ದೇಶದ ಸಾರ್ವಜನಿಕ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ ದೇಶ-ವಿದೇಶಗಳ 65ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳಲ್ಲಿ ನೂರಾರು ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿದೆ. ಹೀಗೆ ಹೂಡಿಕೆ ಮಾಡಿರುವ ಶೇರುಗಳ ಡಿವಿಡೆಂಡ್ ಒಂದರಿಂದಲೇ ವಾರ್ಷಿಕ 1 ಲಕ್ಷ 76 ಸಾವಿರ ಕೋಟಿ ರೂಪಾಯಿ ಲಾಭಾಂಶ ಪಡೆದಿರುವ ಸಂಸ್ಥೆ ದೇಶಕ್ಕೆ ತನ್ನದೇ ಆದ ಮಹತ್ವದ ಕೊಡುಗೆಯನ್ನು ನೀಡುತ್ತಲೇ ಬರುತ್ತಿದೆ. ಲಾಭದ-ಪೈಪೋಟಿ ಜೊತೆಗೆ ಜನರ ವಿಶ್ವಾಸ ಗಳಿಸುತ್ತ ಸರ್ಕಾರಕ್ಕೂ ಲಾಭದ ಪಾಲು ಕೊಡುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ.
ಜೀವ ವಿಮಾ ನಿಗಮ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಹೂಡಿಕೆ ಮಾಡಿದೆ. ಸರ್ಕಾರಿ ಮತ್ತು ಖಾಸಗೀ ಸೇರಿಂದತೆ 21 ಬ್ಯಾಂಕ್ ಗಳಲ್ಲಿ ಕೋಟ್ಯಂತರ ರೂಪಾಯಿ ಶೇರುಗಳನ್ನು ಹೊಂದಿದೆ. ಐಡಿಬಿಐಯಲ್ಲಿ ಶೇ.51ರಷ್ಟು ಶೇರುಗಳನ್ನು ತೊಡಗಿಸಿದೆ. ಆಕ್ಸಿಸ್ ಬ್ಯಾಂಕ್ ನಲ್ಲಿ ಶೇ.10.37ರಷ್ಟು, ಐಸಿಐಸಿಐ ಬ್ಯಾಂಕ್ ನಲ್ಲಿ ಶೆ.10.37ರಷ್ಟು, ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ 9.25ರಷ್ಟು, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನಲ್ಲಿ 7.4ರಷ್ಟು, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 7.3ರಷ್ಟು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶೇ.6.4ರಷ್ಟು, ಕರ್ನಾಟಕ ಬ್ಯಾಂಕ್ ನಲ್ಲಿ ಶೇ.4.97ರಷ್ಟು ಹೂಡಿಕೆ ಮಾಡಿದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ 5 ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳಲ್ಲೂ ಎಲ್.ಐ.ಸಿ ಶೇರುಗಳನ್ನು ಹೂಡಿಕೆ ಮಾಡಿದೆ. ವಿಶ್ವದ ಐಟಿ ದಿಗ್ಗಜ ಇನ್ಫೋಸಿಸ್ ನಲ್ಲಿ ಶೇ.5.85ರಷ್ಟು ಶೇರುಗಳನ್ನು ತೊಡಗಿಸಿದೆ. ವಿಪ್ರೋದಲ್ಲಿ ಶೇ.4.81ರಷ್ಟು, ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ನಲ್ಲಿ ಶೇ.3.98 ಹಾಗೂ ಒರೆಕಲ್ ಪಿಸ್‌ನಲ್ಲಿ 2.12ರಷ್ಟು ಶೇರುಗಳನ್ನು ಹಾಕಿದೆ.
ಕನಿಷ್ಟ 5 ಯುಟಿಲಿಟಿ ಕಂಪನಿಗಳಲ್ಲೂ ಹೂಡಿಕೆ ಮಾಡಿರುವ ಎಲ್ಐಸಿ ಅಲ್ಲಿಂದಲೂ ಲಾಂಭಾಂಶ ಪಡೆಯುತ್ತಿದೆ. ಬಾಟ ಕಂಪನಿಯಲ್ಲಿ ಶೇ.3.05ರಷ್ಟು, ಪೆಡಿಲೈಟ್ ಇಂಡಸ್ಟ್ರೀಯಲ್ಲಿ 1.56ರಷ್ಟು, ವಿಡಿಯೋ ಕಾನ್ ಕಂಪನಿಯಲ್ಲಿ 4.56ರಷ್ಟು ಶೇರುಗಳನ್ನು ತೊಡಗಿಸಿದೆ. ಔಷಧಿ ಕಂಪನಿಗಳಲ್ಲೂ ಎಲ್ಐಸಿ ತನ್ನ ಪಾರುಪತ್ಯವನ್ನು ಮೆರೆದಿದೆ. ಐದು ಪ್ರತಿಷ್ಠಿತ ಕಂಪನಿಗಳಾದ ಸನ್ ಫಾರ್ಮ, ಡಾ.ರೆಡ್ಡಿ ಲ್ಯಾಬರೋಟರಿ, ಕೆಡಿಲಾ ಹೆಲ್ತ್ ಕೇರ್ ಕಂಪನಿಗಳಲ್ಲಿ ಶೇ. 14ರಷ್ಟು ಹಣವನ್ನು ಹೂಡಿಕೆ ಮಾಡಿದೆ.
