Homeಮುಖಪುಟಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆಯೇ?: ಪಾದಯಾತ್ರೆಗಳ ಇತಿಹಾಸ ಏನು ಹೇಳುತ್ತದೆ?

ಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆಯೇ?: ಪಾದಯಾತ್ರೆಗಳ ಇತಿಹಾಸ ಏನು ಹೇಳುತ್ತದೆ?

ಆಂಧ್ರ ಪ್ರದೇಶದಲ್ಲಿ ವೈ.ಎಸ್ ರಾಜಶೇಖರ ರೆಡ್ಡಿ, ಚಂದ್ರಬಾಬು ನಾಯ್ಡು ಮತ್ತು ಜಗನ್ ಮೋಹನ್ ರೆಡ್ಡಿಯವರು ಪಾದಯಾತ್ರೆ ನಡೆಸಿದ ಬಳಿಕ ಸಿಎಂ ಆಗಿದ್ದಾರೆ.

- Advertisement -
- Advertisement -

ಭಾರತದಲ್ಲಿ ಪಾದಯಾತ್ರೆಗಳಿಗೆ ಸುಧೀರ್ಘ ಇತಿಹಾಸವಿದೆ. ಪಾದಯಾತ್ರೆ ಎಂದರೆ ಜನರ ಬಳಿಗೆ ಹೋಗುವುದು ಎಂದರ್ಥ. ಇದರಿಂದ ಜನರ ಸಂಕಷ್ಟಗಳ ನೇರ ದರ್ಶನವಾದರೆ, ಜನರಿಗೂ ನಾಯಕರ ಬಗ್ಗೆ ಅಭಿಮಾನ ಮೂಡುತ್ತದೆ. ಇದಕ್ಕೆ ದೈಹಿಕ ಕ್ಷಮತೆ ಮತ್ತು ಮಾನಸಿದ್ದ ಸಿದ್ದತೆ ಅತ್ಯಗತ್ಯ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧಿಯವರು ಪಾದಯಾತ್ರೆಯನ್ನು ಹೋರಾಟದ ವಿಧಾನವನ್ನಾಗಿ ಪರಿಚಯಿಸಿದ್ದರು. ಅಲ್ಲಿಂದ ಆರಂಭವಾಗಿ ಇಂದಿಯೂ ದೇಶದಲ್ಲಿ ಪಾದಯಾತ್ರೆಗಳು ಮುಂದುವರೆದಿವೆ. ಕೆಲವು ಪಾದಯಾತ್ರೆಗಳು ಜನಜೀವನದ ಮೇಲೆ, ರಾಜಕೀಯದ ಆಗು ಹೋಗುಗಳ ಮೇಲೆ ಗಂಭೀರ ಪರಿಣಾಮ ಬೀರಿದರೆ, ಹಲವು ಪಾದಯಾತ್ರೆಗಳಿಂದ ಪಕ್ಷ, ನಾಯಕರು ಅಧಿಕಾರಕ್ಕೇರಿದ ಉದಾಹರಣೆಗಳಿವೆ. ಸದ್ಯಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಶ್ರೀನಗರದವರೆಗಿನ 3,570 ಕಿ.ಮೀ ಉದ್ದದ ಭಾರತ್ ಜೋಡೋ ಪಾದಯಾತ್ರೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಜರುಗಿರುವ ಪ್ರಮುಖ ಪಾದಯಾತ್ರೆಗಳ ಕುರಿತು ಟಿಪ್ಪಣಿ ಇಲ್ಲಿದೆ.

1930ರ ದಂಡಿ ಉಪ್ಪಿನ ಸತ್ಯಾಗ್ರಹ: 

