ನೇಪಾಳದ ಕಠ್ಮಂಡುವಿನಲ್ಲಿ ಭದ್ರತಾ ಪಡೆಗಳೊಂದಿಗಿನ ಘರ್ಷಣೆಯಲ್ಲಿ ಭಾಗಿಯಾಗಿರುವ ಮಾಜಿ ರಾಜ ಜ್ಞಾನೇಂದ್ರ ಶಾ ಮತ್ತು ರಾಜಪ್ರಭುತ್ವ ಪರ ಪ್ರತಿಭಟನಾಕಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಸೋಮವಾರ ಎಚ್ಚರಿಸಿದ್ದಾರೆ ಎಂದು ದಿ ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ರಾಜಪ್ರಭುತ್ವವನ್ನು ಪುನಃಸ್ಥಾಪಿಸಲು ಒತ್ತಾಯಿಸಿ ಮಾಜಿ ರಾಜನ ಬೆಂಬಲಿಗರು ಶುಕ್ರವಾರ ಕಠ್ಮಂಡುವಿನ ಟಿಂಕುನೆ ಪ್ರದೇಶದಲ್ಲಿ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಘರ್ಷಣೆಗಳು ಭುಗಿಲೆದ್ದಿದ್ದವು. ಈ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದರು. ಘಟನೆಯಲ್ಲಿ ಹಲವಾರು ಕಟ್ಟಡಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.
2008 ರಲ್ಲಿ, ನೇಪಾಳವು ತನ್ನ 240 ವರ್ಷಗಳಷ್ಟು ಹಳೆಯದಾದ ರಾಜಪ್ರಭುತ್ವವನ್ನು ರದ್ದುಗೊಳಿಸಿ ಜಾತ್ಯತೀತ, ಫೆಡರಲ್ ಮತ್ತು ಪ್ರಜಾಪ್ರಭುತ್ವ ಗಣರಾಜ್ಯವಾಗಿ ಪರಿವರ್ತನೆಗೊಂಡಿತು.
ಸೋಮವಾರ ದೇಶದ ಸಂಸತ್ತಿನಲ್ಲಿ ಮಾತನಾಡಿದ ಓಲಿ, ಬ್ಯಾಂಕ್ ಸಾಲಗಳನ್ನು ಮರುಪಾವತಿಸಲು ನಿರಾಕರಿಸುವ ವ್ಯಕ್ತಿಗಳೊಂದಿಗೆ ಜ್ಞಾನೇಂದ್ರ ಶಾ ಹೊಂದಾಣಿಕೆ ಮಾಡಿಕೊಂಡಿದ್ದು, ಅವರ ಮಹತ್ವಾಕಾಂಕ್ಷೆಗಳಿಗಾಗಿ ಸಾಮಾಜಿಕ ಅಶಾಂತಿಯನ್ನು ಹುಟ್ಟುಹಾಕಿದ್ದಾರೆ ಎಂದು ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಆರೋಪಿತ ಸಂಘಟಕರು ಪೊಲೀಸರ ಮೇಲೆ ವಾಹನ ಚಲಾಯಿಸಲು ಪ್ರಯತ್ನಿಸಿದ್ದಾರೆ ಮತ್ತು ನಿರ್ಬಂಧಿತ ಪ್ರದೇಶವನ್ನು ಉಲ್ಲಂಘಿಸಿದ್ದಾರೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ತೈಲ ನಿಗಮದ ಡಿಪೋಗೆ ಬೆಂಕಿ ಹಚ್ಚುವಂತಹ ಭಯೋತ್ಪಾದಕ ಚಟುವಟಿಕೆಗಳು ನಡೆದಿವೆ.” ಎಂದು ಅವರು ಹೇಳಿದ್ದಾರೆ.
