ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ನ್ಯಾಯ ಕೊಡಿಸುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ, ಹಾಗಾಗಿ ನ್ಯಾಯಾಂಗವಾದರೂ ಮಕ್ಕಳ ನೋವು ಕೇಳಲಿ, ಸಾಂತ್ವಾನ ಹೇಳಿ ನ್ಯಾಯ ನೀಡಬೇಕು ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಕೆ.ವಿ ಸ್ಟ್ಯಾನ್ಲಿ ಒತ್ತಾಯಿಸಿದರು.
ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಯಬೇಕು ಮತ್ತು ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಇಂದು ಚಿತ್ರದುರ್ಗದಲ್ಲಿ ನಡೆದ ‘ಮಕ್ಕಳೊಡನೆ ನಾವು’ ಬೃಹತ್ ಬೈಕ್ ಜಾಥಾ ಉದ್ದೇಶಿಸಿ ಅವರು ಮಾತನಾಡಿದರು.
ಬಾಬಾಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನ, ಸಮಾನತೆಯ ಹಕ್ಕುಗಳನ್ನು ಇಂದು ಕಿತ್ತುಕೊಳ್ಳಲಾಗುತ್ತಿದೆ. ತುಳಿತಕ್ಕೊಳಗಾದ ನಮ್ಮ ಮಕ್ಕಳು ಲೈಂಗಿಕ ದೌರ್ಜನ್ಯಗಳಂತಹ ಕ್ರೌರ್ಯಗಳಿಗೆ ಒಳಗಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂವಿಧಾನ ಮತ್ತು ಕಾನೂನುಗಳನ್ನು ಪಾಲಿಸಬೇಕಾದ ಸರ್ಕಾರಗಳು ಉಳ್ಳವರನ್ನು ರಕ್ಷಿಸುವ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳಿಗೆ ಚ್ಯುತಿ ತರುತ್ತಿದೆ. ಹಾಗಾಗಿ ಚಿತ್ರದುರ್ಗದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ಆದರೆ ಈ ವ್ಯವಸ್ಥೆ ಮಕ್ಕಳ ವಿರುದ್ಧ ನಡೆದುಕೊಳ್ಳುತ್ತಿರುವುದನ್ನು ನೋಡಿ ರೋಸಿಹೋಗಿ ನಾವಿಲ್ಲಿ ಸೇರಿದ್ದೇವೆ. ಇಲ್ಲಿ ನಡೆಯುತ್ತಿರುವುದು ಬಡವರ, ದಲಿತರ, ಕಾರ್ಮಿಕರ ಮತ್ತು ನಿಜವಾದ ಧಾರ್ಮಿಕರ ಮೆರವಣಿಗೆಯಾಗಿದೆ. ಈ ಸರ್ಕಾರಕ್ಕಂತೂ ಮಕ್ಕಳಿಗೆ ನ್ಯಾಯ ಕೊಡುವ ಯೋಗ್ಯತೆ ಇಲ್ಲ. ಹಾಗಾಗಿ ಇಲ್ಲಿನ ಮಕ್ಕಳ ನೋವು ನ್ಯಾಯಾಂಗಕ್ಕೆ ಕೇಳಲಿ, ನ್ಯಾಯಮೂರ್ತಿಗಳು ಇದೇ ರೀತಿ ಅನ್ಯಾಯಕ್ಕೊಳಗಾದ ನೂರಾರು ಮಕ್ಕಳಿಗೆ ಸಾಂತ್ವಾನ ಹೇಳಿ, ತನಿಖೆ ನಡೆಸಿ ನ್ಯಾಯ ಕೊಡಿಸಲಿ ಎಂಬುದಕ್ಕಾಗಿ ಪ್ರತಿಭಟಿಸುತ್ತಿದ್ದೇವೆ ಎಂದರು.
