ದಲಿತ ವ್ಯಕ್ತಿಯೊಬ್ಬರ ಕೈಯಿಂದ ‘ಪ್ರಸಾದ’ ಸೇವಿಸಿದ್ದಕ್ಕಾಗಿ ಸುಮಾರು 20 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕರ ವಿಧಿಸಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಬಹಿಷ್ಕಾರ ಆದೇಶ ನೀಡಿದ್ದು ಸರಪಂಚರೇ ಎಂದು ಆರೋಪಿಸಿ ಕುಟುಂಬಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆಗಮ್ ಜೈನ್ ಅವರನ್ನು ಸಂಪರ್ಕಿಸಿದ್ದಾರೆ. ಎರಡೂ ಕಡೆಯಿಂದ ದೂರುಗಳು ಬಂದಿವೆ ಎಂದು ಎಸ್‌ಪಿ ಹೇಳಿದ್ದು, “ನಾವು ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ. ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ” ಎಂದು ಅವರು ಹೇಳಿದರು.
ಜಿಲ್ಲಾ ಕೇಂದ್ರದಿಂದ ಸುಮಾರು 20 ಕಿ.ಮೀ ಮತ್ತು ಭೋಪಾಲ್‌ನಿಂದ 320 ಕಿ.ಮೀ ದೂರದಲ್ಲಿರುವ ಅತ್ರಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಗಸ್ಟ್ 20, 2024 ರಂದು, ತಲೈಯಾ ಹನುಮಾನ್ ದೇವಸ್ಥಾನದಲ್ಲಿ ಪ್ರಸಾದ ವಿತರಿಸುವ ಜಗತ್ ಅಹಿರ್ವಾರ್, ತಮ್ಮ ಆಸೆ ಈಡೇರಿದ ನಂತರ ‘ಮಗಜ್ ಲಡ್ಡು’ದ ವಿಶೇಷ ಪೂಜೆ ಅರ್ಪಿಸಿದರು.
ಈ ಪ್ರಸಾದವನ್ನು ಬ್ರಾಹ್ಮಣರು ಮತ್ತು ಇತರ ಮೇಲ್ಜಾತಿಗಳು ಸೇರಿದಂತೆ ವಿವಿಧ ಜಾತಿಗಳ 20 ಕ್ಕೂ ಹೆಚ್ಚು ಗ್ರಾಮಸ್ಥರೊಂದಿಗೆ ಹಂಚಿಕೊಳ್ಳಲಾಯಿತು. ಮೇಲ್ಜಾತಿಯ ವ್ಯಕ್ತಿಗಳು ದಲಿತರಿಂದ ಪ್ರಸಾದ ಸ್ವೀಕರಿಸಿದ್ದಾರೆ ಎಂಬ ಸುದ್ದಿ ಹರಡಿದ ನಂತರ, ಸರಪಂಚರು ಈ ಎಲ್ಲ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರವನ್ನು ಆದೇಶಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತರ ಪ್ರಕಾರ, ನಮ್ಮನ್ನು ಅಂದಿನಿಂದ ಮದುವೆಗಳು ಮತ್ತು ಇತರ ಸಮಾರಂಭಗಳಂತಹ ಸಾಮಾಜಿಕ ಕಾರ್ಯಕ್ರಮಗಳಿಂದ ಹೊರಗಿಡಲಾಗಿದೆ. ನಾವು ಜಿಲ್ಲಾ ಅಧಿಕಾರಿಗಳನ್ನು ಸಂಪರ್ಕಿಸಿ ಎಸ್‌ಪಿಗೆ ದೂರು ನೀಡಿದ್ದೆವೆ ಎಂದು ಹೇಳಿಕೊಂಡಿದ್ದಾರೆ. ಸ್ಥಳೀಯ ಅಧಿಕಾರಿಗಳ ಇತ್ತೀಚಿನ ಮಧ್ಯಸ್ಥಿಕೆಯ ಹೊರತಾಗಿಯೂ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.
ಸರ್ಪಂಚ್ ಮತ್ತು ಮಾಜಿ ಸರ್ಪಂಚ್ ನಡುವಿನ ಜಗಳವೂ ಸಂಘರ್ಷದಲ್ಲಿ ಪಾತ್ರ ವಹಿಸಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.
ಇದನ್ನೂ ಓದಿ; ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಮತ್ತೆ 15 ಮಂದಿ ಬಂಧನ


