Homeಮುಖಪುಟಹಳತು ವಿವೇಕ : ಕನ್ನಡ ಭಾಷೆಗೆ ಅಸಹಜವಾಗಿ ನುಸುಳಿರುವ ಮಹಾಪ್ರಾಣಗಳು

ಹಳತು ವಿವೇಕ : ಕನ್ನಡ ಭಾಷೆಗೆ ಅಸಹಜವಾಗಿ ನುಸುಳಿರುವ ಮಹಾಪ್ರಾಣಗಳು

- Advertisement -
- Advertisement -

[ಪ್ರಸಕ್ತ ಬರಹ ಮೈಸೂರು ವಿಶ್ವವಿದ್ಯಾಲಯದಿಂದ ಪ್ರಕಟವಾಗುತ್ತಿದ್ದ ಪ್ರಬುದ್ಧ ಕರ್ನಾಟಕದ 1946ರ ಸಂಚಿಕೆಯಿಂದ ಆಯ್ದು ಪ್ರಕಟಿಸಲಾಗಿದೆ]

ಕನ್ನಡದಲ್ಲಿ ಸ್ವಾಭಾವಿಕವಾಗಿಯೂ ಮಹಾಪ್ರಾಣ ವ್ಯಂಜನಾಕ್ಷರಗಳು ಇವೆಯೆ? ಕೇಶಿರಾಜನ ಕೆಳಗಿನ ಸೂತ್ರಗಳು ಈ ಪ್ರಶ್ನೆಗೆ ಎಡೆಗೊಡುತ್ತಿವೆ.

ವರ್ಗದ್ವಿತೀಯ ವರ್ಣಂ
ವರ್ಗಚತುರ್ಥಾಕ್ಷರಂ ಮಹಾಪ್ರಾಣಮವಂ |
ಮಾರ್ಗವಿದರ್ ಸಂಖ್ಯೆಯೊಳಂ
ಬೋರ್ಗರೆವನುಕೃತಿಯೊಳಂ ಪ್ರಯೋಗಿಸುತಿರ್ಪರ್ ||
ಒಳವು ಮಹಾಪ್ರಾಣಂಗ
ಳ್ವಿಳಸತ್ಕರ್ಣಾಟ ಭಾಷೆತೊಳ್ ಕೆಲವು ನಿಜೋ ||
ಜ್ಜ್ವಳಮಾಗಿ

ಮೊದಲಿನ ಸೂತ್ರದಂತೆ, ವರ್ಗದ ಎರಡನೆಯ ಮತ್ತು ನಾಲ್ಕನೆಯ ಅಕ್ಷರಗಳು ಮಹಾಪ್ರಾಣಗಳೆನ್ನಿಸುತ್ತವೆ. ಬಲ್ಲವರು ಅವುಗಳನ್ನು ಸಂಖ್ಯಾವಾಚಕಗಳಲ್ಲಿಯೂ ಅನುಕರಣ ಶಬ್ದಗಳಲ್ಲಿಯೂ ಪ್ರಯೋಗ ಮಾಡುತ್ತಾರೆ.

1. ಮೊದಲು ಸಂಖ್ಯೆಗೆ-ಇರ್ಚ್ಛಾಸಿರಂ, ಎಣ್ಛಾಸಿರಂ, ನೂರ್ಚ್ಛಾಸಿರಂ, ಮುಂತಾದ “ಸಾಸಿರ” ಶಬ್ದ ಕೂಡಿದ ಸಮಾಸಗಳನ್ನು ಉದಾಹರಿಸಿದೆ.

2. ಮತ್ತೆ ಅನುಕರಣಕ್ಕೆ-ಖಣಿಲ್ಲನೆ, ಖೞಿಲನೆ, ಛಮ್ಮನೆ, ದುಮ್ಮನೆ, ಝುಲುಮ್ಮನೆ, ಪಠಿಲ್ಲನೆ, ಢಮ್ಮನೆ, ಥೊಪ್ಪನೆ, ದುಢುಮ್ಮನೆ, ಇತ್ಯಾದಿ ಪದಗಳನ್ನು ಕೊಟ್ಟಿದೆ.

3. ಎರಡನೆಯ ಸೂತ್ರದಂತೆ, ಕನ್ನಡ ನುಡಿಯಲ್ಲಿ ಕೆಲವು ಮಹಾಪ್ರಾಣಗಳು ಸಹಜವಾಗಿರುವುವು. ಅವಕ್ಕೆ ಉದಾಹರಣೆಗಳು:-

(ಅ) ವಖ್ಬಾಣಂ, ದೆಖ್ಬಾಣಂ, ಪಖ್ಬಾಳಂ, ಖೊಪ್ಪರಂ, ಖಾಣಂ, ಖಾರಿಗೆ; ಛಲ್ಲಿ ಮಾಡಿದಂ, ಛರ್ಪಿಸಿದಂ, ಎಕ್ಕ ಛಾಯಂ; ಠಾವು, ಠಾಣಂ, ಠಕ್ಕಿಸಿದಂ; ಥಟ್ಟು, ಥಾಪನೆ, ಸುತ್ಥಣೆ, ಮತ್ಥವಟ್ಟಿಗೆ, ಕಥಾಯಂ: ಫಳೆಯಕಾಱಂ, ಫೆಳಾವುಗಂ, ಫೇಳಿ, ಅಫಳಿಯಂ.