ಭಾರತವು ಬ್ರಿಟಿಷ್ ಆಳ್ವಿಕೆಯಲ್ಲಿದ್ದಾಗ ಉಪ್ಪಿನ ಮೇಲೆ ತೆರಿಗೆ ವಿಧಿಸಲಾಯ್ತು. ಇದನ್ನು ವಿರೋಧಿಸಿ ಮಹಾತ್ಮ ಗಾಂಧಿಯವರರು 1930 ಮಾರ್ಚ್ 12 ರಂದು ಗುಜರಾತ್‌ ರಾಜ್ಯದ ಅಹಮದಬಾದ್‌ನ ಸಬರಮತಿ ಆಶ್ರಮದಿಂದ ಪಾದಯಾತ್ರೆ ಆರಂಭಿಸಿದರು. ದಾರಿ ಮಧ್ಯೆ ಅವರು ಸ್ಥಾಪಿಸಿದ ಆನಂದ ಆಶ್ರಮವನ್ನು ಮೋತಿಲಾಲ್ ನೆಹರುರವರು ಉದ್ಘಾಟಿಸಿದ್ದರು. 24 ದಿನಗಳ ಕಾಲ ಗಾಂಧಿಯವರು ತಮ್ಮ ಅನುಯಾಯಿಗಳೊಡನೆ 240 ಮೈಲಿ ದೂರ ನಡೆದು ಏಪ್ರಿಲ್ 6 ರಂದು ದಂಡಿಯನ್ನು ತಲುಪಿದರು. ಅಲ್ಲಿ ಉಪ್ಪನ್ನು ತಯಾರಿಸುವ ಮೂಲಕ ಕರ ನಿರಾಕರಣ ಚಳವಳಿಗೆ ಬಲ ತುಂಬಲಾಯ್ತು. ಇದು ಇತಿಹಾಸದಲ್ಲಿ ದಂಡಿ ಉಪ್ಪಿನ ಸತ್ಯಾಗ್ರಹ ಎಂದು ಖ್ಯಾತಿ ಪಡೆದಿದೆ.

ಮಾಜಿ ಪ್ರಧಾನಿ ಚಂದ್ರಶೇಖರ್‌ರವರ 1983ರ ಭಾರತ ಯಾತ್ರೆ

ಜನವರಿ 6, 1983ರಂದು ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಚಂದ್ರಶೇಖರ್‌ರವರು ಆರಂಭಿಸಿದ “ಭಾರತ ಯಾತ್ರೆ” ಪಾದಯಾತ್ರೆಯು ಸಾಕಷ್ಟು ಸದ್ದು ಮಾಡಿತು. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಜನತಾ ಪಕ್ಷ ಜಯಭೇರಿ ಬಾರಿಸಿ ಅಧಿಕಾರಿ ಹಿಡಿದಿತ್ತು. ತಮಿಳುನಾಡಿನ ಕನ್ಯಾಕುಮಾರಿಯಿಂದ ದೆಹಲಿಯ ಮಹಾತ್ಮ ಗಾಂಧಿ ಸಮಾಧಿ ಇರುವ ರಾಜ್‌ಘಾಟ್‌ವರೆಗಿನ 4,260 ಕಿ.ಮೀ ದೂರದ ಈ ಪಾದಯಾತ್ರೆಯು 6 ತಿಂಗಳ ಕಾಲ ನಡೆಯಿತು. ಜನಜೀವನವನ್ನು ಹತ್ತಿರದಿಂದ ನೋಡುವುದಕ್ಕಾಗಿ ಈ ಯಾತ್ರೆ ನಡೆಸುತ್ತಿದ್ದೇನೆ ಎಂದು ಚಂದ್ರಶೇಖರ್‌ರವರು ಘೋಷಿಸಿದ್ದರು. ಈ ಪಾದಯಾತ್ರೆಯ ವರ್ಚಸ್ಸಿನ ನಂತರ 1990ರಲ್ಲಿ ಅವರು ಭಾರತದ ಎಂಟನೇ ಪ್ರಧಾನಮಂತ್ರಿ ಆಗಿದ್ದರು.

