ಮಹಿಳೆಯರ ಬೇಡಿಕೆಯ ಮೇರೆಗೆ ರಾಜ್ಯದಲ್ಲಿ ಹೇರಿದ್ದ ಮದ್ಯ ನಿಷೇಧ ಕಾನೂನನ್ನು ಪರಿಶೀಲಿಸಲು ಬಿಹಾರ ಮುಖ್ಯಮಂತ್ರಿ ಮುಂದಾಗಿದ್ದಾರೆ ಎಂದು ವರದಿಗಳು ಹೇಳಿವೆ. ಮದ್ಯ ನಿಷೇಧದಿಂದ ತಮಗೆ ಲಾಭಕ್ಕಿಂತ ಹೆಚ್ಚು ಹಾನಿಯಾಗುತ್ತಿದೆ ಎಂಬ ವರದಿಗಳನ್ನು ಪರಿಗಣಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಡಿಸೆಂಬರ್ 15 ರಿಂದ ನಿತೀಶ್ ಕುಮಾರ್ ನಡೆಸಲು ಉದ್ದೇಶಿಸಿರುವ ಮೆರವಣಿಗೆಯಲ್ಲಿ ಮಹಿಳೆಯರು ಈ ಆಗ್ರಹವನ್ನು ಇಡಲು ಸಜ್ಜಾಗಿದ್ದಾರೆ. ಜೆಡಿಯುನ ಪ್ರಮುಖ ಮತದಾರರೆಂದು ಪರಿಗಣಿಸಲ್ಪಟ್ಟಿರುವ ಮಹಿಳೆಯರು ಈಗಾಗಲೇ ನಿಷೇಧ ಕಾನೂನಿನ ಕಳಪೆ ಅನುಷ್ಠಾನ ಮತ್ತು ರಾಜ್ಯಾದ್ಯಂತ ಕಳ್ಳಭಟ್ಟಿ ವ್ಯಾಪಾರ ಪ್ರವರ್ಧಮಾನಕ್ಕೆ ಬರುತ್ತಿರುವ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಜೆಡಿಯು ಯಾತ್ರೆ ವೇಳೆ ಸಿಎಂ ಅವರ ಮುಂದೆ ನಮ್ಮ ಬೇಡಿಕೆ ಇಡುತ್ತೇವೆ. ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಅಥವಾ ಅದನ್ನು ರದ್ದುಗೊಳಿಸಬೇಕು ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ ಎಂದು ವೈಶಾಲಿಯ ರಾಘೋಪುರ ಫತೇಪುರ್ ನಿವಾಸಿ ತೆಟಾರಿಯಾ ದೇವಿ ಹೇಳಿದ್ದಾರೆ. ಪ್ರಾಸಂಗಿಕವಾಗಿ ರಾಘೋಪುರವು ಆರ್‌ಜೆಡಿ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಅವರ ವಿಧಾನಸಭಾ ಕ್ಷೇತ್ರವಾಗಿದೆ.
ಏಪ್ರಿಲ್ 2016 ರಲ್ಲಿ ನಿತೀಶ್ ಅವರು ಬಿಹಾರದಲ್ಲಿ ಸಂಪೂರ್ಣ ಮದ್ಯ ನಿಷೇಧವನ್ನು ಹೇರಿದ್ದರು. ಅವರ ಈ ನೀತಿಗೆ ಸ್ವಾಗತ ಮತ್ತು ಟೀಕೆಗಳು ಸಮಾನವಾಗಿ ವ್ಯಕ್ತವಾಗಿತ್ತು. ಈ ವೇಳೆ ನಿತೀಶ್ ಅವರು ಆರ್‌ಜೆಡಿ ಜೊತೆಗೆ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದರು. ಆದರೂ, ಆರ್‌ಜೆಡಿ ನಿತೀಶ್ ಅವರ ಈ ಕ್ರಮದ ವಿರುದ್ಧ ಬಹಿರಂಗವಾಗಿ ಟೀಕೆ ವ್ಯಕ್ತಪಡಿಸಿತ್ತು.
ವಿಶೇಷವಾಗಿ ರಾಜ್ಯಕ್ಕೆ ಭಾರಿ ಪ್ರಮಾಣದ ಕಳ್ಳಸಾಗಣೆ ಮತ್ತು ಕಾನೂನಿನ ಕಳಪೆ ಜಾರಿಯಿಂದಾಗಿ ನಡೆಯುವ ದುರಂತಗಳ ಬಗ್ಗೆ ಮತ್ತು ಕಡಿಮೆ ಬೆಲೆಯಲ್ಲಿ ಸಿಗುವ ನಕಲಿ ಮದ್ಯದ ಸೇವನೆಯಿಂದ ಉಂಟಾಗುವ ಸಾವುನೋವುಗಳ ಬಗ್ಗೆ ಆರ್‌ಜೆಡಿ ಆತಂಕ ವ್ಯಕ್ತಪಡಿಸಿತ್ತು.