(ಆ) ಘೞಿಯಂ, ಘೂೞಿಗೆ, ಘೋೞಿಗೆ, ಘೋಸಂ, ಘೂಸಿ; ಝಳಂ, ಝಳಕಂ, ಝಲೞಿ, ಝಳಪಿಸಿತು, ಝಲ್ಲಿ; ಢೊಂಕಣಿ, ಢೆಂಕಣ, ಢಾಳಂ, ಢೊಕ್ಕರಂ; ಧೞಂ, ಧಾಳಿ, ಧವಡಂ; ಭಂಗಾರಂ, ಭರಿಕೈ, ಭಲ್ಲೆಯಂ, ಭಾವಂ, ಇತ್ಯಾದಿಗಳು.

ಮೇಲಿನ ಸೂತ್ರಗಳನ್ನೂ ಅವುಗಳಿಗಿರುವ ಉದಾಹರಣೆಗಳನ್ನೂ ಒಂದಿಷ್ಟು ಗಮನಿಸಿ ನೋಡಿದರೆ, ಕೇಶಿರಾಜನು ಕನ್ನಡಕ್ಕೆ ಸ್ವಾಭಾವಿಕಗಳಲ್ಲದ ಮಹಾಪ್ರಾಣಗಳನ್ನು ಹೇಗೋ ಸ್ವಾಭಾವಿಕಗಳನ್ನಾಗಿಸುವುದಕ್ಕೆ ಶ್ರಮಪಟ್ಟಂತೆ ತೋರುತ್ತದೆ. ವರ್ಣಮಾಲೆಯಿಂದ ಮೊದಲ್ಗೊಂಡು ಸಂಸ್ಕೃತ ವ್ಯಾಕರಣವನ್ನೇ ಸಾಧ್ಯವಿದ್ದಮಟ್ಟಿಗೂ ಶ್ರದ್ಧೆಯಿಂದ ಅನುಸರಿಸುತ್ತಿದ್ದ ಆತನಿಗೆ ಮಹಾಪ್ರಾಣಗಳು ಕನ್ನಡಕ್ಕೆ ಸಹಜವಲ್ಲವೆಂದರೆ ಎಲ್ಲಿ ಕನ್ನಡದ ಹಿರಿಮೆಗೆ ಕುಂದು ಬಂದುಬಿಡುವುದೋ ಎಂಬ ಭಯವಿದ್ದಿರಬೇಕು. ಮಾತ್ರವಲ್ಲ, ಅನ್ಯದೇಶ್ಯ, ಸಂಸ್ಕೃತ, ಪ್ರಾಕೃತ, ತದ್ಭವ ಮುಂತಾದ ಬೊಕ್ಕಸಗಳಿಂದ ಕನ್ನಡಕ್ಕೆ ಲಭಿಸಿದ ಅನೇಕ ಶಬ್ದಗಳಲ್ಲಿ ಸ್ವಾಭಾವಿಕವಾದ ಮಹಾಪ್ರಾಣಾಕ್ಷರಗಳು ಇದ್ದುವು. ಅಂತಹುಗಳನ್ನು ಕನ್ನಡಿಗರು ಹಾಗೆಯೇ ಉಳಿಸಿಕೊಂಡು ಉಚ್ಚರಿಸುತ್ತಿದ್ದರು. ಆದುದರಿಂದ ಮಹಾಪ್ರಾಣಗಳನ್ನು ಕನ್ನಡ ವರ್ಣಮಾಲೆಗೆ ಸೇರಿಸಿಕೊಳ್ಳಲೇಬೇಕಾಯಿತು. ಈ ಕಾರಣದಿಂದ ಕನ್ನಡ ವರ್ಣಮಾಲೆಯಲ್ಲಿ ಮಹಾಪ್ರಾಣಗಳ ಬರವಾಯಿತೆಂದು ವೈಯಾಕರಣರು ಹೇಳಿದ್ದರೆ ಚೆನ್ನಾಗಿತ್ತು. ಕೇಶಿರಾಜನು ಸಹಜ ಮಹಾಪ್ರಾಣಗಳೆಂದು ಉದಾಹರಿಸಿದಂತಹ ಶಬ್ದಗಳಿಗೋಸ್ಕರವಾಗಿ ಕನ್ನಡ ವರ್ಣಮಾಲೆಯಲ್ಲಿ ಎಷ್ಟಕ್ಕೂ ಮಹಾಪ್ರಾಣಗಳಿರುತ್ತಿರಲಿಲ್ಲ. ಅನ್ಯ ಭಾಷೆಗಳಿಂದ ಶಬ್ದಗಳನ್ನು ತಮಿಳಿಗೆ ತರುವಾಗ ತಮಿಳರು ಅವನ್ನು ಗುರುತರಿಯದಂತೆ ರೂಪಾಂತರಿಸಿ ಮಹಾಪ್ರಾಣವನ್ನು ತೆಗೆದು ತಮಿಳುತನವನ್ನೈದಿಸುತ್ತಿದ್ದರು. ತಮಿಳಿಗೆ ಮಹಾಪ್ರಾಣಾಕ್ಷರಗಳೇ ಇರುವುದಿಲ್ಲ. ಸಾವಿರಾರು ವರ್ಷಗಳಿಂದ ತಮಿಳು ಸಾಹಿತ್ಯವನ್ನು ವಿಪುಲವಾಗಿ ಅಭಿವೃದ್ಧಿಗೊಳಿಸಿದ ಪ್ರಾಜ್ಞರಿಗೆ ಅವಶ್ಯವಿದ್ದಲ್ಲಿ ಮಹಾಪ್ರಾಣಾಕ್ಷರಗಳನ್ನು ಸೃಷ್ಟಿಸುವುದು ಕಷ್ಟ ಸಾಧ್ಯವೆ? ಅವರಿಗೆ ಅವು ಅವಶ್ಯಕವಿರಲಿಲ್ಲ. ಸಹಜವಾದ ತಮಿಳಿಗೆ ಅವು ಬೇಡ. ಹೀಗೆಯೇ ಕನ್ನಡಿಗರೂ ಬೇರೆ ನುಡಿಗಳಿಂದ ಎರವು ತರುವಲ್ಲಿ ತಮ್ಮ ವೈಶಿಷ್ಟ್ಯವನ್ನಿಟ್ಟುಕೊಂಡಿದ್ದರೆ, ಪ್ರಾಯಶಃ ಇಂದು ಕನ್ನಡ ವರ್ಣಮಾಲೆಯಲ್ಲೂ ಮಹಾಪ್ರಾಣಗಳ ಅವಶ್ಯಕತೆ ಇರಲಿಲ್ಲ. ಕೇಶಿರಾಜನ ಮೇಲಿನ ಸೂತ್ರಗಳೂ ಬರುತ್ತಿರಲಿಲ್ಲ. ಅನ್ಯ ಭಾಷೆಗಳಿಂದ ಬಂದ ಮಹಾಪ್ರಾಣಗಳನ್ನುಳಿಸಿಕೊಳ್ಳುವುದಕ್ಕೆ ಹೋಗಿ, ಕನ್ನಡದಲ್ಲಿ ಸ್ವಾಭಾವಿಕವಾಗಿಯೂ ಮಹಾಪ್ರಾಣಗಳುಂಟೆಂಬ ಭ್ರಮೆಯು ತಲೆದೋರಿತು.

