ದೆಹಲಿಗೆ ಪಾದಯಾತ್ರೆ ನಡೆಸುತ್ತಿದ್ದ ಸಂದರ್ಭದಲ್ಲಿ ಗುಜರಾತ್‌ನ ಸೂರತ್ ಸಮೀಪದ ಭರೂಚ್ ನಲಲಿ ಎಂಬಲ್ಲಿ ಪಾದಯಾತ್ರಿಗಳ ಮೇಲೆ ಬುಧವಾರ ಸಂಜೆ ಲಾರಿ ಹರಿದು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್‌ಎಸ್) ರಾಜ್ಯ ಕಾರ್ಯಾಧ್ಯಕ್ಷ ಲಿಂಗೇಗೌಡ ಹಾಗೂ ಮುಖಂಡರಾದ ಮೂಸಾ ಷರೀಫ್ ಎಂಬುವವರು ಮೃತಪಟ್ಟಿದ್ದಾರೆ.
ಅತ್ಯಾಚಾರ ಆರೋಪದ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ಮಾಡಬೇಕು, ತಪ್ಪಿತ್ತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಮಂಗಳೂರಿನಿಂದ ದೆಹಲಿವರೆಗೆ ಪಾದಯಾತ್ರೆ ನಡೆಸುತ್ತಿದ್ದರು. ರಾಷ್ಟ್ರಪತಿಗಳು ಹಾಗೂ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸುವ ಉದ್ದೇಶ ಹೊಂದಿದ್ದ ಅವರು, ಆರು ಜನರ ತಂಡ 55 ದಿನ ಪಾದಯಾತ್ರೆ ನಡೆದಿದ್ದರು. ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಉಳಿದ ನಾಲ್ವರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
55 ದಿನ ಪಾದಯಾತ್ರೆ ನಡೆಸಿದ್ದ ತಂಡ ಬುಧವಾರ ಗುಜರಾತ್‌ನ ಭರೂಚ್ ನಗರವನ್ನು ತಲುಪಿತ್ತು. ರಸ್ತೆ ಬದಿಯಲ್ಲಿ ತಮ್ಮ ವ್ಯಾನ್ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದವರ ಮೇಲೆ ಲಾರಿಯೊಂದು ಏಕಾಏಕಿ ನುಗ್ಗಿದೆ. ಈ ವೇಳೆ 55 ವರ್ಷದ ಲಿಂಗೇಗೌಡ, 55 ವರ್ಷದ ಮೂಸಾ ಷರೀಫ್ ಸಾವನ್ನಪ್ಪಿದ್ದಾರೆ. ಉಳಿದವರಿಗೆ ಗಂಭೀರ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪಕ್ಷದ ಮುಖಂಡರಾದ ಜ್ಞಾನ ಸಿಂಧು ಸ್ವಾಮಿ ತಿಳಿಸಿದರು.
ಅಕ್ಟೊಬರ್ 17 ರಂದು ಮಂಗಳೂರಿನಲ್ಲಿ ಪಾದಯಾತ್ರೆ ಆರಂಭಿಸಿದ ಈ ತಂಡ ನಿನ್ನೆ 55ನೇ ದಿನ ಗುಜರಾತಿನ ಸೂರತ್ ಹಾಗು ಅಹಮದಬಾದಿನ ನಡುವೆ ಪಾದಯಾತ್ರೆ ಸಾಗಿತ್ತು.
ಮಂಡ್ಯ ಜಿಲ್ಲೆಯ ಮದ್ದೂರಿನ ಸೋಂಪುರ ಗ್ರಾಮದವರಾದ ಲಿಂಗೇಗೌಡ ಅವರು, ಅಬಕಾರಿ ಇನ್ ಸ್ಪೆಕ್ಟರ್ ಹುದ್ದೆಯಲ್ಲಿದ್ದರು. ಕೆಲವು ವರ್ಷಗಳ ಹಿಂದೆ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ, ರಾಜಕಾರಣ, ಭ್ರಷ್ಟಾಚಾರ ವಿರೋಧಿ ಆಂದೋಲನ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತ ಮುಸಾ ಮಂಗಳೂರಿನ ನಿವಾಸಿಯಾಗಿದ್ದಾರೆ.
ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ಮೃತದೇಹಗಳನ್ನು ಇಂದು ಸಂಜೆಯೊಳಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿವೆ. ಬೆಂಗಳೂರಿನಲ್ಲಿ ಕಾರ್ಯಕರ್ತರ ದರ್ಶನದ ಬಳಿಕ, ಸ್ವಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಇದನ್ನೂ ಓದಿ; ಮಹಾರಾಷ್ಟ್ರ| ಸಂವಿಧಾನ ಪ್ರತಿಕೃತಿ ಧ್ವಂಸ ವಿರೋಧಿಸಿ ಬಂದ್; ಪರ್ಭಾನಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ


