Homeಮುಖಪುಟ‘ಮುಖ್ಯಮಂತ್ರಿಯವರೇ ಮತೀಯ ಗೂಂಡಾಗಿರಿ ಸಮರ್ಥಿಸುವುದು ಅಪಾಯಕಾರಿ ಬೆಳವಣಿಗೆ’

‘ಮುಖ್ಯಮಂತ್ರಿಯವರೇ ಮತೀಯ ಗೂಂಡಾಗಿರಿ ಸಮರ್ಥಿಸುವುದು ಅಪಾಯಕಾರಿ ಬೆಳವಣಿಗೆ’

- Advertisement -
- Advertisement -

ಒಂದು ಪ್ರಶ್ನೆ ವಿಡಿಯೋ ಸರಣಿಯ ಮೂಲಕ ಪ್ರಚಲಿತ ವಿದ್ಯಮಾನಗಳ ಕುರಿತು ಮಾತನಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮತೀಯ ಗೂಂಡಾಗಿರಿ ವಿರುದ್ಧ ಧ್ವನಿ ಎತ್ತಿದ್ದಾರೆ. ಮುಖ್ಯಮಂತ್ರಿಯವರ ನಡೆಯನ್ನು ಖಂಡಿಸಿದ್ದಾರೆ.

ಈಗ ಬಿಡುಗಡೆಯಾಗಿರುವ ವಿಡಿಯೋದಲ್ಲಿ, “ಸಂವಿಧಾನಬದ್ಧ ಪ್ರಜಾಪ್ರಭುತ್ವದ ನೆರಳಲ್ಲಿ ನಾವೆಲ್ಲ ಸ್ವತಂತ್ರವಾಗಿ ಬದುಕುತ್ತಿದ್ದೇವೆ. ನಮ್ಮಿಷ್ಟದಂತೆ ಬದುಕುವ ಹಕ್ಕನ್ನು ಸಂವಿಧಾನ ನಮ್ಮೆಲ್ಲರಿಗೂ ನೀಡಿದೆ. ನಿಮ್ಮ ಬದುಕಿನ ಹಕ್ಕಿನ ಬಗ್ಗೆ ಮಾತನಾಡಲು ನಿಮ್ಮ ಮುಂದೆ ನಿಂತಿದ್ದೇನೆ” ಎಂದು ಅವರು ಮಾತು ಆರಂಭಿಸಿ ಮತೀಯ ಗೂಂಡಾಗಿರಿಯನ್ನು ಪ್ರಶ್ನಿಸಿದ್ದಾರೆ.

“ನೈತಿಕ ಪೊಲೀಸ್‌ಗಿರಿ (ಮತೀಯ ಗೂಂಡಾಗಿರಿ) ನಡೆಸಲು ಸಂವಿಧಾನದಲ್ಲಿ ಅವಕಾಶ ಇದೆಯಾ? -ಇದು ಈ ವಾರ ನಾನು ನಿಮ್ಮ ಮುಂದೆ ಇಡುತ್ತಿರುವ ಪ್ರಶ್ನೆ” ಎಂದಿದ್ದಾರೆ.

“ಜನರು ಬಿಜೆಪಿಯ ಸಿದ್ಧಾಂತದಂತೆಯೇ ಬದುಕಬೇಕೆಂದು ಸರ್ಕಾರ ಬಯಸುತ್ತಿದೆ. ಮಹಿಳೆಯರ ಹಕ್ಕನ್ನೇ ಕಿತ್ತಿಕೊಳ್ಳಲು ಪ್ರಯತ್ನಿಸುತ್ತಿದೆ. ಯುವಜನರನ್ನು ಹಿಂಸಾತ್ಮಕ ದಾರಿಗೆ ದೂಡಲಾಗುತ್ತಿದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾದ ಮುಖ್ಯಮಂತ್ರಿಯವರೇ ಮತೀಯ ಗೂಂಡಾಗಿರಿಯನ್ನು ಸಮರ್ಥಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ದ್ವೇಷವನ್ನು ಹರಡುವ ಕೆಲಸವನ್ನು ಮುಖ್ಯಮಂತ್ರಿಯವರು ಸಮರ್ಥಿಸಿಕೊಳ್ಳಬಾರದು. ಒಂದು ವೇಳೆ ಅವರು ಇದನ್ನು ಸಮರ್ಥಿಸಿಕೊಂಡರೆ, ನಾಳೆ ನೀವು ಯಾವ ಯಾವ ಬಟ್ಟೆ ಧರಿಸಬೇಕು, ಯಾವುದರಲ್ಲಿ ಕಾಫಿ ಕುಡಿಯಬೇಕು ಎಂಬುದನ್ನು ಬಿಜೆಪಿ ಸ್ನೇಹಿತರು ನಿರ್ಧಾರ ಮಾಡುತ್ತಾರೆ” ಎಂದು ಎಚ್ಚರಿಸಿರುವ ಅವರು, ಜನರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಕೋರಿದ್ದಾರೆ.

ಒಂದು ಪ್ರಶ್ನೆ ಕಾರ್ಯಕ್ರಮದ ಮೂಲಕ ಡಿ.ಕೆ.ಶಿವಕುಮಾರ್‌ ಈ ಹಿಂದೆಯೂ ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ.

ತಮ್ಮ ನಾಲ್ಕನೇ ಕಂತಿನಲ್ಲಿ ‘ಉದ್ಯೋಗ ಸೃಷ್ಟಿ’ಯ ಕುರಿತು ಮಾತನಾಡಿದ್ದರು. “ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಏಳು ವರ್ಷ ಆಯಿತು. ಹದಿನಾಲ್ಕು ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡಬೇಕಿತ್ತು. ನಾನು ನಿಮ್ಮಲ್ಲಿ ಸರ್ಕಾರದ ಉದ್ಯೋಗವನ್ನು ಕೊಡಿ ಎಂದು ಕೇಳುತ್ತಿಲ್ಲ. ಖಾಸಗಿ ಉದ್ಯೋಗಗಳನ್ನು ಸೃಷ್ಟಿ ಮಾಡುವ ಅವಕಾಶ ಸರ್ಕಾರಕ್ಕೆ ಇಲ್ಲವೇ?” ಎಂದು ಅವರು ಪ್ರಶ್ನಿಸಿದ್ದರು.

 ಇದನ್ನೂ ಓದಿರಿ: ಕರಾವಳಿ: ಯುವಜನರ ಕೈಗೆ ಶಸ್ತ್ರ ನೀಡಿದ ಬಿಜೆಪಿ ಬೆಂಬಲಿತ ಸಂಘಟನೆ ಬಜರಂಗದಳ

ನಮ್ಮ ಜನ, ನಮ್ಮ ಯುವಕರು, ಪದವಿ ಪಡೆದವರು ಉದ್ಯೋಗವಿಲ್ಲದೆ ಹಳ್ಳಿಗಳಲ್ಲಿ ನರೇಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಸರ್ಕಾರ ಆರ್ಥಿಕವಾಗಿ ಸಹಾಯವನ್ನು ಕೊಡಬೇಕಾಗಿದೆ. ಆದರೆ ಬಂಡವಾಳಶಾಹಿಗಳಿಗೆ ಮಾತ್ರ ಅನೇಕ ಘೋಷಣೆಗಳನ್ನು ಮಾಡಲಾಗುತ್ತಿದೆ ಎಂದು ಟೀಕಿಸಿದ್ದರು.

ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ, ನಗರಗಳಲ್ಲಿ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿದ್ದವರಿಗೆ ಯಾವುದೇ ಸಹಕಾರವನ್ನು ನೀಡುತ್ತಿಲ್ಲ. ಸರ್ಕಾರ ಇಂತಹ ವಿಚಾರಗಳಲ್ಲಿ ಯಾವ ದಿಕ್ಕಿನಲ್ಲಿ ಹೋಗಬೇಕು? ಉದ್ಯೋಗಗಳನ್ನು ಸೃಷ್ಟಿ ಮಾಡಲಿಕ್ಕೆ, ಕೈಗಾರಿಕೆಗಳನ್ನು ತರಲಿಕ್ಕೆ, ಖಾಸಗಿ ಕ್ಷೇತ್ರಗಳಲ್ಲಿನ ಉದ್ಯೋಗಗಳನ್ನು ಜನರಿಗೆ ಕೊಡಲಿಕ್ಕೆ ಯಾವೆಲ್ಲ ರೀತಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ನಿಮ್ಮ ಸಲಹೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನನ್ನಲ್ಲಿ ತಿಳಿಸಿರಿ ಎಂದು ಅವರು ಮನವಿ ಮಾಡಿದ್ದರು.

ಮೂರನೇ ಕಂತಿನಲ್ಲಿ ‘ಕೋವಿಡ್‌ ಪರಿಹಾರ’ ಕುರಿತು ಪ್ರಸ್ತಾಪಿಸಿದ್ದರು. “ಮಳೆ ಹೆಚ್ಚಾದಾಗ, ಭೂಕಂಪವಾದಾಗ ಯಾವುದೇ ಸಂದರ್ಭಗಳಲ್ಲಿ ಸರ್ಕಾರ ಪರಿಹಾರಗಳನ್ನು ಘೋಷಣೆ ಮಾಡಿದೆ. ಕೋವಿಡ್‌ ಬಿಕ್ಕಟ್ಟನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ, ಸರ್ಕಾರ ಬಿಡುಗಾಸು ಪರಿಹಾರ ನೀಡಿಲ್ಲ. ಕೋವಿಡ್‌ನಿಂದ ಲಕ್ಷಾಂತರ ಮಂದಿ ಸತ್ತಿದ್ದಾರೆ. ಸರ್ಕಾರವೇ ನಂಬರ್‌ ಬಿಡುಗಡೆ ಮಾಡಿದೆ. ಒಬ್ಬರಿಗೂ ಪರಿಹಾರ ನೀಡಿಲ್ಲ” ಎಂದು ಟೀಕಿಸಿದ್ದರು.

ಎರಡನೇ ಕಂತಿನಲ್ಲಿ ‘ಸಿಲಿಂಡರ್‌ ಬೆಲೆ ಏರಿಕೆ’ಯ ಕುರಿತು ಮಾತನಾಡುತ್ತಾ, “ಸಿಲಿಂಡರ್ ಬೆಲೆ 888 ರೂ.  ಇದ್ದು, ಸದ್ಯದಲ್ಲೇ 900 ರೂಪಾಯಿಯಿಂದ 1000 ರೂ.ವರೆಗೆ ತಲುಪಬಹುದು. ರಾಜ್ಯದ ಜನತೆಗೆ ಎಂತಹ ಸಂಕಷ್ಟ ನೋಡಿ. ಕೋವಿಡ್‌ನಿಂದ ಜನ ಸಾಯುತ್ತಿದ್ದಾರೆ. ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆದರೆ ಬೆಲೆ ಮಾತ್ರ ಕಡಿಮೆಯಾಗಲಿಲ್ಲ” ಎಂದಿದ್ದರು. ಮೊದಲ ಕಂತಿನಲ್ಲಿ ‘ಎನ್‌ಇಪಿಯನ್ನು ನಾಗಪುರ ಎಜುಕೇಷನ್‌ ಪಾಲಿಸಿ’ ಎಂದು ವಿಶ್ಲೇಷಿಸಿದ್ದರು.

ಇದನ್ನೂ ಓದಿರಿ: ನೈತಿಕತೆ ಮತ್ತು ಪೊಲೀಸ್‌ಗಿರಿ ಕೂಡಿಕೊಂಡರೆ ಅದು ಅನೈತಿಕ ಮನಸ್ಥಿತಿಗಳ ವಿಕೃತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...