18 ವರ್ಷದ ಯುವಕನನ್ನು ಬಸ್ಸಿನಿಂದ ಅಪಹರಿಸಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸುಳ್ಳು ಆರೋಪ ಹೊರಿಸಿದ ಆರೋಪದ ಮೇಲೆ ಮಧ್ಯಪ್ರದೇಶದ ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ತನಿಖೆಯ ಸಮಗ್ರತೆ ಮತ್ತು ಕಾನೂನುಬದ್ಧತೆಯನ್ನು ಪ್ರಶ್ನಿಸಿದ ಇಂದೋರ್ ಹೈಕೋರ್ಟ್ ಸರ್ಕಾರಕ್ಕೆ ಕಠಿಣ ಛೀಮಾರಿ ಹಾಕಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಈ ಪ್ರಕರಣವು ಆಗಸ್ಟ್ 29, 2025 ರಂದು ಜೋಧ್‌ಪುರ ನಿವಾಸಿ ಸೋಹನ್‌ಲಾಲ್ ವಿರುದ್ಧ 2.7 ಕೆಜಿ ಅಫೀಮು ಹೊಂದಿದ್ದ ಆರೋಪದ ಮೇಲೆ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಯಿತು.
ಮಲ್ಹರ್‌ಗಢ ಪೊಲೀಸರು ಸಂಜೆ 5 ಗಂಟೆಗೆ ಆತನ ಬಂಧನ ಮಾಡಿದರು. ಸ್ಥಳೀಯ ಸ್ಮಶಾನದ ಎದುರಿಗಿನ ಮೈದಾನದ ಬಳಿ ಆತನನ್ನು ಬಂಧಿಸಿದ್ದೇವೆ ಎಂದು ಹೇಳಿಕೊಂಡರು. ಆದರೆ, ಸೋಹನ್‌ಲಾಲ್ ಅವರ ಕುಟುಂಬವು ಬಸ್‌ನಿಂದ ಯುವಕ ಇಳಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪ್ರದರ್ಶಿಸಿತು. ಪೊಲೀಸ್ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಸಮಯಕ್ಕಿಂತ ಐದು ಗಂಟೆಗಳ ಮೊದಲು ಬೆಳಿಗ್ಗೆ 11.39 ಕ್ಕೆ ಸಾಮಾನ್ಯ ಉಡುಪಿನಲ್ಲಿರುವ ವ್ಯಕ್ತಿಗಳು ಆತನನ್ನು ಬಲವಂತವಾಗಿ ಕರೆದುಕೊಂಡು ಹೋಗುವುದು ವಿಡಿಯೊದಲ್ಲಿ ಸೆರೆಯಾಗಿತ್ತು. ದೃಶ್ಯಗಳಲ್ಲಿ ತೋರಿಸಲಾದ ಸ್ಥಳವು ಪೊಲೀಸರು ಉಲ್ಲೇಖಿಸಿದ ಸ್ಥಳದಿಂದ ಸುಮಾರು 35 ಕಿ.ಮೀ ದೂರದಲ್ಲಿದೆ.
ಹೈಕೋರ್ಟ್‌ಗೆ ಸಲ್ಲಿಸಿದ ದೃಶ್ಯಗಳಲ್ಲಿ, ಮಲ್ಹರ್‌ಗಢ ಪೊಲೀಸ್ ಕಾನ್‌ಸ್ಟೆಬಲ್‌ಗಳು ಎಂದು ಗುರುತಿಸಲಾದ ಗುಂಪು ಸೋಹನ್‌ಲಾಲ್ ಅವರನ್ನು ಬಸ್‌ನಿಂದ ಕೆಳಗಿಳಿಸುತ್ತಿರುವುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ.
ಇದರ ಹೊರತಾಗಿಯೂ, ತನಿಖಾಧಿಕಾರಿ ಎಸ್‌ಐ ಸಂಜಯ್ ಪ್ರತಾಪ್ ಈ ಹಿಂದೆ ನ್ಯಾಯಾಲಯಕ್ಕೆ ವಿಡಿಯೋದಲ್ಲಿರುವ ವ್ಯಕ್ತಿಗಳು “ಮಲ್ಹರ್‌ಗಢ ಪೊಲೀಸರಲ್ಲ” ಎಂದು ಹೇಳಿದ್ದರು. ಡಿಸೆಂಬರ್ 9 ರಂದು ಸಮನ್ಸ್ ಜಾರಿಯಾದ ಮಂದ್‌ಸೌರ್ ಎಸ್‌ಪಿ ವಿನೋದ್ ಕುಮಾರ್ ಮೀನಾ, ವೀಡಿಯೊದಲ್ಲಿ ಕಂಡುಬರುವ ಅಧಿಕಾರಿಗಳನ್ನು ವಾಸ್ತವವಾಗಿ ಮಲ್ಹರ್‌ಗಢ ಠಾಣೆಯಲ್ಲಿ ನಿಯೋಜಿಸಲಾಗಿದೆ ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡಾಗ ಈ ಹೇಳಿಕೆ ಬಯಲಾಯಿತು.
ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸರು ಕಾನೂನು ವಿಧಾನಗಳನ್ನು ಅನುಸರಿಸಲು ವಿಫಲರಾಗಿದ್ದಾರೆ ಎಂದು ಎಸ್‌ಪಿ ಒಪ್ಪಿಕೊಂಡರು. ನಂತರ ಅವರು ಆಗಿನ ಟಿಐ ರಾಜೇಂದ್ರ ಪನ್ವರ್, ಎಸ್‌ಐ ಸಂಜಯ್ ಪ್ರತಾಪ್, ಎಸ್‌ಐ ಸಾಜಿದ್ ಮನ್ಸೂರಿ ಮತ್ತು ಕಾನ್‌ಸ್ಟೆಬಲ್‌ಗಳಾದ ನರೇಂದ್ರ ಸಿಂಗ್, ಜಿತೇಂದ್ರ ಸಿಂಗ್ ಮತ್ತು ದಿಲೀಪ್ ಜಾಟ್ ಸೇರಿದಂತೆ ಆರು ಅಧಿಕಾರಿಗಳನ್ನು ಅಮಾನತುಗೊಳಿಸಿ, ಹೆಚ್ಚುವರಿ ಎಸ್‌ಪಿ ನೇತೃತ್ವದಲ್ಲಿ ಇಲಾಖಾ ತನಿಖೆಗೆ ಆದೇಶಿಸಿದರು.
ಡಿಸೆಂಬರ್ 5 ರಂದು ಹೈಕೋರ್ಟ್, ಸೋಹನ್‌ಲಾಲ್ ಅವರನ್ನು ನಿರಪರಾಧಿ ಎಂದು ಘೋಷಿಸದಿದ್ದರೂ, ಪೊಲೀಸ್ ಹೇಳಿಕೆಯಲ್ಲಿನ ತೊಂದರೆದಾಯಕ ವ್ಯತ್ಯಾಸಗಳನ್ನು ಗಮನಿಸಿ, ಹೈಕೋರ್ಟ್ ಅವರನ್ನು ಜಾಮೀನು ನೀಡಿತ್ತು. ಆದರೂ ನ್ಯಾಯಾಲಯವು ಅವರನ್ನು ಇನ್ನೂ ನಿರಪರಾಧಿ ಎಂದು ಘೋಷಿಸಿಲ್ಲ, ತನ್ನ ಅಂತಿಮ ತೀರ್ಪನ್ನು ಕಾಯ್ದಿರಿಸಿದೆ.
ಸೋಹನ್‌ಲಾಲ್ ಅವರ ಸಹೋದರ ಕರ್ತಾರಾಮ್ ವರದಿಗಾರರೊಂದಿಗೆ ಮಾತನಾಡುತ್ತಾ, ಬಸ್ ಮಾಲೀಕರು ಆರಂಭದಲ್ಲಿ ಬಸ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಲು ನಿರಾಕರಿಸಿತು. ನಮ್ಮ ಕುಟುಂಬವು ಬಸ್‌ನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯಲು ದಿನಗಟ್ಟಲೆ ಕಷ್ಟಪಡಬೇಕಾಯಿತು ಎಂದು ಹೇಳಿದರು. “ಅವರು ಯುವಕನನ್ನು ಬಸ್‌ನಿಂದ ಅಪಹರಿಸಿ ನಂತರ ಅಫೀಮು ಹೊಂದಿದ್ದ ಆರೋಪಿಸಿದರು. ಹೈಕೋರ್ಟ್‌ನ ಹಸ್ತಕ್ಷೇಪವೇ ಸತ್ಯ ಹೊರಬರಲು ಏಕೈಕ ಕಾರಣ ಎಂದು ಹೇಳಿದರು.
ತನಿಖಾ ಅಧಿಕಾರಿಯ ಸಾಕ್ಷ್ಯದಲ್ಲಿನ ವಿರೋಧಾಭಾಸಗಳನ್ನು ಗಮನಿಸಿ, “ಅಸಂವಿಧಾನಿಕ ಮತ್ತು ಕಾನೂನುಬಾಹಿರ ನಡವಳಿಕೆ”ಗಾಗಿ ನ್ಯಾಯಾಲಯ ಪೊಲೀಸರನ್ನು ಖಂಡಿಸಿದೆ ಎಂದು ಡಿಫೆನ್ಸ್ ವಕೀಲ ಹಿಮಾಂಶು ಠಾಕೂರ್ ಹೇಳಿದರು. ಅಮಾನತುಗೊಂಡ ಅಧಿಕಾರಿಗಳ ಪಟ್ಟಿಯನ್ನು ಎಸ್‌ಪಿ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇಲಾಖಾ ವಿಚಾರಣೆಗಳು ಪ್ರಾರಂಭವಾಗಿವೆ ಎಂದು ಅವರು ಖಚಿತಪಡಿಸಿದರು.


