’ಹಲವರು ಹುಟ್ಟುತ್ತಲೇ ಮುದುಕರು ಆದರೆ ಕೆಲವರು ಸಾಯುವವರೆಗೂ ಚಿರಯುವಕರು ಎಂಬ ನಾಣ್ಣುಡಿಯಂತೆ’ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ, ನಾಡಿನ ಸಾಕ್ಷಿಪ್ರಜ್ಞೆ ಎಚ್.ಎಸ್ ದೊರೆಸ್ವಾಮಿಯವರು ಇಂದಿಗೂ ಜನಪರರ ಪಾಲಿಗೆ ರಾಕ್‌ಸ್ಟಾರ್ ಆಗಿಯೇ ಲವಲವಿಕೆಯಿಂದ ದೃಢವಾಗಿದ್ದಾರೆ.
ಬಡಜನರ ಪರ ಸದಾ ಹೋರಾಟನಿರತ ಸ್ವಾತಂತ್ರ್ಯ ಸೇನಾನಿಯವರು ಇಂದಿಗೆ 103 ವರ್ಷಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ಸಾಂಕ್ರಾಮಿಕದ ಲಾಕ್‌ಡೌನ್ ಕಾರಣದಿಂದ ಹೆಚ್ಚು ಜನ ಸೇರದೇ ಮೂರ್ನಾಲ್ಕು ಮಂದಿ ಮಾತ್ರ ಅವರಿಗೆ ಇಂದು ಶುಭ ಹಾರೈಸಿ, ಅವರ ಹೋರಾಟದೊಂದಿಗೆ ತಾವಿದ್ದೇವೆ ಎಂಬ ಮಾತುಕೊಡುವ ಮೂಲಕ ಅರ್ಥಪೂರ್ಣ ಆಚರಣೆ ಇಂದು ಅವರ ಜೆ.ಪಿ ನಗರದ ನಿವಾಸದಲ್ಲಿ ಜರುಗಿತು.
ಬಿಳಿಬಣ್ಣದ ಪಂಚೆ, ಅಂಗಿ, ಟವೆಲ್ ಹಾಕಿ ಬೆಳಿಗ್ಗಿನಿಂದಲೇ ಬರುತ್ತಿರುವ ಎಲ್ಲಾ ಕರೆಗಳಿಗೂ ದೊರೆಸ್ವಾಮಿಯವರು ಲವಲವಿಕೆಯಿಂದಲೇ ಉತ್ತರಿಸುತ್ತಿದ್ದರು. ಕನ್ನಡ, ತಮಿಳು ಮತ್ತು ತೆಲಗು ಮೂರು ಭಾಷೆಯಿಂದಲೂ ಹೋರಾಟಗಾರರು, ಅಭಿಮಾನಿಗಳು, ಸಂಬಂಧಿಕರು ಕರೆ ಮಾಡಿ ಶುಭಹಾರೈಕೆಗಳಿಗೆ ತಿಳಿಸುತ್ತಿದ್ದರು. ಅಷ್ಟರಲ್ಲಿ ವಿಡಿಯೋ ಮಾಡುವ ಮುಂಚೆನೇ ಸಿಹಿ ತಿಂದುಬಿಡುತ್ತೇನಪ್ಪ ಎಂದು ಅವರು ಕೇಸರಿಬಾತ್ ಸವಿದರು.
ನಂತರ ತಮ್ಮ ಜನ್ಮದಿನದ ಸಂದರ್ಭದಲ್ಲಿ ಫೇಸ್‌ಬುಕ್ ಲೈವ್ ಮೂಲಕ ನಾಡಿಗೆ ಒಂದು ಸಂದೇಶ ನೀಡಬೇಕೆಂದು ಕೇಳಿದಾಗ ದೊರೆಸ್ವಾಮಿಯವರು ಹೇಳಿದ್ದಿಷ್ಟು. “ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷದ ಮೇಲಾಗಿದೆ. ಆದರೆ ಅಸಮಾನತೆ ಅಷ್ಟೇ ಪ್ರಮಾಣದಲ್ಲಿ ಹೆಚ್ಚುತ್ತಿದೆ. ನಮ್ಮ ದೇಶದಲ್ಲಿ ಒಟ್ಟು ಆದಾಯದ ಮೂರನೇ ಎರಡು ಭಾಗ ಮಾತ್ರ ಎಲ್ಲಾ ಸಾಮಾನ್ಯ ಜನರಿಗ ತಲುಪುತ್ತಿದೆ. ಆದರೆ ಕೇವಲ 10% ಜನರು ಮೂರನೇ ಒಂದು ಭಾಗ ಆದಾಯವನ್ನು ಪಡೆಯುತ್ತಿದ್ದಾರೆ. ಇದು ಆತಂಕಕಾರಿ ವಿಚಾರ. ಅಸಮಾನತೆಯನ್ನು ಪ್ರಭುತ್ವಗಳೇ ಬೆಳೆಸುತ್ತಿವೆ. ಈ ಅಸಮಾನತೆ ತೊಲಗಿ ಸಾಮಾನ್ಯ ಜನರು ಸಹ ಬದುಕಿ ಬಾಳುವ ಹಕ್ಕಿದೆ ಎಂಬ ಸಮಾಜ ಬರಬೇಕಿದೆ. ಎಲ್ಲರಿಗೂ ಊಟ, ಉದ್ಯೋಗ, ಸ್ವಾವಲಂಬನೆಯಿಂದ ಬದುಕುವ ಅವಕಾಶ ಸಿಗಬೇಕಿದೆ” ಎಂದರು.
ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ, ನಾಡಿನ ಸಾಕ್ಷಿಪ್ರಜ್ಞೆ ದೊರೆಸ್ವಾಮಿಯವರ 103ನೇ ಜನ್ಮದಿನದ ಸಂದರ್ಭ…
Posted by Naanu Gauri on Thursday, April 9, 2020
ಜವಾಬ್ದಾರಿಯುತ ಪ್ರಜೆಯಾಗಿ ಜನರನ್ನು ಬೆಳೆಸುವಂತ ಕೆಲಸ ಸರ್ಕಾರದ್ದಾಗಿದೆ. ಬಡತನ ನಿರ್ಮೂಲನೆಯಾಗಬೇಕಿದೆ. ಇಂದಿಗೂ ದೇಶದಲ್ಲಿ 100ಕ್ಕೆ 30 ಜನ ಹಸಿವಿನಿಂದ ಮಲಗುವ ಪರಿಸ್ಥಿತಿ ಇದೆ. 13 ಪಂಚವಾರ್ಷಿಕ ಯೋಜನೆಗಳು ಮುಗಿದಿವೆ. ಇದರ ಫಲಿತಾಂಶ ಎಂದರೆ ಬಡವ ಮತ್ತಷ್ಟು ಬಡವನಾದ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಬಡವ ಮತ್ತು ಬಲ್ಲಿದನ ನಡುವೆ ಅಂತರವನ್ನು ಹೆಚ್ಚು ಮಾಡುವ ವ್ಯವಸ್ಥೆಯೂ ಇಂದಿಗೂ ಬಲಾಢ್ಯವಾಗಿದೆ.
ಬಡವರ ಬಗ್ಗೆ ಮೊದಲು ಚಿಂತನೆಯಾಗಬೇಕೆಂದು ಗಾಂಧೀಜಿಯವರು ಹೇಳುತ್ತಿದ್ದರು. ಸ್ವರಾಜ್ಯದಲ್ಲಿ ಮೊದಲು ಬಡತನ ನಿರ್ಮೂಲನೆಯಾಗಬೇಕೆಂದು ಹೇಳಿದ್ದರು. ಆದರೆ ಸ್ವಾತಂತ್ರ್ಯ ನಂತರ ಆಳಿದವರು ಬಡತನ ನಿರ್ಮೂಲನೆ ಮಾಡುವ ಬದಲು ಬಡತನವನ್ನು ಬೆಳೆಸುವ ಕೆಲಸ ಮಾಡಿದ್ದಾರೆ. 2 ಪಂಚವಾರ್ಷಿಕ ಯೋಜನೆಗಳನ್ನು ಬಡತನ ನಿರ್ಮೂಲನೆಗಾಗಿ ಮೀಸಲಿಟ್ಟಿದ್ದರೆ ಪರಿಸ್ಥಿತಿ ಬದಲಾಗುತ್ತಿತ್ತು.
ನಮ್ಮ ಜನ ಈಗಲಾದರೂ ಸಾಮಾನ್ಯ ಜನರ ಏಳಿಗೆಗಾಗಿ, ಅವರಿಗೆ ಸಮಾನತೆಯನ್ನು ತರುವುದಕ್ಕಾಗಿ, ಅವರು ಬದುಕಿ ಬಾಳುವುದಕ್ಕಾಗಿ ಪ್ರಯತ್ನಿಸಬೇಕು ಎಂದು ಬಯಸುತ್ತೇನೆ ಎಂದರು.
ಸಮಾಜವಾದಿ ಚಿಂತಕರಾದ ಸಿ.ಜಿ.ಕೆ.ರೆಡ್ಡಿ, ರವಿಚಂದ್ರ ಸರ್, ಸಂವಿಧಾನ ಉಳಿವಿಗಾಗಿ ಕರ್ನಾಟಕದ ಗೌರಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕುಮಾರ್ ಸಮತಳ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಮರಿಸ್ವಾಮಿ, ನಾಗರಾಜ್, ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ರಾಮಚಂದ್ರ, ಎಸ್.ರಾಘವೇಂದ್ರ ಗೌಡ್ರು ಮತ್ತು ಗೆಳೆಯರು ಬೇರೆ ಬೇರೆ ಸಮಯದಲ್ಲಿ ಬಂದು ಶುಭ ಹಾರೈಸಿದರು.
ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ, ನಾಡಿನ ಸಾಕ್ಷಿಪ್ರಜ್ಞೆ ದೊರೆಸ್ವಾಮಿಯವರ 103ನೇ ಜನ್ಮದಿನದ ಸಂದರ್ಭ…
Posted by Naanu Gauri on Thursday, April 9, 2020
ಫೇಸ್‌ಬುಕ್, ವಾಟ್ಸಾಪ್ ಮೂಲಕ ಬಂದ ಸಂದೇಶಗಳನ್ನು, ಅಭಿಮಾನದ ಮಾತುಗಳನ್ನು ದಿನವಿಡೀ ಕುಮಾರ್ ಸಮತಳರವರು ದೊರೆಸ್ವಾಮಿಯವರಿಗೆ ಓದಿ ಹೇಳಿದರು. ಬಹುಸಂತೋಷದಿಂದಲೇ ದೊರೆಸ್ವಾಮಿಯವರು ಅದನ್ನೆಲ್ಲ ಆಲಿಸಿದರು.



ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿಯವರ ಕನಸು ನನಸಾಗಬೇಕು.