 

ವೈ.ಎಸ್ ರಾಜಶೇಖರ ರೆಡ್ಡಿ ಪಾದಯಾತ್ರೆ- 2003

ಏಪ್ರಿಲ್ 09, 2003ರಲ್ಲಿ ಆಂಧ್ರಪ್ರದೇಶದ ಕಾಂಗ್ರೆಸ್ ನಾಯಕರಾಗಿದ್ದ ವೈ.ಎಸ್ ರಾಜಶೇಖರ ರೆಡ್ಡಿಯವರು ರಾಜ್ಯದ ಬರ ಪರಿಸ್ಥಿತಿಯನ್ನು ಅರಿಯಲು ಪಾದಯಾತ್ರೆ ಕೈಗೊಂಡಿದ್ದರು. ಸುಮಾರು ಎರಡು ತಿಂಗಳುಗಳ ಕಾಲ ಅವರು ರಾಜ್ಯದ ಹಲವು ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಸಿ 1,475 ಕಿ.ಮೀಗಳನ್ನು ಕ್ರಮಿಸಿದ್ದರು. ನಂತರ 2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತ ಗಳಿಸಿ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

ಚಂದ್ರಬಾಬು ನಾಯ್ಡು-2013

ವೈ.ಎಸ್ ರಾಜಶೇಖರ ರೆಡ್ಡಿಯವರ ಮಾದರಿಯಲ್ಲಿಯೇ ತೆಲುಗು ದೇಶಂ ಪಕ್ಷದ ಮುಖಂಡರಾದ ಚಂದ್ರಬಾಬು ನಾಯ್ಡುರವರು 2013ರಲ್ಲಿ ಆಂಧ್ರ ಪ್ರದೇಶದಲ್ಲಿ ಪಾದಯಾತ್ರೆ ಆರಂಭಿಸಿದ್ದರು. ಸುಮಾರು 1,700 ಕಿ.ಮೀ ದೂರ ನಡೆದಿದ್ದ ಅವರು ಮರುವರ್ಷ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಜಯಗಳಿಸಿ ಮುಖ್ಯಮಂತ್ರಿಯಾಗಿದ್ದರು.

ದಿಗ್ವಿಜಯ ಸಿಂಗ್ – 2017

ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರು ಸೆಪ್ಟೆಂಬರ್ 2017 ರಲ್ಲಿ ನರ್ಮದಾ ಯಾತ್ರೆಯನ್ನು ಪ್ರಾರಂಭಿಸಿದರು. ನರ್ಮದಾ ನದಿಯ ದಡದಲ್ಲಿ ಅವರು ಸುಮಾರು 3,300 ಕಿ.ಮೀ ದೂರ ಹೆಜ್ಜೆ ಹಾಕಿದರು. ನಂತರ ಡಿಸೆಂಬರ್ 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 230 ಕ್ಷೇತ್ರಗಳಲ್ಲಿ 114 ಸ್ಥಾನಗಳನ್ನು ಗೆದ್ದುಕೊಂಡಿತು. ನಂತರ, ಕಾಂಗ್ರೆಸ್ ಬಿಎಸ್ಪಿ ಮತ್ತು ಎಸ್ಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ರಚಿಸಿತು. ಆದರೆ ದಿಗ್ವಿಜಯ್ ಸಿಂಗ್ ಬದಲಿಗೆ ಕಾಂಗ್ರೆಸ್‌ ಪಕ್ಷವು ಕಮಲ್‌ ನಾಥ್‌ರವರನ್ನು ಸಿಎಂ ಆಗಿ ಮಾಡಿತು. ಆನಂತರ ಆಪರೇಷನ್ ಕಮಲ ನಡೆದು ಅಲ್ಲಿ ಬಿಜೆಪಿ ಅಧಿಕಾರ ಪಡೆದಿದೆ.

