ಮಹಾರಾಷ್ಟ್ರದ ವಿಪಕ್ಷಗಳ ಮಹಾ ವಿಕಾಸ್ ಅಘಾಡಿ ಮೈತ್ರಿಯ ಸೀಟು ಹಂಚಿಕೆಯ 99% ದಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಬುಧವಾರ ಹೇಳಿದ್ದಾರೆ. ಮೂರು ಮೈತ್ರಿ ಪಕ್ಷಗಳ ನಾಯಕರು ಸಂಜೆ ವೇಳೆ ಸೀಟು ಹಂಚಿಕೆಯನ್ನು ಪ್ರಕಟಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ತಮ್ಮ ಪಕ್ಷ 100 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಸೂಚಿಸಿದ್ದಾರೆ. ವಿಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಉನ್ನತ ನಾಯಕರು ಮಂಗಳವಾರ ತಡರಾತ್ರಿ ಮುಂಬೈಯಲ್ಲಿ ಸಭೆ ನಡೆಸಿ, ವಿಧಾನಸಭೆ ಚುನಾವಣೆಗೆ ಸೀಟು ಹಂಚಿಕೆಯ ಮಾತುಕತೆಯನ್ನು ಅಂತಿಮಗೊಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. ವಿಪಕ್ಷಗಳ ಮಹಾ ವಿಕಾಸ್ ಅಘಾಡಿ ಮೈತ್ರಿಯಲ್ಲಿ ಶಿವಸೇನೆ (UBT), ಕಾಂಗ್ರೆಸ್ ಮತ್ತು NCP (SP) ಪಕ್ಷಗಳು ಇವೆ.
ಈ ಹಿಂದೆ ಸೀಟು ಹಂಚಿಕೆಯ ವಿಚಾರವಾಗಿ ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ಬಹಿರಂಗವಾಗಿ ಪರಸ್ಪರ ವಾಗ್ದಾಳಿ ನಡೆಸಿದ್ದವು. ಇದರ ನಂತರ ಹಿರಿಯ ರಾಜ್ಯ ಕಾಂಗ್ರೆಸ್ ನಾಯಕ ಬಾಳಾಸಾಹೇಬ್ ಥೋರಟ್ ಮಂಗಳವಾರ ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಮತ್ತು ನಂತರ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಭಿನ್ನಾಭಿಪ್ರಾಯ ಶಮನಮಾಡುವ ಪ್ರಯತ್ನ ಮಾಡಿದ್ದಾರೆ.
ನಂತರ, ಥೋರಟ್ ಮತ್ತು ಎಂವಿಎಯ ಇತರ ನಾಯಕರು ಮುಂಬೈನ ಹೋಟೆಲ್‌ನಲ್ಲಿ ಹಲವಾರು ಗಂಟೆಗಳ ಕಾಲ ಸಭೆ ನಡೆಸಿ ಚರ್ಚಿಸಿದ್ದಾರೆ. ಈ ಸಭೆ ಮಂಗಳವಾರ ತಡರಾತ್ರಿಯವರೆಗೂ ಮುಂದುವರೆದು ಸೀಟು ಹಂಚಿಕೆಯ ಬಗ್ಗೆ ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ.
ಸೀಟು ಹಂಚಿಕೆಯ ಶೇಕಡಾ ತೊಂಬತ್ತೊಂಬತ್ತು ಕೆಲಸ ಪೂರ್ಣಗೊಂಡಿದೆ. ಇಂದು ಸಂಜೆ ವೇಳೆಗೆ ಮೂರು ಪಕ್ಷಗಳ ನಾಯಕರು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ರಾವತ್ ಬುಧವಾರ ಹೇಳಿದ್ದಾರೆ. “ಶಿವಸೇನೆ (ಉದ್ಧವ್ ಠಾಕ್ರೆ ನೇತೃತ್ವದ ಅವರ ಬಣವನ್ನು ಉಲ್ಲೇಖಿಸಿ) ಅನುಭವಿ ಆಟಗಾರ, ಆದ್ದರಿಂದ ಅದು ಶತಕ ಬಾರಿಸಬೇಕು. ಸೀಟುಗಳಲ್ಲಿ ಶತಕ ಬಾರಿಸಬೇಕು ಮತ್ತು ಒಟ್ಟಾರೆ ಗೆಲುವು ಪಡೆಯಬೇಕು ಎಂಬ ನಿರೀಕ್ಷೆ ಜನರಲ್ಲಿದೆ” ಎಂದು ಅವರು ಹೇಳಿದ್ದಾರೆ.
ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಶಿವಸೇನೆ (ಸಿಎಂ ಏಕನಾಥ್ ಶಿಂಧೆ ನೇತೃತ್ವದ), ಬಿಜೆಪಿ ಮತ್ತು ಎಂಎನ್‌ಎಸ್ ಅನ್ನು ತರಾಟೆಗೆ ತೆಗೆದುಕೊಂಡ ಸಂಜಯ್ ರಾವತ್, “ಎಂವಿಎ ಮೈತ್ರಿ ಸರ್ಕಾರವನ್ನು ರಚಿಸುತ್ತದೆ. ಅದಕ್ಕಾಗಿಯೇ ಮಿತ್ರಪಕ್ಷಗಳು ಸಮಯ ತೆಗೆದುಕೊಂಡಿವೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಬಗ್ಗೆಯೂ ಚರ್ಚಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಇಂಡಸ್ಟ್ರಿಯಲ್ ಆಲ್ಕೋಹಾಲ್’ ಮಾರಾಟದ ಮೇಲೆ ರಾಜ್ಯ ಸರ್ಕಾರಗಳು ಕಾನೂನು ರೂಪಿಸಬಹುದು: ಸುಪ್ರೀಂ ಕೋರ್ಟ್
‘ಇಂಡಸ್ಟ್ರಿಯಲ್ ಆಲ್ಕೋಹಾಲ್’ ಮಾರಾಟದ ಮೇಲೆ ರಾಜ್ಯ ಸರ್ಕಾರಗಳು ಕಾನೂನು ರೂಪಿಸಬಹುದು: ಸುಪ್ರೀಂ ಕೋರ್ಟ್


