ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ‘ಮರ್ಯಾದಾ ಹತ್ಯೆ’ಗಳ ಬಗ್ಗೆ ಸೋಮವಾರ (ಆ.4) ಮದ್ರಾಸ್ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇಂತಹ ಘೋರ ಅಪರಾಧಗಳು ಏಕೆ ಕೊನೆಯಾಗುತ್ತಿಲ್ಲ ಎಂದು ಪ್ರಶ್ನಿಸಿದೆ.
ಈ ವರ್ಷದ ಮೇ ತಿಂಗಳಲ್ಲಿ ಕಡಲೂರು ಜಿಲ್ಲೆಯಲ್ಲಿ ನಡೆದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಯೊಬ್ಬರ ಮರ್ಯಾದಾ ಹತ್ಯೆಯ ಶಂಕಿತ ಪ್ರಕರಣವನ್ನು ಸ್ಥಳೀಯ ಪೊಲೀಸರಿಂದ ಅಪರಾಧ ಶಾಖೆ-ಸಿಐಡಿಗೆ ವರ್ಗಾಯಿಸುವಾಗ ನ್ಯಾಯಮೂರ್ತಿ ಪಿ ವೇಲ್ಮುರುಗನ್ ಮೇಲಿನ ಪ್ರಶ್ನೆ ಎತ್ತಿದ್ದಾರೆ.
“ರಾಜ್ಯದಲ್ಲಿ ಮರ್ಯಾದಾ ಹತ್ಯೆಯ ಹಲವಾರು ಪ್ರಕರಣಗಳು ವರದಿಯಾಗುತ್ತಿವೆ. ಆದರೆ, ದುರದೃಷ್ಟವಶಾತ್ ಅಂತಹ ಅಪರಾಧಗಳಿಗೆ ಕೊನೆಯಿಲ್ಲದಂತಾಗಿದೆ. ಮರ್ಯಾದಾ ಹತ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ” ಎಂದು ನ್ಯಾ. ವೇಲ್ಮುರುಗನ್ ಹೇಳಿದ್ದು. ಇಂತಹ ಅಪರಾಧಗಳ ಹಿಂದಿನ ಸತ್ಯ ಮುನ್ನೆಲೆಗೆ ಬರುತ್ತಿಲ್ಲ ಎಂದಿದ್ದಾರೆ.
ಕಡಲೂರು ಜಿಲ್ಲೆಯ ಅರಸಕುಲಿ ಗ್ರಾಮದ ಬಿಕಾಂ ವಿದ್ಯಾರ್ಥಿ, ಮೃತ ಯುವಕ ಎಂ.ಜಯಸೂರ್ಯ ಅವರ ತಂದೆ ಎಂ.ಮುರುಗೇಶನ್ ಅವರು ತನಿಖೆಯನ್ನು ಸಿಐಡಿಗೆ ವರ್ಗಾಯಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ದಾಖಲೆಗಳನ್ನು ತಕ್ಷಣವೇ ಸಿಬಿ-ಸಿಐಡಿಗೆ ಹಸ್ತಾಂತರಿಸುವಂತೆ ನ್ಯಾಯಾಧೀಶರು ಪ್ರತಿವಾದಿ ಪೊಲೀಸರಿಗೆ ನಿರ್ದೇಶನ ನೀಡಿದ್ದು, ಸತ್ಯವನ್ನು ಹೊರತರಲು ‘ನ್ಯಾಯಯುತ ತನಿಖೆ’ ನಡೆಸುವಂತೆ ಆದೇಶಿಸಿದ್ದಾರೆ.
ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಎ ಅರಸುಗಣೇಶನ್, ಮೃತ ಜಯಸೂರ್ಯ ಪ್ರಬಲ ಸಮುದಾಯಕ್ಕೆ ಸೇರಿದ ಹುಡುಗಿಯನ್ನು ಪ್ರೀತಿಸುತ್ತಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮೇ 18,2025ರಂದು, ಕಾಲೇಜು ಸಹಪಾಠಿ ಪ್ರವೀಣ್ ಎಂಬಾತ ಜಯಸೂರ್ಯ ಅವರನ್ನು ಬಲವಂತವಾಗಿ ಬೈಕ್‌ನಲ್ಲಿ ಕರೆದೊಯ್ದಿದ್ದರು. ಆ ಬಳಿಕ ಜಯಸೂರ್ಯ ವಾಪಸ್ ಬಂದಿಲ್ಲ. ಅವರ ತಂದೆ ಹಲವಾರು ಬಾರಿ ಕರೆ ಮಾಡಿದ್ದರು. ಈ ವೇಳೆ ಒಮ್ಮೆ ಆತ ಪ್ರತಿಕ್ರಿಯಿಸಿದ್ದರು. ತಾನು ಪ್ರವೀಣ್, ಜೀವನ್ ಹಾಗೂ ಇನ್ನೊಬ್ಬ ವ್ಯಕ್ತಿಯೊಂದಿಗೆ ಇರುವುದಾಗಿ ಹೇಳಿದ್ದರು ಎಂದು ವಕೀಲ ಅರಸುಗಣೇಶನ್ ವಿವರಿಸಿದ್ದಾರೆ.
ಆದರೆ, ನಂತರ ಜಯಸೂರ್ಯ ಅವರ ತಂದೆಗೆ ಕುಲ್ಲಂಚವಾಡಿ ಪೊಲೀಸ್ ಠಾಣೆಯಿಂದ ಕರೆ ಬಂದಿತ್ತು. ಅದರಲ್ಲಿ ಜೀವನ್ ನೀಡಿದ ದೂರಿನ ಪ್ರಕಾರ ಅವರ ಮಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿತ್ತು ಎಂದು ವಕೀಲ ಹೇಳಿದ್ದಾರೆ.