ಇನ್ನು ಇತರ ದ್ರಾವಿಡ ನುಡಿಗಳನ್ನು ಒಂದಿಷ್ಟು ವಿಚಾರಿಸೋಣ. ತಮಿಳಿನಲ್ಲಿ ಇಂದಿಗೂ ವರ್ಗಪ್ರಥಮ ಮತ್ತು ಅದರ ಅನುನಾಸಿಕಗಳೇ ಇರುವುದು. ವರ್ಗ ತೃತೀಯಾಕ್ಷರ ಮತ್ತು ಮಹಾಪ್ರಾಣಗಳಿಲ್ಲದೆ ತಮಿಳು ಎಂತಹ ವ್ಯವಹಾರಗಳನ್ನಾದರೂ ಪೂರೈಸುತ್ತಿರುವುದೆಂಬುದು ಎಲ್ಲರೂ ತಿಳಿದ ವಿಷಯ.

ತೆಲುಗಿನಲ್ಲಿ ವರ್ಗದ್ವಿತೀಯ ಚತುರ್ಥಾಕ್ಷರಗಳು ಮೊದಲು ಇರಲಿಲ್ಲ. ನನ್ನಯ್ಯಭಟ್ಟ ಕೃತ “ಆಂಧ್ರ ಶಬ್ದ ಚಿನ್ತಾಮಣಿ” ಎಂಬ ಗ್ರಂಥದಲ್ಲಿ ಹೀಗೆ ಹೇಳಿದೆ-

ಆದ್ಯಾಯಾಃ ಪಂಚಾಶದ್ವರ್ಣಾಃ ಪ್ರಕೃತೇಸ್ತುತೇ ದಶೋನಾಸ್ಸ್ಯುಃ, ಷಟ್ರಿಂ ಶದತ್ರತೇ, ಅನ್ಯೇಚಾನುಪ್ರವಿಶನ್ತಿ ಶಬ್ದಯೋಗವಶಾತ್ ||

[ಆದಿ ಭಾಷೆಯಾದ ಸಂಸ್ಕೃತದಲ್ಲಿ 50 ಅಕ್ಷರಗಳೆಂದೂ, ಪ್ರಾಕೃತದಲ್ಲಿ 10 ಕಡಿಮೆ ಎಂದರೆ 40, ಇಲ್ಲಿ ಎಂದರೆ ತೆಲುಗಿನಲ್ಲಿ 36 ಎಂದೂ, ಅನ್ಯಭಾಷೆಗಳ ಸಂಪರ್ಕದಿಂದ ಇತರ ವರ್ಣಗಳು ತೆಲುಗಿಗೆ ಪ್ರವೇಶಿಸುತ್ತವೆ ಎಂದೂ ಅಭಿಪ್ರಾಯ].

ತೆಲುಗಿನ 36 ವರ್ಣಗಳು- ಸ್ವರಗಳು 14- ಅ, ಆ, ಇ, ಈ; ಉ, ಊ; ಎ, ಏ; ಒ, ಓ; ಐ, ಔ, ಮತ್ತು ಖಂಡ ಪೂರ್ಣಗಳೆಂಬೆರಡು ಅನುಸ್ವಾರಗಳು

