ಲೋಕಸಭಾ ಚುನಾವಣೆ ಸಂಫೂರ್ಣ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 293 ಸ್ಥಾನಗಳನ್ನು, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು 233 ಸ್ಥಾನಗಳನ್ನು ಮತ್ತು ಇತರರು 17 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಎನ್‌ಡಿಎಗೆ ಸರಕಾರ ರಚನೆಗೆ ಬಹುಮತ ಸಿಕ್ಕಿದ್ದರೂ ಬಿಜೆಪಿಯ ವಿಜಯದ ನಾಗಲೋಟಕ್ಕೆ ಇಂಡಿಯಾ ಮೈತ್ರಿಕೂಟ ಬ್ರೇಕ್ ಹಾಕಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಸಂಪೂರ್ಣ ಬಹುಮತದ ಸರಕಾರವನ್ನು ರಚಿಸಿತ್ತು. ಈ ಬಾರಿ ಬಿಜೆಪಿ ಮತ್ತು ಎನ್‌ಡಿಎ 350ಕ್ಕೂ ಅಧಿಕ ದಾಖಲೆಯ ಅಂಕಿಯನ್ನು ದಾಟಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಆದರೆ ಜನಾದೇಶದ ಅಂತಿಮ ಫಲಿತಾಂಶವು ಇದೀಗ ಎಲ್ಲವೂ ತಲೆಕೆಳಗಾಗಿರುವುದನ್ನು ಸೂಚಿಸಿದೆ.
2019ರ ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಬಿಜೆಪಿ 63 ಸ್ಥಾನಗಳನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಈ ಬಾರಿ 99 ಸ್ಥಾನಗಳನ್ನು ಪಡೆದುಕೊಂಡಿದ್ದು, 2019ರಲ್ಲಿ ಕಾಂಗ್ರೆಸ್ ಬರೀ 52 ಸ್ಥಾನಗಳನ್ನು ಪಡೆದುಕೊಂಡಿತ್ತು, ಈ ಬಾರಿ 47 ಸ್ಥಾನಗಳು ಕಾಂಗ್ರೆಸ್‌ಗೆ ಹೆಚ್ಚಳವಾಗಿದೆ. ಇದಲ್ಲದೆ 80 ಕ್ಷೇತ್ರಗಳಿರುವ ಅತಿದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಬಿಜೆಪಿಗೆ 50 ಸ್ಥಾನಗಳು ಸಿಗುತ್ತದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದವು, ಈ ಫಲಿತಾಂಶಗಳು ಉಲ್ಟಾ ಹೊಡೆದಿದ್ದು, ಬಿಜೆಪಿಗೆ ಉತ್ತರಪ್ರದೇಶದಲ್ಲಿ ಬಹುದೊಡ್ಡ ಹೊಡೆತ ಬಿದ್ದಿದೆ. ಉತ್ತರಪ್ರದೇಶದಲ್ಲಿ 43 ಸ್ಥಾನಗಳಲ್ಲಿ ಇಂಡಿಯಾ ಮೈತ್ರಿ ಕೂಟ ಮತ್ತು 33 ಸ್ಥಾನಗಳಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿದೆ.
ಆ್ಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಎನ್‌ಡಿಎಗೆ 361ರಿಂದ 401 ಸ್ಥಾನಗಳು ಬರಲಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಏರಲಿದ್ದಾರೆ ಎಂದು ಹೇಳಿದ್ದರು. ಆದರೆ, ಜೂನ್ 4ರಂದು AXIS MY INDIA ನಿರ್ದೇಶಕ ಪ್ರದೀಪ್ ಗುಪ್ತಾ ಅವರು ನುಡಿದಿದ್ದ ಭವಿಷ್ಯ ಸುಳ್ಳಾಗಿದೆ. ಇದರಿಂದಾಗಿ ಇಂಡಿಯಾ ಟುಡೇ ಚಾನೆಲ್‌ನ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಜೊತೆಗೆ ಚರ್ಚೆ ನಡೆಸುತ್ತಿದ್ದಾಗ ಪ್ರದೀಪ್ ಗುಪ್ತಾ ಕಣ್ಣೀರು ಹಾಕಿರುವುದನ್ನು ಗಮನಿಸಬಹುದಾಗಿದೆ.