ಜಗನ್ ಮೋಹನ್‌ರೆಡ್ಡಿಯ ‘ಪ್ರಜಾಸಂಕಲ್ಪ ಯಾತ್ರೆ’ -2017

ವೈಎಸ್ ರಾಜಶೇಖರ ರೆಡ್ಡಿಯವರ ಪುತ್ರರಾದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಅಧ್ಯಕ್ಷ ವೈ.ಎಸ್ ಜಗನ್ ಮೋಹನ್ ರೆಡ್ಡಿಯವರು ಸಹ ಯಶಸ್ವಿ ಪಾದಯಾತ್ರೆ ನಡೆಸಿದ್ದಾರೆ. ಅವರು ನವೆಂಬರ್ 6, 2017 ರಂದು ಅವರ ಹುಟ್ಟೂರಾದ ಕಡಪಾ ಜಿಲ್ಲೆಯ ಆರ್‌ಕೆ ವ್ಯಾಲಿಯಲ್ಲಿ ತಮ್ಮ ತಂದೆಯ ಸಮಾಧಿಗೆ ನಮನ ಸಲ್ಲಿಸಿ ಪಾದಯಾತ್ರೆ ಆರಂಭಿಸಿದರು. 341 ದಿನಗಳ ಕಾಲ ನಡೆದ ಪಾದಯಾತ್ರೆಯು 13 ಜಿಲ್ಲೆಗಳಲ್ಲಿ ಸಂಚರಿಸಿ 3,648 ಕಿಮೀ ಅನ್ನು ಕ್ರಮಿಸಿತು ಮತ್ತು 125 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು. 2019ರಲ್ಲಿ ಒಡಿಶಾ ಗಡಿಯ ಸಮೀಪವಿರುವ ಶ್ರೀಕಾಕುಳಂ ಜಿಲ್ಲೆಯ ಇಚ್ಚಾಪುರಂನಲ್ಲಿ ಮುಕ್ತಾಯಗೊಂಡಿತು. ಬಹು ವರ್ಣರಂಜಿತವಾಗಿ ನಡೆದ ಈ ಪಾದಯಾತ್ರೆಗೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಬೆಂಬಲ ನೀಡಿದ್ದರು.

ಈ ಯಾತ್ರೆಗಾಗಿ ರಚಿಸಿದ್ದ ರಾವಲಿ ಜಗನ್, ಕಾವಾಲಿ ಜಗನ್ ಎಂಬ ಹಾಡು ಸಾಕಷ್ಟು ಜನಪ್ರಿಯ ಗಳಿಸಿತ್ತು. 3 ಕೋಟಿ ಜನರು ಅದನ್ನು ನೋಡಿದ್ದರು. ಈ ಪಾದಯಾತ್ರೆಯಿಂದ ಜನಬೆಂಬಲ ಗಳಿಸಿದ ಜಗನ್ ಮೋಹನ್ ರೆಡ್ಡಿ 2019ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಮುಖ್ಯಮಂತ್ರಿಯಾದರು.

ಕರ್ನಾಟಕದ ಪಾದಯಾತ್ರೆಗಳ ಇತಿಹಾಸ

ನರಗುಂದ-ಬೆಂಗಳೂರು ರೈತರ ಪಾದಯಾತ್ರೆ

ಮುಂಬೈ ಕರ್ನಾಟಕ ಪ್ರಾಂತ್ಯದ ರೈತರು ಮಲಪ್ರಭಾ ನೀರಾವರಿ ಯೋಜನೆಗಾಗಿ ಹೋರಾಟ ಆರಂಭಿಸಿದ್ದರು. 1980ರ ಜುಲೈ 21 ರಂದು ತಹಶೀಲ್ದಾರ್ ಕಚೇರಿ ಮುತ್ತಿಗೆ ಹೋರಾಟ ನಡೆಸಿದರು. ಆಗ ಪೊಲೀಸರು ನಡೆಸಿದ ಗೋಲಿಬಾರ್‌ನಿಂದಾಗಿ ಮೂವರು ರೈತರು ಹುತಾತ್ಮರಾದರು. ಆನಂತರ ದೇವರಾಜ ಅರಸುರವರ ನೇತೃತ್ವದಲ್ಲಿ ರಚನೆಗೊಂಡ ಪ್ರಗತಿಪರ ಕ್ರಾಂತಿರಂಗವು  1980 ಡಿಸೆಂಬರ್ 12 ರಿಂದ ನರಗುಂದದಿಂದ ಬೆಂಗಳೂರಿನವರೆಗೆ ರೈತರ ಪಾದಯಾತ್ರೆ ನಡೆಸಿತು. ಸುಮಾರು 500 ಕಿ.ಮಿ ನಷ್ಟು ಹೆಜ್ಜೆ ಹಾಕಿದ್ದರು. ಆ ನಂತರ ರೈತ ಸಂಘದ ನೇತೃತ್ವದಲ್ಲಿ ರೈತರು ಎಲ್ಲಾ ಭಾಗಗಳಿಂದ ಪಾದಯಾತ್ರೆ ನಡೆಸಿ ಬೆಂಗಳೂರಿನಲ್ಲಿ ಸೇರಿದ್ದರು.

