ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ನಾಡಕಚೇರಿ ಮುಂಭಾಗ ಕಳೆದ 1018 ದಿನಗಳಿಂದ ನಡೆಯುತ್ತಿರುವ ಭೂಸ್ವಾಧೀನ ವಿರೋಧಿ ರೈತರ ಅನಿರ್ದಿಷ್ಟಾವಧಿ ಧರಣಿಗೆ ಕರ್ನಾಟಕ ಪ್ರಾಂತ ರೈತಸಂಘ ಸೇರಿದಂತೆ ಹಲವು ಎಡ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಚನ್ನರಾಯಪಟ್ಟಣ ರೈತ ಹೋರಾಟದ ಜೊತೆಗಿದ್ದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ ಬಯ್ಯಾರೆಡ್ಡಿ ಅಗಲಿಕೆಯ ಹಿನ್ನೆಲೆ, ಇಂದು (ಜ.15) ಧರಣಿ ಸ್ಥಳಕ್ಕೆ ಬಂದ ಎಡ ಸಂಘಟನೆಗಳ ಮುಖಂಡರು, ಬಯ್ಯಾರೆಡ್ಡಿಯವರ ಅನುಪಸ್ಥಿತಿಯಲ್ಲಿಯೂ ನಾವು ಸಂಘಟನೆಯಾಗಿ ರೈತರ ಜೊತೆಗಿದ್ದೇವೆ ಎಂದು ಘೋಷಿಸಿದರು.

ಈ ವೇಳೆ ಮಾತನಾಡಿದ ಸಿಪಿಐಎಂನ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್ ಅವರು, “ವಿವಿಧ ಸಂಘಟನೆಗಳ ಸಾಮೂಹಿಕ ನಾಯಕತ್ವದಲ್ಲಿ ನಡೆದು ಬಂದಿರುವ ಚನ್ನರಾಯಪಟ್ಟಣ ರೈತ ಹೋರಾಟದ ಜೊತೆಗೆ ನಮ್ಮ ಕಾಮ್ರೇಡ್ ಬಯ್ಯಾರೆಡ್ಡಿಯವರೂ ಕೂಡ ಮುಂಚೂಣಿಯಲ್ಲಿದ್ದರು. ಅವರು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಹೋರಾಟದ ಸ್ಪೂರ್ತಿ ನಮ್ಮ ಜೊತೆಗಿದೆ ಎಂದರು.
ಮೂರುಕಾಸಿನ ಸಂಬಳಕ್ಕೆ ಕೆಲಸ ಮಾಡಲು ಬಂಡವಾಳಶಾಹಿಗಳಿಗೆ ನೌಕರರು ಬೇಕು, ಅದಕ್ಕಾಗಿ ಕೃಷಿ ನಂಬಿರುವ ಜನರ ಭೂಮಿಯನ್ನು ಕಸಿದುಕೊಳ್ಳುವ ಮೂಲಕ ಸರ್ಕಾರಗಳು ಕೂಲಿಯಾಳುಗಳನ್ನು ಸೃಷ್ಟಿಸುತ್ತಿದೆ. ರೈತರ ಕೈಯಲ್ಲಿ ಭೂಮಿ ಇರಲೇ ಬಾರದು ಎಂಬುದು ಸರ್ಕಾರಗಳ ನಿರ್ಧಾರ. ಅದನ್ನು ನಾವು ವಿರೋಧಿಸಲೇಬೇಕು. ಮುಖ್ಯಮಂತ್ರಿಗಳು ಒಳ್ಳೆಯವರಾಗಿದ್ದರು ಕೂಡ ಬಂಡವಾಳಶಾಹಿಗಳಿಗೆ ಹೆದುರುತ್ತಿದ್ದಾರೆ. ಅವರು ತಕ್ಷಣವೇ ಚನ್ನರಾಯಪಟ್ಟಣ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಚನ್ನರಾಯಪಟ್ಟಣ ಹೋರಾಟ ಕೃಷಿ ಭಾರತವನ್ನು ಕಬಳಿಸಲು ಹೊರಟಿರುವ ಬಹುರಾಷ್ಟ್ರೀಯ ಕಂಪನಿಗಳ ವಿರುದ್ದ ನಡೆಸುತ್ತಿರುವ ಹೋರಾಟ. ನಾವಿದನ್ನು ಗೆಲ್ಲಲೇಬೇಕು, ಗೆಲ್ಲುತ್ತೇವೆ. ಅಲ್ಲಿಯವರೆಗೆ ಹೋರಾಡೋಣ ನಾವು ಸದಾ ಜೊತೆಗಿರುತ್ತೇವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು. ಬಸವರಾಜು ಹೇಳಿದರು.

ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಅವರು ಮಾತನಾಡಿ, ಹಿಂದೆ ಭೂಮಿಗಾಗಿ ಚಳವಳಿ ನಡೆಯುತ್ತಿದ್ದವು. ಈಗ ನಮಗಿರುವ ಭೂಮಿಯನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ, ಇದು ದುರಂತವೇ ಸರಿ. ಚಳವಳಿಯನ್ನು ಇಷ್ಟು ದೀರ್ಘಕಾಲ ಜೀವಂತವಾಗಿಟ್ಟಿರುವುದು ಇಲ್ಲಿನ ರೈತರ ಹೆಗ್ಗಳಿಕೆ ಮತ್ತು ಇದೊಂದು ಸಾಹಸವೇ ಸರಿ. ಹೋರಾಟಕ್ಕೆ ಎಂದಿಗೂ ಸೋಲಾಗುವುದಿಲ್ಲ. ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ಜನವರಿ ತಿಂಗಳಲ್ಲಿ ಯಾವುದೇ ನಿರ್ಧಾರಕ್ಕೆ ಬರದಿದ್ದರೆ ಫಬ್ರವರಿ ತಿಂಗಳಲ್ಲಿ ತೀವ್ರ ಹೋರಾಟಕ್ಕೆ ಮುಂದಾಗೋಣ ಎಂದರು.
ಕರ್ನಾಟಕ ಪ್ರಾಂತ್ಯ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ್ ಮಾತನಾಡಿ, ಚನ್ನರಾಯಪಟ್ಟಣ ಭೂಮಿ ಹೋರಾಟದ ವಿಷಯವನ್ನು ಪ್ರಾಧಾನವಾಗಿಟ್ಟುಕೊಂಡು, ರೈತರ, ಕಾರ್ಮಿಕರ ವಿವಿಧ ಒತ್ತಾಯಗಳ ಜೊತೆಗೆ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಹೋರಾಟವನ್ನು ರೂಪಿಸಲಾಗುತ್ತಿದ್ದು, ರಾಜ್ಯದ ವಿವಿಧ ಭಾಗಗಳ ಕನಿಷ್ಟ ಹತ್ತು ಸಾವಿರ ಜನರನ್ನು ಒಟ್ಟಿಗೆ ಸೇರಿಸುವ ಯೋಜನೆ ಇದೆ. ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ ಬನ್ನಿ ಎಂದು ಕರೆಕೊಟ್ಟರು.
ರಾಜ್ಯದ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ ಸಂಘಟನೆಗಳೂ ಸೇರಿದಂತೆ ವಿವಿಧ ಜನಪರ ಸಂಘಟನೆಗಳು ನಮ್ಮೊಂದಿಗಿವೆ. ಕರ್ನಾಟಕದ ಐಕ್ಯ ಹೋರಾಟಕ್ಕೆ ಇದೊಂದು ಜಿವಂತ ಉದಾಹರಣೆ. ನೀವೆಲ್ಲರೂ ಜೊತೆಗಿರುವುದೆ ನಮ್ಮ ರೈತ ಹೋರಾಟಕ್ಕೆ ಆನೆ ಬಲ. ಬಯ್ಯಾರೆಡ್ಡಿಯವರು ಇಲ್ಲದಿರುವ ಖಾಲಿ ತನವನ್ನು ತಾವು ತುಂಬಲು ಬಂದಿದ್ದೀರಿ. ನೀವೆಲ್ಲರು ಜೊತೆಗಿದ್ದರೆ ಯಾವುದೇ ಸಂದರ್ಭದಲ್ಲಿಯಾದರೂ ಸರಿ ಭೂಮಿಯನ್ನು ಬಿಟ್ಟುಕೊಡುವ ಪ್ರಶ್ನೆಯೆ ಇಲ್ಲ. ಅದಕ್ಕಾಗಿ ಎಂತಹ ಹೋರಾಟಕ್ಕಾದರೂ ನಾವು ಸಿದ್ದ ಎಂದು ಚನ್ನರಾಯಪಟ್ಟಣ ಭೂಸ್ವಾದೀನ ವಿರೋಧಿ ಹೋರಾಟ ಸಮಿತಿಯ ಮುಖಂಡ ಕಾರಳ್ಳಿ ಶ್ರೀನಿವಾಸ್ ತಿಳಿಸಿದರು.
ಹೋರಾಟಗಾರರಾದ ಚಂದ್ರ ತೇಜಸ್ವಿ, ಪ್ರಭಾ ಬೆಳವಂಗಲ, ನಲ್ಲಪ್ಪನಹಳ್ಳಿ ನಂಜಪ್ಪ, ಸಿದ್ದಾರ್ಥ, ಮಾರೇಗೌಡ, ಮೀನಾಕ್ಷಿ ಸುಂದರಂ, ಮುನಿವೆಂಕಟಪ್ಪ ಸೇರಿದಂತೆ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತಸಂಘ ಮತ್ತಿತರ ಸಂಘಟನೆಗಳ ಮುಖಂಡರು, 13 ಹಳ್ಳಿಗಳ ರೈತರು, ರೈತ ಮಹಿಳೆಯರು, ಯುವ ಜನರು ಇಂದು ಧರಣಿಯಲ್ಲಿ ಭಾಗಿಯಾಗಿದ್ದರು.
ಜನವರಿ 17, 18, 19ರಂದು ಬಹುತ್ವ ಸಂಸ್ಕೃತಿ ಭಾರತೋತ್ಸವ – 2025 ಹಾಗೂ ಚಲೋ ಕಲಬುರಗಿ ಸೌಹಾರ್ದ ಸಮಾವೇಶ


