Homeಅಂಕಣಗಳುಕರ್ನಾಟಕ ಉಪಚುನಾವಣೆಗಳ ಪಾಠ: ಇಲ್ಲಿ ಯಾರೂ ಅನಿವಾರ್ಯರಲ್ಲ ಅನ್ನೋದು

ಕರ್ನಾಟಕ ಉಪಚುನಾವಣೆಗಳ ಪಾಠ: ಇಲ್ಲಿ ಯಾರೂ ಅನಿವಾರ್ಯರಲ್ಲ ಅನ್ನೋದು

- Advertisement -
- Advertisement -

ಈಗ ಎಲ್ಲಾ ಕಡೆ ಚುನಾವಣೆ ಸುದ್ದಿ. ಇಂತಹ ಭಯಾನಾಕ ಮಹಾಮಾರಿ ಹಬ್ಬಿದಾಗ ಯಾಕ್ ಚುನಾವಣೆ ನಡೆಸಬೇಕಾಗಿತ್ತು ಅನ್ನುವ ಸುದ್ದಿ ಅಲ್ಲ. ಎಲ್ಲರಿಗೂ ಬೇಕಾಗಿದ್ದು “ಇಲ್ಲೆ ಯಾರು ಗೆದ್ದರು, ಅಲ್ಲೆ ಯಾರ ಸೋತರು” ಅನ್ನೋ ಸುದ್ದಿ. ಆ ಮಾತು ಮುಗಿದ ನಂತರ ಬರುವ ಅತ್ಯಂತ ಮುಖ್ಯ ಪ್ರಶ್ನೆ “ಯಾಕ”?

ಮೊದಲಿಗೆ ಹೇಳಿಬಿಡ್ತೇನು. ಚುನಾವಣೆ ಅನ್ನೋದು ಒಂದು ಮಾಯೆ. ಭಾರತದ ಒಳಗ ಒಂದು ಅಂದಾಜಿನ ಪ್ರಕಾರ 875 ವಿಶ್ವ ವಿದ್ಯಾಲಯಗಳು ಅದಾವು. ಇದರೊಳಗ ಭಾರತೀಯ ವಿಜ್ಞಾನ ಸಂಸ್ಥೆ, ಐಐಟಿ, ಐಐಎಂನಂತಹ ವಿಶ್ವ ಗುರುಕುಲದಿಂದಾ ಹಿಡದು, ರೊಕ್ಕ ತೊಗೊಂಡು ಪಿಎಚ್‌ಡಿ ಕೊಡೋ ವಿವಿ ಅರ್ಥಾತ್ ಟೋಪಿಗೆ ವಿವಿಗಳ ತನಕ ಆದಾವು.

ಆದರ ಆ ವಿವಿಗಳು, ಅವುಗಳ ಸಾವಿರಾರು ಕಾಲೇಜುಗಳು ಇವುಗಳಲ್ಲಿ ಯಾವುದರಲ್ಲಿಯೂ ಕೂಡ ‘ಚುನಾವಣೆ ಅಧ್ಯಯನ’ ಅಥವಾ ‘ವಿಶ್ಲೇಷಣೆ’ ಅನ್ನುವ ವಿಷಯ ಇಲ್ಲ. ಯಾವ ಪಂಡಿತರೂ ಕೂಡ ಒಂದು ಪಠ್ಯಪುಸ್ತಕವಾಗುವಂತ ಪುಸ್ತಕ ಬರೆದಿಲ್ಲ. ಯಾವ ಚುನಾವಣೆಯೊಳಗ ಯಾರು ಹೆಂಗ ವೋಟು ಹಾಕುತ್ತಾರೆ ಅನ್ನೋದು ತಲೆತಲಾಂತರದಿಂದ ರಾಜಕೀಯದೊಳಗ ಇದ್ದ ಮೇಧಾವಿ ನಾಯಕರಿಂದ ಹಿಡದು ನಿನ್ನೆ ಮೊನ್ನೆ ಟಿವಿಯೊಳಗ ಸುದ್ದಿ ಮಾಡಲಿಕ್ಕೆ ಬಂದ ವರದಿಗಾರನವರೆಗೂ ಯಾರಿಗೂ ಗೊತ್ತಿಲ್ಲ.

