ತಮ್ಮ ಹಾಗೂ ಕುಟುಂಬದ ವಿರುದ್ದ ಸುಳ್ಳು ಆರೋಪಗಳನ್ನು ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಅವರ ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಸುರೇಶ್ ಬಾಬು ವಿರುದ್ದ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ಬೆಂಗಳೂರಿನ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ಕುಮಾರಸ್ವಾಮಿ ನನ್ನ ವಿರುದ್ದ ಸುಳ್ಳು ಹಾಗೂ ದುರುದ್ದೇಶಪೂರಿತ ಆರೋಪಗಳನ್ನು ಮಾಡಿ, ಬೆದರಿಕೆ ಹಾಕಿದ್ದಾರೆ. ಸುಳ್ಳು ವೈದ್ಯಕೀಯ ದಾಖಲಾತಿಯನ್ನು ಪಡೆದು ಕರ್ನಾಟಕ ಕೇಡರ್‌ನಲ್ಲಿ ಮುಂದುವರೆಯುತ್ತಿರುವುದಾಗಿಯೂ, ಲಂಚ ಪಡೆದಿದ್ದಾಗಿಯೂ ಆರೋಪಿಸಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಅಲ್ಲದೆ, ನಿಖಿಲ್ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ, ನನ್ನ ವಿರುದ್ದ ಸುಳ್ಳು ಹಾಗೂ ದುರುದ್ದೇಶಪೂರಿತ ಆರೋಪಗಳನ್ನು ಮಾಡಿದ್ದಾರೆ. ಕುಮಾರಸ್ವಾಮಿ ಆಪ್ತ ಸುರೇಶ್ ಬಾಬು ಅವರೂ ನನ್ನ ವಿರುದ್ದ ದುರುದ್ದೇಶಪೂರಿತ ಆರೋಪಗಳನ್ನು ಮಾಡಿ, ನನ್ನ ವಿರುದ್ದ ಕ್ರಮ ಕೈಗೊಳ್ಳುವಂತ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಆ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಬೆದರಿಕೆ ಒಡ್ಡಿದ್ದಾರೆ” ಎಂದು ಎಡಿಜಿಪಿ ಚಂದ್ರಶೇಖರ್ ದೂರಿದ್ದಾರೆ.
ಚಂದ್ರಶೇಖರ್ ಅವರ ದೂರು ಸ್ವೀಕರಿಸಿರುವ ಸಂಜಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ : ಬೆಂಗಳೂರಿನ ಗಂಗೇನಹಳ್ಳಿ (ಗಂಗಾನಗರ)ಯ 1 ಎಕರೆ 11 ಗುಂಟೆ ಜಾಗವನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಲೋಕಾಯುಕ್ತ ಪೊಲೀಸರು ಸೆಪ್ಟೆಂಬರ್ 27, 2024 ಶುಕ್ರವಾರದಂದು ವಿಚಾರಣೆಗೆ ಒಳಪಡಿಸಿದ್ದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ದ ಹರಿಹಾಯ್ದಿದಿದ್ದರು. ಚಂದ್ರಶೇಖರ್ ಅವರು ಕಾಂಗ್ರೆಸ್ ರಕ್ಷಣೆಯಲ್ಲಿ ನನ್ನ ವಿರುದ್ದ ಭ್ರಷ್ಟಾಚಾರದ ಕಟ್ಟುಕಥೆ ಕಟ್ಟುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಚಂದ್ರಶೇಖರ್ ಅಧಿಕಾರಿಯ ಸೋಗಿನಲ್ಲಿ ಕ್ರಿಮಿನಲ್ ಆಗಿದ್ದು, ಅವರ ವಿರುದ್ಧ ಸರಣಿ ಅಪರಾಧ ಎಸಗಿರುವ ಆರೋಪವಿದೆ ಎಂದು ಹೇಳಿದ್ದರು.
ಕುಮಾರಸ್ವಾಮಿಯ ಆರೋಪಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿದ್ದ ಎಡಿಜಿಪಿ ಚಂದ್ರಶೇಖರ್, “ಜಾರ್ಜ್ ಬರ್ನಾರ್ಡ್ ಶಾ ಹೇಳಿಕೆಯನ್ನು ಉಲ್ಲೇಖಿಸಿ “ಹಂದಿಗಳೊಂದಿಗೆ ಎಂದಿಗೂ ಗುದ್ದಾಡಬೇಡಿ. ಇಬ್ಬರೂ ಕೊಳಕಾಗುತ್ತೀರಿ ಮತ್ತು ಹಂದಿ ಕೂಡಾ ಅದನ್ನು ಇಷ್ಟಪಡುತ್ತದೆ” ಎಂದಿದ್ದರು. ನಮ್ಮ ಕರ್ತವ್ಯ ನಿರ್ವಹಣೆಯ ಸಮಯದಲ್ಲಿ ಅಪರಾಧಿಗಳು ಮತ್ತು ಆರೋಪಿಗಳನ್ನು ಎದುರಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿಗೆ ಟಾಂಗ್ ಕೊಟಿದ್ದರು.
ಆ ಬಳಿಕ, ಕುಮಾರಸ್ವಾಮಿ ಮತ್ತು ಅವರ ಬಳಗ ಹಾಗೂ ಎಡಿಜಿಪಿ ನಡುವೆ ವಾಕ್ಸಮರ ನಡೆಯುತ್ತಿದೆ. ಅದು ಈಗ ತಾರಕಕ್ಕೇರಿ ದೂರು ಕೊಡುವ ಹಂತಕ್ಕೆ ಬಂದಿದೆ.
ಇದನ್ನೂ ಓದಿ : 2022ರ ಹುಬ್ಬಳ್ಳಿ ಗಲಭೆ ಸೇರಿದಂತೆ ಹಲವು ಪ್ರಕರಣಗಳನ್ನು ಹಿಂಪಡೆದ ರಾಜ್ಯ ಸರ್ಕಾರ


