಿಗಳ ಪರವಾಗಿಲ್ಲ ಎಂದು ಹೇಳಿದ್ದರು.
ತೀವ್ರ ವಿವಾದದ ನಂತರ ಆಗಸ್ಟ್ 20 ರಂದು, ಕೇಂದ್ರ ಲೋಕಸೇವಾ ಆಯೋಗವು ತನ್ನ ಜಾಹೀರಾತನ್ನು ಹಿಂತೆಗೆದುಕೊಂಡಿತು. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಆಯೋಗದ ಅಧ್ಯಕ್ಷೆ ಪ್ರೀತಿ ಸುದನ್ ಅವರಿಗೆ ಪತ್ರ ಬರೆದ ಕೆಲವೇ ಗಂಟೆಗಳ ನಂತರ ನೇಮಕಾತಿ ರದ್ದುಗೊಳಿಸುವಂತೆ ಒತ್ತಾಯಿಸಿದ್ದರು.
ಲ್ಯಾಟರಲ್ ಎಂಟ್ರಿ ಪ್ರಕ್ರಿಯೆಯು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳೊಂದಿಗೆ, ವಿಶೇಷವಾಗಿ ಮೀಸಲಾತಿಯ ನಿಯಮಗಳಿಗೆ ಅನುಗುಣವಾಗಿರಬೇಕು ಎಂದು ಪ್ರಧಾನಿ ನಂಬುತ್ತಾರೆ ಎಂದು ಜೀತೇಂದ್ರ ಸಿಂಗ್ ಪತ್ರದಲ್ಲಿ ತಿಳಿಸಿದ್ದರು.
ಸಿವಿಲ್ ಸರ್ವೀಸ್ ಪರೀಕ್ಷೆಯ ಮೂಲಕ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದರೂ, ನಿರ್ದಿಷ್ಟ ಹುದ್ದೆಗಳಿಗಾಗಿ 2018 ರಿಂದ ಕೇಂದ್ರ ಸರ್ಕಾರದಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ ವಿಷಯ ತಜ್ಞರನ್ನು ಖಾಸಗಿ ಸೇರಿದಂತೆ ಇತರ ಮೂಲಗಳಿಂದ ನೇಮಿಸಿಕೊಳ್ಳಲಾಗಿದೆ.
ಇಲ್ಲಿಯವರೆಗೆ, 63 ಲ್ಯಾಟರಲ್ ನೇಮಕಾತಿಗಳನ್ನು ಮಾಡಲಾಗಿದ್ದು, ಅದರಲ್ಲಿ 35 ನೇಮಕವನ್ನು ಖಾಸಗಿ ವಲಯದಿಂದ ಮಾಡಲಾಗಿವೆ ಎಂದು ಪಿಟಿಐ ವರದಿ ಮಾಡಿದೆ. ಪ್ರಸ್ತುತ, ಲ್ಯಾಟರಲ್ ಎಂಟ್ರಿ ಮೂಲಕ ನೇಮಕಗೊಂಡ 57 ಅಧಿಕಾರಿಗಳು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಹುದ್ದೆಗಳನ್ನು ಹೊಂದಿದ್ದಾರೆ ಎಂದು ವರದಿಗಳಿವೆ.
ಇದನ್ನೂ ಓದಿ: ‘ಇಂಡಿಯಾ ಮಿತ್ರಪಕ್ಷಗಳು ಪರಸ್ಪರ ಸಹಕರಿಸಲಿಲ್ಲ..’; ‘ಮಹಾ’ ಸೋಲಿನ ಕುರಿತು ಪರಮೇಶ್ವರ್ ಪ್ರತಿಕ್ರಿಯೆ
‘ಇಂಡಿಯಾ ಮಿತ್ರಪಕ್ಷಗಳು ಪರಸ್ಪರ ಸಹಕರಿಸಲಿಲ್ಲ..’; ‘ಮಹಾ’ ಸೋಲಿನ ಕುರಿತು ಪರಮೇಶ್ವರ್ ಪ್ರತಿಕ್ರಿಯೆ