ವ್ಯಂಜನಗಳು 22- ಕ, ಗ; ಚ, (ಇದು ಎರಡು ತೆರ-‘ತ್ಸ’ದಂತೆ ಉಚ್ಚರಿಸುವ ಮತ್ತೊಂದು ಚ ಉಂಟು); ಜ, (ಇದೂ ಎರಡು ತೆರ-‘ದ್ವ’ದಂತೆ ಉಚ್ಚರಿಸುವ ಮತ್ತೊಂದು ಜ ಉಂಟು); ಟ, ಡ, ಣ; ತ, ದ, ನ; ಪ, ಬ, ಮ; ಯ, ರ, ಲ, ವ, ಸ, ಹ, ಳ. ಆದುದರಿಂದ ಅಚ್ಚ ತೆಲುಗಿನಲ್ಲಿ ಮಹಾಪ್ರಾಣಾಕ್ಷರಗಳಿರುವುದಿಲ್ಲ. ಸಂಸ್ಕೃತ, ಪ್ರಾಕೃತಗಳಂತಹ ಅನ್ಯಭಾಷೆಗಳ ಸಂಬಂಧದಿಂದ, ಅವುಗಳಲ್ಲಿದ್ದು ಇಲ್ಲಿಲ್ಲದ ಮಹಾಪ್ರಾಣಾಕ್ಷರಗಳೇ ಮೊದಲಾದ ಇತರ ವರ್ಣಗಳು ಬರುವುದೆಂದಾಯಿತು.

ಹಳೆಯ ಮಲಯಾಳದಲ್ಲಿಯೂ ತಮಿಳಿನಂತೆ ವರ್ಗಪ್ರಥಮ ಮತ್ತು ಅದರ ಅನುನಾಸಿಕಗಳೇ ಇದ್ದುವಂತೆ. ಮಲೆಯಾಳದ ವಟ್ಟೆೞುತು ಕೋಲೆೞುತುಗಳೆಂಬ ಲಿಪಿಗಳಲ್ಲಿ ಈ ಮೂಲವರ್ಣಗಳು ಮಾತ್ರವಿರುತ್ತವೆ.

ಹೀಗೆಯೇ ತುಳುವಿನಲ್ಲಿ ಸಹ ಮಹಾಪ್ರಾಣಾಕ್ಷರಗಳಿರುವುದಿಲ್ಲ.

ಈ ತುಲನೆಯಿಂದ ಕನ್ನಡದಲ್ಲಿ ಸ್ವಾಭಾವಿಕವಾಗಿ ಮಹಾಪ್ರಾಣಗಳಿರುವುದು ಅಸಂಭವವೆಂಬುದು ತಿಳಿಯದಿರದು. ಆದರೂ ಕೇಶಿರಾಜನು ನಿದರ್ಶಿಸಿದ ಶಬ್ದಗಳನ್ನು ಸ್ವಲ್ಪ ವಿಮರ್ಶಿಸಿ ತಕ್ಕ ಸಮಾಧಾನವನ್ನು ಕಂಡುಕೊಳ್ಳದಿದ್ದರೆ, “ವಿಳಸತ್ಕರ್ಣಾಟಕ ಭಾಷೆ”ಯಲ್ಲಿ ಮಹಾಪ್ರಾಣಗಳುಂಟೆಂಬ ಸಂದೇಹವು ಬಂದೇ ಬರುವುದು. ಪ್ರಸ್ತುತ ಸಂಖ್ಯಾವಾಚಿಗಳನ್ನು ಪರೀಕ್ಷಿಸೋಣ-

ಇವಲ್ಲಿ ಎಲ್ಲೆಡೆಯಲ್ಲಿಯೂ ‘ಸಹಸ್ರ’ವೆಂಬ ಸಂಸ್ಕೃತ ಪದದ ತದ್ಭವವಾದ ‘ಸಾಸಿರ’ ಪದವು ಪರವಾದಾಗ ಮಾತ್ರ ಮಹಾಪ್ರಾಣವು ಬಂದುಬಿಡುತ್ತದೆ. ಹಾಗೆಂದು ಇರ್ಚ್ಛಾಸಿರಂ ಎಂಬಲ್ಲಿ ಮಹಾಪ್ರಾಣ ಬಂದಂತೆ ಇರ್ಚಾವಡಿ, ಇರ್ಚೆೞಂಗು ಎಂಬಲ್ಲಿ ‘ಸ’ ಕಾರವು ಮಹಾಪ್ರಾಣವಾಗುವುದಿಲ್ಲ. ಇದು ಏಕೆ?

ಶ್ರೀಮತ್+ಶಶಾಂಕಂ= ಶ್ರೀಮಚ್ಛಶಾಂಕ ಎಂಬಲ್ಲಿ ‘ಶ’ ಕಾರವು ಮಹಾಪ್ರಾಣವಾದಂತೆ, ಕನ್ನಡ ಸಂಖ್ಯಾವಾಚಿಗಳ ಮಹಾಪ್ರಾಣದಲ್ಲಿ ಸಂಸ್ಕೃತ ಸಂಧಿಯ ವರ್ಚಸ್ಸಿರಲೇಬೇಕು. ಸಂಖ್ಯಾವಾಚಿಗಳಲ್ಲಿನ ಈ ಕ್ವಚಿತ್ ಪ್ರಯೋಗಗಳನ್ನು ಪ್ರಾಚೀನ ಕನ್ನಡ ಗ್ರಂಥಗಳಲ್ಲಿ ಕಂಡ ಕೇಶಿರಾಜನಿಗೆ ಇವನ್ನು ಬಿಟ್ಟುಬಿಡುವುದಕ್ಕೆ ಮನವೊಪ್ಪಲಿಲ್ಲ. ನಿಶ್ಚಯವಾಗಿಯೂ ಅವು ಅಚ್ಚ ಕನ್ನಡ ಸಮಾಸಗಳಲ್ಲ.

