ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನರಾಯಪಟ್ಟಣ ಹೋಬಳಿಯ ಹದಿಮೂರು ಹಳ್ಳಿಗಳ ಪೈಕಿ 3 ಹಳ್ಳಿಗಳ 500 ಎಕರೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈ ಬಿಡುತ್ತೇವೆ ಎಂಬ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರ ಹೇಳಿಕೆಯನ್ನು ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಸಂಪೂರ್ಣವಾಗಿ ತಿರಸ್ಕರಿಸಿದೆ.
ನಾಳೆ (ಜೂನ್ 25) ‘ದೇವನಹಳ್ಳಿ ಚಲೋ’ ಹೋರಾಟ ದೊಡ್ಡ ಮಟ್ಟದಲ್ಲಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.
ಇಂದು (ಜೂ.24) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ “ಮೂರು ಹಳ್ಳಿಗಳ 500 ಎಕರೆ ಭೂಮಿಯನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದ್ದೇವೆ. ಇನ್ನು ಮುಂದೆ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೈಗಾರಿಕೆ ಸಲುವಾಗಿ ಭೂಸ್ವಾಧೀನ ಮಾಡುವುದಿಲ್ಲ. ಆದ್ದರಿಂದ ರೈತರು ದಯವಿಟ್ಟು ಹೋರಾಟ ಕೈಬಿಟ್ಟು ಸರ್ಕಾರದೊಂದಿಗೆ ಸಹಕರಿಸಿ” ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ “ಹೋರಾಟದ ದಿಕ್ಕು ತಪ್ಪಿಸಲು ರಾಜ್ಯ ಸರ್ಕಾರ ಒಡೆದು ಆಳುವ ತಂತ್ರವನ್ನು ಅನುಸರಿಸುತ್ತಿದೆ” ಎಂದಿದೆ.
ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನವು ಕರಾಳ ಕೆಎಐಡಿಬಿ ಭೂ ಸ್ವಾಧೀನ ನೀತಿ ಪ್ರಕಾರ ನಡೆಸಲಾಗುತ್ತಿದೆ. ಇಂತಹ ಅನ್ಯಾಯದ ಭೂ ಸ್ವಾಧೀನವು, ಭೂ ಸ್ವಾಧೀನ ಕಾಯ್ದೆ, 2013ಕ್ಕೆ ವಿರುದ್ದವಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರ ರೈತರ ವಿರೋಧ ಧಿಕ್ಕರಿಸಿ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಇದನ್ನು ವಿರೋಧಿಸಿ ರೈತರು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಬಿಜೆಪಿ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದರು. ನಾವು ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಭೂ ಸ್ವಾಧೀನ ಅಧಿಸೂಚನೆ ರದ್ದುಪಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಈಗ ಭೂ ಸ್ವಾಧೀನಕ್ಕೆ ಹಠಮಾರಿ ಧೋರಣೆ ಅನುಸರಿಸುತ್ತಾ ಒಡೆದು ಆಳುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಈ ಕುಟಿಲ ತಂತ್ರದಿಂದ ರೈತ ಹೋರಾಟ ಬಗ್ಗು ಬಡಿಯಲು ಸಾಧ್ಯವಿಲ್ಲ ಎಂದು ಹೇಳಿದೆ.
ನಾಳೆ ದೇವನಹಳ್ಳಿ ತಹಶೀಲ್ದಾರ್ ಕಛೇರಿ ಎದುರು ನಡೆಯಲಿರುವ ಭೂ ಸ್ವಾಧೀನ ವಿರೋಧಿ ಹೋರಾಟಕ್ಕೆ ಎಲ್ಲಾ ರೈತರು, ಕಾರ್ಮಿಕರು ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡುತ್ತೇವೆ ಎಂದಿದೆ.
ಶೇಕಡಾ 90ಕ್ಕಿಂತ ಹೆಚ್ಚು ರೈತರು ವಿರೋಧ ದಾಖಲಿಸಿರುವ ಈ ಅನ್ಯಾಯದ ಭೂಸ್ವಾಧೀನ ಮಾಡಿಕೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಮುಖ್ಯಮಂತ್ರಿಗಳು ತಮ್ಮ ಭರವಸೆಯಂತೆ ನಡೆದುಕೊಳ್ಳಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.
LIVE UPDATES | ‘ದೇವನಹಳ್ಳಿ ಚಲೋ’; ರೈತರ ಹೋರಾಟಕ್ಕೆ ರಂಗಕರ್ಮಿ ಮಹೇಶ್ ಬೆಂಬಲ


