ಬುಡಕಟ್ಟು ಜನಾಂಗದವರು ಹಿಂದೂಗಳಲ್ಲ ಎಂದು ಮಧ್ಯಪ್ರದೇಶದ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಉಮಾಂಗ್ ಸಿಂಘರ್ ಅವರು ನೀಡಿರುವ ಹೇಳಿಕೆ ರಾಜಕೀಯ ಬಿರುಗಾಳಿ ಹುಟ್ಟುಹಾಕಿದೆ. ಅವರ ಮಾತಿಗೆ ಆಡಳಿತಾರೂಢ ಬಿಜೆಪಿ ಮತ್ತು ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಂದ ವಿರೋಧ ವ್ಯಕ್ತವಾಗಿದೆ.
ಸೆಪ್ಟೆಂಬರ್ 4 ರ ಗುರುವಾರ ಚಿಂದ್ವಾರದಲ್ಲಿ ನಡೆದ ಬುಡಕಟ್ಟು ಅಭಿವೃದ್ಧಿ ಮಂಡಳಿಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ, “ನಾವು ಆದಿವಾಸಿಗಳು, ಹಿಂದೂಗಳಲ್ಲ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. ನಾನು ಇದನ್ನು ಹಲವು ವರ್ಷಗಳಿಂದ ಹೇಳುತ್ತಿದ್ದೇನೆ. ಉಳಿದಿದ್ದ ಆಹಾರವನ್ನು ಭಗವಾನ್ ರಾಮನಿಗೆ ತಿನ್ನಿಸಿದವರು ಶಬರಿ; ಆಕೆ ಕೂಡ ಆದಿವಾಸಿ” ಎಂದಿದ್ದರು.
ವಿವಾದದ ಬಳಿಕ ಸ್ಪಷ್ಟನೆ ನೀಡಿರುವ ಅವರು, ತಮ್ಮ ಹೇಳಿಕೆಗಳು ಯಾವುದೇ ನಂಬಿಕೆಯನ್ನು ಅವಮಾನಿಸುವ ಗುರಿಯನ್ನು ಹೊಂದಿಲ್ಲ ಎಂದಿದ್ದಾರೆ. ಬುಡಕಟ್ಟು ಸಮುದಾಯದ ಸಂಪ್ರದಾಯಗಳು ಮತ್ತು ಪರಂಪರೆಯು ಮನ್ನಣೆಗೆ ಅರ್ಹವಾಗಿದೆ ಎಂದು ಒತ್ತಿ ಹೇಳಿದರು.
“ನಾವು ಯಾವುದೇ ಧರ್ಮವನ್ನು ಅಗೌರವಿಸುವುದಿಲ್ಲ. ಆದರೆ ನಮ್ಮ ಸಮುದಾಯ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯನ್ನು ಒಪ್ಪಿಕೊಳ್ಳಬೇಕು. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಬುಡಕಟ್ಟು ಜನಾಂಗದವರು ಗೌರವಕ್ಕೆ ಅರ್ಹರು” ಎಂದು ಮಧ್ಯಪ್ರದೇಶದ ಅತಿದೊಡ್ಡ ಬುಡಕಟ್ಟು ಗುಂಪಾದ ಭಿಲ್ ಸಮುದಾಯದ ನಾಲ್ಕು ಬಾರಿ ಶಾಸಕರಾಗಿರುವ ಅವರು ಹೇಳಿದರು.
ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಕಾಂಗ್ರೆಸ್ ಹಿಂದೂ ವಿರೋಧಿ ವಾಕ್ಚಾತುರ್ಯದಲ್ಲಿ ತೊಡಗಿದೆ ಎಂದು ಆರೋಪಿಸಿ ಪ್ರತಿಕ್ರಿಯಿಸಿದರು.
ವೀಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಕಾಂಗ್ರೆಸ್ ಯಾವಾಗಲೂ ಹಿಂದೂಗಳು ಮತ್ತು ಹಿಂದುತ್ವದ ವಿರುದ್ಧ ಕೆಲಸ ಮಾಡುವುದು ದುರದೃಷ್ಟಕರ; ಇದಕ್ಕಾಗಿ ಅವರು ನಾಚಿಕೆಪಡಬೇಕು. ಹಿಂದುತ್ವವನ್ನು ಪ್ರಶ್ನಿಸುವ ನಾಯಕರನ್ನು ಜನರು ಕ್ಷಮಿಸುವುದಿಲ್ಲ, ಕಾಂಗ್ರೆಸ್ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.
