ಉತ್ತರ ಪ್ರದೇಶ ರಾಜ್ಯವು ದೇಶದಲ್ಲಿಯೇ ಅತಿ ಹೆಚ್ಚು ಅಪರಾಧಗಳು ನಡೆಯುವ ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ಹಲ್ಲೆ, ಕೊಲೆ, ಹಿಂಸಾಚಾರಕ್ಕೆ ಕುಖ್ಯಾತಿಯಾದ ರಾಜ್ಯವಾಗಿದೆ. ಅಲ್ಲಿನ ಸರ್ಕಾರವಾಗಲಿ, ಪೊಲೀಸ್ ವ್ಯವಸ್ಥೆಯಾಗಲಿ ಅಪರಾಧ ತಡೆಗೆ ಪ್ರಾಮಾಣಿಕ ಪಯತ್ನ ಮಾಡುತ್ತಿಲ್ಲ ಎಂಬ ಆರೋಪವಿದೆ. ಇಂತಹ ರಾಜ್ಯದ ರಾಜಧಾನಿ ಲಕ್ನೋದಲ್ಲಿನ ಮಹಿಳೆಯರ ಮೇಲಿನ ಅಪರಾಧಗಳ ತಡೆಗೆ ಪೊಲೀಸರು ಕ್ಯಾಮರಗಳ ಮೊರೆ ಹೋಗಿದ್ದಾರೆ.
ಸಾರ್ವಜನಿಕ ಸ್ಥಳಗಳನ್ನು ಎಐ-ಸಾಮರ್ಥ್ಯವುಳ್ಳ ಕ್ಯಾಮೆರಾಗಳೊಂದಿಗೆ ಸಜ್ಜುಗೊಳಿಸಲು ಲಕ್ನೋ ಪೊಲೀಸರು ಸಜ್ಜಾಗಿದ್ದಾರೆ. ಆ ಕ್ಯಾಮರಗಳು ಮುಖದ ಅಭಿವ್ಯಕ್ತಿಗಳ ಆಧಾರದ ಮೇಲೆ ತೊಂದರೆಯಲ್ಲಿರುವ ಮಹಿಳೆಯರ ಚಿತ್ರಗಳನ್ನು ಕ್ಲಿಕ್ ಮಾಡುತ್ತದೆ ಮತ್ತು ಹತ್ತಿರದ ಪೊಲೀಸ್ ಠಾಣೆಗೆ ಎಚ್ಚರಿಕೆ ನೀಡುತ್ತದೆ ಎಂದು ಪೊಲೀಸ್ ಹೇಳಿಕೆ ಉಲ್ಲೇಖಿಸಿ ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸಾರ್ವಜನಿಕ ಸ್ಥಳದಲ್ಲಿ ಹುಡುಗಿಯರು ತಮ್ಮ ಮುಖಭಾವನೆಗಳನ್ನು ಬದಲಿಸಿದ ಕೂಡಲೇ “ಅವರನ್ನು ಯಾರೋ ಹಿಂಬಾಲಿಸುತ್ತಿದ್ದಾರೆ, ಬೆದರಿಸುತ್ತಿದ್ದಾರೆ ಅಥವಾ ಚುಡಾಯಿಸುತ್ತಿದ್ದಾರೆ” ಎಂಬುದನ್ನು ಗುರುತಿಸುವ ಕ್ಯಾಮರಗಳು ಹತ್ತಿರದ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಗಳನ್ನು ಬಂಧಿಸಲು ಸಹಾಯ ಮಾಡುತ್ತವೆ ಎಂದು ಪೊಲೀಸ್ ಕಮಿಷನರ್ ಡಿಕೆ ಠಾಕೂರ್ ತಿಳಿಸಿದ್ದಾರೆ.
Lucknow: The Lucknow police is set to equip public places with AI-enabled cameras that will click pictures of women in distress on the basis of facial expressions and alert the nearest police station.
— TOI Lucknow News (@TOILucknow) January 20, 2021
ಜಿಲ್ಲೆಯ ಸುರಕ್ಷತೆಯ ವಿಷಯವಾಗಿ “ಆಶಿಶ್, ಅಭಯ್ ಮತ್ತು ಅಭ್ಯುದಯ” ಎಂಬ ಕಾರ್ಯಗಾರದಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಹೆಚ್ಚಾಗಿ ಮಹಿಳೆಯರು ಓಡಾಡುವ ಮತ್ತು ಅಪರಾಧಗಳು ದಾಖಲಾಗಿರುವ 200 ಸ್ಥಳಗಳನ್ನು ಗುರುತಿಸಿದ್ದೇವೆ’ ಎಂದಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಎಐ-ಸಾಮರ್ಥ್ಯವುಳ್ಳ ಕ್ಯಾಮರಗಳನ್ನು ಅಳವಡಿಸುತ್ತಿದ್ದೇವೆ. ಇವು ತ್ವರಿತವಾಗಿ ಪೊಲೀಸ್ ಠಾಣೆಗಳಿಗೆ ಮಾಹಿತಿ ಒದಗಿಸುತ್ತವೆ. ಯಾವುದೇ ಮಹಿಳೆಯರು ಆತಂಕಿತ ಸ್ಥಿತಿಯಲ್ಲಿದ್ದರೆ ಅವರ ಮುಖಭಾವನೆಗಳನ್ನು ಆಧರಿಸಿ ಆ ಮಾಹಿತಿಯನ್ನು ವೇಗವಾಗಿ ಪೊಲೀಸ್ ಠಾಣೆಗಳಿಗೆ ಕಳಿಸುತ್ತದೆ. ಆಕೆ ಫೋನ್ ತೆಗೆದುಕೊಂಡು ಸಹಾಯಕ್ಕಾಗಿ 100 ಅಥವಾ 112 ಡಯಲ್ ಮಾಡುವ ಮುನ್ನವೇ ಆ ವಿಷಯ ಪೊಲೀಸ್ ಠಾಣೆಗೆ ತಿಳಿದಿರುತ್ತದೆ ಎಂದು ಡಿಕೆ ಠಾಕೂರ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಲಕ್ನೋ ನಗರ ಮಾತ್ರವೇ ದೇಶದ ಮಹಿಳಾ ಸುರಕ್ಷತಾ ನಗರವೆಂದು ಸೇರ್ಪಡೆಗೊಂಡಿದೆ ಎಂದು ಕಮಿಷನರ್ ತಿಳಿಸಿದ್ದಾರೆ. ಇಲ್ಲಿ 31 ಪಿಂಕ್ ಬೂತ್‌ಗಳು, 10 ಸಂಚಾರಿ ಪೊಲೀಸ್ ವಾಹನಗಳು, ಮಹಿಲಾ ಕಾನ್ಸ್ಟೇಬಲ್‌ಗಳನ್ನೊಳಗೊಂಡ 100 ಸ್ಕೂಟಿಗಳನ್ನು ಈಗಾಗಲೇ ನಿಯೋಜಿಸಲಾಗಿದೆ ಎಂದಿದ್ದಾರೆ.
ಲಕ್ನೋ ಪೊಲೀಸರ ಈ ಹೊಸ ಕ್ಯಾಮರ ಅವತಾರವನ್ನು ಮಹಿಳೆಯರು ಹೇಗೆ ಸ್ವೀಕರಿಸುತ್ತಾರೆ ನೋಡಬೇಕಿದೆ. ಏಕೆಂದರೆ ಮಹಿಳೆಯರು ಯಾವ ವಿಷಯಕ್ಕೆ ಬೇಕಾದರೂ ಆತಂಕಗೊಳ್ಳಬಹುದು. ಅದೆಲ್ಲವೂ ಪೊಲೀಸರಿಗೆ ತಿಳಿಯಬೇಕೆ? ಮಹಿಳೆಯರಿಗೆ ಖಾಸಗಿತನವೆಂಬುದಿಲ್ಲವೇ? ಅನವಶ್ಯಕವಾಗಿ ಪೊಲೀಸರು ಮೂಗು ತೂರಿಸಿದಂತಾಗುವುದಿಲ್ಲವೇ? ಎಂಬ ಪ್ರಶ್ನೆಗಳು ಎದ್ದಿವೆ.
ಇದುವರೆಗೂ ಮಹಿಳೆಯರು ನೀಡಿದ ದೂರುಗಳಲ್ಲಿ ಎಷ್ಟನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ? ಆ ದೂರುಗಳಲ್ಲಿ ಎಷ್ಟು ಜನರಿಗೆ ಶಿಕ್ಷೆಯಾಗಿದೆ? ಪೊಲೀಸರು ತಾವು ಮಾಡಬೇಕಾದ ಕರ್ತವ್ಯಗಳನ್ನು ಮರೆತು ಕ್ಯಾಮರ ಮೊರೆ ಹೋಗುವುದು ಸರಿಯಲ್ಲ ಎಂದು ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿವೆ.
ಇದನ್ನೂ ಓದಿ; ಕೊವಾಕ್ಸಿನ್ ತೆಗೆದುಕೊಂಡಂತೆ ನಟನೆ ಮಾಡಿದ ಜಿಲ್ಲಾ ವೈದ್ಯಾಧಿಕಾರಿ- ವಿಡಿಯೋ ವೈರಲ್