ಆದರೂ ಕೂಡ ಈಗ ಮುಗಿದು ಹೋದ ಚುನಾವಣೆಗಳ ಬಗ್ಗೆ ಕೆಲವು ಸಾಮಾನ್ಯ ಮಾತುಗಳನ್ನ ಹೇಳಬಹುದು.
ಮೂರೂ ಚುನಾವಣೆ ಒಳಗ ಜನರಿಗೆ ಅತಿ ಕುತೂಹಲ ಕೇರಳಿಸಿದ್ದು ಬೆಳಗಾವಿ ಉಪಚುನಾವಣೆ. ಕ್ರಿಕೆಟ್ ಮ್ಯಾಚ್‌ನ ಹಂಗ ಒಮ್ಮೆ ಇವರ ಕಡೆ, ಒಮ್ಮೆ ಅವರ ಕಡೆ ವಾಲಿದ ಗಾಳಿ, ಕೊನೆಗೆ ಆಳುವ ಬಿಜೆಪಿ ಕಡೆ ಹೋತು. ಮುಖ್ಯಮಂತ್ರಿಯಿಂದ ಹಿಡಿದು, ಉಳಿದ ನಾಯಕರು ಇರೋ ಫಲಿತಾಂಶ ನೋಡಿ ಸಮಾಧಾನ ಮಾಡಿಕೊಳ್ಳುವ ಹಂಗ ಮಾಡಿಬಿಟ್ಟಿತು. ಈ ಫಲಿತಾಂಶ ಬೆಳಗಾವಿ ನಮ್ಮದು, ಅದು ಕೇಕುವಾಕು ಅನ್ನೋ ಬಿಜೆಪಿ ಅವರ ವಿಶ್ವಾಸಕ್ಕ ಒಂದು ದೊಡ್ಡ ಧಕ್ಕಾ ಕೊಟ್ಟದ್ದು ಖರೆ.

ಯಾಕ್ ಹಿಂಗ ಆತು?
ಸಿ.ಡಿ ಗದ್ದಲದೊಳಗ ಸಿಕ್ಕ ರಮೇಶ್ ಜಾರಕಿಹೊಳಿ ಸಾಹುಕಾರ್ ಅವರು ಪ್ರಚಾರಕ್ಕೆ ಬರಲಿಲ್ಲ. ಕೊನೆಯ ಕೆಲವು ದಿನ ಮಾತ್ರ ಕುರುಡು ಕಾಂಚಾಣದ ಮೋಡಿ ಮಾಡಿದರು. ‘ಅವರು ಮತದಾರರಿಗೆ ಕೊಟ್ಟ 200 ರೂಪಾಯಿಯಿಂದ ನಾನು ಸೋತೆ’ ಅಂತ ಅವರ ತಮ್ಮ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಮುಂದೆ ಒಂದು ದಿನ ಮುಖ್ಯಮಂತ್ರಿ ಆಗಬೇಕು ಅನ್ನುವ ಆಸೆ ಇಟ್ಟುಕೊಂಡ ಸತೀಶ್ ಅವರು 2023 ಅನ್ನುವ ನಂಬರ್ ಪ್ಲೇಟ್‌ನ ಕಾರು ಖರೀದಿ ಮಾಡಿಕೊಂಡಾರ. ಅವರು ಜಿಲ್ಲೆ ಎಲ್ಲಾ ಸುತ್ತಾಡಿ, ಎಲ್ಲ ಕಡೆ ತಮ್ಮ ಜನರನ್ನು ಇಟ್ಟು, ಮುಂದಿನ ದಿನಗಳ ತಯಾರಿ ಮಾಡಿಕೊಂಡಾರ. ಅವರು ತಮ್ಮ ಇಮೇಜು, ತಮ್ಮ ಕುಟುಂಬದ ಪ್ರಭಾವ, ತಮ್ಮ ಸಕ್ಕರೆ ಕಾರಖಾನೆ, ನಾಯಕ ವಿದ್ಯಾರ್ಥಿ ಸಂಘಟನೆ, ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರ ಕೆಲಸ ಎಲ್ಲಾ ಕೂಡಿ ಬಿಜೆಪಿಗೆ ತಕ್ಕದಾದ ಹೋರಾಟ ಮಾಡಿದರು.

