ಮಧ್ಯಪ್ರದೇಶದಲ್ಲಿ ವಿಧಾನಸಭಾ ಅಧಿವೇಶವನ್ನು 10ದಿನಗಳ ಕಾಲ ಮುಂದೂಡಿದ ಹಿನ್ನೆಲೆಯಲ್ಲಿ ಬಹುಮತ ಸಾಬೀತು ಪರೀಕ್ಷೆ ನಡೆಯದೇ ಇರುವುದರಿಂದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಸೇರಿದಂತೆ 10 ಬಿಜೆಪಿ ಶಾಸಕರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ. ಈ ಕೂಡಲೇ ಕಮಲ್ ನಾಥ್ ನೇತೃತ್ವದ ಸರ್ಕಾರ ಬಹುಮತ ಸಾಬೀತುಪಡಿಸುವಂತೆ ಮನವಿ ಮಾಡಿದ್ದಾರೆ.
ತಮ್ಮ ಅರ್ಜಿಯಲ್ಲಿ, ಆಡಳಿತಾರೂಢ ಕಾಂಗ್ರೆಸ್‌ನ 22 ಶಾಸಕರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ, ಇದರಿಂದಾಗಿ ಮಧ್ಯಪ್ರದೇಶ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಸೋಮವಾರವೇ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಆದೇಶಿಸಿದ್ದಾರೆ. ಆದರೂ ಮಾರ್ಚ್ 16ರ ವಿಧಾನಸಭೆಯ ಕಲಾಪದಲ್ಲಿ ಇದನ್ನು ಸೇರಿಸಲಾಗಿಲ್ಲ ಮತ್ತು ನಿರ್ದೇಶನವನ್ನು ಉದ್ದೇಶಪೂರ್ವಕವಾಗಿ ಧಿಕ್ಕರಿಸಲಾಗಿದೆ ಎಂದು ದೂರಿದ್ದಾರೆ.
ಈ ವಿಷಯವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಆಲಿಸುವ ಸಾಧ್ಯತೆ ಇದೆ.
ಬಜೆಟ್ ಅಧಿವೇಶನದ ಆರಂಭಕ್ಕಾಗಿ ಸೋಮವಾರ ಬೆಳಿಗ್ಗೆ ಸಭೆ ಸೇರಿದ್ದ ಅಧಿವೇಶನವನ್ನು ರಾಜ್ಯಪಾಲ ಲಾಲ್ಜಿ ಟಂಡನ್ ಅವರ ಭಾಷಣದ ನಂತರ ಮಾರ್ಚ್ 26 ರವರೆಗೆ ಮುಂದೂಡಲಾಯಿತು. “ಎಲ್ಲರೂ ಸಂವಿಧಾನದಡಿಯಲ್ಲಿ ನಿಯಮಗಳನ್ನು ಪಾಲಿಸಬೇಕು ಇದರಿಂದ ಮಧ್ಯಪ್ರದೇಶದ ಘನತೆ ಕಾಪಾಡುತ್ತದೆ.” ಎಂದು ತಮ್ಮ ಭಾಷಣದಲ್ಲಿ ರಾಜ್ಯಪಾಲರು ಸದಸ್ಯರಿಗೆ ಮನವಿ ಮಾಡಿದರು.
ಬಿಜೆಪಿ ಸದಸ್ಯರ ಮೂಲಕ ಕಳುಹಿಸಲಾದ 22 ಕಾಂಗ್ರೆಸ್ ಶಾಸಕರ ರಾಜೀನಾಮೆಯಲ್ಲಿ ಆರು ಸಚಿವರ ರಾಜೀನಾಮೆ ಮಾತ್ರ ಈವರೆಗೆ ಅಂಗೀಕರಿಸಲ್ಪಟ್ಟಿದೆ. ಬಹುಮತ ಸಾಬೀತಿಗೆ ಆದೇಶಿಸಲು ಸ್ಪೀಕರ್ ಪ್ರಜಾಪತಿ ಒಪ್ಪಿಲ್ಲ.


