“ಗೋಶಾಲೆಯನ್ನು ಸ್ವಚ್ಛಗೊಳಿಸಿ, ಅಲ್ಲೇ ಮಲಗಿದರೆ ಕ್ಯಾನ್ಸರ್ ಗುಣಪಡಿಸಬಹುದು. ಹಸುವಿನ ಬೆನ್ನು ಸವರುವುದರಿಂದ ರಕ್ತದೊತ್ತಡ ಕಡಿಮೆ ಮಾಡಬಹುದು” ಎಂದು ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಸಚಿವ ಸಂಜಯ್ ಸಿಂಗ್ ಗಂಗ್ವಾರ್ ಭಾನುವಾರ ಹೇಳಿದ್ದಾರೆ.
ನೌಗಾವಾನ್ ಪಕರಿಯಾದಲ್ಲಿ 55 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕನ್ಹಾ ಗೋಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಗಂಗ್ವಾರ್ ಈ ಹೇಳಿಕೆಗಳನ್ನು ನೀಡಿದ್ದಾರೆ.
“ರಕ್ತದೊತ್ತಡದ ರೋಗಿಗಳಿದ್ದರೆ ಇಲ್ಲಿ ಹಸುಗಳಿವೆ” ಎಂದಿರುವ ಗಂಗ್ವಾರ್ “ಒಬ್ಬರು ವ್ಯಕ್ತಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹಸುವಿನ ಬೆನ್ನು ಸವರಬೇಕು. ಈ ಮೂಲಕ 20ಎಂಜಿ ಡೋಸ್ ರಕ್ತದೊತ್ತಡದ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ಅದು 10 ದಿನಗಳಲ್ಲಿ 10ಎಂಜಿಗೆ ಇಳಿಸಬಹುದು” ಎಂದಿದ್ದಾರೆ.
“ಕ್ಯಾನ್ಸರ್ ರೋಗಿಯು ದನದ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದರೆ, ಕ್ಯಾನ್ಸರ್ ಕೂಡ ವಾಸಿಯಾಗುತ್ತದೆ. ನೀವು ಹಸುವಿನ ಬೆರಣಿಯನ್ನು ಸುಟ್ಟರೆ ಸೊಳ್ಳೆಗಳಿಂದ ಪರಿಹಾರ ಸಿಗುತ್ತದೆ. ಹಸು ಉತ್ಪಾದಿಸುವ ಎಲ್ಲವೂ ಒಂದು ರೀತಿಯಲ್ಲಿ ಉಪಯುಕ್ತವಾಗಿದೆ” ಎಂದು ಗಂಗ್ವಾರ್ ಹೇಳಿದ್ದಾರೆ.
ಬಿಡಾಡಿ ದನಗಳ ಸಮಸ್ಯೆ ಬಗ್ಗೆಯೂ ಪ್ರತಿಕ್ರಿಯಿಸಿದ ಸಚಿವರು, “ನಾವು ನಮ್ಮ ತಾಯಿಯ ಸೇವೆ ಮಾಡುತ್ತಿಲ್ಲ, ಹೀಗಾಗಿ ತಾಯಿ ಎಲ್ಲೋ ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದಿದ್ದಾರೆ. ಗೋಶಾಲೆಯಲ್ಲಿ ಈದ್ ಆಚರಿಸುವಂತೆ ಮುಸ್ಲಿಮರಿಗೆ ಕರೆ ನೀಡಿದ ಅವರು, ಈದ್ ಖಾದ್ಯವನ್ನು ಹಸುವಿನ ಹಾಲಿನಿಂದ ತಯಾರಿಸಿ ಎಂದು ಸೂಚಿಸಿದ್ದಾರೆ.
ನೌಗಾವಾನ್‌ನಲ್ಲಿ ಸಚಿವರು ಹೊಸದಾಗಿ ಉದ್ಘಾಟಿಸಿದ ಗೋಶಾಲೆಯು ಮೇವು, ಔಷಧಿ ಮತ್ತು ನಿರ್ಗತಿಕ ಹಸುಗಳಿಗೆ ಆಶ್ರಯವನ್ನು ಒದಗಿಸಲಿದೆ. ಗೋಶಾಲೆಗಳೊಂದಿಗೆ ಸಂಪರ್ಕ ಸಾಧಿಸಲು, ಮೇವು ದಾನ ಮಾಡುವ ಮೂಲಕ ವಿವಾಹ ವಾರ್ಷಿಕೋತ್ಸವಗಳು ಮತ್ತು ಮಕ್ಕಳ ಜನ್ಮದಿನಗಳಂತಹ ವೈಯಕ್ತಿಕ ಕಾರ್ಯಕ್ರಮಗಳನ್ನು ನಡೆಸುವಂತೆ ಗಂಗ್ವಾರ್ ಜನರಿಗೆ ಕರೆ ನೀಡಿದ್ದಾರೆ.
ಗಂಗ್ವಾರ್ ಅವರು 2012ರ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ಯಿಂದ ಸ್ಪರ್ಧಿಸಿ, ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆ ಸೇರಿದ್ದರು. 2017 ಮತ್ತು 2022ರಲ್ಲಿ ಪಿಲಿಭಿತ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿರುವ ಅವರು, ವಿಭಿನ್ನ ರಾಜಕೀಯ ಇತಿಹಾಸವನ್ನು ಹೊಂದಿದ್ದಾರೆ. ಬಿಜೆಪಿಯ ಮಾಜಿ ಸಂಸದ ವರುಣ್ ಗಾಂಧಿ ಅವರ ಕುರಿತು ವಿವಾದಾತ್ಮಕ ಹೇಳಿಕೆಗಳ ನೀಡುವುದು ಮತ್ತು ಟೀಕೆ ಮಾಡುವುದರಿಂದಲೇ ಇವರು ಹೆಚ್ಚು ಪ್ರಸಿದ್ದಿಯಾಗಿದ್ದಾರೆ.
ಇದನ್ನೂ ಓದಿ : ವೈದ್ಯೆ ಹತ್ಯೆ-ಅತ್ಯಾಚಾರ ಪ್ರಕರಣ: ಉಪವಾಸನಿರತ ವೈದ್ಯರು ಐಸಿಯುಗೆ ದಾಖಲು; ಇಂದು ರಾಜಭವನಕ್ಕೆ ಮೆರವಣಿಗೆ


