ಡಿಸೆಂಬರ್‌ನಲ್ಲಿ ಮಧುರೈನ ಜೀವ ವಿಮಾ ನಿಗಮ (ಎಲ್‌ಐಸಿ) ಕಚೇರಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಹಿರಿಯ ಮಹಿಳಾ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಆರಂಭದಲ್ಲಿ ನಂಬಿದಂತೆ ಅದು ಆಕಸ್ಮಿಕ ಸಾವಲ್ಲ, ಕೊಲೆ ಎಂದು ತಮಿಳುನಾಡು ಪೊಲೀಸರು ತೀರ್ಮಾನಿಸಿದ್ದಾರೆ. ಡಿಸೆಂಬರ್ 17ರಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆರೋಪದ ಮೇಲೆ ಪುರುಷ ಸಹೋದ್ಯೋಗಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಪಶ್ಚಿಮ ಪೆರುಮಾಳ್ ಮೇಸ್ತ್ರಿ ಬೀದಿಯಲ್ಲಿರುವ ಎಲ್‌ಐಸಿ ಕಚೇರಿಯ ಸಹಾಯಕ ಆಡಳಿತ ಅಧಿಕಾರಿ ಟಿ. ರಾಮ್ ಎಂದು ಗುರುತಿಸಲಾಗಿದೆ. ರಾಮ್ 54 ವರ್ಷದ ಕಲ್ಯಾಣಿ ನಂಬಿ ಅವರನ್ನು ಕೊಂದಿದ್ದು, ಕಚೇರಿ ಕ್ಯಾಬಿನ್‌ನಲ್ಲಿ ಸುಟ್ಟು ಕರಕಲಾಗಿರುವ ಮೃತದೇಹ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿತ್ತು. ಪೊಲೀಸರ ಹೆಚ್ಚಿನ ತನಿಖೆಯಲ್ಲಿ ಕಲ್ಯಾಣಿ ನಂಬಿಯ ಕ್ಯಾಬಿನ್‌ನೊಳಗೆ ರಾಮ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ವಿಮಾ ಕ್ಲೇಮ್ ಸೆಟಲ್‌ಮೆಂಟ್‌ಗಳಲ್ಲಿ ಅಕ್ರಮಗಳ ಬಗ್ಗೆ ಕಲ್ಯಾಣಿ ಗಂಭೀರ ಕಳವಳ ವ್ಯಕ್ತಪಡಿಸಿದ ನಂತರ, ಅವರನ್ನು ಮೌನಗೊಳಿಸಲು ಈ ಅಪರಾಧ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ತನಿಖೆಯಿಂದ ತಿಳಿದುಬಂದಂತೆ, ರಾಮ್ 40ಕ್ಕೂ ಹೆಚ್ಚು ಸಾವಿನ ಕ್ಲೈಮ್ ಫೈಲ್‌ಗಳನ್ನು ಬಹಳ ಸಮಯದಿಂದ ಪರಿಶೀಲಿಸುತ್ತಿದ್ದಾರೆ ಎಂದು ಹಲವಾರು ವಿಮಾ ಏಜೆಂಟ್‌ಗಳು ಕಲ್ಯಾಣಿಗೆ ದೂರು ನೀಡಿದ್ದರು. ಕಲ್ಯಾಣಿ ಈ ಸಂಬಂಧ ರಾಮ್ ಅವರನ್ನು ಪ್ರಶ್ನಿಸಿ, ವಿಷಯವನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸುವುದಾಗಿ ಎಚ್ಚರಿಸಿದ್ದರು. ಹಾಗಾಗಿ, ಕಲ್ಯಾಣಿಯ ಸದ್ದಡಗಿಸಲು ಮತ್ತು ಬಾಕಿ ಇರುವ ಫೈಲ್‌ಗಳನ್ನು ನಾಶಮಾಡಲು ರಾಮ್ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಆರಂಭದಲ್ಲಿ ಬೆಂಕಿ ಆಕಸ್ಮಿಕ ಎಂದು ನಂಬಲಾಗಿದ್ದರೂ, ಮೃತ ಕಲ್ಯಾಣಿ ಅವರ ಮಗ ಪೊಲೀಸರಿಗೆ ದೂರು ನೀಡಿದಾಗ ಅನುಮಾನಗಳು ಹುಟ್ಟಿಕೊಂಡಿತ್ತು. ಬೆಂಕಿ ಘಟನೆ ನಡೆಯುವ ಕೆಲವೇ ನಿಮಿಷಗಳ ಮೊದಲು ತಾಯಿ ತನಗೆ ಕರೆ ಮಾಡಿದ್ದರು. ಆಕೆ ಅಳುತ್ತಾ, ತಕ್ಷಣ ಪೊಲೀಸರಿಗೆ ತಿಳಿಸುವಂತೆ ಹೇಳಿದ್ದರು ಎಂದು ಕಲ್ಯಾಣಿಯವರ ಮಗ ತನ್ನ ದೂರಿನಲ್ಲಿ ವಿವರಿಸಿದ್ದರು. ‘
ಘಟನಾ ಸ್ಥಳದಲ್ಲಿ ಪೊಲೀಸರು ಹಲವಾರು ಅಸಾಮಾನ್ಯ ವಿವರಗಳನ್ನು ಕೂಡ ಕಂಡುಕೊಂಡಿದ್ದರು. ಕಲ್ಯಾಣಿ ಅವರು ಕೆಲಸ ಮಾಡುತ್ತಿದ್ದ ಕ್ಯಾಬಿನ್, ಸಾಮಾನ್ಯವಾಗಿ ಕಚೇರಿ ಸಮಯದಲ್ಲಿ ತೆರೆದಿರುತ್ತದೆ. ಆದರೆ, ಘಟನೆ ನಡೆದ ದಿನ ಹೊರಗಿನಿಂದ ಸರಪಳಿಯಿಂದ ಲಾಕ್ ಆಗಿರುವುದು ಕಂಡುಬಂದಿದೆ. ಆರೋಪಿ ರಾಮ್‌ಗೆ ಕೂಡ ಸಣ್ಣಪುಟ್ಟ ಸುಟ್ಟ ಗಾಯಗಳಾಗಿತ್ತು. ತನ್ನ ಗಾಯಗಳು ಆಕಸ್ಮಿಕ ಎಂದು ಆತ ಆರಂಭದಲ್ಲಿ ಹೇಳಿಕೊಂಡಿದ್ದರು.
ವಿಚಾರಣೆಯ ಸಮಯದಲ್ಲಿ, ಪೊಲೀಸರು ರಾಮ್ ಹೇಳಿಕೆಗಳಲ್ಲಿ ಅಸಮಂಜಸತೆಯನ್ನು ಕಂಡುಕೊಂಡಿದ್ದು, ಪೊಲೀಸರ ಪ್ರಕಾರ, ಅವರು ವಿರೋಧಾತ್ಮಕ ಉತ್ತರಗಳನ್ನು ನೀಡಿದ್ದಾರೆ. ಇದು ತನಿಖಾಧಿಕಾರಿಗಳು ಆಳವಾದ ತನಿಖೆ ನಡೆಸಲು ಕಾರಣವಾಯಿತು. ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಪುರಾವೆಗಳು ಅವಘಡಕ್ಕಿಂತ ಹೆಚ್ಚಾಗಿ ಉದ್ದೇಶಪೂರ್ವಕ ಕೃತ್ಯದ ಕಡೆಗೆ ಕೈ ತೋರಿಸಿದ್ದವು ಎಂದು ವರದಿಯಾಗಿದೆ.
ರಾಮ್ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಕಲ್ಯಾಣಿ ನಂಬಿ ನೀಡಿದ ಎಚ್ಚರಿಕೆಯೇ ಅಪರಾಧದ ಹಿಂದಿನ ಪ್ರಮುಖ ಉದ್ದೇಶವೆಂದು ತೋರುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ಎಲ್‌ಐಸಿ ಅಧಿಕಾರಿಗಳು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ ಎಂದು moneycontrol.com ವರದಿ ಮಾಡಿದೆ.


