ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣದ ಸಂತ್ರಸ್ಥೆಯ ಕುಟುಂಬ ಸದಸ್ಯರು ಗೃಹಬಂಧನಕ್ಕೆ ಸಮಾನವಾದ ಪರಿಸ್ಥಿತಿಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ನೀಡಿದ್ದ ಸಿಆರ್‌ಪಿಎಫ್ ಭದ್ರತೆ ಹಿಂತೆಗೆದುಕೊಂಡ ನಂತರ, ಕುಟುಂಬ ಸದಸ್ಯರು ಜೀವಭಯಕ್ಕೆ ಒಳಗಾಗಿದ್ದಾರೆ ಎಂದು ನಾಗರಿಕ ಹಕ್ಕುಗಳ ಸಂಘಟನೆಗಳು ತಿಳಿಸಿವೆ.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL) ಈ ಪ್ರಕರಣದ ಬಗ್ಗೆ ಸತ್ಯಶೋಧನಾ ವರದಿಯನ್ನು ಬಿಡುಗಡೆ ಮಾಡಿದೆ. ನಿರ್ಭಯಾ ನಿಧಿಯ ಮೂಲಕ ಹತ್ರಾಸ್ ಸಂತ್ರಸ್ತ ಕುಟುಂಬಕ್ಕೆ ಭದ್ರತೆ ಮತ್ತು ಪುನರ್ವಸತಿ ಕಲ್ಪಿಸಬೇಕು ಎಂದು ಸಂಸ್ಥೆ ಒತ್ತಾಯಿಸಿದೆ.
ಲಕ್ನೋದಲ್ಲಿ ಸುದ್ದಿಗೋಷ್ಠಿ ನಡೆಸಿದ ಪಿಯುಸಿಎಲ್ ಸದಸ್ಯರಾದ ಕಮಲ್ ಸಿಂಗ್, ಫರ್ಮನ್ ನಖ್ವಿ, ಅಲೋಕ್, ಶಶಿಕಾಂತ್ ಮತ್ತು ಕೆ.ಬಿ.ಮೌರ್ಯ, ಇಡೀ ಕುಟುಂಬವು ಗೃಹಬಂಧನದ ಪರಿಸ್ಥಿತಿಯಲ್ಲಿದೆ ಮತ್ತು ಅವರ ಸಾಮಾಜಿಕ ಬದುಕು ಸಮಾಜದಿಂದ ಪ್ರತ್ಯೇಕಗೊಂಡಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಹತ್ರಾಸ್ ಪ್ರಕರಣ:’ಸೇಡು ತೀರಿಸಿಕೊಳ್ಳುವುದಲ್ಲ, ಬದಲಾವಣೆ ಬೇಕು’; ಮಹಿಳಾ ಸಂಘಟನೆಗಳು
’CRPF ರಕ್ಷಣೆಯನ್ನು ಹಿಂತೆಗೆದುಕೊಂಡ ನಂತರ ಸಂತ್ರಸ್ತೆ ಕುಟುಂಬ ಸದಸ್ಯರು ಭಯದಲ್ಲಿ ಬದುಕುತ್ತಿದ್ದಾರೆ. ಕುಟುಂಬದ ಒಪ್ಪಿಗೆಯಿಲ್ಲದೆ ಮೃತ ಸಂತ್ರಸ್ತೆಯ ಅಂತ್ಯಸಂಸ್ಕಾರ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಕೂಡಲೇ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಬೇಕು ಎಂದು ಪಿಯುಸಿಎಲ್ ಸದಸ್ಯರು ಒತ್ತಾಯಿಸಿದ್ದಾರೆ.
ಹಿಂದೂ-ಮುಸ್ಲಿಂ ಸಮುದಾಯದಲ್ಲಿ ದ್ವೇಷ ಸೃಷ್ಟಿಸಲು ಮತ್ತು ಪ್ರಕರಣದ ವಿಚಾರಣೆಯ ಗಮನವನ್ನು ಬೇರೆಡೆ ಸೆಳೆಯಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗಿದೆ ಎಂದು ಅಲೋಕ್ ಮತ್ತು ಫರ್ಮನ್ ನಖ್ವಿ ಆರೋಪಿಸಿದರು.
ಪಿಎಫ್‌ಐ ನಿಷೇಧಿತ ಸಂಸ್ಥೆಗಳ ಪಟ್ಟಿಯಲ್ಲಿಲ್ಲ. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದನ್ನು ಉಗ್ರಗಾಮಿ ಸಂಸ್ಥೆ ಎಂದಿದ್ದಾರೆ ಎಂದು ಕಮಲ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹತ್ರಾಸ್‌ನ ದಲಿತ ಯುವತಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ವರದಿ ಮಾಡಲು ಅಕ್ಟೋಬರ್ 5 ರಂದು ಉತ್ತರಪ್ರದೇಶಕ್ಕೆ ತೆರಳಿದ್ದ, ದೆಹಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೇರಳ ಮೂಲದ ಪರ್ತಕರ್ತ ಸಿದ್ದೀಕ್ ಕಪ್ಪನ್ ಸೇರಿ ಮೂವರನ್ನು ಪಿಎಫ್‌ಐ ಸಂಘಟನೆಯವರು ಎಂದು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಹೈಕೋರ್ಟ್ ಮೇಲ್ವಿಚಾರಣೆ ಮಾಡಲಿ: ಹತ್ರಾಸ್ CBI ತನಿಖೆ ಮೇಲ್ವಿಚಾರಣೆಗೆ ಸುಪ್ರೀಂ ನಕಾರ
