ಕೇಂದ್ರ ಸಚಿವ, ಕೇರಳದ ತಿರುವನಂತಪುರಂ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರು ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚಿಸಲು ಹಾಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಬಹಿರಂಗ ಆಹ್ವಾನ ನೀಡಿದ್ದು, ಬಿಜೆಪಿ ಅಭ್ಯರ್ಥಿ ಸವಾಲನ್ನು ತರೂರ್ ಸ್ವೀಕರಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜೀವ್ ಚಂದ್ರಶೇಖರ್, “ಆಲೋಚನೆಗಳು, ಅಭಿವೃದ್ಧಿ ಮತ್ತು ಯಾರ ಟ್ರ್ಯಾಕ್ ರೆಕಾರ್ಡ್ ಉತ್ತಮವಾಗಿದೆ ಎಂಬುದರ ಕುರಿತು ನಾನು (ಶಶಿ ತರೂರ್ ಅವರೊಂದಿಗೆ) ಚರ್ಚೆಗೆ ಸಿದ್ಧನಿದ್ದೇನೆ. ನಾನು ಮೊದಲಿನಿಂದಲೂ ಇದನ್ನು ಹೇಳುತ್ತಿದ್ದೇನೆ” ಎಂದು ಹೇಳಿದ್ದಾರೆ.
ತಿರುವನಂತಪುರಂ ಹಾಲಿ ಸಂಸದ ತರೂರ್ ಅವರು ರಾಜೀವ್ ಚಂದ್ರಶೇಖರ್ ಅವರ ಸವಾಲಿನ ವೀಡಿಯೊವನ್ನು ಹಂಚಿಕೊಂಡಿದ್ದು, “ರಾಜಕೀಯ ಮತ್ತು ಅಭಿವೃದ್ಧಿಯನ್ನು ಚರ್ಚಿಸೋಣ” ಎಂದು ಬರೆದಿದ್ದಾರೆ.
“ಹೌದು, ನಾನು ಚರ್ಚೆಯನ್ನು ಸ್ವಾಗತಿಸುತ್ತೇನೆ. ಆದರೆ, ತಿರುವನಂತಪುರದ ಜನರಿಗೆ ಇದುವರೆಗೂ ಯಾರು ಚರ್ಚೆಯಿಂದ ನುಣುಚಿಕೊಳ್ಳುತ್ತಿದ್ದಾರೆಂದು ತಿಳಿದಿದ್ದಾರೆ. ರಾಜಕೀಯ ಮತ್ತು ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡೋಣ” ಎಂದು ತರೂರ್ ಹೇಳಿದರು.
“ನಾವು ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಕೋಮುವಾದ ಮತ್ತು ಬಿಜೆಪಿಯ 10 ವರ್ಷಗಳ ದ್ವೇಷದ ರಾಜಕಾರಣದ ಬಗ್ಗೆ ಚರ್ಚೆ ಮಾಡೋಣ. ತಿರುವನಂತಪುರಂನ ಅಭಿವೃದ್ಧಿ ಮತ್ತು ಕಳೆದ 15 ವರ್ಷಗಳಲ್ಲಿ ನಾವು ಮಾಡಿದ ಗೋಚರ ಪ್ರಗತಿಯ ಬಗ್ಗೆಯೂ ಚರ್ಚಿಸೋಣ” ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ತಿರುವನಂತಪುರಂ ಲೋಕಸಭಾ ಕ್ಷೇತ್ರವು ಹೈವೋಲ್ಟೇಜ್ ಚುನಾವಣಾ ಪ್ರಚಾರಕ್ಕೆ ಸಾಕ್ಷಿಯಾಗಿದ್ದು, ಎರಡೂ ಪಕ್ಷಗಳು ಇದನ್ನು ಪ್ರತಿಷ್ಠೆಯ ಕಣವೆಂದು ಪರಿಗಣಿಸಿವೆ. ಇತ್ತೀಚಿನ ಬೆಳವಣಿಗೆಯೆಂದರೆ, ಇಬ್ಬರೂ ನಾಯಕರು ಚುನಾವಣಾ ಆಯೋಗಕ್ಕೆ ಪರಸ್ಪರ ದೂರುಗಳನ್ನು ದಾಖಲಿಸಿಕೊಂಡಿದ್ದು, ನಿರೀಕ್ಷಿತ ಮತ ಬ್ಯಾಂಕ್ ಇಲ್ಲದಿದ್ದರೂ ಬಿಜೆಪಿ ಇಲ್ಲಿ ಗೆಲ್ಲುವುದಕ್ಕೆ ತಂತ್ರಗಾರಿಕೆ ನಡೆಸುತ್ತಿದೆ.
ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಅಭ್ಯರ್ಥಿ ಶಶಿ ತರೂರ್ ಅವರು ಮತಕ್ಕಾಗಿ ಹಣ ನೀಡುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ಚಂದ್ರಶೇಖರ್ ದೂರಿನಲ್ಲಿ ಆರೋಪಿಸಿದ್ದಾರೆ. ತರೂರ್ ಅವರ ತಂಡ ಆರೋಪವನ್ನು ನಿರಾಕರಿಸಿದ್ದು, ಅವರು ಅಂತಹ ಹೇಳಿಕೆಯನ್ನು ಎಂದಿಗೂ ನೀಡಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಎನ್‌ಡಿಎ ಅಭ್ಯರ್ಥಿ ಚಂದ್ರಶೇಖರ್ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಡಿಎಫ್ ದೂರು ದಾಖಲಿಸಿದ್ದು, ನಾಮಪತ್ರದ ಜತೆಗೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಚಂದ್ರಶೇಖರ್ ಮತ್ತು ತರೂರ್ ಅವರಲ್ಲದೆ, ಸಿಪಿಐ ಹಿರಿಯ ಪನ್ನಯನ್ ರವೀಂದ್ರನ್ ಅವರು ಎಡ-ರಂಗದ ಅಭ್ಯರ್ಥಿಯಾಗಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಕೇರಳದಲ್ಲಿ 20 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 26 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ; ರಾಜ್ಯಕ್ಕಾಗಿರುವ ಅನ್ಯಾಯವನ್ನು ನಿರ್ಮಲಾ ಸೀತಾರಾಮನ್ ಒಪ್ಪಿಕೊಂಡಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್