2024ರ ಚುನವಾಣೆಯ ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ ರಿಪಬ್ಲಿಕ್ ಭಾರತ್- ಪಿ ಮಾರ್ಕ್ ಎನ್‌ಡಿಎಗೆ 359 ಸ್ಥಾನಗಳು, ಇಂಡಿಯಾ ನ್ಯೂಸ್- ಡಿ-ಡೈನಾಮಿಕ್ಸ್ 371 ಸ್ಥಾನಗಳು, ರಿಪಬ್ಲಿಕ್ ಭಾರತ್ ಮ್ಯಾಟ್ರಿಜ್ 353-368 ಸ್ಥಾನಗಳು, ಟಿವಿ 5 ತೆಲುಗು -359 ಸ್ಥಾನಗಳು, ಜನ್ ಕೀ ಬಾತ್-362-392 ಸ್ಥಾನಗಳು, ಎನ್‌ಡಿಟಿವಿ ಸಮೀಕ್ಷೆ-365 ಸ್ಥಾನಗಳು, ಲೋಕ್ ಪೋಲ್-325 ರಿಂದ 333, ನ್ಯೂಸ್ ನೇಷನ್-342-378 ಸ್ಥಾನಗಳನ್ನು ಎನ್‌ಡಿಎ ಮೈತ್ರಿಕೂಟಕ್ಕೆ ನೀಡಿತ್ತು. ಎಕ್ಸಿಟ್ ಪೋಲ್ ಫಲಿತಾಂಶಗಳಲ್ಲಿ ಇಂಡಿಯಾ ಮೈತ್ರಿಕೂಟವು 155ರ ಗಡಿ ದಾಟುವುದನ್ನು ಯಾವ ಮಾಧ್ಯಮ ಸಮೀಕ್ಷೆಗಳು ಕೂಡ ಹೇಳಿಲ್ಲ. ರಿಪಬ್ಲಿಕ್ ಭಾರತ್- ಪಿ ಮಾರ್ಕ್ ಸಮೀಕ್ಷೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ 154 ಸ್ಥಾನಗಳು, ಇಂಡಿಯಾ ನ್ಯೂಸ್- ಡಿ-ಡೈನಾಮಿಕ್ಸ್ 125 ಸ್ಥಾನಗಳು, ರಿಪಬ್ಲಿಕ್ ಭಾರತ್- ಮ್ಯಾಟ್ರಿಜ್ -118ರಿಂದ 113 ಸ್ಥಾನಗಳು, ಟಿವಿ 5 ತೆಲುಗು- 154 ಸ್ಥಾನಗಳು, ಜನ್ ಕೀ ಬಾತ್-141ರಿಂದ 161 ಸ್ಥಾನಗಳು, ಎನ್‌ಡಿಟಿವಿ ಸಮೀಕ್ಷೆ-142 ಸ್ಥಾನಗಳು, ಲೋಕ್ ಪೋಲ್-155 ರಿಂದ 165, ನ್ಯೂಸ್ ನೇಷನ್-ಇಂಡಿಯಾ 153 ಸ್ಥಾನಗಳನ್ನು ಇಂಡಿಯಾ ಮೈತ್ರಿಕೂಟಕ್ಕೆ ನೀಡಿತ್ತು. ಆದರೆ ಈ ಫಲಿತಾಂಶಗಳೆಲ್ಲ ಇದೀಗ ಹುಸಿಯಾಗಿದೆ. ಎಕ್ಸಿಟ್ ಪೋಲ್‌ಗಳ ಪಾರದರ್ಶಕತೆಯ ಬಗ್ಗೆ ಪ್ರಶ್ನೆ ಮೂಡಿದೆ.
ಇದನ್ನು ಓದಿ: ಲೋಕಸಭೆ ಫಲಿತಾಂಶ: ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಹೀನಾಯ ಸೋಲು


