ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಸೋಲಾಗಿದೆ. ಈ ಮೂಲಕ ಭಾರೀ ಮುಖಭಂಗ ಅನುಭವಿಸಿದ್ದಾರೆ.
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ ಎರಡು ಭಾರೀ ಗೆದ್ದು ದೇಶದ ಗಮನ ಸೆಳೆದಿದ್ದ ಸ್ಮೃತಿ ಇರಾನಿ, ಈ ಬಾರಿಯೂ ಗೆಲ್ಲುವ ವಿಶ್ವಾಸ ಹೊಂದಿದ್ದರು. ಆದರೆ, ಗಾಂಧಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ವಿರುದ್ಧ ಹೀನಾಯವಾಗಿ ಸೋತಿದ್ದಾರೆ.
2019ರಲ್ಲಿ ಅಮೇಥಿಯಲ್ಲಿ ಮೊದಲ ಬಾರಿ ಗೆದ್ದಿದ್ದ ಸ್ಮೃತಿ ಇರಾನಿ, ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಟೀಕಿಸುತ್ತಾ ಬಂದಿದ್ದರು. ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯನ್ನು ಗೇಲಿ ಮಾಡಿದ್ದ ಇರಾನಿ, ತನ್ನನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ ಅಂದುಕೊಂಡಿದ್ದರು. ಆದರೆ, ಮತದಾರರು ಸ್ಮೃತಿಗೆ ಸೋಲಿನ ರುಚಿ ತೋರಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಥಿಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಗೊತ್ತಾದಾಗ “ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ. ರಾಹುಲ್ ಗಾಂಧಿ ಸೋಲಿಗೆ ಹೆದರಿ ರಾಯ್‌ಬರೇಲಿಗೆ ಓಡಿದ್ದಾರೆ” ಎಂದು ಸ್ಮೃತಿ ಹೇಳಿದ್ದರು. ಆದರೆ, ಈಗ ಗಾಂಧಿ ಕುಟುಂಬದ ಆಪ್ತ ಕಿಶೋರಿಲಾಲ್ ಎದುರು ಸ್ಮೃತಿ ಹೀನಾಯವಾಗಿ ಸೋತಿದ್ದಾರೆ.
ಸಂಜೆ 5:30ರವರೆಗೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾದ ಅಂಕಿ ಅಂಶಗಳ ಪ್ರಕಾರ, ಕಾಂಗ್ರೆಸ್‌ನ ಕಿಶೋರಿ ಲಾಲ್ 5,24,892 ಮತಗಳನ್ನು ಪಡೆದಿದ್ದು, ಸ್ಮೃತಿ ಇರಾನಿ 3,63,626 ಮತಗಳನ್ನು ಗಳಿಸಿದ್ದಾರೆ. 1,61,266 ಮತಗಳ ಅಂತರದಲ್ಲಿ ಸ್ಮೃತಿ ಹಿನ್ನಡೆ ಅನುಭವಿಸಿದ್ದಾರೆ.
ಸ್ಮೃತಿ ಇರಾನಿ ಗುಜರಾತ್‌ನಿಂದ 2011ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಗೆ ಪ್ರವೇಶಿಸಿದ್ದರು. ನಂತರ ಆಗಸ್ಟ್ 2017 ರಲ್ಲಿ ಮರು ಆಯ್ಕೆಯಾದರು. ಪ್ರಸ್ತುತ ಅವರು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಜವಳಿ ಖಾತೆ ಸಚಿವರಾಗಿದ್ದಾರೆ. ಮೇ 2014 ಮತ್ತು ಜುಲೈ 2016 ರ ನಡುವೆ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಜುಲೈ 2017 ರಿಂದ ಮೇ 2018 ರವರೆಗೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದರು.
ಇದನ್ನೂ ಓದಿ : ತಲೆಕೆಳಗಾದ ಎಕ್ಸಿಟ್ ಪೋಲ್ ಸಮೀಕ್ಷೆ: ಲೈವ್ ಟಿವಿಯಲ್ಲಿ ಕಣ್ಣೀರಿಟ್ಟ ಆಕ್ಸಿಸ್ ಮೈ ಇಂಡಿಯಾದ ಪ್ರದೀಪ್ ಗುಪ್ತಾ