“ಮಾಜಿ ರಾಜ ವೀಡಿಯೊ ಹೇಳಿಕೆಯ ಮೂಲಕ ಪ್ರತಿಭಟನಾಕಾರರನ್ನು ಪ್ರಚೋದಿಸಿದ್ದು, ಸಿಂಹಾಸನವನ್ನು ಮರಳಿ ಪಡೆಯಲು ಬಯಸುವವರು ಪ್ರತಿಭಟನೆ ಮತ್ತು ಅದರ ಫಲಿತಾಂಶಗಳ ಬಗ್ಗೆ ತಮ್ಮ ನಿಲುವನ್ನು ಸಾರ್ವಜನಿಕವಾಗಿ ಹೇಳಬೇಕಲ್ಲವೇ?” ಎಂದು ಪ್ರಧಾನ ಮಂತ್ರಿ ಕೇಳಿದ್ದಾರೆ ಎಂದು ಕಠ್ಮಂಡು ಪೋಸ್ಟ್ ಉಲ್ಲೇಖಿಸಿದೆ.
ಫೆಬ್ರವರಿ 19 ರಂದು ನೇಪಾಳದ ಪ್ರಜಾಪ್ರಭುತ್ವ ದಿನದಂದು ವೀಡಿಯೊ ಬಿಡುಗಡೆ ಮಾಡಿದ್ದ ಜ್ಞಾನೇಂದ್ರ ಶಾ, ರಾಜಪ್ರಭುತ್ವದ ಮರು ಸ್ಥಾಪನೆಗೆ ಸಾರ್ವಜನಿಕ ಬೆಂಬಲಕ್ಕಾಗಿ ಮನವಿ ಮಾಡಿದ್ದರು. ಅದರ ನಂತರ ಇತ್ತೀಚಿನ ವಾರಗಳಲ್ಲಿ ರಾಜಪ್ರಭುತ್ವದ ಪುನಃಸ್ಥಾಪನೆಗೆ ಬೇಡಿಕೆಗಳು ಎದ್ದಿವೆ ಎಂದು ಪಿಟಿಐ ವರದಿ ಮಾಡಿದೆ.
“ಅವರಿಗೆ [ಶಾ] ಶಿಕ್ಷೆಯಿಂದ ವಿನಾಯಿತಿ ನೀಡಲಾಗುವುದಿಲ್ಲ. ಪ್ರಸ್ತುತ ವ್ಯವಸ್ಥೆಯನ್ನು ಉರುಳಿಸಲು ಮತ್ತು ರಾಜಪ್ರಭುತ್ವವನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿರುವವರು ಮಾರ್ಚ್ 28 ರ ಘಟನೆಗಳ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು.” ಎಂದು ಪ್ರಧಾನಿ ಓಲಿ ಸೋಮವಾರ ಹೇಳಿರುವುದಾಗಿ ಕಠ್ಮಂಡು ಪೋಸ್ಟ್ ಉಲ್ಲೇಖಿಸಿದೆ.
“ಘರ್ಷಣೆಗಳ ಕುರಿತು ತನಿಖೆಗಳು ನಡೆಯುತ್ತಿವೆ. ದೇಶದ ಗೃಹ ವ್ಯವಹಾರಗಳ ಸಚಿವಾಲಯವು ಸಾವುನೋವುಗಳು, ಆಸ್ತಿ ನಾಶ ಮತ್ತು ಬೆಂಕಿ ಹಚ್ಚುವಿಕೆಯನ್ನು ಪರಿಶೀಲಿಸಿದೆ. ಶೀಘ್ರದಲ್ಲೇ ವಿವರವಾದ ವರದಿಯನ್ನು ಸಲ್ಲಿಸಲಾಗುವುದು. ಈ ಭಯಾನಕ ಕೃತ್ಯಗಳ ಅಪರಾಧಿಗಳು ಕಠಿಣ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ” ಎಂದು ಪ್ರಧಾನಿ ಓಲಿ ಹೇಳಿದ್ದಾರೆ. ಕಾನೂನು ಕ್ರಮ ಕೈಗೊಳ್ಳುತ್ತೇವೆ