ಈ ವ್ಯವಸ್ಥೆ ಮಕ್ಕಳ ವಿರುದ್ಧ ನಡೆದುಕೊಳ್ಳುತ್ತಿರುವುದನ್ನು ನೋಡಿ ರೋಸಿಹೋಗಿದ್ದೇವೆ- ಒಡನಾಡಿ ಸಂಸ್ಥೆಯ ಕೆ.ವಿ ಸ್ಟ್ಯಾನ್ಲಿ pic.twitter.com/5t4bppQdkG
— Naanu Gauri (@naanugauri) September 10, 2022
ಡಾ.ಶಿವಮೂರ್ತಿ ಶರಣರ ಮೇಲೆ ದೂರು ದಾಖಲಾಗಿ ಹಲವು ದಿವಸಗಳು ಕಳೆದಿವೆ. ಬಂಧನಕ್ಕೆ ವಿಳಂಬ ಮತ್ತು ಸಾಕ್ಷಿ ನಾಶ ಮಾಡಲು ಆರೋಪಿಗೆ ಹಾಗೂ ಅವರ ಬೆಂಬಲಿಗರಿಗೆ ಅವಕಾಶ ನೀಡಲಾಗಿದೆ. ಆರೋಪಿಗಳ ಬಂಧನವಾದ ಮೇಲೂ ಸಹ ಆಸ್ಪತ್ರೆ ಹಾಗೂ ಜೈಲು ಸಿಬ್ಬಂದಿಗಳು ಆರೋಪಿಯನ್ನು ಬಚಾವ್ ಮಾಡಲು ನಡೆದುಕೊಂಡ ರೀತಿ ಹಲವು ಅನುಮಾನಗಳಿಗೆ ಅನುವು ಮಾಡಿಕೊಟ್ಟಿದೆ. ಹಾಗಾಗಿ ನ್ಯಾಯಾಂಗ ತನಿಖೆಯೊಂದೆ ನಮಗೆ ಭರವಸೆಯಾಗಿ ಕಾಣುತ್ತಿದೆ ಎಂದು ಸ್ಟ್ಯಾನ್ಲಿ ಹೇಳಿದ್ದಾರೆ.
ಇನ್ನೊಂದೆಡೆ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಆನೇಕ ಜನರು ಹಿಂದೆ ಘಟಿಸಿದ ಹಲವಾರು ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಅತ್ಯಾಚಾರ, ಗರ್ಭಪಾತ ತೆಗಿಸಿ ಹಾಕಿರುವ ಪ್ರಕರಣಗಳು, ಅಲ್ಲದೆ ಅಪಾರ ಪ್ರಮಾಣದ ಹಣಕಾಸು ಆಸ್ತಿ ನೀಡಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯವನ್ನು ಕಾನೂನಿನ ಕಣ್ಣಿನಿಂದ ತಪ್ಪಿಸಿದ್ದಾರೆ ಎನ್ನುವುದರ ಬಗ್ಗೆ ವಿವರಗಳು ಜನರಿಂದ, ಸಂತ್ರಸ್ತರಿಂದ, ಇತರೆ ಸ್ವಾಮೀಜಿಗಳಿಂದ, ಅಲ್ಲದೆ ಪತ್ರಕರ್ತರಿಂದ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಒಂದು ಪುರಾತನ ಪ್ರತಿಷ್ಠಿತ ಇತಿಹಾಸವುಳ್ಳ ಮುರುಘಾ ಮಠದ ಮೇಲೆ ನಮಗಿರುವ ಗೌರವದ ಹೊರತಾಗಿಯೂ ಸಮಾಜ ಹಾಗೂ ಸರ್ಕಾರಗಳ ಮೇಲೆ ಅದರ ಪ್ರಭಾವವನ್ನು ಹಲ್ಲೆಗಳೆಯುವಂತಿಲ್ಲ. ಆಡಳಿತ ರೂಢ ಸರ್ಕಾರದ ಅನೇಕ ನಾಯಕರು, ಮಂತ್ರಿಗಳು, ಸಚಿವರು, ಆರೋಪಿಯ ಪರ ನಿಂತು ಸಾಂತ್ವನ ಹೇಳಿರುವುದನ್ನು ಹಾಗೂ ಸ್ವಾಮೀಜಿ ತಪ್ಪು ಮಾಡಿಲ್ಲ ಎಂಬ ಹೇಳಿಕೆಯನ್ನು ಮಾಧ್ಯಮಗಳ ಮೂಲಕ ದೇಶವೇ ಗಮನಿಸಿದೆ. ಸಂತ್ರಸ್ಥ ಮಕ್ಕಳ ಪರವಾಗಿ ನಿಲ್ಲಬೇಕಾಗಿದ್ದ ಯಾರೊಬ್ಬ ಸಚಿವರು ಸಂತ್ರಸ್ತರಿಗೆ ಧೈರ್ಯ ಹೇಳದಿರುವುದು ವಿಷಾಧನೀಯ ಸಂಗತಿಯಾಗಿದೆ. ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಆರೋಪಿಗಳ ನಿಂತಿದೆಯೇನೋ ಎಂಬ ಆತಂಕ ಪ್ರತಿಯೊಬ್ಬರಲ್ಲೂ ಕಾಡುತ್ತಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಧ್ಯಪ್ರದೇಶ: ಅತ್ಯಾಚಾರಕ್ಕೆ ಒಳಗಾದ ದಲಿತ ಬಾಲಕಿ ಮೇಲೆ ದೌರ್ಜನ್ಯ; ಮೂವರು ಪೊಲೀಸ್ ಅಧಿಕಾರಿಗಳ ಅಮಾನತು


