ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಪೊಲೀಸರು ನಾಲ್ವರು ದಲಿತ ಯುವಕರನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟುಕೊಂಡು ಕಸ್ಟಡಿಯಲ್ಲಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಳ್ಳತನ ಪ್ರಕರಣದಲ್ಲಿ ತಪ್ಪೊಪ್ಪಿಗೆ ನೀಡಲು ತಮ್ಮನ್ನು ವಿವಸ್ತ್ರಗೊಳಿಸಿ, ನಾಲ್ಕು ದಿನಗಳ ಕಾಲ ಥಳಿಸಿ, ಖಾಸಗಿ ಭಾಗಗಳಿಗೆ ಮೆಣಸಿನ ಪುಡಿ ಹಾಕಲಾಗಿದೆ ಎಂದು ಯುವಕರು ಆರೋಪಿಸಿದ್ದಾರೆ.
ಕಂಜದ್‌ಪುರ ಧರ್ಮಪುರ ಪ್ರದೇಶದ ನಿವಾಸಿಗಳಾದ ಸಂತ್ರಸ್ತರು, “ಜುಲೈ 15 ರಂದು ಗೃಹಪ್ರವೇಶ ಸಮಾರಂಭದಿಂದ ಹಿಂತಿರುಗುತ್ತಿದ್ದಾಗ ರಸ್ತೆಬದಿಯಲ್ಲಿ ಮೂತ್ರ ವಿಸರ್ಜಿಸಲು ನಿಂತಿದ್ದೆವು, ಪೊಲೀಸರು ಕಾರಣವಿಲ್ಲದೆ ನಮ್ಮನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಪೊಲೀಸ್ ವಾಹನವು ನಮ್ಮನ್ನು ಕರೆದುಕೊಂಡು ಹೋಯಿತು. ವಿಕಲಚೇತನ ಯುವಕನೊಬ್ಬನನ್ನು ಬಿಡುಗಡೆ ಮಾಡಲಾಯಿತು. ಆದರೆ, ಉಳಿದ ನಾಲ್ವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ತಲೆಕೆಳಗಾಗಿ ನೇತುಹಾಕಿ, ಬೆಲ್ಟ್‌ಗಳಿಂದ ಹೊಡೆದು ಚಿತ್ರಹಿಂಸೆ ನೀಡಿದರು ಎಂದು ಮಾಹಿತಿ ನೀಡಿದ್ದಾರೆ.
ಟ್ರಾನ್ಸ್‌ಫಾರ್ಮರ್ ಆಯಿಲ್ ಕದ್ದಿದ್ದಕ್ಕಾಗಿ ಐದು ವ್ಯಕ್ತಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಈ ಹಿಂದೆ ಹೇಳಿಕೊಂಡಿದ್ದರು.
ಈ ಘಟನೆಯು ಭೀಮ್ ಆರ್ಮಿ ಕಾರ್ಯಕರ್ತರು ಮತ್ತು ಸಂತ್ರಸ್ತರ ಕುಟುಂಬಗಳಿಂದ ಪ್ರತಿಭಟನೆಗೆ ಕಾರಣವಾಯಿತು. ಅವರು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಮತ್ತು ಆರೋಪಿ ಪೊಲೀಸರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಎಸ್‌ಪಿ ಕಚೇರಿಗೆ ಮೆರವಣಿಗೆ ನಡೆಸಿದರು.
ನಂತರ, ಡಿಐಜಿ ಲಲಿತ್ ಶಕ್ಯವರ್ ಸ್ಥಳಕ್ಕೆ ಭೇಟಿ ನೀಡಿ ವೈದ್ಯಕೀಯ ಪರೀಕ್ಷೆ ನಡೆಸಿ ತನಿಖೆಯ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸಂತ್ರಸ್ತರಲ್ಲಿ ಮೂವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
“ಈ ವಿಷಯದ ಬಗ್ಗೆ ತನಿಖೆ ನಡೆಸಲು ನಾವು ಹಿರಿಯ ಅಧಿಕಾರಿಯನ್ನು ಕೇಳಿದ್ದೇವೆ. ಪೊಲೀಸ್ ಠಾಣೆಯ ಒಳಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ” ಎಂದು ಛತ್ತರ್‌ಪುರ ಎಸ್‌ಪಿ ಆಗಮ್ ಜೈನ್ ಹೇಳಿದರು.
ಬಂಧಿತ ಐವರು ಯುವಕರಲ್ಲಿ ಓರ್ವ ಕಾಣೆಯಾಗಿದ್ದಾನೆ, ಆತ ಕಸ್ಟಡಿಯಲ್ಲಿ ಸಾವನ್ನಪ್ಪಿರಬಹುದು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರತಿಭಟನೆ ಮುಂದುವರಿದರೆ ಪೊಲೀಸರು ಅವರನ್ನು ಬಂಧಿಸುವುದಾಗಿ ಮತ್ತು ಸರ್ಕಾರಿ ಭೂಮಿಯಿಂದ ಹೊರಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ತನ ಮಾವ ಆರೋಪಿಸಿದ್ದಾರೆ.
ಉತ್ತರ ಪ್ರದೇಶ| ದಲಿತ ಯುವಕನ ದೇವಸ್ಥಾನ ಪ್ರವೇಶಕ್ಕೆ ಅಡ್ಡಿಪಡಿಸಿದ ಅರ್ಚಕ


