ಲೋಕಸಭೆ ಚುನಾವಣೆಯ ಹಿನ್ನೆಲೆ ಇಂದು ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಇಂದು ಐದನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಮತದಾರರು ಮತಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಭವಿಷ್ಯವನ್ನು ಭದ್ರಗೊಳಿಸುತ್ತಿದ್ದಾರೆ.
ಮಹಾರಾಷ್ಟ್ರದ 13 ಲೋಕಸಭೆ ಕ್ಷೇತ್ರಗಳಿಗೆ, ಅಮೇಥಿ ಮತ್ತು ರಾಯ್ ಬರೇಲಿ ಸೇರಿದಂತೆ ಉತ್ತರ ಪ್ರದೇಶದಲ್ಲಿ 14, ಪಶ್ಚಿಮ ಬಂಗಾಳದ 7, ಬಿಹಾರದಲ್ಲಿ 5, ಜಾರ್ಖಂಡ್‌ನಲ್ಲಿ 3, ಒಡಿಶಾದಲ್ಲಿ 5, ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನಲ್ಲಿ ತಲಾ 1 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಈ ಸುತ್ತಿನ ಚುನಾವಣೆಯು ಏಳು ಹಂತಗಳ ವ್ಯಾಪ್ತಿಯಲ್ಲಿ ಚಿಕ್ಕದಾಗಿದೆ. ಇದಲ್ಲದೆ ಜಾರ್ಖಂಡ್‌ನ ಗಾಂಡೆ ಹಾಗೂ ಉತ್ತರಪ್ರದೇಶದ ಲಕ್ನೋ ಪೂರ್ವ ವಿಧಾನಸಭಾ ಕ್ಷೇತ್ರಗಳಲ್ಲಿ ಕೂಡ ಇಂದು ಮತದಾನ ನಡೆಯುತ್ತಿದೆ.
49 ಕ್ಷೇತ್ರಗಳಲ್ಲಿ ಒಟ್ಟು 695 ಅಭ್ಯರ್ಥಿಗಳು ಕಣದಲ್ಲಿದ್ದು, ಮಹಾರಾಷ್ಟ್ರದಲ್ಲಿ ಗರಿಷ್ಠ 264 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ನಾಯಕ ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ಚಿರಾಗ್ ಪಾಸ್ವಾನ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಸೇರಿದಂತೆ ಹಲವರು ಕಣದಲ್ಲಿದ್ದಾರೆ. 89.5 ಮಿಲಿಯನ್ ಜನರು ಮತ ಚಲಾಯಿಸಲಿದ್ದಾರೆ.
ಇಂದಿನ ಐದನೇ ಹಂತದ ಮತದಾನದ ಪ್ರಕ್ರಿಯೆ ಕೊನೆಗೊಂಡಾಗ ಏ.19ರಂದು ಪ್ರಾರಂಭವಾದ ಚುನಾವಣೆಯಲ್ಲಿ ಲೋಕಸಭೆಯ 543 ಸ್ಥಾನಗಳಲ್ಲಿ 428 ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಂತಾಗುತ್ತದೆ.
ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಮತ್ತು ಜವಾಬ್ದಾರಿ ಮತ್ತು ಹೆಮ್ಮೆಯಿಂದ ಮತ ಚಲಾಯಿಸುವಂತೆ ಆಯೋಗವು ಮತದಾರರಿಗೆ ಕರೆ ನೀಡಿದೆ, ಆದರೆ ಕೆಲವು ಕ್ಷೇತ್ರಗಳಲ್ಲಿ ತೀವ್ರ ಬಿಸಿಗಾಳಿ ಮತದಾನದ ಮೇಲೆ ಪರಿಣಾಮ ಬೀರಬಹುದು ಎಂದು ಚುನಾವಣಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಐದನೇ ಹಂತದಲ್ಲಿ 42.6 ಮಿಲಿಯನ್ ಮಹಿಳೆಯರು ಮತ್ತು 5,409 ತೃತೀಯಲಿಂಗಿ ಮತದಾರರು ಸೇರಿದಂತೆ 89.5 ಮಿಲಿಯನ್ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ. 94,732 ಮತಗಟ್ಟೆಗಳು ಮತ್ತು 9,47,000 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ಎಲ್ಲಾ ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆಯು ಜೂ.4ರಂದು ನಡೆಯಲಿದೆ.
ಇದನ್ನು ಓದಿ: ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು: ಮಾಹಿತಿ ಬಹಿರಂಗಗೊಳಿಸಿದ ಅಧಿಕಾರಿಗಳು


