ಕೇವಲ 10 ನಿಮಿಷ ತಡವಾಗಿ ಶಾಲೆಗೆ ಬಂದಿದ್ದಕ್ಕೆ 6ನೇ ತರಗತಿ ವಿದ್ಯಾರ್ಥಿನಿಗೆ ಬ್ಯಾಗ್ ಸಹಿತ 100 ಬಸ್ಕಿ ಹೊಡೆಯುವ ಶಿಕ್ಷೆ ನೀಡಲಾಗಿದ್ದು, ವಾರದ ಬಳಿಕ ಆ ಬಾಲಕಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.
ವಸಾಯಿ ಪ್ರದೇಶದ ಸತಿವಲಿಯ ಶ್ರೀ ಹನುಮಂತ ವಿದ್ಯಾ ಮಂದಿರ ಎಂಬ ಖಾಸಗಿ ಶಾಲೆಯ ಅನ್ಶಿಕಾ ಗೌಡ್ (ಕಾಜಲ್ ಗೌಡ್) ಮೃತ ವಿದ್ಯಾರ್ಥಿನಿ
ನವೆಂಬರ್ 8ರಂದು ಅನ್ಶಿಕಾ ಮತ್ತು ಇತರ ನಾಲ್ವರು ವಿದ್ಯಾರ್ಥಿನಿಯರು 10 ನಿಮಿಷ ತಡವಾಗಿ ಶಾಲೆಗೆ ಆಗಮಿಸಿದ್ದರು. ಈ ಕಾರಣಕ್ಕೆ ಬಾರವಾದ ಬ್ಯಾಗ್ ಸಹಿತ 100 ಬಸ್ಕಿ ಹೊಡೆಯು ಶಿಕ್ಷೆಯನ್ನು ಮಕ್ಕಳಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಶಾಲೆಯಿಂದ ಮನೆಗೆ ಆಗಮಿಸಿದ ಅನ್ಶಿಕಾ ನಡೆದ ವಿಷಯವನ್ನು ಪೋಷಕರಿಗೆ ತಿಳಿಸಿದ್ದರು. ಆಕೆ ಆ ಸಂದರ್ಭದಲ್ಲಿ ವಿಪರೀತ ಕತ್ತು ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದರು. ಎದ್ದು ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ವರದಿಗಳು ಹೇಳಿವೆ.
ನಂತರ, ಬಾಲಕಿಯ ಆರೋಗ್ಯ ಹದೆಗೆಡುತ್ತಾ ಹೋಯಿತು. ಹಾಗಾಗಿ, ಪೋಷಕರು ಆಕೆಯನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಿದ್ದರು. ನವೆಂಬರ್ 14ರಂದು ಶುಕ್ರವಾರ (ಮಕ್ಕಳ ದಿನಾಚರಣೆಯಂದು) ಚಿಕಿತ್ಸೆ ಫಲಿಸದೆ ಅನ್ಶಿಕಾ ಸಾವನ್ನಪ್ಪಿದ್ದಾರೆ.
ಬಾಲಕಿ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಿರುವಾಗ ಆಕೆಗೆ ಕಠಿಣವಾದ ಶಿಕ್ಷೆ ನೀಡಲಾಗಿದೆ. ಇದರಿಂದ ಆಕೆಯ ಆರೋಗ್ಯ ಇನ್ನಷ್ಟು ಹದೆಗೆಟ್ಟು ಸಾವನ್ನಪ್ಪಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಶಿಕ್ಷಕಿ ತನ್ನ ಮಗಳಿಗೆ ಅಮಾನವೀಯ ಶಿಕ್ಷೆ ವಿಧಿಸಿದ್ದಾರೆ ಎಂದು ಬಾಲಕಿಯ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮಗಳ ಆರೋಗ್ಯ ಹದೆಗೆಟ್ಟಾಗ ಶಾಲೆಯವರು ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಬಾಲಕಿಯ ಸಾವಿನ ಕುರಿತು ಆಕೆಯ ಕುಟುಂಬಸ್ಥರು ಇನ್ನೂ ಯಾವುದೇ ಔಪಚಾರಿಕ ದೂರು ನೀಡಿಲ್ಲ. ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಬಾಲಕಿ ಎಷ್ಟು ಬಸ್ಕಿ ಹೊಡೆದಿದ್ದಾಳೆ. ಅದರಿಂದಾಗಿಯೇ ಆಕೆ ಮೃತಪಟ್ಟಳೋ ಅಥವಾ ಬೇರೆ ಕಾರಣದಿಂದಲೋ ಎಂಬುದು ನಿಜವಾಗಿಯೂ ತಿಳಿದಿಲ್ಲ ಎಂದು ಶಾಲೆಯ ಶಿಕ್ಷಕರೊಬ್ಬರು ಹೇಳಿದ್ದಾರೆ.
ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಬ್ಲಾಕ್ ಶಿಕ್ಷಣ ಅಧಿಕಾರಿ ಪಾಂಡುರಂಗ ಗಲಂಗೆ ತಿಳಿಸಿದ್ದಾರೆ. ವಾಲಿವ್ (ಪಾಲ್ಘರ್) ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಆದರೆ, ನವೆಂಬರ್ 16 ರವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
ಎಂಎನ್ಎಸ್ ಕಾರ್ಯಕರ್ತರು ಬಾಲಕಿಯ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಶಾಲೆಯ ಗೇಟುಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಒತ್ತಾಯಿಸಿದ್ದಾರೆ. ಕ್ರಮ ಕೈಗೊಳ್ಳುವವರೆಗೆ ಶಾಲೆಯನ್ನು ಮತ್ತೆ ತೆರೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಕೇರಳ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ನಾಯಕನಿಗೆ ಮರಣದಂಡನೆ ಶಿಕ್ಷೆ