ದೇವೇಗೌಡರ ಪಾದಯಾತ್ರೆ

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಹಾಸನ ಜಿಲ್ಲೆಯ ದೊಡ್ಡಳ್ಳಿಯ ಗೋಲಿಬಾರ್‌ನಲ್ಲಿ ಮೃತಪಟ್ಟ ರೈತರಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಪಾದಯಾತ್ರೆ ನಡೆಸಿದ್ದರು. ಅಲ್ಲದೆ ಹಲವು ವಿಚಾರಗಳಿಗೆ ದೇವೇಗೌಡರು ಪಾದಯಾತ್ರೆಗಳನ್ನು ನಡೆಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಿದ್ದರಾಮಯ್ಯ ನೇತೃತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ

2008ರಲ್ಲಿ ಬಳ್ಳಾರಿ ಗಣಿ ಮಾಲೀಕರ ಹಣದಿಂದ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆಪರೇಷನ್ ಕಮಲಕ್ಕೆ ಗಣಿ ಲೂಟಿಯ ದುಡ್ಡನ್ನು ಬಳಸಿಕೊಳ್ಳಲಾಗಿತ್ತು ಎಂಬ ಆರೋಪಗಳಿದ್ದವು. ಯಡಿಯೂರಪ್ಪ ಸಿಎಂ ಆಗಿದ್ದಾಗ ಜನಾರ್ಧನ ರೆಡ್ಡಿಯವರು ಅಬ್ಬರಿಸುತ್ತಿದ್ದರು. ಹೀಗೆ 2010ರ ಒಂದು ದಿನ ವಿಧಾನಸಭೆಯ ಅಧಿವೇಶನದ ವೇಳೆ ‘ತಾಕತ್ತಿದ್ದರೆ ಬಳ್ಳಾರಿಗೆ ಬನ್ನಿ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದಾರು. ಆಗ ಅಲ್ಲಿಯೇ ಭುಜತಟ್ಟಿ ಸವಾಲು ಸ್ವೀಕರಿಸಿದ ಸಿದ್ದರಾಮಯ್ಯನವರು ‘ನಾವು ನಡೆದುಕೊಂಡೆ ಬಳ್ಳಾರಿಗೆ ಬರುತ್ತೇವೆ. ತಾಕತ್ತಿದ್ದರೆ ತಡೆಯಿರಿ’ ಎಂದು ಮರುಸವಾಲು ಹಾಕಿದರು.

ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜನಾರ್ಧನ ರೆಡ್ಡಿ ಸಹೋದರರ ಭ್ರಷ್ಟಾಚಾರದ ವಿರುದ್ಧ 2010ರ ಜುಲೈ 25 ರಂದು ಬೆಂಗಳೂರಿನಿಂದ ಪಾದಯಾತ್ರೆ ಆರಂಭವಾಯಿತು. 300 ಕಿ.ಮೀ ಸಾಗಿದ ಪಾದಯಾತ್ರೆಗೆ ಅಪಾರ ಜನಬೆಂಬಲ ವ್ಯಕ್ತವಾಯಿತು ಮತ್ತು ಬಳ್ಳಾರಿ ಪ್ರವೇಶಿಸಿ ಬೃಹತ್ ಸಮಾವೇಶ ನಡೆಸಲಾಯಿತು. 2 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದವು. ಆ ಪಾದಯಾತ್ರೆಯ ಕಾಂಗ್ರೆಸ್‌ ಪಕ್ಷಕ್ಕೆ ಜನಬೆಂಬಲ ತಂದುಕೊಟ್ಟಿತು. ನಂತರ 2014ರಲ್ಲಿ ನಡೆದ ಚುಣಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿತು ಮತ್ತು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರು.

