ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸಲು ಮುಂದಾಗಿರುವ ಶಿಕ್ಷಣ ಇಲಾಖೆ ಕ್ರಮವನ್ನು ವಿರೋಧಿಸಿರುವ ‘ಐಸಿಡಿಎಸ್ ಉಳಿಸಿ, ಮಕ್ಕಳನ್ನು ರಕ್ಷಿಸಿ’ ಸಮಿತಿಯು, ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದೆ.
ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಮಿತಿ ಸದಸ್ಯರು, “ಶಿಕ್ಷಣ ಇಲಾಖೆಯು ಹೊಸ ಪರಿಕಲ್ಪನೆಯೊಂದಿಗೆ 4 ರಿಂದ 6 ವರ್ಷದ ಮಕ್ಕಳಿಗೆ ಎಲ್.ಕೆ.ಜಿ-ಯುಕೆಜಿ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ನೀಡಲು ಸುತ್ತೋಲೆ ಹೊರಡಿಸಿದೆ. ಇದುವರೆಗೂ ರಾಜ್ಯದಲ್ಲಿ 2524 ಶಾಲೆಗಳಲ್ಲಿ ಪ್ರಾರಂಭಿಸಲಾಗಿದೆ. ಇದರಿಂದ ಸರ್ಕಾರದ ಐಸಿಡಿಎಸ್ (ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ ಯೋಜನೆ) ಯೋಜನೆಯಿಂದ ನಡೆಯುವ ಅಂಗನವಾಡಿ ಕೇಂದ್ರಗಳಿಗೆ ಮತ್ತು ಶಾಲಾಪೂರ್ವ ಶಿಕ್ಷಣ ಕುರಿತ ಇಸಿಸಿಇ ಅಂಶಗಳ ಜಾರಿಗೆ ತೀವ್ರ ಧಕ್ಕೆಯಾಗಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಆದ್ದರಿಂದಲೇ, ಕಳದ ಜೂನ್ 3 ರಿಂದ ರಾಜ್ಯವ್ಯಾಪಿ ಹೋರಾಟಗಳು ಆರ೦ಭವಾಗಿದ್ದು, ಬೆ೦ಗಳೂರಿನಲ್ಲಿ ಜೂನ್ 19 ಮತ್ತು 20 ರಂದು ಭೃಹತ್ ಹೋರಾಟ ನಡೆದಿದೆ. ಶಿಕ್ಷಣ ಇಲಾಖೆಯವರ ವಾದ ಏನೆಂದರೆ, ಬಡವರ ಮಕ್ಕಳಿಗೆ ಇಂಗ್ಲಿಷ್ ಕಲಿಸಬೇಕು, ಒಂದನೇ ತರಗತಿಗೆ ಬರುವ ಮಗು ಶಾಲಾ ವ್ಯವಸ್ಥೆಗೆ ಸಿದ್ಧವಾಗಿರಬೇಕು ಮತ್ತು ಸರ್ಕಾರಿ ಶಾಲೆಗಳ ದಾಖಲಾತಿಯನ್ನು ಹೆಚ್ಚಿಸಬೇಕು; ಆದ್ದರಿ೦ದ ಮಕ್ಕಳು 4 ವರ್ಷದಿಂದ ಮೇಲ್ಪಟ್ಟವರಿರುವಾಗಲೇ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕೊಡಬೇಕು ಎಂಬುದಾಗಿದೆ” ಎಂದು ವಿವರಿಸಿದ್ದಾರೆ.
