ಇತ್ತೀಚೆಗೆ ದೇಶದ ನೈತಿಕ ಪ್ರಜ್ಞೆಯನ್ನು ಕಲಕಿದ್ದ ಹತ್ರಾಸ್ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಪ್ರಕರಣವನ್ನು ನಿರ್ವಹಿಸುತ್ತಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ಲಕ್ಷ್‌ಕರ್ ಅವರನ್ನು ವರ್ಗಾಯಿಸಲಾಗಿದೆ. ಇವರೂ ಸೇರಿದಂತೆ 16 ಐಎಎಸ್ ಅಧಿಕಾರಿಗಳನ್ನು ಉತ್ತರ ಪ್ರದೇಶ ಸರ್ಕಾರ ವರ್ಗಾಯಿಸಿ ಗುರುವಾರ ಆದೇಶ ಹೊರಡಿಸಿದೆ.
ಪ್ರವೀಣ್ ಕುಮಾರ್ ಲಕ್ಷ್‌ಕರ್ ಈಗ ಮಿರ್ಜಾಪುರದ ಹೊಸ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡಿದ್ದಾರೆ. ಉತ್ತರ ಪ್ರದೇಶದ ಜಲ ನಿಗಮದಲ್ಲಿದ್ದ ಎಂ.ಡಿ. ರಮೇಶ್ ರಂಜನ್ ಈಗ ಹತ್ರಾಸ್‌ನ ಮ್ಯಾಜಿಸ್ಟ್ರೇಟ್ ಸ್ಥಾನಕ್ಕೆ ವರ್ಗವಾಗಿದ್ದಾರೆ ಎಂದು ಸರ್ಕಾರದ ಅಧಿಕೃತ ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ: ಹತ್ರಾಸ್: ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆಗೈದಿದ್ದಾರೆ ಎಂದು ಸಿಬಿಐ ಚಾರ್ಜ್‌ಶೀಟ್ – ವಕೀಲರ ಹೇಳಿಕೆ
ಸೆಪ್ಟೆಂಬರ್ 14 ರಂದು ಹತ್ರಾಸ್‌ನಲ್ಲಿ 19 ವರ್ಷದ ದಲಿತ ಮಹಿಳೆಯ ಮೇಲೆ ನಾಲ್ಕು ಮೇಲ್ಜಾತಿಯ ಪುರುಷರು ಅತ್ಯಾಚಾರ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಯುವತಿ ಕೊನೆಯುಸಿರೆಳೆದಿದ್ದರು. ಈ ಪ್ರಕರಣದ ನಂತರ ಪ್ರವೀಣ್ ಕುಮಾರ್ ಲಕ್ಷ್‌ಕರ್ ಮುನ್ನೆಲೆಗೆ ಬಂದಿದ್ದರು.
ಸೆಪ್ಟೆಂಬರ್ 30 ರಂದು ಯುವತಿಯ ಮೃತ ದೇಹವನ್ನು ಪೊಲೀಸರೇ ಸುಟ್ಟು ಹಾಕಿದ್ದರು. ಇದು ದೇಶದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು.
ಇದನ್ನೂ ಓದಿ: ಭಯದಲ್ಲಿ ಬದುಕುತ್ತಿದೆ ಹತ್ರಾಸ್ ಸಂತ್ರಸ್ತೆ ಕುಟುಂಬ: PUCL ಸತ್ಯಶೋಧನಾ ವರದಿ
“ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ, ಮೇಲ್ಜಾತಿಗೆ ಸೇರಿದ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಠಾಕೂರ್ ಸಮುದಾಯದವರಿಗೆ ಜಾತಿ ಸಭೆಗಳನ್ನು ನಡೆಸಲು ಅವಕಾಶ ನೀಡಿದೆ. ಸಂತ್ರಸ್ತೆಯ ಕುಟುಂಬಕ್ಕೆ ರಕ್ಷಣೆ ನೀಡದೇ, ಬಹಿರಂಗವಾಗಿ ಸವಾಲು ಹಾಕಲು ಅವಕಾಶ ನೀಡುತ್ತಿದೆ” ಎಂಬ ಆರೋಪ ಕೇಳಿಬಂದಿತ್ತು.
ಅಲ್ಲಿನ ಜಿಲ್ಲಾಧಿಕಾರಿ ಬಹಿರಂಗವಾಗಿ ಸಂತ್ರಸ್ತ ಕುಟುಂಬಕ್ಕೆ ಧಮ್ಕಿ ಹಾಕಿದ್ದರು. ಇದನ್ನು ಖಂಡಿಸಿದ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ನ್ಯಾಯಪೀಠ, ನ್ಯಾಯಯುತ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ಜಿಲ್ಲಾಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.
ಇದನ್ನೂ ಓದಿ: ಹತ್ರಾಸ್ ಪ್ರಕರಣ:’ಸೇಡು ತೀರಿಸಿಕೊಳ್ಳುವುದಲ್ಲ, ಬದಲಾವಣೆ ಬೇಕು’; ಮಹಿಳಾ ಸಂಘಟನೆಗಳು