ಇನ್ನು ಅನುಕರಣಶಬ್ದಗಳನ್ನು ಕುರಿತು ನೋಡೋಣ: ಅವೆಲ್ಲವೂ ಅಲ್ಪಪ್ರಾಣಗಳಾಗಿಯೇ ಇದ್ದಿರಬೇಕು. ಆದರೆ ಸಂಸ್ಕೃತ ಪ್ರಾಕೃತ ಭಾಷೆಗಳ ಸಂಪರ್ಕವಾದಂದಿನಿಂದ ನಮ್ಮ ವರ್ಣಮಾಲೆಯಲ್ಲಿ ಮಹಾಪ್ರಾಣಾಕ್ಷರಗಳಿರುವುದರಿಂದ ಅನುಕರಣದ ಹೆಚ್ಚಳವನ್ನು ತೋರಿಸುವುದಕ್ಕೋಸ್ಕರ, ಅನುಕರಣ ಶಬ್ದಗಳಿಗೆ ಮಹಾಪ್ರಾಣಾಕ್ಷರಗಳನ್ನುಪಯೋಗಿಸುವುದಕ್ಕೆ ಮೊದಲು ಮಾಡಿರಬೇಕು. “ಢಮ್ಮನೆ, ಖಣಿಲ್ಲನೆ, ಪಠಿಲ್ಲನೆ,”-ಎಂಬುದರ ಬದಲಾಗಿ “ಡಮ್ಮನೆ, ಕಣಿಲ್ಲನೆ, ಪಟಿಲ್ಲನೆ,” ಎಂಬುದಾಗಿದ್ದರೂ ಅನುಕರಣದ ಅರ್ಥ ಸ್ಫುರಿಸುವುದಿಲ್ಲವೆ? ನಮಗೆ ಮಹಾಪ್ರಾಣಾಕ್ಷರಗಳನ್ನು ಬಳಸಿ ಅನುಭವವುಂಟಾದುದರಿಂದ ಒಂದಿಷ್ಟು ವ್ಯತ್ಯಾಸ ಕಂಡರೂ ಕಾಣಬಹುದು. ಮಹಾಪ್ರಾಣಾಕ್ಷರಗಳನ್ನುಪಯೋಗಿಸಿದ ತಮಿಳರು “ಡಬ್ ಡಬ್” ಎಂಬ ಶಬ್ದವಾಯಿತೆನ್ನುವಾಗ ಅವರಿಗೆ ಆಗುವ ಅನುಭವವು ನಮ್ಮ “ಢಬ್, ಢಬ್” ಎಂಬುದಕ್ಕಿಂತ ಬದಲಾಗಿರಬಹುದೆ? ಮಾತ್ರವಲ್ಲ- ಈ ಅನುಕರಣಶಬ್ದಗಳಲ್ಲಿ ಮಹಾಪ್ರಾಣಗಳನ್ನು-ಪಯೋಗಿಸುವಾಗ ಒಂದು ನಿಬಂಧನೆಯಿಲ್ಲ. “ದೊಪ್ಪನೆ” “ಧೊಪ್ಪನೆ” ಎಂಬುದಾಗಿ ಒಂದೇ ಪದವನ್ನು ಅಲ್ಪಪ್ರಾಣವಾಗಿಯೂ ಮಹಾಪ್ರಾಣವಾಗಿಯೂ ಇಷ್ಟಬಂದಂತೆ ಹೇಳುವರು. ಮಹಾಪ್ರಾಣಾಕ್ಷರಗಳು ಭಾಷೆಗೆ ಸಹಜವಾಗಿದ್ದರೆ, ಅನುಕರಣ ಸೂಚಕ ಶಬ್ದಗಳಲ್ಲಿಯೂ ಒಂದು ನಿಯಮವಿರುತ್ತಿತ್ತು.

ಕೊನೆಯದಾಗಿ ಕೇಶಿರಾಜನು ಕನ್ನಡ ನುಡಿಯ ಸಹಜ ಮಹಾಪ್ರಾಣಗಳೆಂಬದಾಗಿ ಕೊಟ್ಟ ಕೆಲವು ಉದಾಹರಣೆಗಳನ್ನು ವಿಚಾರಿಸೋಣ-

ಈ ಪಟ್ಟಿಯೊಳಗಣ ಶಬ್ದಗಳ ಸ್ವರೂಪವನ್ನು ನೋಡಿದೊಡನೆಯೇ ಅವು ದೇಶ್ಯವಲ್ಲವೆಂಬುದು ಹೊಳೆಯದಿರದು. ಆದರೆ ಅವೆಲ್ಲವೂ ಆ ಕಾಲದ ಕನ್ನಡದಲ್ಲಿ ಪ್ರಚಾರದಲ್ಲಿದ್ದುದರಿಂದ ಅವುಗಳ ಮೂಲವು ತಿಳಿಯದಿದ್ದುದರಿಂದ, ಅವು ಕನ್ನಡದ ಪಾಲಿಗೆ ಬಂದುವು. ಕನ್ನಡದಲ್ಲಿ ಮಹಾಪ್ರಾಣಾಕ್ಷರಗಳುಂಟೆಂದು ಸಾಕ್ಷಿ ಹೇಳುವುದಕ್ಕೆ ದೊರಕಿದವು.