“ಯಾವುದೇ ಮಗುವಿನ 40% ದೈಹಿಕ ಬೆಳವಣಿಗೆ 85% ಮಾನಸಿಕ ಬೆಳವಣಿಗೆಯಾಗುವ ಸ೦ದರ್ಭದಲ್ಲಿ ಲಾಲನೆ ಪಾಲನೆ, ಪೋಷಣೆ ಮತ್ತು ಶಿಕ್ಷಣವನ್ನು ಕೊಡುವ ಸಲುವಾಗಿಯೇ 1975 ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ, ಅ೦ಗನವಾಡಿ ಕೇಂದ್ರದ ಪರಿಕಲ್ಪನೆ ಕೂಡ ಬಂದಿರುವುದು. ಶಿಕ್ಷಣ ಇಲಾಖೆಯು ಹೊರಡಿಸಿರುವ ಈ ಮೇಲಿನ ಆದೇಶದಿಂದ ಅಂಗನವಾಡಿ ಕೇಂದ್ರಗಳಲ್ಲಿ 3- 4 ವರ್ಷದ ಮಕ್ಕಳು ಮಾತ್ರವೇ ಉಳಿಯುತ್ತವೆ. ಆಗ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ತುಂಬಾ ಕಡಿಮೆ ಆಗುತ್ತದೆ. 49 ವರ್ಷಗಳಿಂದ ಸರ್ಕಾರದ ಮಾರ್ಗದರ್ಶನದಲ್ಲಿಯೇ ಐಸಿಡಿಎಸ್ ಮೂಲಕ ನಡೆಸಲಾಗುತ್ತಿರುವ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇಸಿಸಿಇ) ಎಲ್ಲಾ ಅ೦ಶಗಳನ್ನು ಒಳಗೊಂಡ ಶಾಲಾಪೂರ್ವ ಶಿಕ್ಷಣಕ್ಕೆ ಗಂಭೀರವಾಗಿ ಧಕ್ಕೆಯಾಗುತ್ತದೆ. ಈ ಯೋಜನೆ ಯಾವಾಗ ಬೇಕಾದರೂ ಕುಸಿದು ಕಣ್ಮರೆಯಾಗುವ ಸಾಧ್ಯತೆ ಇದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
‘ಐಸಿಡಿಎಸ್ ಉಳಿಸಿ; ಮಕ್ಕಳನ್ನು ರಕ್ಷಿಸಿ’ ಸಮಿತಿಯಿಂದ ಸರ್ಕಾರಕ್ಕೆ ಸಲಹೆ
1. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಕ್ಷಣ ಇಲಾಖೆ ಪರಸ್ಪರ ಚರ್ಚಿಸದೆ ಶಿಕ್ಷಣ ಇಲಾಖೆ ಏಕಮುಖವಾಗಿ ತಂದಿರುವ ಈ ಸುತ್ತೋಲೆಗಳಿ೦ದ ಆಗಿರುವ ಗೊ೦ದಲವನ್ನು ನಿವಾರಿಸಲು, ಎರಡೂ ಇಲಾಖೆಗಳು ಪರಸ್ಪರ ಪ್ರಜಾಸತ್ತಾತ್ಮಕವಾಗಿ ಚರ್ಚಿಸಿ, ಎರಡೂ ಇಲಾಖೆಗಳು ನಡೆಸುತ್ತಿರುವ ಪೂರ್ವ ಪ್ರಾಥಮಿಕ ಶಿಕ್ಷಣದ ಅಗತ್ಯತೆಗಳು ಮತ್ತು ಅದರ ಪರಿಣಾಮಗಳನ್ನು ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನು ರಚಿಸಬೇಕು. ಅಲ್ಲಿಯ ತನಕ 11-6-2024 ರ ಮತ್ತು 19-05-2024 ರ ಆದೇಶಗಳನ್ನು ತಡೆಹಿಡಿಯಬೇಕು, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮ೦ಡಳಿಯ 7 ಜಿಲ್ಲೆಗಳ ವ್ಯಾಪ್ತಿಯನ್ನೂ ಒಳಗೊಂಡು ರಾಜ್ಯದ ಎಲ್ಲಿಯೂ ಜಾರಿಯಾಗಬಾರದು.
2. ಅಂಗನವಾಡಿ ಕೇ೦ದ್ರದ ಹೆಸರು “ಪೂರ್ವ ಪ್ರಾಥಮಿಕ ಶಿಕ್ಷಣ ಕೇ೦ದ್ರ” ಎ೦ದು ಪರಿವರ್ತಿಸುವುದು.