ಕೇಂದ್ರ ಸಚಿವ ಮತ್ತು HAM ಸಂಸ್ಥಾಪಕ ಜಿತನ್ ರಾಮ್ ಮಾಂಝಿ ನಿಷೇಧ ಕಾನೂನನ್ನು ತಿರುಚುವ ಮೂಲಕ ಸಣ್ಣ ಪ್ರಮಾಣದಲ್ಲಿ ಮದ್ಯ ಸೇವನೆಗೆ ಅವಕಾಶ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಮಾಜಿ ಚುನಾವಣಾ ತಂತ್ರಜ್ಞ ಮತ್ತು ಹೊಸದಾಗಿ ರಚಿಸಲಾದ ಜನ್ ಸೂರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ವಿಧಾನಸಭಾ ಚುನಾವಣೆಯ ನಂತರ ಅಧಿಕಾರಕ್ಕೆ ಬಂದರೆ ಒಂದು ಗಂಟೆಯೊಳಗೆ ನಿಷೇಧ ಕಾನೂನನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
ಪ್ರಸ್ತುತ ಬಿಹಾರ ಮದ್ಯ ನಿಷೇಧದಿಂದ ಪ್ರತಿ ವರ್ಷ 20,000 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ. ಬಿಹಾರವು ವಿಶ್ವ ದರ್ಜೆಯ ಶಿಕ್ಷಣ ವ್ಯವಸ್ಥೆಯನ್ನು ಸಾಧಿಸಲು, ಮುಂದಿನ 10 ವರ್ಷಗಳಲ್ಲಿ ₹ 5 ಲಕ್ಷ ಕೋಟಿ ಹೂಡಿಕೆ ಅಗತ್ಯವಿದೆ. ಮದ್ಯಪಾನ ನಿಷೇಧವನ್ನು ತೆಗೆದುಹಾಕಿದ ಕೂಡಲೆ, ಅದರಿಂದ ಬರುವ ಹಣವನ್ನು ಹೊಸ ಶಿಕ್ಷಣ ವ್ಯವಸ್ಥೆಯನ್ನು ಸ್ಥಾಪಿಸಲು ಮಾತ್ರ ಮೀಸಲಿಡಲಾಗುವುದು ಎಂದು ಕಿಶೋರ್ ಇತ್ತೀಚೆಗೆ ಹೇಳಿದ್ದರು.
ಪಾಟ್ನಾ ಹೈಕೋರ್ಟ್ ಕೂಡಾ ಮದ್ಯ ನಿಷೇಧ ಕಾನೂನನ್ನು ಇತ್ತೀಚೆಗೆ ಟೀಕಿಸಿದೆ. ಈ ಕಾನೂನು ಸರ್ಕಾರಿ ಅಧಿಕಾರಿಗಳಿಗೆ ಹಣ ಗಳಿಸುವ ಮತ್ತು ಅನಧಿಕೃತ ವ್ಯಾಪಾರವನ್ನು ಉತ್ತೇಜಿಸುವ ಸಾಧನವಾಗಿದೆ ಎಂದು ಕರೆದಿತ್ತು. ನಿಷೇಧ ಕಾನೂನನ್ನು ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಇನ್ಸ್‌ಪೆಕ್ಟರ್‌ನ ಪದಚ್ಯುತಿಯನ್ನು ರದ್ದುಗೊಳಿಸುವ ಹೈಕೋರ್ಟ್ ತೀವ್ರ ಟೀಕೆಗ ಮಾಡಿತ್ತು.
ಇದನ್ನೂ ಓದಿ: ಸಂಭಾಲ್ ನಂತರ ಮತ್ತೊಂದು ವಿವಾದ: ಜಾಮಾ ಮಸೀದಿಯ ಮಾಲೀಕತ್ವಕ್ಕಾಗಿ ನ್ಯಾಯಾಲಯದ ಮೊರೆ
ಸಂಭಾಲ್ ನಂತರ ಮತ್ತೊಂದು ವಿವಾದ: ಜಾಮಾ ಮಸೀದಿಯ ಮಾಲೀಕತ್ವಕ್ಕಾಗಿ ನ್ಯಾಯಾಲಯದ ಮೊರೆ