ಮದ್ಯ ನಿಷೇಧ ಪಾದಯಾತ್ರೆ – 2019

ರಾಜ್ಯದಲ್ಲಿನ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಬೇಕು ಮತ್ತು ಮಹಿಳೆಯರ ಬದುಕು ಕಾಪಾಡಬೇಕು ಎಂಬ ಹಕ್ಕೊತ್ತಾಯವನ್ನಿಟ್ಟುಕೊಂಡು ಮದ್ಯ ನಿಷೇಧ ಆಂದೋಲನ ಸಂಘಟನೆಯ ನೇತೃತ್ವದಲ್ಲಿ 3000ಕ್ಕೂ ಹೆಚ್ಚು ಮಹಿಳೆಯರು ಪಾದಯಾತ್ರೆ ನಡೆಸಿದ್ದಾರೆ. 2019ರ ಜನವರಿ 19 ರಂದು ಚಿತ್ರದುರ್ಗದಲ್ಲಿ ಆರಂಭವಾದ ಪಾದಯಾತ್ರೆಯೂ ಜನವರಿ 30ರಂದು ಬೆಂಗಳೂರು ಪ್ರವೇಶಿಸಿತು. ಹೋರಾಟಗಾರ್ತಿ ಸ್ವರ್ಣ ಭಟ್‌ರವರು ನೇತೃತ್ವ ವಹಿಸಿದ್ದರು.

ಮೇಕೆದಾಟು ಪಾದಯಾತ್ರೆ

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮೇಕೆದಾಟು ಬಳಿ ಕುಡಿಯುವ ನೀರಿಗಾಗಿ ಡ್ಯಾಂ ಕಟ್ಟುವ ಮೇಕೆದಾಟು ಯೋಜನೆ ಜಾರಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು. ರಾಜ್ಯ ಬಿಜೆಪಿ ಸರ್ಕಾರದ ಅನುಮತಿ ನಿರಾಕರಣೆಯ ಹೊರತಾಗಿಯೂ 2022ರ ಜನವರಿ 09ರಂದು ಮೇಕೆದಾಟುವಿನಿಂದ ಆರಂಭವಾದ ಪಾದಯಾತ್ರೆಯು 5ನೇ ದಿನ ರಾಮನಗರ ತಲುಪಿತು. ಕೊರೊನಾ ಪ್ರಕರಣಗಳು ಹೆಚ್ಚಾಗುವ ಭೀತಿಯಿಂದ ಹೈಕೋರ್ಟ್ ಸೂಚನೆಯ ಹಿನ್ನೆಲೆಯಲ್ಲಿ 5ನೇ ದಿನದಂದು ಪಾದಯಾತ್ರೆಯನ್ನು ಸ್ಥಗಿತಗೊಳಿಸಿ ಮುಂದೂಡಲಾಯ್ತು. ಆ ನಂತರ ಫೆಬ್ರವರಿ 27ಕ್ಕೆ ಮತ್ತೆ ಪಾದಯಾತ್ರೆ ಆರಂಭಿಸಿ ಬೆಂಗಳೂರು ತಲುಪಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಿತು.

ಭಾರತ್ ಜೋಡೋ ಪಾದಯಾತ್ರೆ- 2022

ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ದೇಶದ ಬಹುದೊಡ್ಡ ಪಾದಾಯಾತ್ರೆಗೆ ಸಜ್ಜಾಗಿದ್ದಾರೆ. ಐಕ್ಯ ಭಾರತದ ಉದ್ದೇಶದೊಂದಿಗೆ ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರದವರೆಗೆ ಬರೋಬ್ಬರಿ 3,570 ಕಿ.ಮೀ ಹೆಜ್ಜೆಹಾಕುವ ಭಾರತ್ ಜೋಡೋ ಯಾತ್ರೆಯನ್ನು (ಭಾರತ ಐಕ್ಯತಾ ಯಾತ್ರೆ) ಸೆಪ್ಟಂಬರ್ 07ರಿಂದ ಆರಂಭಿಸಲಿದ್ದಾರೆ. ಈ ಯಾತ್ರೆಗೆ ಉತ್ತಮ ಸ್ಪಂದನೆ ದೊರೆತಿದ್ದು ಕಾಂಗ್ರೆಸ್ ಮಾತ್ರವಲ್ಲದೆ ಇತರ ಪಕ್ಷಗಳ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರ ಸಹ ಬೆಂಬಲ ಘೋಷಿಸಿದ್ದಾರೆ.

ಇದನ್ನೂ ಓದಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿಗೆ ಹೋರಾಟಗಾರರ ಸಾಥ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...