ಕೇಶಿರಾಜನು ಉದಾಹರಿಸಿದ ಶಬ್ದಗಳಲ್ಲಿ ಅನೇಕಕ್ಕೆ ಸರಿಯಾಗಿ ಇಂದು ಅರ್ಥವಾಗುವುದಿಲ್ಲ. ಅವುಗಳ ಪ್ರಯೋಗಗಳು ಇತರ ಗ್ರಂಥಗಳಲ್ಲಿ ದೊರೆತು ಅರ್ಥ ತಿಳಿಯುವವರೆಗೆ ಅವನ್ನು ಕುರಿತು ಹೆಚ್ಚಿಗೆ ಹೇಳಲು ಸಾಧ್ಯವಿಲ್ಲ. ಇಲ್ಲಿ ಕೆಲವನ್ನು ಮಾತ್ರ ಆಯ್ದುಕೊಂಡಿದೆ.

ಖೊಪ್ಪರ- ಇದರ ಸರಿಯಾದ ಪ್ರಯೋಗವು ಸಿಕ್ಕದಿರುವ ಕಾರಣ ಇದರ ಅರ್ಥವು ತಿಳಿಯುವುದಿಲ್ಲ. ಕೆಲ ವಿದ್ವಾಂಸರು ಇದು ‘ಕೂರ್ಪರ’ (ಭುಜಶಿರಸ್) ಅಥವಾ ‘ಕರ್ಪರ’ (ಕೊಪ್ಪರಿಗೆ) ಎಂಬ ಸಂಸ್ಕೃತ ಶಬ್ದದ ತದ್ಭವವಿರಬೇಕೆಂದು ಅಭಿಪ್ರಾಯಪಡುತ್ತಾರೆ. ಇದು ಹೀಗಿದ್ದರೆ ವಿಚಿತ್ರ. ಏಕೆಂದರೆ ಸಂಸ್ಕೃತದಲ್ಲಿ ಅಲ್ಪಪ್ರಾಣವಾಗಿರುವ ‘ಕ’ ಕಾರವು ಕನ್ನಡಕ್ಕೆ ಬರುವಾಗ ಮಹಾಪ್ರಾಣವಾದಂತಾಯಿತು. ಹೊಸತಾಗಿ ಆಗಮಿಸಿದ ‘ಮಹಾಪ್ರಾಣದ’ ವಿಚಾರದಲ್ಲಿ ಕನ್ನಡಿಗರ ಉತ್ಸಾಹವು ಸಂಸ್ಕೃತದವರಿಗಿಂತಲೂ ಮಿಗಿಲಾದಂತೆ ತೋರುತ್ತಿದೆ. ಕೆಲವು ಸಂದರ್ಭಗಳಲ್ಲಿ ಅಲ್ಪಪ್ರಾಣಾಕ್ಷರವನ್ನು ಮಹಾಪ್ರಾಣಾಕ್ಷರವಾಗಿ ಉಚ್ಚರಿಸುವುದು ದೇಶ್ಯ ಶಬ್ದಗಳಲ್ಲಿ ಕಾಣಬಹುದು. ಯುದ್ಧವೆಂಬರ್ಥದಲ್ಲಿ ಮಹಾಪ್ರಾಣವುಳ್ಳ “ಧುರ” ಶಬ್ದವನ್ನು ನಾವು ಉಪಯೋಗಿಸುತ್ತೇವೆ. ತೆಲುಗಿನಲ್ಲಿ ಇದು “ದುರ” (ದೇಶ್ಯ ಶಬ್ದ). ಪ್ರಾಯಶಃ “ಯುದ್ಧ”ವೆಂಬುದು ಮತ್ತಷ್ಟು ಮಂದಟ್ಟಾಗಲು ಹೊಸತಾಗಿ ಬಂದ ಮಹಾಪ್ರಾಣಾಕ್ಷರವು ಉಪಯೋಗವಾಗಿರಬಹುದು.

ಇನ್ನು “ಛಲ್ಲಿ” ಎಂಬ ಶಬ್ದದ ಇತಿಹಾಸವು ಬಹಳ ಸ್ವಾರಸ್ಯವಿದೆ. ಹದಿನಾಲ್ಕನೆಯ ಶತಮಾನದ ಪೂರ್ವಾರ್ಧದಲ್ಲಿ ರಚಿತವಾದ ಖಗೇಂದ್ರಮಣಿದರ್ಪಣದಲ್ಲಿ “ಛಲ್ಲಿ” ಪದ ಪ್ರಯೋಗವುಳ್ಳ ಕೆಳಗಿನ ಪದ್ಯಗಳಿವೆ.
ಅಲರಂ ಬಸಂತದೊಳ್, ತ-ತ್ವಲಮಂ ಗ್ರೀಷ್ಮದೊಳ್ ಮೂಲಮಂ ಶರದದೊಳಂ
ದಲಮಂ ಶಿಶಿರದೊಳಂ ತಾಂ
ನವವಿಂ ಪ್ರಾವೃಡ್ದಿನಂಗಳೊಳ್ ಛಲ್ಲಿಗಳಂ

ಇಲ್ಲಿ ಒಂದು ಔಷಧಿಯ ಬೇರೆ ಬೇರೆ ಭಾಗಗಳನ್ನು ಸಂಗ್ರಹಿಸುವುದಕ್ಕೆ ಯೋಗ್ಯವಾದ ಸಮಯವನ್ನು ಹೇಳಿದೆ. ಹೂ, ಕಾಯಿ, ಬೇರು, ಎಲೆಗಳಿಗಿರುವ ಕಾಲವನ್ನು ಹೇಳಿ, ಛಲ್ಲಿಗಳ ಸಂಗ್ರಹಕ್ಕೆ ಮಳೆಗಾಲ ಯೋಗ್ಯವೆನ್ನುತ್ತಾನೆ.
ಹಾಗೆಯೇ,