ಇನ್ನು ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ತಮ್ಮ ಪಕ್ಷ ಕಟ್ಟಿದ ಬೆಜೆಪಿಯವರು ತಾವು ದ್ವೇಷಿಸುವ ತಂತ್ರಕ್ಕೆ ಮೊರೆ ಹೋದರು. ದಿವಂಗತ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅವರಿಗೆ ಟಿಕೆಟ್ ಕೊಟ್ಟು ಅನುಕಂಪದ ಮತಗಳ ಸಹಾಯ ಪಡೆದರು. ಬೆಳಗಾವಿ ಜಿಲ್ಲೆಯಲ್ಲಿ ಎರಡು ಲೋಕಸಭಾ ಸದಸ್ಯರಿದ್ದಾರ. ಇಬ್ಬರು ಕೂಡ ಕುಟುಂಬ ರಾಜಕಾರಣದ ಫಲಾನುಭವಿಗಳೇ ಅದಾರ.

ಬೆಳಗಾವಿಯೊಳಗ ಕೆಲಸ ಮಾಡಿದ ಅನುಕಂಪ ಬಸವ ಕಲ್ಯಾಣದೊಳಗ ಕೆಲಸ ಮಾಡಲಿಲ್ಲ. ಶಾಸಕ ಬಸಂತಪುರ ನಾರಾಯಣ ರಾವ್ ಅವರ ಪತ್ನಿ ಮಾಲಾ ಅವರಿಗೆ ಜನ ಆಶೀರ್ವಾದ ಮಾಡಲಿಲ್ಲ. ಬಿಜೆಪಿ ಅವರು ಅಲ್ಲಿನ ಮರಾಠಾ ನಾಯಕರಾದ ಮಾರುತಿ ರಾವು ಮೂಳೆ ಅವರನ್ನ ದಾರಿಯಿಂದ ಹಿಂದೆ ಸಾರಿಸುವುದರಲ್ಲಿ ಯಶಸ್ವಿಯಾದರು. ಹಿಂದಿನ ಅಭ್ಯರ್ಥಿ ಮಲ್ಲಿಕಾರ್ಜುನ ಖುಬಾ ಅವರು ಸಾರಿದ ಬಂಡಾಯ ಅವರ ಆಪ್ತರ ಮತ ಪಡೆಯಲಿಕ್ಕೆ ಮಾತ್ರ ಸೀಮಿತ ಆಯಿತು.

ಮುಖ್ಯವಾದ ವಿಷಯ ಏನು ಅಂದ್ರ ಅಲ್ಲೆ 200 ಕಿಲೋಮೀಟರ್ ದೂರ ಇದ್ದ ಬ್ಯಾರಿಸ್ಟರ್ ಅಸದುದ್ದಿನ ಓವಯಿಸಿ ಅವರು ಉತ್ತರ ಹಿಂದೂಸ್ತಾನದೊಳಗ ಬಿಜಿ ಆಗಿಬಿಟ್ಟಿದ್ದರಿಂದ ಹಾಸನದ ಮಣ್ಣಿನ ಮಗನಾದ ಎಚ್ ಡಿ ಕುಮಾರಸ್ವಾಮಿ ಅವರು ಅವರ ಪಾತ್ರ ನಿರ್ವಹಿಸಲಿಕ್ಕೆ ಒಪ್ಪಿಕೊಂಡರು. ಸ್ಥಳೀಯ ದರ್ಗಾದ ಗುರುಗಳ ಮಗನಿಗೆ ಟಿಕೆಟ್ ಕೊಟ್ಟು ಚುನಾವಣೆಗೆ ನಿಲ್ಲಿಸಿದರು. ಆ ಯುವಕ12 ಸಾವಿರ ಓಟು ತೊಗೊಂಡು ಆಟಾ ಗೂಟಾ ಜೈ ಅಂತ ಹೇಳಿ ಬೇರೆದವರ ಆಟಾ ಕೇಡಿಸಿ ನಕ್ಕೊತ ಮನಿ ಕಡೆ ಹೋದ.

