ದಾವಣಗೆರೆಯಿಂದ ನಿಜಗುಣಾನಂದ ಸ್ವಾಮಿಗಳು ಬಂದಿದ್ದ ಕೊಲೆ ಬೆದರಿಕೆ ಪತ್ರದಲ್ಲಿ ನಟ ಪ್ರಕಾಶ್ ರಾಜ್ ಹೆಸರು ಸಹ ಇರುವುದರ ಕುರಿತು ಪ್ರತಿಕ್ರಿಯಿಸಿರುವ ಅವರು ’ಚಲೋ ಹಮ್ ದೇಖೇಂಗೆ’… ಎಂದು ಟ್ವೀಟ್ ಮಾಡಿದ್ದಾರೆ.
A coward groups letter threatening that they will eliminate NIJAGUNANANDA SWAMY.. my name in the list too .. chalo #HumDekhenge ..#IndiaAgainstCAA_NRC #JustAsking pic.twitter.com/WOKbANls0q
— Prakash Raj (@prakashraaj) January 25, 2020
ನಿಜಗುಣಾನಂದ ಸ್ವಾಮಿ ಅವರನ್ನು ತೊಡೆದುಹಾಕುತ್ತೇವೆ ಎಂದು ಹೇಡಿಗಳ ಗುಂಪು ಬೆದರಿಕೆ ಹಾಕಿದೆ. ಪತ್ರದ ಪಟ್ಟಿಯಲ್ಲಿ ನನ್ನ ಹೆಸರೂ ಸಹ ಇದೆ. ಚಲೋ ಹಮ್ ದೇಖೇಂಗೆ.., ಇಂಡಿಯಾ ಎಗೆನೆಸ್ಟ್ ಸಿಎಎ, ಎನ್‌ಆರ್‌ಸಿ, ಜಸ್ಟ್ ಆಸ್ಕಿಂಗ್ ಎಂದು ಟ್ವೀಟ್ ಮಾಡಿದ್ದಾರೆ. ಅಂದರೆ ನಡೀರಿ ನೋಡೋ ಬೀಡೋಣ ಅದೇನೆಂತ.. ಎಂಬರ್ಥ ಬರುತ್ತದೆ.
ಏನಿದು ಹಮ್ ದೇಖೇಂಗೆ?
ಹಮ್ ದೇಖೇಂಗೇ ಕವಿತೆಯನ್ನು ಫೈಜ್ ಅಹಮದ್ ಫೈಜ್ ಬರೆದಿದ್ದು 1979ರಲ್ಲಿ. ಪಾಕಿಸ್ತಾನದ ಪ್ರಧಾನಿ ಜುಲ್ಫಿಕರ್ ಬುಟ್ಟೋ ಅವರನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದ ಮಿಲಿಟರಿ ಜನರಲ್ ಜಿಯಾ ಉಲ್ ಹಕ್ ಕಟ್ಟರ್ ಪಂಥೀಯನಾಗಿದ್ದು ಇಡೀ ಪಾಕಿಸ್ತಾನವನ್ನು ಮತಾಂಧತೆಯೆಡೆಗೆ ದೂಡುತ್ತಿದ್ದ ಸನ್ನಿವೇಶದಲ್ಲಿ ಅವನ ದುರಾಡಳಿತದ ಅಂತ್ಯವನ್ನು ಬಯಸಿ ಫೈಜ್ ಬರೆದಿದ್ದ ಕವಿತೆಯೇ ‘ಹಮ್ ದೇಖೇಂಗೆ’.
1984ರಲ್ಲಿ ಫೈಜ್ ನಿಧನದ ಮರುವರ್ಷ ಅಂದರೆ 1985ರಲ್ಲಿ ಪಾಕಿಸ್ತಾನದ ಮಹಿಳೆಯರು ಸೀರೆ ಉಡುವಂತಿಲ್ಲ ಎಂಬ ಉಘಲಕ್ ಶಾಸನವನ್ನು ಜಿಯಾ ಉಲ್ ಹಕ್ ಘೋಷಿಸಿದ್ದ. ಈ ಶಾಸನವನ್ನು ಖಂಡಿಸಿ ಪಾಕಿಸ್ತಾನದ ಪ್ರಸಿದ್ಧ ಗಾಯಕಿ ಇಕ್ಬಾಲ್ ಬಾನೋ ಲಾಹೋರಿನ ಗಡಾಫಿ ಕ್ರೀಡಾಂಗಣದಲ್ಲಿ ಕಪ್ಪು ಸೀರೆಯುಟ್ಟುಕೊಂಡು ಬಂದು ಫೈಜ್ ಅವರ “ಹಮ್ ದೇಖೇಂಗೇ” ಕವಿತೆಯನ್ನು ಸುಶ್ರಾವ್ಯವಾಗಿ ಹಾಡಿದ್ದರು. ಫೈಜ್ ಬರೆದ ಈ ಹಾಡಿನ ಗಾಯನವನ್ನು ಕೇಳಲೆಂದೇ ಅಂದು ಸುಮಾರು 50,000 ಜನರು ನೆರೆದಿದ್ದರು ಎಂದು ಹೇಳಲಾಗುತ್ತದೆ.