ಟೀಕೆಗಳನ್ನು ಎದುರಿಸುತ್ತಿರುವ ಸಿಂಘರ್, ಬಿಜೆಪಿ ಮತ್ತು ಆರ್‌ಎಸ್‌ಎಸ್ ಬುಡಕಟ್ಟು ಗುರುತನ್ನು ಹಿಂದೂ ಧರ್ಮದ ಅಡಿಯಲ್ಲಿ ಮುಳುಗಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. “ಬುಡಕಟ್ಟು ಜನರು ಈ ದೇಶದ ಮೂಲ ನಿವಾಸಿಗಳು. ಬಿಜೆಪಿ ಮತ್ತು ಆರ್‌ಎಸ್‌ಎಸ್ ನಮ್ಮನ್ನು ಪ್ರಕೃತಿಯನ್ನು ಪೂಜಿಸುವುದನ್ನು ತಡೆಯಲು ಏಕೆ ಬಯಸುತ್ತವೆ? ನಾನು ಹಿಂದೂ ಧರ್ಮವನ್ನು ಗೌರವಿಸುತ್ತೇನೆ, ಆದರೆ ಬುಡಕಟ್ಟು ಜನಾಂಗದ ವಿಷಯಕ್ಕೆ ಬಂದಾಗ, ಅವರು ತಮ್ಮ ಕಾರ್ಯಸೂಚಿಯನ್ನು ಹೇರಲು ಬಯಸುತ್ತಾರೆ” ಎಂದು ಅವರು ಆರೋಪಿಸಿದರು.
ಬುಡಕಟ್ಟು ಸಬಲೀಕರಣಕ್ಕೆ ಆಡಳಿತ ಪಕ್ಷದ ಬದ್ಧತೆಯನ್ನು ಮತ್ತಷ್ಟು ಪ್ರಶ್ನಿಸಿದ ಅವರು, “ಯಾವುದೇ ಬುಡಕಟ್ಟು ಜನಾಂಗದವರನ್ನು ಆರ್‌ಎಸ್‌ಎಸ್ ಮುಖ್ಯಸ್ಥರನ್ನಾಗಿ ಏಕೆ ಮಾಡಿಲ್ಲ? ಬಿಜೆಪಿ ನಮ್ಮ ಮತಗಳನ್ನು ಬಯಸುತ್ತದೆ. ಆದರೆ ನಮ್ಮ ಧರ್ಮ, ಸಂಸ್ಕೃತಿ ಮತ್ತು ಗುರುತಿನ ವಿಷಯಕ್ಕೆ ಬಂದಾಗ, ಅವರು ಅದನ್ನು ಅಳಿಸಲು ಬಯಸುತ್ತಾರೆ” ಎಂದರು.
ಮಧ್ಯಪ್ರದೇಶ ರಾಜಕೀಯದಲ್ಲಿ ಪ್ರಭಾವಿ ಭಿಲ್ ನಾಯಕರಾದ ಸಿಂಗರ್, ಮಧ್ಯಪ್ರದೇಶದ ಒಟ್ಟು ಬುಡಕಟ್ಟು ಜನಸಂಖ್ಯೆಯ ಶೇಕಡಾ 39 ರಷ್ಟಿರುವ ಸಮುದಾಯದ ಮೇಲೆ ಗಮನಾರ್ಹ ಪ್ರಭಾವ ಬೀರುತ್ತಾರೆ. 2011 ರ ಜನಗಣತಿಯ ಪ್ರಕಾರ ರಾಜ್ಯದ ಜನಸಂಖ್ಯೆಯ ಶೇಕಡಾ 21 ಕ್ಕಿಂತ ಹೆಚ್ಚು, ಅಂದರೆ 1.53 ಕೋಟಿ ಬುಡಕಟ್ಟು ಜನಾಂಗದವರೊಂದಿಗೆ, ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ಬುಡಕಟ್ಟು ಜನಸಂಖ್ಯೆಯನ್ನು ಹೊಂದಿದೆ.
ಅದರ 230 ವಿಧಾನಸಭಾ ಸ್ಥಾನಗಳಲ್ಲಿ 47 ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿವೆ, ಇದು ಬುಡಕಟ್ಟು ಗುರುತಿನ ರಾಜಕೀಯವನ್ನು ಚುನಾವಣೆಗೆ ಮುನ್ನ ಪ್ರಮುಖ ಯುದ್ಧಭೂಮಿಯನ್ನಾಗಿ ಮಾಡುತ್ತದೆ.
ದಲಿತ ಕುಟುಂಬ ಇಸ್ಲಾಂಗೆ ಮತಾಂತರ ಆರೋಪ; ಉದ್ವಿಗ್ನತೆಗೆ ಕಾರಣವಾದ ಹಿಂದುತ್ವ ಸಂಘಟನೆಗಳ ಪ್ರತಿಭಟನೆ


