ಭೋಪಾಲ್: ವೇಗವಾಗಿ ಬಂದ ಕಾರು ಜನರ ಮೇಲೆ ಹರಿದು ಹದಿಹರೆಯದ ಯುವಕ ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನ ದುರ್ಗಾ ಪೂಜೆಯಲ್ಲಿ ಶನಿವಾರ ನಡೆದಿದೆ.
ಈ ಘಟನೆಯ ವೀಡಿಯೋವನ್ನು, ಘಟನಾ ಸ್ಥಳದಲ್ಲಿದ್ದವರು ಹಂಚಿಕೊಂಡಿದ್ದು, ಕಾರು ಚಾಲಕ ಗುಂಪಿನ ಮೇಲೆ ಕಾರು ಚಲಾಯಿಸಿದ ಬಳಿಕ ಕಾರನ್ನು ಹಿಂದಕ್ಕೆ ಓಡಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. 16 ವರ್ಷದ ಹುಡುಗನು ಕಾರಿಗೆ ಸಿಲುಕಿ ಕಾರು ಆತನನ್ನು ಕೆಲವು ದೂರ ಎಳೆದೋಯ್ದಿದೆ. ಗಾಯಗೊಂಡ ಯುವಕ ಗಂಭೀರ ಸ್ಥಿತಿಯಲ್ಲಿದ್ದಾನೆ ಎಂದು ವರದಿಯಾಗಿದೆ.
ಭೋಪಾಲ್ ರೈಲ್ವೇ ನಿಲ್ದಾಣದ ಹೊರಗಿನ ರಸ್ತೆಯಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಅವರ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಹೇಳಿದೆ.
ಸಿಸಿಟಿವಿ ದೃಶ್ಯಾವಳಿ ಹಾಗೂ ಇತರ ಭಕ್ತಾದಿಗಳು ಸೆರೆ ಹಿಡಿದಿರುವ ದೃಶ್ಯಗಳ ಆಧಾರದಲ್ಲಿ ಆರೋಪಿಯನ್ನು ಹಿಡಿಯಲು ಯತ್ನಿಸಲಾಗುವುದು ಎಂದು ಭೋಪಾಲ್ ಡಿಐಜಿ ಇರ್ಷಾದ್ ವಾಲಿ ತಿಳಿಸಿದ್ದಾರೆ.
ಇದನ್ನೂ ಓದಿರಿ: ಲಖೀಂಪುರ್ ರೈತ ಹತ್ಯೆ; ಅಧಿಕಾರದ ಪರವಾಗಿ ನಿಂತ ಮಾಧ್ಯಮಗಳ ದುರುಳತನ
ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ಅವರು ಇದ್ದ ಕಾರು ಹರಿದ ಬಳಿಕ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಎಫ್‌ಐಆರ್ ದಾಖಲಾದ ನಂತರದಲ್ಲಿ ಜನರ ಗುಂಪಿನ ಮೇಲೆ ಕಾರು ಹತ್ತಿಸಿ ಕ್ರೌರ್ಯ ಮೆರೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಛತ್ತೀಸ್‌ಘಡದ ಜಶ್‌ಪುರ ಘಟನೆ
ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ದುರ್ಗಾದೇವಿಯ ವಿಗ್ರಹವನ್ನು ವಿಸರ್ಜಿಸಲು ತೆರಳುತ್ತಿದ್ದ ಭಕ್ತರ ಮೇಲೆ ವೇಗವಾಗಿ ಬಂದ ಕಾರು ಹರಿದು ನಾಲ್ವರು ಸಾವನ್ನಪ್ಪಿದ್ದರು. ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಗಾಯಗೊಂಡವರನ್ನು ಚಿಕಿತ್ಸೆಗಾಗಿ ಪಾತಲಗಾಂವ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಳೆ ಮುರಿತದಿಂದ ಗಂಭೀರವಾಗಿರುವವರನ್ನು ಎಕ್ಸ್‌ರೇಗಾಗಿ ಇತರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಬ್ಲಾಕ್ ಮೆಡಿಕಲ್ ಆಫೀಸರ್ ಜೇಮ್ಸ್ ಮಿಂಜ್ ಮಾಹಿತಿ ನೀಡಿದ್ದಾರೆ.
“ಜನರ ಸಾವಿಗೆ ಕಾರಣರಾದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. 21 ವರ್ಷದ ಬಬ್ಲು ವಿಶ್ವಕರ್ಮ ಮತ್ತು 26 ವರ್ಷದ ಶಿಶುಪಾಲ್ ಸಾಹು ಆರೋಪಿಗಳು, ಇಬ್ಬರೂ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ನಿವಾಸಿಗಳಾಗಿದ್ದು, ಛತ್ತೀಸ್‌ಗಢದ ಮೂಲಕ ಹಾದು ಹೋಗುತ್ತಿದ್ದರು” ಎಂದು ಜಶ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮಾಹಿತಿ ನೀಡಿದ್ದಾರೆ.
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸಂತಾಪ ಸೂಚಿಸಿದ್ದಾರೆ. “ಜಶ್‌ಪುರ ಘಟನೆ ಅತ್ಯಂತ ದುಃಖಕರ ಮತ್ತು ಹೃದಯ ವಿದ್ರಾವಕವಾಗಿದೆ. ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದ ಪೊಲೀಸರ ವಿರುದ್ಧವೂ ಕ್ರಮ ಕೈಗೊಂಡು ವಿಚಾರಣೆಗೆ ಆದೇಶಿಸಲಾಗಿದೆ. ಸಂತ್ರಸ್ತರಿಗೆ ನ್ಯಾಯ ಒದಗಿಸಲಾಗುವುದು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
“ಜಶ್‌ಪುರ ಘಟನೆ ಅತ್ಯಂತ ದುಃಖಕರ ಮತ್ತು ಹೃದಯ ವಿದ್ರಾವಕವಾಗಿದೆ. ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಲಾಯಿತು. ತಪ್ಪಿತಸ್ಥರೆಂದು ಕಂಡುಬಂದ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಪ್ರಥಮ ಕ್ರಮ ಕೈಗೊಳ್ಳಲಾಗಿದೆ. ವಿಚಾರಣೆಗೆ ಆದೇಶಿಸಲಾಗಿದೆ. ಯಾರನ್ನೂ ಬಿಡುವುದಿಲ್ಲ. ಎಲ್ಲರಿಗೂ ನ್ಯಾಯವನ್ನು ನೀಡಲಾಗುತ್ತದೆ. ಅಗಲಿದವರ ಆತ್ಮಕ್ಕೆ ದೇವರು ಶಾಂತಿಯನ್ನು ನೀಡಲಿ” ಎಂದು ಬಘೇಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿರಿ: ‘ಮುಖ್ಯಮಂತ್ರಿಯವರೇ ಮತೀಯ ಗೂಂಡಾಗಿರಿ ಸಮರ್ಥಿಸುವುದು ಅಪಾಯಕಾರಿ ಬೆಳವಣಿಗೆ’


