ಯುಎಸ್‌ನ (ಅಮೆರಿಕ) ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ನಗರದ ಪೆಸಿಫಿಕ್ ಪ್ಯಾಲಿಸೈಡ್ಸ್ ಹಾಗೂ ಪ್ಯಾಸಡೀನಾದ ಈಟನ್ ಕೆಯಾನ್ ಪ್ರದೇಶಗಳಲ್ಲಿ ಉಂಟಾಗಿರುವ ಭೀಕರ ಕಾಡ್ಗಿಚ್ಚಿಗೆ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ದುರಂತದಲ್ಲಿ 1, 500ಕ್ಕೂ ಹೆಚ್ಚು ಕಟ್ಟಡಗಳು ಬೆಂಕಿಗಾಹುತಿಯಾಗಿವೆ. ಅರಣ್ಯ ಸಮೀಪದ 70 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕ್ಯಾಲಿಪೋರ್ನಿಯಾ ರಾಜ್ಯ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿದ್ದು, 1,30,000 ಅಧಿಕ ಜನರನ್ನು ಸ್ಥಳಾಂತರಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಕಾಡ್ಗಿಚ್ಚು ದುರಂತ ಹಿನ್ನೆಲೆ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ತಮ್ಮ ಇಟಲಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಘಟನೆಯ ಕುರಿತು ಮಾತನಾಡಿರುವ ಅವರು, ಕಾಡ್ಗಿಚ್ಚು ತಡೆಯುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ. ಬೈಡನ್ ಅವರು ಜನವರಿ 9ರಿಂದ 12ರವರೆಗೆ ಇಟಲಿಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡುವ ಕಾರ್ಯಕ್ರಮವಿತ್ತು.
ವರದಿಗಳ ಪ್ರಕಾರ, ಕಳೆದ ಮಂಗಳವಾರ (ಜ.7) ಕಾಡ್ಗಿಚ್ಚು ಶುರುವಾಗಿದೆ. ಲಾಸ್ ಏಂಜಲೀಸ್‌ನ ಪೆಸಿಫಿಕ್ ಪ್ಯಾಲಿಸೈಡ್ಸ್‌ನ ಹಾಲಿವುಡ್ ಕಲಾವಿದರ ಮನೆಗಳಿರುವ ಪ್ರತಿಷ್ಠಿತ ಹಾಲಿವುಡ್ ಹಿಲ್ಸ್‌ಗೆ ಬೆಂಕಿ ವ್ಯಾಪಿಸಿ ಅಪಾರ ನಷ್ಟ ಉಂಟು ಮಾಡಿದೆ. ಪ್ರಮುಖ ಕಲಾವಿದರ ಕಟ್ಟಡಗಳು ಭಸ್ಮವಾಗಿದೆ.
‘ಸನ್‌ಸೆಟ್ ಫೈರ್’ ಎಂದು ಕರೆಯಲ್ಪಡುವ ಬೆಂಕಿ ಜ್ವಾಲೆಯು ಹಾಲಿವುಡ್ ಹಿಲ್ಸ್ ಅನ್ನು ಆವರಿಸಿದೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ 112 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿರುವ ʻಸಾಂಟಾ ಅನಾʼ ಚಂಡಮಾರುತದಿಂದ ಪರಿಸ್ಥಿತಿ ಹದಗೆಡುತ್ತಲೇ ಇದೆ. ರನ್ಯಾನ್ ಕ್ಯಾನ್ಯನ್ ಮತ್ತು ವಾಟಲ್ಸ್ ಪಾರ್ಕ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.
ಬೆಂಕಿ ನಂದಿಸಲು ಸುಮಾರು 7,500 ಅಗ್ನಿಶಾಮಕ ಸಿಬ್ಬಂದಿ ಮತ್ತು ಇತರರು ಕೆಲಸ ಮಾಡುತ್ತಿದ್ದಾರೆ. ಅಗ್ನಿಶಾಮಕ ವಾಹನಗಳು, ಹೆಲಿಕಾಫ್ಟರ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ, ಈ ಕಾರ್ಯಾಚರಣೆಗೆ ನೀರಿನ ಕೊರತೆ ಉಂಟಾಗಿದೆ ಎಂದು ವರದಿಯಾಗಿದೆ.
‘ಕಾಡ್ಗಿಚ್ಚಿನ ಬಗ್ಗೆ ಮೊದಲೇ ಎಚ್ಚರಿಕೆ ವಹಿಸಿದ್ದ ಕಾರಣ, ಮುಂಚಿತವಾಗಿ 1 ಮಿಲಿಯನ್ ಗ್ಯಾಲನ್‌ನ (3.8 ಮಿಲಿಯನ್ ಲೀಟರ್‌ನ) ಮೂರು ನೀರಿನ ಟ್ಯಾಂಕ್‌ಗಳನ್ನು ತುಂಬಿಸಿಡಲಾಗಿತ್ತು. ಆದರೆ, ಈ ಸಂಗ್ರಹವೂ ಖಾಲಿಯಾಗುತ್ತಿದೆ. ಪೆಸಿಫಿಕ್ ಪ್ಯಾಲಿಸೈಡ್ಸ್ ಪ್ರದೇಶಕ್ಕೆ ಸಾಮಾನ್ಯವಾಗಿ ಪೂರೈಸುವ ಮೂರು ಪಟ್ಟು ಹೆಚ್ಚು ನೀರನ್ನು ಬೆಂಕಿ ನಿಯಂತ್ರಿಸಲು ಬಳಸಲಾಗುತ್ತಿದೆ.
ಮಂಗಳವಾರದಿಂದ 2 ಸಾವಿರದಿಂದ 4 ಸಾವಿರ ಗ್ಯಾಲನ್ ನೀರಿನ ಪ್ರಮಾಣದ 18 ನೀರಿನ ಟ್ಯಾಂಕರ್‌ಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ನೀರಿನ ಕೊರತೆ ಎದುರಾಗಿದೆ’ ಎಂದು ಲಾಸ್ ಏಂಜಲೀಸ್‌ನ ಜಲ ವಿಭಾಗ ಹೇಳಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ : ತಾಲಿಬಾನ್ ಸಚಿವರನ್ನು ಭೇಟಿಯಾದ ಭಾರತದ ವಿದೇಶಾಂಗ ಕಾರ್ಯದರ್ಶಿ