ಅಖಿಲ ಭಾರತ ವಿಮಾ ನೌಕರರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ಹೇಳುವಂತೆ, ವಿಮಾ ನಿಗಮದಲ್ಲಿ ಹೂಡಿಕೆ ವಿಭಾಗವಿದೆ. ಅದು ಯಾವ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ವರುತ್ತದೆ ಎಂಬ ಬಗ್ಗೆ ಆಲೋಚಿಸಿ ಹಣವನ್ನು ತೊಡಗಿಸುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಐಸಿ ಕೂಡ ಮಾರುಕಟ್ಟೆಯಲ್ಲಿ ಇರಲೇಬೇಕು. ಹಾಗಾಗಿ ಹೂಡಿಕೆ ವಿಭಾಗ ಬ್ಲೂಚಿಪ್ ಕಂಪನಿಗಳಲ್ಲಿ ಹೂಡಿಕೆಗೆ ತೊಡಗುತ್ತದೆ. ಅತ್ಯಂತ ವಿಶ್ವಾಸಾರ್ಹ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಹೂಡುವುದರಿಂದ ಲಾಭವೂ ಬರುತ್ತದೆ. ಪೈಪೋಟಿಯನ್ನೂ ನೀಡಿದಂತಾಗುತ್ತದೆ. ಪಾಲಿಸಿದಾರರು ಮತ್ತು ಸರ್ಕಾರಕ್ಕೆ ಲಾಭವನ್ನು ನೀಡಲು ಅನುಕೂಲವಾಗುತ್ತದೆ ಎನ್ನುತ್ತಾರೆ.
ದೇಶದ 5 ಪ್ರಮುಖ ಆಟೋ ಮೊಬೈಲ್ ಕಂಪನಿಗಳಲ್ಲು ಎಲ್ಐಸಿ ಕೋಟ್ಯಂತರ ರೂಪಾಯಿ ಹೂಡಿದೆ. ಈ ಕಂಪನಿಗಳ ಪೈಕಿ ಟಿವಿಎಸ್ ನಲ್ಲಿ 1.7ರಷ್ಟು ಹೂಡಿಕೆ ಮಾಡಿದ್ದರೆ ಬಜಾಜ್ ಕಂಪನಿಯಲ್ಲಿ 4.6ರಷ್ಟು ಹಾಗೂ ಹಿರೋ ಹೋಂಡಾ ಕಂಪನಿಯಲ್ಲಿ ಶೇ.5.54ರಷ್ಟು ಮತ್ತು ಅಶೋಕ ಲೈಲ್ಯಾಂಡ್ ನಲ್ಲಿ 1.36ರಷ್ಟು ಶೇರುಗಳನ್ನು ತೊಡಗಿಸಲಾಗಿದೆ. ಜೊತೆಗೆ ಒಎಂಸಿ ಕಂಪನಿಗಳಲ್ಲೂ ಹಣ ತೊಡಗಿಸಲಾಗಿದೆ. ಕ್ಯಾಸ್ಟ್ರೋಲ್ ಕಂಪನಿಯಲ್ಲಿ 10.32ರಷ್ಟು, ಓಎನ್.ಜಿ.ಸಿಯಲ್ಲಿ 9.48ರಷ್ಟು ಐಓಸಿಎಲ್ ನಲ್ಲಿ 6.51 ಮತ್ತು ಬಿಪಿಸಿಲ್ ನಲ್ಲಿ 5.88ರಷ್ಟು ಶೇರುಗಳನ್ನು ಹೂಡಿಕೆ ಮಾಡಲಾಗಿದೆ.
