ಜೇಬುಗಳ್ಳರು ಎಂದು ಶಂಕಿಸಲಾದ ಮೂವರು ಅಪ್ರಾಪ್ತ ಬಾಲಕರ ಕೈಕಟ್ಟಿಹಾಕಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಹರ್ಪಾಲ್‌ಪುರದಲ್ಲಿ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತ ವಯಸ್ಕರ ಮೇಲಿನ ದೌರ್ಜನ್ಯದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವೀಡಿಯೊದಲ್ಲಿ, ಮೂವರು ಅಪ್ರಾಪ್ತರನ್ನು ಒಟ್ಟಿಗೆ ಹಗ್ಗದಿಂದ ಕಟ್ಟಿ ಮೆರವಣಿಗೆ ಮಾಡುವುದನ್ನು ಕಾಣಬಹುದು. ಜಿಲ್ಲಾ ಕೇಂದ್ರದಿಂದ ಸುಮಾರು 55 ಕಿಲೋಮೀಟರ್ ದೂರದಲ್ಲಿರುವ ಓಲ್ಡ್ ಗಲ್ಲಾ ಮಂಡಿಯಲ್ಲಿ ಈ ಘಟನೆ ನಡೆದಿದೆ.
“ಧರ್ಮೇಂದ್ರ ರಜಪೂತ್ ಎಂಬುವವರ ದೂರಿನ ಮೇರೆಗೆ ಮೂವರು ಅಪ್ರಾಪ್ತರ ವಿರುದ್ಧ ಕಳ್ಳತನದ ಪ್ರಕರಣವನ್ನು ದಾಖಲಿಸಲಾಗಿದೆ. ಅವರನ್ನು ಕಟ್ಟಿಹಾಕಿ ಮೆರವಣಿಗೆ ಮಾಡುತ್ತಿರುವ ವೈರಲ್ ವೀಡಿಯೊವನ್ನು ಸಹ ತನಿಖೆ ನಡೆಸಲಾಗುತ್ತಿದೆ” ಎಂದು ಹರ್ಪಾಲ್‌ಪುರ ಪೊಲೀಸ್ ಠಾಣೆಯ ಉಸ್ತುವಾರಿ ಪುಷ್ಪಕ್ ಶರ್ಮಾ ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ, ಈ ಪ್ರದೇಶದಲ್ಲಿ ಇತ್ತೀಚೆಗೆ ಮೊಬೈಲ್ ಫೋನ್ ಸೇರಿದಂತೆ ಜೇಬುಗಳ್ಳತನ ಮತ್ತು ಕಳ್ಳತನಗಳು ನಡೆಯುತ್ತಿವೆ. ಆದ್ದರಿಂದ, ಅಮುಮಾನ ಬಂದು ಇಂದು ಬೆಳಗ್ಗೆ ಮೂವರು ಅಪ್ರಾಪ್ತರನ್ನು ಹಿಡಿದು ಕಟ್ಟಿಹಾಕಿ ಪೊಲೀಸ್ ಠಾಣೆವರೆಗೆ ಮೆರವಣಿಗೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ; ವಿಶ್ವಸಂಸ್ಥೆ ಶಾಂತಿಪಾಲಕರ ಮೇಲೆ ಇಸ್ರೇಲ್ ದಾಳಿ ಖಂಡಿಸುವ ಜಂಟಿ ಹೇಳಿಕೆ ಬೆಂಬಲಿಸಿದ ಭಾರತ


