ಕಕ್ಷಿದಾರರ ಜಮೀನಿನಲ್ಲಿ ಅನಧಿಕೃತವಾಗಿ ವಿದ್ಯುತ್ ಕಂಬ ಹಾಕಿದ್ದನ್ನು ಪರಿಶೀಲಿಸಲು ತೆರಳಿದ್ದ ವಕೀಲನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಶುಕ್ರವಾರ (ಜೂನ್.27) ಸಂಜೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಬೈಪಾಸ್ ರಸ್ತೆ ಸಮೀಪ ನಡೆದಿದೆ.
ಸಂದೀಪ್ ಹಲ್ಲೆಗೊಳಗಾದ ಯುವ ವಕೀಲ. ಬಿಜೆಪಿ ಮುಖಂಡ, ರಿಯಲ್ ಎಸ್ಟೇಟ್ ಉದ್ಯಮಿ ಜಿ.ಎನ್ ವೇಣುಗೋಪಾಲ್ ಹಾಗೂ ಅವರ ಮಗ ವಿವೇಕ್ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಇವರ ವಿರುದ್ದ ದೇವನಹಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಸಂದೀಪ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಕುರಿತು ನಾನುಗೌರಿ.ಕಾಂಗೆ ಮಾಹಿತಿ ನೀಡಿರುವ ಹಲ್ಲೆಗೊಳಗಾದ ವಕೀಲ ಸಂದೀಪ್, “ನನ್ನ ಕಕ್ಷಿದಾರ ಎನ್. ಗೋಪಾಲಕೃಷ್ಣ ಅವರ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಪಕ್ಕದ ಸಿಗ್ನೇಚರ್ ಒನ್ ಕಂಪನಿ ಲೇಔಟ್ ಪರವಾಗಿ ಹೈಟೆಂಶನ್ ವಿದ್ಯುತ್ ವೈರ್ ಹಾಕಲಾಗುತ್ತಿತ್ತು. ಇದರ ವಿರುದ್ದ ಗುತ್ತಿಗೆದಾರ ಗಣೇಶ್ ಬಾಬು ಅವರ ಮೇಲೆ ನಮ್ಮ ಕಕ್ಷಿದಾರ ಶುಕ್ರವಾರ ಬೆಳಿಗ್ಗೆ ದೂರು ನೀಡಿದ್ದರು” ಎಂದು ತಿಳಿಸಿದ್ದಾರೆ.
“ದೂರು ದಾಖಲಿಸಿಕೊಂಡ ಪೊಲೀಸರು ಸಂಜೆ 3.30ರ ಸುಮಾರಿಗೆ ಪರಿಶೀಲನೆಗೆಂದು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಮಗೂ ಮಾಹಿತಿ ಕೊಟ್ಟಿದ್ದರು. ನನ್ನ ಕ್ಷಕ್ಷಿದಾರರ ಪರವಾಗಿ ನಾನು ಪೊಲೀಸರ ಜೊತೆ ತೆರಳಿದ್ದೆ. ಪೊಲೀಸರು ಸುಮಾರು 45 ನಿಮಿಷಗಳ ಕಾಲ ಪರಿಶೀಲನೆ ನಡೆಸಿ ತೆರಳಿದ್ದರು. ಅವರ ಬೆನ್ನಲ್ಲೇ ನನ್ನ ಕಕ್ಷಿದಾರ ಗೋಪಾಲಕೃಷ್ಣ ಕೂಡ ಹೋಗಿದ್ದರು. ನಂತರ ನಾನೂ ಕಾರು ಹತ್ತಿ ಹೋಗಲು ಮುಂದಾದಾಗ ಜಿ.ಎನ್ ವೇಣುಗೋಪಾಲ್ ಹಾಗೂ ಅವರ ಮಗ ವಿವೇಕ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ.
“ನಾನು ನನ್ನ ಕಕ್ಷಿದಾರರ ಪರವಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರೂ ಕೇಳಲಿಲ್ಲ. ರೌಡಿಗಳನ್ನು ಬಿಟ್ಟು ಹೊಡೆಸುತ್ತೇನೆ. ಕೋರ್ಟ್‌ಗೆ ನುಗ್ಗಿ ಸಾಯಿಸುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ. ಕಾನೂನು ತಕರಾರು ಇರುವುದು ಸಿಗ್ನೇಚರ್ ಒನ್ ಕಂಪನಿ ಮತ್ತು ನನ್ನ ಕಕ್ಷಿದಾರ ಗೋಪಾಲಕೃಷ್ಣ ಅವರ ನಡುವೆಯಾಗಿದೆ. ನನ್ನ ಕಕ್ಷಿದಾರ ದೂರು ಕೊಟ್ಟಿರುವುದು ಗುತ್ತಿಗೆದಾರ ಗಣೇಶ್ ಬಾಬು ಮೇಲೆ. ಹಾಗಾಗಿ, ಈ ಪ್ರಕರಣಕ್ಕೂ ಜಿ.ಎನ್ ವೇಣುಗೋಪಾಲ್‌ಗೂ ಸಂಬಂಧವಿಲ್ಲ. ಅವರು ಸುಖಾಸುಮ್ಮನೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ” ಎಂದು ಸಂದೀಪ್ ಹೇಳಿದ್ದಾರೆ.
ತನ್ನ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಪರ ವಕಾಲತ್ತು ವಹಿಸದಂತೆ ದೇವನಹಳ್ಳಿ ವಕೀಲರ ಸಂಘ ತನ್ನ ಸದಸ್ಯರಿಗೆ ಸೂಚನೆ ನೀಡಿದೆ ಎಂದು ಸಂದೀಪ್ ತಿಳಿಸಿದ್ದಾರೆ.
ಮಂಗಳೂರಿನ ಕುಡುಪುವಿನಲ್ಲಿ ಅಶ್ರಫ್ ಗುಂಪು ಹತ್ಯೆ: ಸತ್ಯಶೋಧನಾ ವರದಿ ಬಿಡುಗಡೆ