ವಿದ್ಯುತ್ ವಲಯದ 5 ಕಂಪನಿಗಳಾದ ಪವರ್ ಗ್ರೀಡ್ ನಲ್ಲಿ 4.89 ರಷ್ಟು ಕೆಇಸಿ ಇನ್ ನಲ್ಲಿ ಶೇ.1.7ರಷ್ಟು, ಜೆ.ಇ. ಪವರ್ ಕಂಪನಿಯಲ್ಲಿ 1.63ರಷ್ಟು ಶೇರುಗಳು ಇವೆ. ದೇಶದಲ್ಲಿ ಹೆಸರು ಮಾಡಿರುವ ಸಿಮೆಂಟ್ ಕಂಪನಿಗಳಲ್ಲೂ ಹಣ ಹೂಡಿಕೆ ಮಾಡಲಾಗಿದೆ. ಎಸಿಸಿ-6.5ರಷ್ಟು, ಅಂಬುಜ ಸಿಮೆಂಟ್ ಕಂಪನಿಯಲ್ಲಿ 4.80ರಷ್ಟು, ಲಕ್ಷ್ಮಿ ಸಿಮೆಂಟ್ ನಲ್ಲಿ 2.46ರಷ್ಟು ಆಲ್ಟ್ರಾಟೆಕ್ ನಲ್ಲಿ ಶೇ.4.06ರಷ್ಟು ಹೂಡಿಕೆಯಾಗಿದೆ. ಅಂದರೆ ನಾಲ್ಕು ಸಿಮೆಂಟ್ ಕಂಪನಿಗಳಲ್ಲಿ ನೂರಾರು ಕೋಟಿ ಹೂಡಿಕೆ ಮಾಡಿದ್ದು ಅಲ್ಲಿಂದಲೂ ಲಾಭದ ಹಣವನ್ನು ಎಲ್ಐಸಿ ಪಡೆದುಕೊಳ್ಳುತ್ತಿದೆ.
ಉಕ್ಕು ತಯಾರಿಕೆ ಕಂಪನಿಗಳಾದ ಎಸ್ಎಐಎಲ್ ನಲ್ಲಿ 9.6ರಷ್ಟು, ಟಾಟಾ ಸ್ಟೀಲ್ ಕಂಪನಿಯಲ್ಲಿ 9ರಷ್ಟು ವೇದಾಂತ ಕಂಪನಿಯಲ್ಲಿ 6.39ರಷ್ಟು, ನಾಲ್ಕೋದಲ್ಲಿ 5.27ರಷ್ಟು ಹೂಡಕೆಯಾಗಿದೆ. ಎರಡು ಖಾಸಗಿ ವಿಮಾ ಸಂಸ್ಥೆಗಳಲ್ಲೂ ಭಾರತೀಯ ಜೀವ ವಿಮಾ ನಿಗಮದಿಂದ ಹೂಡಿಕೆ ಮಾಡಿದ್ದು ಅಂತಾರಾಷ್ಟ್ರೀಯ ಮಟ್ಟದ ಐಟಿಸಿ 16.32ರಷ್ಟು ಎಲ್ ಅಂಡ್ ಟಿ ಕಂಪನಿಯಲ್ಲಿ 16.9ರಷ್ಟು ಶೇರುಗಳನ್ನು ತೊಡಗಿಸಿ ಪ್ರತಿಯೊಂದು ಕ್ಷೇತ್ರದಿಂದಲೂ ಲಾಭ ಮಾಡುತ್ತಿದೆ. 2017ರಲ್ಲಿ ಶೇರುಗಳ ಡಿವಿಡೆಂಡ್ ನಿಂದ 1.59 ಲಕ್ಷ ಕೋಟಿ ರೂಪಾಯಿ ಲಾಭ ಬಂದಿದೆ. ಅದು 2018ನೇ ಸಾಲಿನಲ್ಲಿ ಲಾಭಾಂಶದಲ್ಲಿ ಶೇ. 0.17ರಷ್ಟು ಹೆಚ್ಚಳವಾಗಿರುವುದು ಕಂಡು ಬಂದಿದೆ. ಅಂದರೆ 1.76 ಲಕ್ಷ ಕೋಟಿ ರೂಪಾಯಿ ಹಣ ಎಲ್ಐಸಿಗೆ ಬಂದಿದೆ.
ಎಲ್ಲಾ ವಲಯದಲ್ಲೂ ಹಣ ತೊಡಗಿಸಿ ಪೈಪೋಟಿ ನೀಡುತ್ತಿರುವ, ಲಾಭ ಗಳಿಸುತ್ತಿರುವ ಭಾರತೀಯ ಜೀವ ವಿಮಾ ನಿಗಮದ ಶೇರುಗಳನ್ನು ಸರ್ಕಾರ ಮಾರಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಯಾವುದೇ ಕಾರಣಕ್ಕೂ ಭಾರತ ಸರ್ಕಾರ ಇಂತಹ ಜನವಿರೋಧಿ ಕೃತ್ಯಕ್ಕೆ ಕೈಹಾಕದೆ ಸಾರ್ವಜನಿಕ ಉದ್ಯಮಗಳ ಅಭಿವೃದ್ಧಿಗೆ ಶ್ರಮಿಸಬೇಕು. ಜನರಿಗೆ ಉದ್ಯೋಗ ನೀಡಬೇಕು. ಪಾಲಿಸಿದಾರರು ನೌಕರರ ಹಿತಕಾಯಲು ಮುಂದಾಗಬೇಕಾದ ಜರೂರತ್ತು ಇದೆ.