ಹಿಂದೆ ಶಾಸಕ, ಸಚಿವರ ಆಪ್ತ ಕಾರ್ಯದರ್ಶಿ ಆಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕ ಶರಣು ಸಲಗರ ಅವರು ಬಸವ ಕಲ್ಯಾಣದಿಂದ ಗೆದ್ದರು. ಲಿಂಗಾಯತರಿಗೆ ಪುಣ್ಯ ಕ್ಷೇತ್ರ ಆಗಿರುವ ಬಸವ ಕಲ್ಯಾಣವನ್ನು ಬೇರೆಯವಿಗೆ ಬಿಟ್ಟುಕೊಡಬಾರದು. ಮೋದಿ ಅವರು ವಾರಣಾಸಿ ಪ್ರತಿನಿಧಿಸಿದ ಹಂಗ ನಮ್ಮವರು ಕಲ್ಯಾಣ ಪ್ರತಿನಿಧಿಸಬೇಕು ಅಂತ ಸಮಾಜದ ಒಳಗ ಮೆತ್ತಗ, ಜೋರು ಪ್ರಚಾರ ಆತು.

ಬಸವ ಕಲ್ಯಾಣದ ಚುನಾವಣೆ ಒಳಗ ಬೀದರ್ ಶಾಸಕ ರಹೀಮ ಖಾನ್ ಅವರು ಆಡಿದ ಮಾತು ಒಂದು ಉರ್ದು ಪತ್ರಿಕೆಗಳ ಒಳಗ ಬಂದು ದೊಡ್ಡ ಅವಾಂತರ ಆತು. ಅದನ್ನ ಸುಖಾಂತ ಮಾಡಲಿಕ್ಕೆ ಕಾಂಗ್ರೆಸ್‌ನವರು ಪ್ರಯತ್ನ ಮಾಡಲಿಲ್ಲ. ಬಿಜೆಪಿಯವರು ಸಾಲಿ ಶುರು ಅದ ದಿನದಿಂದ ಓದುವ ಹುಡುಗನಂತೆ ಕೆಲಸ ಮಾಡಿದರೆ, ಕಾಂಗ್ರೆಸ್ ನವರು ಪರೀಕ್ಷೆ ಹಿಂದಿನ ದಿವಸ ಇನ್ನೊಬ್ಬರ ಹತ್ತಿರ ನಿರೀಕ್ಷಿತ ಪ್ರಶ್ನೆ, ಸರಳ ಉತ್ತರದ ನೋಟ್ಸು ಹುಡುಕಾಡುವ ಉಡಾಳ ಹುಡುಗರಂತೆ ಅಲೆದಾಡಿದರು.

ಇನ್ನೂ ಮಸ್ಕಿ ಕ್ಷೇತ್ರದೊಳಗ ಪಕ್ಷ ಅದೇ, ಮನುಷ್ಯ ಬೇರೆ, ಅನ್ನೋ ಫಲಿತಾಂಶ ಬಂತು.
ಮಾಸ್ಕ್ ಧರಿಸಿ ಮನೆಯಲ್ಲಿ ಕುಳಿತು ವಿಡಿಯೋ ಮೂಲಕ ಪ್ರಚಾರ ಮಾಡಿದ ಪ್ರತಾಪ್ ಗೌಡ ಪಾಟೀಲ್ ಅವರು ಮಸ್ಕಿ ಉಪ ಚುನಾವಣೆ ಸೋತು ಹೋದರು. ನನ್ನವರೆ ನಮಗೆ ಮೋಸ ಮಾಡಿದರು ಅಂತ ಗ್ರೀಕ್ ನಾಟಕದ ದುರಂತ ನಾಯಕನಂತೆ ಅವರು ಗೋಳಾಡಿಕೊಂಡರು. ಅವರ ಪ್ರತಿಸ್ಪರ್ಧಿ, ಅವರ ಎದುರು ಹಿಂದೆ ಸೋತು ಹೋಗಿದ್ದ ಬಸವರಾಜ ಗೌಡ ತುರುವಿಹಾಳ ಅವರು ಗೆದ್ದರು. ಇಲ್ಲೆ ಮಜಾ ಏನು ಅಂದ್ರ ಪಾಟೀಲ ಅವರು ಈಗ ಬಿಜೆಪಿ ಅಭ್ಯರ್ಥಿ, ತುರುವಿಹಾಳ ಅವರು ಕಾಂಗ್ರೆಸ್ ಅಭ್ಯರ್ಥಿ. ಎರಡು ವರ್ಷದ ಹಿಂದೆ ನಡೆದ ಚುನಾವಣೆ ಒಳಗೆ ಪಾಟೀಲ ಅವರು ಕಾಂಗ್ರೆಸ್‌ನಿಂದ ಗೆದ್ದು ಹೋಗಿದ್ದರು, ತುರುವಿಹಾಳ್ ಅವರು ಬಿಜೆಪಿ ಒಳಗ ಇದ್ದರು. ಈಗ ಅವರ ಪಕ್ಷ, ಅವರ ಹಣೆ ಬರಹ, ಎರಡೂ ಬದಲು ಆಗೇದ. ಮಸ್ಕಿ ಕ್ಷೇತ್ರದ ಹಣೆ ಬರಹ ಏನಾದರೂ ಬದಲು ಆಗತದೋ ಇಲ್ಲೋ ನೋಡಬೇಕು.