3. ಪಿಯುಸಿಗಿಂತ ಹಚ್ಚು ವಿದ್ಯಾರ್ಹತೆ ಹೊಂದಿರುವ ಮತ್ತು ಸರ್ಕಾರಿ ಶಾಲೆಯ ಅವರಣದಲ್ಲಿರುವ ಅ೦ಗನವಾಡಿ ಕೇಂದ್ರಗಳನ್ನು ಮೊದಲ ಆದ್ಯತೆಯಲ್ಲಿ ಆಯ್ಕೆ ಮಾಡಿಕೊಳ್ಳುವುದು.
4. ನಿರಂತರ ಕೌಶಲ್ಯಭರಿತ ತರಬೇತಿಗಳನ್ನು ಕೊಡುವುದು.
5. ಸರ್ಕಾರದಿಂದ ಮಕ್ಕಳಿಗೆ ಸಮವಸ್ತ್ರ, ಬ್ಯಾಗ್ ಮತ್ತು ಷೂಗಳನ್ನು ನೀಡುವುದು.
6. ಇಸಿಸಿಇ ನೀಡಿದ ಮಗುವಿಗೆ ‘ಟಿಸಿ’ ಕೊಡುವ ವ್ಯವಸ್ಥೆ ತರಬೇಕು.
7. ಅಂಗನವಾಡಿ ಕಾರ್ಯಕರ್ತರನ್ನು “ಶಿಕ್ಷಕಿ” ಎಂದು ಹೆಸರಿಸಿ ಪದನಾಮ ಬದಲಿಸುವುದು.
8. ಐಸಿಡಿಎಸ್ ನಲ್ಲಿರುವ ಇಸಿಸಿಇಗೆ ಅನುದಾನವನ್ನು ನಿರಂತರವಾಗಿ ಹೆಚ್ಚಳ ಮಾಡುವುದು.
9. ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರಿಗೆ ನೀಡುವ ಗೌರವಧನವನ್ನು ಈ ಕಾರ್ಯಕರ್ತೆಯರಿಗೆ ಹೆಚ್ಚುವರಿಯಾಗಿ ನೀಡುವುದು.
10. ಇಸಿಸಿಇ ಶಿಕ್ಷಣವನ್ನು ಅ೦ಗನವಾಡಿ ಕೇ೦ದ್ರಗಳಲ್ಲಿಯೇ ಕೊಡುವ ಬಗ್ಗೆ ಕಾನೂನು ರೂಪಿಸುವುದು.
11 ಅಂಗನವಾಡಿ ಕಾರ್ಯಕರ್ತೆಯರನ್ನು ನಿರಂತರವಾಗಿ ಚುನಾವಣಾ ಕೆಲಸಗಳಿಂದ ಮುಕ್ತಿಗೊಳಿಸುವುದು (ಚುನಾವಣಾ ಕೆಲಸಗಳಿಗೆ ನಿವೃತ್ತ ಅಂಗನವಾಡಿ ನೌಕರರನ್ನು ಬಳಸಬಹುದು).
12. ಐಸಿಡಿಎಸ್ ಯೋಜನೆಯನ್ನು ಪ್ರತ್ಯೇಕ ನಿರ್ದೇಶನಾಲಯವಾಗಿ ಪರಿವರ್ತಿಸಬೇಕು.
ಸುದ್ದಿಗೋಷ್ಠಿಯಲ್ಲಿ ಡಾ. ವಿಜಯಮ್ಮ, ಕೆ.ಎಸ್. ವಿಮಲಾ, ಎಸ್. ವರಲಕ್ಷ್ಮಿ ಮತ್ತು ಎಚ್.ಎಸ್ ಸುನಂದಾ ಇದ್ದರು.
ಇದನ್ನೂ ಓದಿ; ನರೇಂದ್ರ ಮೋದಿ, ಅಮಿತ್ ಶಾ ಅವರ ಸಂವಿಧಾನದ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ರಾಹುಲ್ ಗಾಂಧಿ


