ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ( ಜೆ.ಎನ್.ಯು) ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹಾಸ್ಟೆಲ್ ಶುಲ್ಕ ಹೆಚ್ಚಳದ ವಿರುದ್ಧ ಪ್ರತಿಭಟನೆಗಿಳಿದಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿ, ವಶಕ್ಕೆ ಪಡೆದಿದ್ದಾರೆ.

ಹಾಸ್ಟೆಲ್ ಶುಲ್ಕ ಹೆಚ್ಚಳ ಮತ್ತು ಕಾಲೇಜು ಆಡಳಿತ ಮಂಡಳಿ ರೂಪಿಸಿರುವ ಕೆಲ ನೀತಿಗಳು ವಿದ್ಯಾರ್ಥಿಗಳ ಬೆಳವಣಿಗೆ ಮತ್ತು ಚಟುವಟಿಕೆಗಳಿಗೆ ವಿರುದ್ಧವಾಗಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಪ್ರತಿಭಟನೆಯಲ್ಲಿ ಸಾರ್ವಜನಿಕ ವಸ್ತುಗಳನ್ನು ಹಾನಿಗೊಳಿಸಿದ ಆರೋಪದಡಿಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಪಟ್ಟು ಬಿಡದೇ ಸಂಸತ್ತಿಗೆ ಜ್ಞಾಪಕ ಪತ್ರ ರವಾನಿಸಿದ ಜೆಎನ್‌ಯು ವಿದ್ಯಾರ್ಥಿಗಳು..
ಅಲ್ಲದೇ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೆ.ಎನ್.ಯು.ಎಸ್.ಯು ಅಧ್ಯಕ್ಷ ಐಶೇ ಘೋಷ್ ಮಾತನಾಡಿ, ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಿಸುತ್ತಿರುವ ರೀತಿ ಸಾಕಷ್ಟು ನಾಚಿಕೆಗೇಡಿನಿಂದ ಕೂಡಿದೆ. ವಿದ್ಯಾರ್ಥಿನಿಯರನ್ನು ಪುರುಷ ಪೊಲೀಸರು ಎಳೆದೊಯ್ದಿದ್ದಾರೆ. ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ. ನಮ್ಮ ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆ ಮುಂದುವರೆಯಲಿದೆ ಎಂದು ಹೇಳಿದರು.

ಇನ್ನು ಹಾಸ್ಟೆಲ್ ಫೀ ಇಳಿಕೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಪೊಲೀಸರು ಹತ್ತಿಕ್ಕುವ ರೀತಿಯನ್ನು ವಿಪಕ್ಷಗಳು ಖಂಡಿಸಿವೆ. ಶಿಕ್ಷಣ ಎಲ್ಲರ ಹಕ್ಕು. ಉಚಿತ ಹಾಗೂ ಉತ್ತಮ ಶಿಕ್ಷಣ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಶೈಕ್ಷಣಿಕ ಹಂತದ ಶುಲ್ಕ ಕಡಿತಕ್ಕೆ ಒತ್ತಾಯಿಸಿದ್ದಕ್ಕೆ, ಪೊಲೀಸರನ್ನು ಬಿಟ್ಟು ಲಾಠಿಚಾರ್ಜ್ ನಡೆಸುತ್ತಿರುವುದು ಯಾವ ನ್ಯಾಯ..? ಸರ್ಕಾರದ ಸರ್ವಾಧಿಕಾರತ್ವ ಕೀಳು ಮಟ್ಟಕ್ಕಿಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಆಮ್ ಆದ್ಮಿ ಪಕ್ಷ ವಿದ್ಯಾರ್ಥಿಗಳನ್ನು, ಪೊಲೀಸರು ಥಳಿಸಿ, ವಶಕ್ಕೆ ಪಡೆದಿರುವ ರೀತಿಯನ್ನು ಖಂಡಿಸಿದೆ. ಇನ್ನು ಬಿಜೆಪಿಯ ಗಿರಿರಾಜ್ ಸಿಂಗ್ ಮಾತನಾಡಿ, ಕೆಲವರು ಜೆ.ಎನ್.ಯು ಅನ್ನು ಅರ್ಬನ್ ನಕ್ಸಲ್ ಕೇಂದ್ರವನ್ನಾಗಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇತ್ತ ಜೆ.ಎನ್.ಯು ವಿದ್ಯಾರ್ಥಿಗಳು ನವೆಂಬರ್ 18ನ್ನು ಕಪ್ಪು ದಿನವನ್ನಾಗಿ ಆಚರಿಸಲು ಕರೆ ನೀಡಿದೆ. ಲೋಕಸಭೆಯಲ್ಲೂ ಜೆ.ಎನ್.ಯು ಪ್ರತಿಭಟನೆ ಪ್ರತಿಧ್ವನಿಸಿತು. ತ್ರಿಣಮೂಲ ಕಾಂಗ್ರೆಸ್ ನಾಯಕಿ ಸುಗತಾ ರಾಯ್, ಹಾಸ್ಟೆಲ್ ಶುಲ್ಕ ಹೆಚ್ಚಳದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಹೇಳಿದರು. ಬಿಎಸ್ಪಿಯ ಡ್ಯಾನಿಶ್ ಅಲಿ ಕೂಡ ಪೊಲೀಸರು ಮತ್ತು ಕೇಂದ್ರದ ಕ್ರಮವನ್ನು ಖಂಡಿಸಿದ್ದಾರೆ.
ರಾಷ್ಟ್ರೀಯ ಜನತಾ ದಳ ( ಆರ್ಜೆಡಿ) ಕೂಡ ಪೊಲೀಸರ ವರ್ತನೆಯನ್ನು ಖಂಡಿಸಿದೆ. ಎಲ್ಲರಿಗೂ ಉಚಿತ ಶಿಕ್ಷಣ, ವಸತಿ ಸಿಗಬೇಕು. ವಿದ್ಯಾರ್ಥಿಗಳ ಬೇಡಿಕೆಯಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದೆ.



ಜೆ.ಎನ್. ಯು.ಚುನಾವಣೆಯಲ್ಲಿ ಮನುವಾದಿಗಳಿಗೆ ಸೋಲುಂಟಾದ್ದರಿಂದ, ಜೆ.ಎನ್. ಯು.ವನ್ನು ಹಾಳುಗೆಡವಲು ಕೇಂದ್ರ ಸರ್ಕಾರ ನಿರ್ಧರಿಸಿರುವಂತಿದೆ.