ಈ ಉಪಕತೆಯ ನೀತಿ ಪಾಠ ಎನಪಾ ಅಂದ್ರ ಇಲ್ಲಿ ಯಾರೂ ಅನಿವಾರ್ಯರಲ್ಲಾ ಅನ್ನೋದು. ಸಾರ್ವಜನಿಕ ಜೀವನದೊಳಗ ಎಲ್ಲರೂ ಒಂದೇ. ಯಾರು ಸೂಪರ್ ಹೀರೋಗಳು ಇಲ್ಲೆ ಇಲ್ಲ.

ಈ ಕುರುಕ್ಷೇತ್ರದ ಮಹಾಜೀ ರಂಗದೊಳು ಯಾರೂ ಅಶ್ವತ್ಥಾವ ರಲ್ಲ. ಆವಿಲ ಗುಳಿಗಿಗೆ ಇರೋ ಹಂಗ ಎಲ್ಲಾ ನಾಯಕರಿಗೆ ಎಕ್ಸ್‌ಪಾಯಿರಿ ಡೇಟು ಅಂತ ಇರ್ತದ. ಎಲ್ಲಾ ಸಿದ್ಧಾಂತಕ್ಕೂ ಕೊನೆ ಅನ್ನೋದು ಇರ್ತದ.

ರಸಿಕರ ಹೃದಯ ಸಾಮ್ರಾಟ್ ಉರ್ದು ಕವಿ ರಾಹತ ಇಂದೋರಿ ಅವರು ತಮ್ಮ ಖಿಲಾಫ ಶಾಯರಿಯೊಳಗ ಹೇಳಿದ ಹಂಗ,

“ಆಜ್ ಜೋ ಸಾಹಿಬೇ ಮಸನದ ಹೈಂ,
ಕಲ್ ನಹಿ ಹೊಂಗೆ
ಕಿರಾಯೇ ದಾರ ಹೈಂ, ಜ್ಯಾತಿ ಮಕಾನ ಥೊಡಿ ಹೈ”
(ಇವತ್ತೇನು ಗಾದಿ ಮ್ಯಾಲೆ ಕುತುಗೊಂಡು
ಮೆರಿಲ್ಯಾಕ ಹತ್ಯಾರಲಾ
ಅವರು ಇಲ್ಲೆ
ಬಾಡಗೀಗೆ ಬಂದಾವರು
ಅವರು ನಾಳೇನು ಇರಂಗಿಲ್ಲಾ
ಈ ಮನಿ ಏನು
ಇವರ ಸ್ವಂತದ್ದೇನು?
ಅಲ್ಲಲಾ?)

ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಸುದ್ದಿಯೇನೇ ಮನೋಲ್ಲಾಸಿನಿ: ಭನವಾರಿ ದೇವಿ ಮತ್ತು ಅತ್ಯಾಚಾರದ ಕಾನೂನುಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...