ಹುಡುಗಿಯ ಸಮುದಾಯಕ್ಕೆ ಸೇರಿದ ಪ್ರಾಧ್ಯಾಪಕರೊಬ್ಬರು ಘಟನೆ ನಡೆದ ಸ್ಥಳದಲ್ಲಿ ನಿಗೂಢವಾಗಿ ಉಪಸ್ಥಿತರಿದ್ದರಿಂದ, ಕೃತ್ಯದಲ್ಲಿ ಅವರ ಶಂಕೆ ಇದೆ ಎಂದು ವಕೀಲ ವಾದಿಸಿದ್ದಾರೆ.
ಹುಡುಗಿಯ ಸೋದರ ಮಾವ ಜಯಸೂರ್ಯಗೆ ಬೆದರಿಕೆ ಹಾಕಿದ್ದಲ್ಲದೆ, ಆಕೆಯೊಂದಿಗಿನ ಸಂಬಂಧವನ್ನು ಮುಂದುವರಿಸದಂತೆ ಎಚ್ಚರಿಸಿದ್ದರು ಎಂದು ವಕೀಲ ತಿಳಿಸಿದ್ದಾರೆ. ಜಿಲ್ಲಾ ಪೊಲೀಸರ ನಿರ್ಲಕ್ಷ್ಯವನ್ನು ಆರೋಪಿಸಿ, ತನಿಖೆಯನ್ನು ಬೇರೆ ಸಂಸ್ಥೆಗೆ ವಹಿಸಲು ನ್ಯಾಯಾಲಯ ಆದೇಶಿಸಬೇಕೆಂದು ಅವರು ಕೋರಿದ್ದಾರೆ.
ಪೊಲೀಸರ ಪರವಾಗಿ ಹಾಜರಾದ ಸರ್ಕಾರಿ ವಕೀಲರು ತನಿಖೆ ಇನ್ನೂ ನಡೆಯುತ್ತಿದೆ ಮತ್ತು ಪ್ರಾಥಮಿಕ ತನಿಖೆಯಲ್ಲಿ ಇದು ಅತಿವೇಗದ ಚಾಲನೆಯಿಂದ ಸಂಭವಿಸಿದ ಅಪಘಾತ ಎಂದು ಕಂಡುಬಂದಿದೆ ಎಂದು ಹೇಳಿದ್ದಾರೆ.
ಘಟನೆ ನಡೆದ ದಿನ ರಾತ್ರಿ ಮೂವರು ಕಡಲೂರಿನಿಂದ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಅವರ ಬೈಕ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದಿದ್ದಾರೆ.
ಸಾವಿನ ಕಾರಣವನ್ನು ಕಂಡುಹಿಡಿಯಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ, ನ್ಯಾಯಾಧೀಶರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಜಯಸೂರ್ಯ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆಯೇ ಅಥವಾ ಯಾರಾದರೂ ಬಲವಂತವಾಗಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆಯೇ ಎಂಬುದನ್ನು ಮರಣೋತ್ತರ ಪರೀಕ್ಷೆಯಿಂದ ಬಹಿರಂಗಪಡಿಸಬಹುದೇ ಎಂದು ಕೇಳಿದ್ದಾರೆ.
“ಘಟನೆ ಸಂಭವಿಸಿದ್ದಕ್ಕೂ ಮರಣೋತ್ತರ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಸಮಗ್ರ ತನಿಖೆಯಿಂದ ಮಾತ್ರ ಸತ್ಯ ಹೊರಬರುತ್ತದೆ” ಎಂದು ನ್ಯಾಯಮೂರ್ತಿ ವೇಲ್ಮುರುಗನ್ ಹೇಳಿದ್ದಾರೆ.
ಜಿಲ್ಲಾ ಪೊಲೀಸರ ತನಿಖೆಯ ಬಗ್ಗೆ ನ್ಯಾಯಾಲಯವು ಅನುಮಾನ ವ್ಯಕ್ತಪಡಿಸಿದೆ ಎಂದು ಹೇಳಿದ ನ್ಯಾಯಾಧೀಶರು, ತನಿಖೆಯನ್ನು ವರ್ಗಾಯಿಸಲು ಇದು ಸೂಕ್ತವಾದ ಪ್ರಕರಣವಾಗಿದೆ ಎಂದಿದ್ದಾರೆ.
ಗಮನಾರ್ಹವಾಗಿ, ಹುಡುಗಿ ಪುದುಕ್ಕೂರಪೆಟ್ಟೈ ಮೂಲದವಳು. 2003ರಲ್ಲಿ ಎಂಬಿಸಿ ಸಮುದಾಯಕ್ಕೆ ಸೇರಿದ ಕಣ್ಣಗಿ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಮುರುಗೇಶನ್ ಅವರ ಭೀಕರ ಮರ್ಯಾದಾ ಹತ್ಯೆ ನಡೆದ ಹಳ್ಳಿ ಇದು ಎಂದು ಜಯಸೂರ್ಯ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಮಾಲೆಗಾಂವ್| ಜಾತಿ ಶ್ರೇಣಿ ಜಾರಿಗೊಳಿಸಿದವರು ಸನಾತನ ಧರ್ಮದ ಭಯೋತ್ಪಾದಕರು – ಎನ್‌ಸಿಪಿ-ಎಸ್‌ಸಿಪಿ ಶಾಸಕ