ಪ್ರಸವಕ್ಕೆ ಪತ್ರ ಪತ್ರ
ಕ್ಕೆಸೆವ ಫಲಂ ಫಲಕ್ಕೆ ಛಲ್ಲಿ ಛಲ್ಲಿಗೆ ಪಣ್ಣಂ
ತಸದೃಶದ ಪಣ್ಗೆ ಬೇರ್ಗಳ್
ವಿಶೇಷತರ ವೀರ್ಯವೃದ್ಧಿಯಿಂದೆಂಟು ಗುಣಂ ||

ಒಂದು ಓಷಧಿಯಲ್ಲಿ, ಎಲೆಗಿಂತ ಕಾಯಿ, ಕಾಯಿಗಿಂತ ಛಲ್ಲಿ, ಛಲ್ಲಿಗಿಂತ ಹಣ್ಣು, ಹಣ್ಣಿಗಿಂತ ಬೇರು, ಎಂಟರಷ್ಟು ಗುಣವಿರುವುದೆಂಬ ಅಭಿಪ್ರಾಯ.

ಮೇಲಿನ ಸಂದರ್ಭಗಳಿಂದ ಛಲ್ಲಿ ಎಂದರೆ ತೊಗಟು ಅಥವಾ ಸಿಪ್ಪೆ ಎಂಬುದು ಬಹಳ ಸ್ಪಷ್ಟವಾಗುತ್ತದೆ. ಅಲ್ಲದೆ ಖಗೇಂದ್ರಮಣಿದರ್ಪಣದ ಇನ್ನೊಂದು ಪ್ರತಿಯಲ್ಲಿ ಛಲ್ಲಿ ಎಂಬಲ್ಲಿ “ಝಲ್ಲಿ” ಎಂಬ ಪಾಠಭೇದವನ್ನು ಎಂದರೆ ‘ತೊಗಟೆ’ ಎಂಬ ಅರ್ಥದವನ್ನು ಕೊಟ್ಟಿದೆ.

ಇನ್ನು ಹೇಮಚಂದ್ರನ ದೇಶೀನಾಮಮಾಲೆಯಲ್ಲಿ ಛಲ್ಲೀ=ತ್ವಕ್, ಎಂಬ ಮೇಲಿನ ಅರ್ಥವನ್ನೇ ಕೊಟ್ಟಿದೆ. ಅದುದರಿಂದ ಹೇಮಚಂದ್ರನ ದೃಷ್ಟಿಯಿಂದಲೂ ಈ ಶಬ್ದವು ದೇಶ್ಯವಾಗಿರಬೇಕು. ಸಂಸ್ಕೃತ ಮೂಲವಲ್ಲ. ಹಾಗಾದರೆ ತುಳುವಿನಲ್ಲಿ ಮತ್ತು ಹವ್ಯಕರ ಮನೆ (ಕನ್ನಡ) ಮಾತಿನಲ್ಲಿ ಇಂದಿಗೂ ತೊಗಟೆ, ಸಿಪ್ಪೆ, ಎಂಬರ್ಥದಲ್ಲಿ ಹೇಳುವ ಚೋಲಿ (=ತೋಲ್, ತೊಗಲ್, ತೊವಲ್) ಎಂಬ ಅಚ್ಚ ದೇಶ್ಯ ಶಬ್ದವು ಇದರ ಮೂಲವಿರಲಾರದೆ? ಪ್ರಾಯಶಃ ಈ ಅಲ್ಪಪ್ರಾಣದ ಚೋಲಿಯು ಪ್ರಾಕೃತಕ್ಕೆ “ಛಲ್ಲೀ”ಯಾಗಿ ಹೋಗಿ, ಅಲ್ಲಿಂದ ಮರಳಿ ಕನ್ನಡಕ್ಕೆ “ಛಲ್ಲಿ” ಅಥವಾ “ಝಲ್ಲಿ”ಯಾಗಿ ಮಹಾಪ್ರಾಣದೊಡನೆ ಪ್ರವೇಶಿಸಿದ್ದೀತು. ಹಿಂದಿ ಭಾಷೆಯಲ್ಲಿ “ಛಾಲ್” ಎಂಬ ರೂಪದಲ್ಲಿರುವ ಶಬ್ದವೂ ಇದೇ ಛಲ್ಲಿಯಾಗಿರಬೇಕು. (ಛಾಲ್= Skin, bark rind, etc)

‘ಝಳಪಿಸು’ ಇತ್ಯಾದಿ ಕೆಲವು ಶಬ್ದಗಳು ಅನುಕರಣ ಸೂಚಕ ಶಬ್ದಗಳಿಂದ ಹುಟ್ಟಿದವಾಗಿರಬೇಕು. ಹಿಂದಿ ಭಾಷೆಯಲ್ಲಿ ‘ಝಲ್ ಝಲ್’ = ಹೊಳೆಯುವ, ಪ್ರಕಾಶಿಸುವ ಎಂದರ್ಥ. ಇಂತಹವು ಪ್ರಾಯಃ ಎಲ್ಲ ಭಾಷೆಗಳಲ್ಲೂ ಇರುವುವು. ಇವು ಸಹಜ ಮಹಾಪ್ರಾಣಗಳಲ್ಲ. ಆಯಾ ಭಾಷೆಯ ವೈಶಿಷ್ಟ್ಯದ ಮೇಲೆ ಅವುಗಳ ಅಲ್ಪಪ್ರಾಣ ಮಹಾಪ್ರಾಣಗಳು ಹೊಂದಿಕೊಂಡಿವೆ.

ಸುತ್ಥಣಿ (=ಕಾಲ್ಬಲ). ಇಂತಹ ಶಬ್ದಗಳನ್ನು ನೋಡುವಾಗಲೇ ಇಲ್ಲಿ ಮಹಾಪ್ರಾಣವು ತಪ್ಪಾಗಿ ಬಿದ್ದಿರಬೇಕೆಂದೆನಿಸುತ್ತದೆ. ಈ ಶಬ್ದದ ಪೂರ್ವಭಾಗವು ಅಚ್ಚಗನ್ನಡವಾಗಿರುವ “ಸುತ್ತು” ಸುತ್ತುವ ಹಣಿ (?)= ಸುತ್ಥಣಿಯಾಗಿರಬಹುದು. (ಸೋತು+ಹೋಗಿ = ಸೋಥೋಗಿ ಎಂದು ಉಚ್ಚಾರದಲ್ಲಿ ಆಗುವಂತೆ), ಇಲ್ಲಿಯೂ ಮಹಾಪ್ರಾಣವು ಅನಾವಶ್ಯಕ ಮತ್ತು ಅಸ್ವಾಭಾವಿಕ

ಕೇಶಿರಾಜನು ಕೊಟ್ಟ ಉದಾಹರಣೆಗಳಲ್ಲಿ ಇನ್ನು ಕೆಲವು ನಿಸ್ಸಂದೇಹವಾಗಿಯೂ ಸಂಸ್ಕೃತದಿಂದ ಬಂದಿರುತ್ತವೆ:

ಠಾಣಂ-ಠಾಣೋ (ಪ್ರಾಕೃತ)- ಸ್ಥಾನ (ಸಂಸ್ಕೃತ).

ವಖ್ಬಾಣಂ – ವ್ಯಾಖ್ಯಾನ (ಸಂಸ್ಕೃತ) – ಇದು ಕಿಟ್ಟಲ್ ಸಾಹೇಬರ ಸೂಚನೆ. ಇದೇ ಕಾಲಕ್ರಮೇಣ ಒಕ್ಕಣೆ (ವಕ್ಕಣೆ)ಯಾಗಿರಬೇಕು.

ಪಖ್ಖಾಳಂ – ಪ್ರಕ್ಷಾಲನ (ಸಂಸ್ಕೃತ)
ಭಾವ – ಭಾಮ (ಸಂಸ್ಕೃತ)
ಘೋಸಂ – ಘೋಷ (ಸಂಸ್ಕೃತ)
ಭಂಡಾರಂ – ಭಾಂಡಾಗಾರ (ಸಂಸ್ಕೃತ)

ಭರಿಕೈ – ಎಂಬುದೊಂದು ವಿಚಿತ್ರ ಸಮಾಸವಿದ್ದಂತೆ ಕಾಣುತ್ತದೆ. ಇದರ ಅರ್ಥ ಅನೆಯ ಸೊಂಡಿಲು. ಅನೆಯ ಉದರವನ್ನು ‘ಭರಣ’ ಮಾಡುವ ಕೈಯು ಸೊಂಡಿಲಾದುದರಿಂದ, ಅದು ‘ಭರಿ-ಕೈ’ಯಾದಂತೆ ಕಾಣುತ್ತದೆ. ಇಲ್ಲಿಯ ಮಹಾಪ್ರಾಣವೂ ಸಹಜವಲ್ಲ.

ಈ ಅಂಶಗಳನ್ನು ಗಮನಿಸಿದರೆ, ಕನ್ನಡದಲ್ಲಿ ಸ್ವಾಭಾವಿಕವಾಗಿ ಮಹಾಪ್ರಾಣಗಳಿಲ್ಲವೆಂದು ಹೇಳಬೇಕಾಗುತ್ತದೆ.

ಪ್ರೊ. ಎಂ. ಮರಿಯಪ್ಪ ಭಟ್ಟ

ದಿವಂಗತ ಪ್ರೊ. ಎಂ ಮರಿಯಪ್ಪ ಭಟ್ಟರು ಕನ್ನಡದ ಉದ್ದಾಮ ಪಂಡಿತರಲ್ಲಿ ಒಬ್ಬರು. ಮೂರು ದಶಕಗಳ ಕಾಲ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಪಂಡಿತರಾಗಿ, ನಿಘಂಟುತಜ್ಞರಾಗಿ, ಸಂಶೋಧಕರಾಗಿ ಸೇವೆ ಸಲ್ಲಿಸಿದ್ದಾರೆ. ದ್ರಾವಿಡ ಭಾಷೆಗಳ ವಿದ್ವತ್ತು ಮತ್ತು ಭಾರತದಲ್ಲಿ ಭಾಷಾಶಾಸ್ತ್ರದ ಬಗ್ಗೆ ಪರಿಣಿತರಾಗಿದ್ದ ಮರಿಯಪ್ಪ ಭಟ್ಟರು ಕಿಟ್ಟೆಲ್‍ನ ಕನ್ನಡ ಶಬ್ದಕೋಶವನ್ನು ಪರಿಷ್ಕರಿಸಿ ಪ್ರಕಟಿಸಿದ್ದರು.

 


ಇದನ್ನೂ ಓದಿ: ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ: ಮಾತು ತಪ್ಪಿದ ಕೇಂದ್ರ ಸರ್ಕಾರ – ಟಿ.ಎಸ್.ನಾಗಾಭರಣ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...