ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಪತ್ತೆಯಾಗಿರುವ ಬೃಹತ್ ಡ್ರಗ್ ಮಾಫಿಯಾದ ಆರೋಪಿಗಳು ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಜಗದೀಶ್ ದೇವದಾ ಅವರ ಆಪ್ತರು ಎಂದು ಆರೋಪಿಸಿರುವ ಕಾಂಗ್ರೆಸ್, ದೇವದಾ ಅವರ ರಾಜೀನಾಮೆಗೆ ಆಗ್ರಹಿಸಿದೆ.
ಬಂಧಿತ ಡ್ರಗ್ ಸ್ಮಗ್ಲರ್‌ಗಳಲ್ಲಿ ಒಬ್ಬನಾಗಿರುವ ಹರೀಶ್ ಅಂಜನಾ ಜೊತೆಗಿನ ಡಿಸಿಎಂ ದೇವದಾ ಅವರ ಹಲವಾರು ಪೋಟೋಗಳನ್ನು ಪ್ರದರ್ಶಿಸಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿತು ಪಟ್ವಾರಿ, ಡ್ರಗ್ ಸ್ಮಗ್ಲರ್ ಡಿಸಿಎಂಗೆ ಆಪ್ತ, ಆದ್ದರಿಂದ ಡಿಸಿಎಂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ವಾರದ ಆರಂಭದಲ್ಲಿ ಭೋಪಾಲ್‌ನ ಹೊರವಲಯದಲ್ಲಿ ಮೆಫೆಡ್ರೋನ್ (ಎಂಡಿ) ಡ್ರಗ್‌ನ ಬೃಹತ್ ಅಕ್ರಮ ಕಾರ್ಖಾನೆ ಪತ್ತೆಯಾಗಿತ್ತು. ಅಲ್ಲಿಂದ ಬರೋಬ್ಬರಿ 1,814 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ “ಪ್ರಧಾನಿ ನರೇಂದ್ರ ಮೋದಿ ಅಥವಾ ಅವರ ಪಕ್ಷವು ನಿಜವಾಗಿಯೂ ಮಾದಕ ವ್ಯಸನದ ವಿರುದ್ಧವಾಗಿದ್ದರೆ, ಮಧ್ಯ ಪ್ರದೇಶದ ಉಪ ಮುಖ್ಯಮಂತ್ರಿ ಜಗದೀಶ್ ದೇವದಾ ರಾಜೀನಾಮೆ ಕೇಳಬೇಕು” ಎಂದು ಒತ್ತಾಯಿಸಿದ್ದಾರೆ.
“ಎರಡು ವರ್ಷಗಳ ಹಿಂದೆ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಮಂಡಿಸಿದ ವರದಿಯ ಪ್ರಕಾರ ದೇಶದಲ್ಲಿ ಸುಮಾರು 40 ಕೋಟಿ ಜನರು ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದಾರೆ. ದೇಶದಲ್ಲಿ ವಾರ್ಷಿಕವಾಗಿ 2 ಕೋಟಿ ಹೊಸ ಮಾದಕ ವ್ಯಸನಿಗಳು ಸೃಷ್ಟಿಯಾಗುತ್ತಿದ್ದಾರೆ. ಈ ಪೈಕಿ ಸುಮಾರು 50% ರಷ್ಟು ಮಂದಿ 25 ವರ್ಷ ವಯಸ್ಸಿನವರು. ಪ್ರಧಾನಿ ದೇಶದಲ್ಲಿ ವಾರ್ಷಿಕವಾಗಿ 2 ಕೋಟಿ ಉದ್ಯೋಗಗಳನ್ನು ಒದಗಿಸದಿದ್ದರೂ, ಪ್ರತಿ ವರ್ಷ 2 ಕೋಟಿ ಹೊಸ ಮಾದಕ ವ್ಯಸನಿಗಳು ಸೇರ್ಪಡೆಯಾಗುತ್ತಿದ್ದಾರೆ. ಭೋಪಾಲ್‌ನಲ್ಲಿ ಭೇದಿಸಲಾದ ಅಕ್ರಮ ಡ್ರಗ್ ಕಾರ್ಖಾನೆಯು ದೇಶದಾದ್ಯಂತ ತನ್ನ ಜಾಲವನ್ನು ಹೊಂದಿದೆ. ಅದಕ್ಕಾಗಿಯೇ ನಾವು ಈ ವಿಷಯವನ್ನು ಪ್ರಸ್ತಾಪಿಸಲು ದೆಹಲಿಗೆ ಬಂದಿದ್ದೇವೆ. ರಾಜ್ಯದ ಗೃಹ ಸಚಿವರೂ ಆಗಿರುವ ಸಿಎಂ ಮೋಹನ್ ಯಾದವ್ ಈ ವಿಚಾರದಲ್ಲಿ ಮೌನವಾಗಿದ್ದಾರೆ. ಅವರ ಇಬ್ಬರು ಉಪಮುಖ್ಯಮಂತ್ರಿಗಳ ಪೈಕಿ ಒಬ್ಬರಾದ ಜಗದೀಶ್ ದೇವದಾ ಅವರು ಬಂಧಿತ ಆರೋಪಿಗಳ ಪೈಕಿ ಒಬ್ಬನ ಜೊತೆ ಇರುವ ಫೋಟೋಗಳಿವೆ” ಎಂದಿದ್ದಾರೆ.
ಅಕ್ಟೋಬರ್ 7ರಂದು ಹರೀಶ್ ಅಂಜನಾ (ಪ್ರಕರಣದಲ್ಲಿ ಬಂಧಿತ ಮೂರನೇ ವ್ಯಕ್ತಿ) ಬಂಧನಕ್ಕೆ ಒಳಗಾದ ನಂತರ, ಡಿಸಿಎಂ ಜೊತೆಗಿನ ಹರೀಶ್ ಫೋಟೋಗಳು ವೈರಲ್ ಆಗಿದೆ. ಹಾಗಾಗಿ, ಪಟ್ವಾರಿ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಉಪ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.
ಕಾಂಗ್ರೆಸ್ ನಾಯಕರ ಆರೋಪಗಳನ್ನು ತಳ್ಳಿ ಹಾಕಿರುವ ಜಗದೀಶ್ ದೇವದಾ, “ಹಲವು ಜನರು ಬಂದು ಸಾರ್ವಜನಿಕ ಮತ್ತು ರಾಜಕೀಯ ಜೀವನದಲ್ಲಿ ಇರುವ ವ್ಯಕ್ತಿಗಳೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. ಹಾಗೆಯೇ ಆತನೂ ನನ್ನ ಜೊತೆ ಫೋಟೊ ತೆಗೆಸಿಕೊಂಡಿರಬಹುದು. ಹಾಗಂತ, ನನಗೆ ಆತ ಆಪ್ತ ಎಂದಲ್ಲ. ಅಂತಹ ಕ್ರಿಮಿನಲ್‌ಗಳೊಂದಿಗೆ ನನಗೋ, ಬಿಜೆಪಿಗೋ ಯಾವುದೇ ಸಂಬಂಧವಿಲ್ಲ” ಎಂದಿದ್ದಾರೆ.
ಇದನ್ನೂ ಓದಿ : ರೈಲು ಅಪಘಾತ | ‘ಇನ್ನೆಷ್ಟು ಕುಟುಂಬಗಳು ಬಲಿಯಾಗಬೇಕು?’: ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ


