ಆಂಧ್ರಪ್ರದೇಶದ ಹಲವೆಡೆ ಮತದಾನಕ್ಕೆ ನಮಗೆ ಹಣ ಕೊಟ್ಟಿಲ್ಲ ಎಂದು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿರುವ ವಿಚಿತ್ರ ಘಟನೆ ನಡೆದಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಇಂದು ಆಂಧ್ರದಲ್ಲಿ ಮತದಾನ ನಡೆಯುತ್ತಿದ್ದು, ಚುನಾವಣೆಯ ಪಾರದರ್ಶಕತೆಯ ಬಗ್ಗೆ ಪ್ರಶ್ನೆ ಉದ್ಭವಿಸಿದೆ.
ಎನ್‌ಡಿಎ ಪ್ರಚಾರ ಸಭೆಗೆ 500ರೂ.ಹಣದ ಆಮಿಷ ನೀಡಿ ಕರೆದುಕೊಂಡು ಬಂದು ಹಣ ಕೊಡದೆ ವಂಚನೆ ಮಾಡಲಾಗಿದೆ ಎಂದು ಮಹಿಳೆಯರು ಮಹರಾಷ್ಟ್ರದ ಔರಂಗಾಬಾದ್‌ನಲ್ಲಿ ಇತ್ತೀಚೆಗೆ ಆರೋಪಿಸಿದ್ದರು. ಇದೀಗ ಆಂಧ್ರಪ್ರದೇಶದ ಪಲಂಡು ಜಿಲ್ಲೆಯ ಸತ್ತೇನಪಲ್ಲಿಯಲ್ಲಿ ಸ್ಥಳೀಯ ನಿವಾಸಿಗಳು ಮತದಾನಕ್ಕೆ ಮೊದಲು ಭರವಸೆ ನೀಡಿದ ಲಂಚದ ಹಣ ನಮಗೆ ಬಂದಿಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ.
ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕಲು ಹಣ ನೀಡುವುದಾಗಿ ಮುಖಂಡರೊಬ್ಬರು ಭರವಸೆ ನೀಡಿದ್ದಾರೆ. ಆದರೆ, ಭರವಸೆ ಈಡೇರಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಆಂಧ್ರದ ಕನಿಷ್ಠ ಐದು ಕಡೆ ಈ ರೀತಿಯ ಬೆಳವಣಿಗೆ ನಡೆದಿದೆ. ಆಂಧ್ರ ಪ್ರದೇಶದಲ್ಲಿಇದು ಹೊಸ ಬೆಳವಣಿಗೆಯಲ್ಲದಿದ್ದರೂ, ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಮತಕ್ಕೆ ಒಂದು ಸಾವಿರದಿಂದ 6,000 ರೂ.ವರೆಗೆ ಬೆಲೆ ನಿಗದಿ ಮಾಡಲಾಗಿದೆ ಎನ್ನಲಾಗಿದೆ.
ಈ ಘಟನೆಯು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ರಾಜಕಾರಣಿಗಳ ಹೊಣೆಗಾರಿಕೆಯ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅಧಿಕಾರಿಗಳು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಇನ್ನೂ ಮುಂದಾಗಿಲ್ಲ, ಆದರೆ ಪ್ರತಿಭಟನೆಯು ಚುನಾವಣೆಯಲ್ಲಿ ಪಾರದರ್ಶಕತೆ ಮತ್ತು ನೈತಿಕ ನಡವಳಿಕೆಯ ಅಗತ್ಯತೆಯ ಬಗ್ಗೆ ಗಮನ ಸೆಳೆದಿದೆ.
ಪೀತಂಪುರಂನಲ್ಲಿ ಅಭ್ಯರ್ಥಿಗಳ ಕಚೇರಿಗಳ ಮುಂದೆ ಮತದಾರರು ಹಣಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ಪಕ್ಷದ ಬೆಂಬಲಿಗರು ಪ್ರತಿ ಮತಕ್ಕೆ 5,000 ರೂ. ನೀಡುವ ಭರವಸೆ ನೀಡಿದ್ದು, ಮಹಿಳಾ ಮತದಾರರಿಗೆ ಹಣ ನೀಡಿಲ್ಲ ಎಂದು ಪ್ರತಿಭಟನೆ ನಡೆದಿದೆ. ಈ ವೇಳೆ ಗುಂಪು ಚದುರಿಸಲು ಪೊಲೀಸರು ಮಧ್ಯಪ್ರವೇಶಿಸಿದ್ದಾರೆ.
ಓಂಗೋಲ್‌ನಲ್ಲಿ ಪ್ರತಿ ಮತಕ್ಕೆ 5 ಸಾವಿರ ರೂ.ನಂತೆ ಹಣ ವಿತರಿಸಲಾಗಿದೆ. ಆದರೆ ಹಣ ಸಿಗದವರು ಪ್ರತಿಭಟನೆ ನಡೆಸಿದ್ದಾರೆ. ಇದಲ್ಲದೆ ಪೂರ್ವ ಗೋದಾವರಿ ಜಿಲ್ಲೆಯ ಕೊಂಡೇವರಂ ಗ್ರಾಮದಲ್ಲಿ ಮತದಾನ ಮಾಡಲು ಹಣಕ್ಕೆ ಬೇಡಿಕೆ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ವಿಜಯವಾಡದಲ್ಲೂ ಇದೇ ರೀತಿಯ ಬೆಳವಣಿಗೆ ಕಂಡು ಬಂದಿದ್ದು, ಪಾಲಿಕೆ ಸದಸ್ಯರ ಮನೆಯಲ್ಲಿ ಪ್ರತಿ ಮತಕ್ಕೆ ಒಂದು ಸಾವಿರ ರೂಪಾಯಿಯಂತೆ ವಿತರಿಸಲಾಗಿದೆ ಎಂದು ಹೇಳಲಾಗಿದೆ.
ಆಂಧ್ರಪ್ರದೇಶದಲ್ಲಿ ಇಂದು ಲೋಕಸಭೆಗೆ ಮತ್ತು ರಾಜ್ಯ ವಿಧಾನಸಭೆಗೆ ಮತದಾನ ನಡೆಯುತ್ತಿದೆ. ರಾಜ್ಯದ ಕೆಲವು ಮತಗಟ್ಟೆಗಳಲ್ಲಿ ಹಿಂಸಾಚಾರ ವರದಿಯಾಗಿದೆ. ಆಂಧ್ರಪ್ರದೇಶದ ಮುಖ್ಯ ಚುನಾವಣಾಧಿಕಾರಿ(ಸಿಇಒ) ಮುಕೇಶ್ ಕುಮಾರ್ ಮೀನಾ ಮಾತನಾಡಿ, ಚಿತ್ತೂರು ಜಿಲ್ಲೆಯಲ್ಲಿ ಅಪಹರಣಕ್ಕೊಳಗಾದ ಮೂವರು ಟಿಡಿಪಿ ಪೋಲಿಂಗ್ ಏಜೆಂಟ್‌ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಿದ್ದಾರೆ.
Raising concerns about electoral malpractice, residents of Sattenapally, in Palandu district of Andhra Pradesh, held a protest after alleging that they did not receive promised bribe money for voting. pic.twitter.com/cSH5rVu81L
— The Siasat Daily (@TheSiasatDaily) May 12, 2024
ಇದನ್ನು ಓದಿ: ಮೋದಿ ಕೈಗೆ ಮತ್ತೆ ಅಧಿಕಾರ ಕೊಟ್ಟರೆ ಬಡವರು, ದಲಿತರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ: ಮಲ್ಲಿಕಾರ್ಜುನ ಖರ್ಗೆ