ಫೈಜ್ ಅಹಮದ್ ಫೈಜ್‌ರವರ ಹಮ್ ದೇಖೆಂಗೆ ಹಾಡನ್ನು ಕನ್ನಡದಲ್ಲಿ ಪಲ್ಲವಿ ಮತ್ತು ಬಿಂದು ಕನ್ನಡದಲ್ಲಿ ಹಾಡಿದಾಗ..
ಫೈಜ್ ಅಹಮದ್ ಫೈಜ್ ರವರ ಹಮ್ ದೇಖೆಂಗೆ ಹಾಡನ್ನು ಕನ್ನಡದಲ್ಲಿ ಅದ್ಭುತವಾಗಿ ಹಾಡಿದ ಪಲ್ಲವಿ ಮತ್ತು ಬಿಂದುರವರು.. ಕೇಳಿಬಿಡಿ
Posted by Naanu Gauri on Thursday, January 9, 2020
ಹಾಡಿನುದ್ದಕ್ಕೂ ಕರತಾಡನ ಮಾಡುತ್ತಿದ್ದ ಜನರು ಹಾಡಿನ ಕೊನೆಯಲ್ಲಿ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಕೂಗಿದ್ದರು. ಅಂದು ಇಕ್ಬಾಲ್ ಹಾಡಿದ್ದ ಈ ಗಾಯನದ ಧ್ವನಿಮುದ್ರಿಕೆಯನ್ನು ಹೇಗೋ ರಕ್ಷಿಸಿಕೊಂಡು ಬರಲಾಗಿದ್ದು ಇಂದಿಗೂ ಯೂಟ್ಯೂಬಿನಲ್ಲಿ ಕೇಳಲು ಲಭ್ಯವಿದೆ. ತದನಂತರದಲ್ಲಿ ಈ ಹಮ್ ದೇಖೇಂಗೇ ಕವಿತೆ ಒಂದು ಕ್ರಾಂತಿಗೀತೆಯಂತೆ ದಬ್ಬಾಳಿಕೆ ನಡೆಸುವ ಸರ್ಕಾರಗಳ ವಿರುದ್ಧದ ಹೋರಾಟಗಳಲ್ಲಿ ರಾಷ್ಟ್ರಗೀತೆಯಂತೆ ಹಾಡಲಾಗುತ್ತಿದೆ.
ಬೆದರಿಕೆ ಪತ್ರದ ಕುರಿತು
ನಿಜಗುಣಾನಂದ ಸ್ವಾಮಿಗಳೆ, ನಿಮ್ಮನ್ನು ಮತ್ತು ನಿಮ್ಮ ಜೊತೆ ಇರುವ ಧರ್ಮದ್ರೋಹಿಗಳನ್ನು, ದೇಶದ್ರೋಹಿಗಳನ್ನು 2020ರ, ಜನವರಿ 29 ಸಂಹಾರ ಮಾಡುತ್ತೇವೆ ಎಂಬ 15ಜನರ ಹೆಸರುಗಳ ಪಟ್ಟಿ ಇರುವ ಬೆದರಿಕೆ ಪತ್ರವೊಂದನ್ನು ನಿಜಗುಣಾನಂದ ಸ್ವಾಮಿಗಳಿಗೆ ಕಳಿಸಲಾಗಿದೆ.
ದಾವಣಗೆರೆಯಿಂದ ಈ ಅನಾಮಧೇಯ ಪೋಸ್ಟ್ ಬಂದಿದ್ದು, ನಿಜಗುಣಾನಂದ ಸ್ವಾಮಿಗಳು ಕೂಡಲೇ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪತ್ರದಲ್ಲಿ ಭಜರಂಗದಳದ ಮಾಜಿ ನಾಯಕರಾದ ಮಹೇಂದ್ರ ಕುಮಾರ್, ನಿಜಗುಣಾನಂದ ಸ್ವಾಮಿಗಳು, ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮಿ, ಚಿತ್ರನಟ ಪ್ರಕಾಶ್ ರಾಜ್, ಜ್ಞಾನಪ್ರಕಾಶ್ ಸ್ವಾಮಿ, ನಟ ಚೇತನ್, ಹಿರಿಯ ಲೇಖಕಿ ಬಿ.ಟಿ ಲಲಿತಾನಾಯಕ್, ಪ್ರೊ.ಮಹೇಶ್ ಚಂದ್ರ ಗುರು, ಪ್ರೊ ಕೆ.ಎಸ್ ಭಗವಾನ್, ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು, ಹಿರಿಯ ಸಾಹಿತಿ ಚಂಪಾ, ಲೇಖಕರಾದ ಯೋಗೇಶ್ ಮಾಸ್ಟರ್(ಢುಂಡಿ ಗಣೇಶ್), ಅಗ್ನಿ ಶ್ರೀಧರ್, ಸಿಪಿಎಂ ನಾಯಕಿ ಬೃಂದಾ ಕಾರಟ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಹೆಸರನ್ನು ಸೂಚಿಸಿ ಇಷ್ಟು ಜನರನ್ನು ಸಂಹಾರ ಮಾಡುತ್ತೀವಿ ಎಂದು ಬರೆಯಲಾಗಿದೆ.



ಬೆದರಿಕೆಯ ಬಗ್ಗೆ ಅಜಾಗ್ರತೆ ಬೇಡ. ಪ್ರತಿಯೊಂದು ಜೀವವೂ ಅಮೂಲ್ಯ.