ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಂಗಳವಾರ (ಅ.29) ಕೊನೆಗೊಂಡಿದೆ. ವಿವಿಧ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳಿಂದ ಒಟ್ಟು 10 ಸಾವಿರಕ್ಕೂ ಅಧಿಕ ನಾಮಪತ್ರಗಳು ಸಲ್ಲಿಕೆಯಾಗಿವೆ.
ಒಟ್ಟು 288 ಸದಸ್ಯ ಬಲ ಹೊಂದಿರುವ ವಿಧಾನಸಭೆಗೆ ಬಿಜೆಪಿ ಅತೀ ಹೆಚ್ಚು , ಅಂದರೆ 148 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ 103 ಸ್ಥಾನಗಳಿಗೆ ಸ್ಪರ್ಧಿಸುತ್ತಿದೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 80 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಎನ್‌ಸಿಪಿ 53 ಕಡೆಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಇತರ ‘ಮಹಾಯುತಿ’ ಮಿತ್ರರಿಗೆ ಐದು ಸ್ಥಾನಗಳನ್ನು ನೀಡಲಾಗಿದೆ. ಆದರೆ, ಎರಡೂ ಪಕ್ಷಗಳಿಂದ ಈ ಸ್ಥಾನಗಳ ಕುರಿತು ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.
ವಿರೋಧ ಪಕ್ಷಗಳ ಒಕ್ಕೂಟ ಮಹಾ ವಿಕಾಸ್ ಅಘಾಡಿಯಲ್ಲಿ (ಎಂವಿಎ) ಕಾಂಗ್ರೆಸ್ 103 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) 89 ಮತ್ತು ಎನ್‌ಸಿಪಿ (ಎಸ್‌ಪಿ) 87 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇಲ್ಲಿಯೂ ಇತರ ಎಂವಿಎ ಮಿತ್ರರಿಗೆ ಆರು ಸ್ಥಾನಗಳನ್ನು ನೀಡಲಾಗಿದ್ದು, ಮೂರು ವಿಧಾನಸಭಾ ಕ್ಷೇತ್ರಗಳ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಆಡಳಿತ ಮತ್ತು ವಿರೋಧ ಒಕ್ಕೂಟಗಳ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಸುಮಾರು 8,000 (7,995) ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಒಟ್ಟಾರೆಯಾಗಿ, 7,995 ಅಭ್ಯರ್ಥಿಗಳಿಂದ ಚುನಾವಣಾ ಆಯೋಗಕ್ಕೆ (ಇಸಿ) 10,905 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿ ಹೊರಡಿಸಿದ ಪ್ರಕಟಣೆ ತಿಳಿಸಿದೆ.
ಅಕ್ಟೋಬರ್ 22 ರಂದು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಪ್ರಾರಂಭಗೊಂಡಿತ್ತು. ಅಕ್ಟೋಬರ್ 29 (ಮಂಗಳವಾರ) ಕೊನೆಗೊಂಡಿದೆ. ಅಕ್ಟೋಬರ್ 30ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ನವೆಂಬರ್ 4 (ಮಧ್ಯಾಹ್ನ 3 ಗಂಟೆಯವರೆಗೆ) ರವರೆಗೆ ಸಮಯವಿದೆ.
ನವೆಂಬರ್ 20 ರಂದು ಮತದಾನ ನಡೆಯಲಿದ್ದು, ಮೂರು ದಿನಗಳ ನಂತರ ಮತ ಎಣಿಕೆ ನಡೆಯಲಿದೆ. ಈ ಬಾರಿ ಆಡಳಿತಾರೂಢ ಮಹಾಯುತಿ ಮತ್ತು ವಿರೋಧ ಪಕ್ಷಗಳ ಎಂವಿಎ ನಡುವೆ ಹಣಾಹಣಿ ಏರ್ಪಡಲಿದೆ.
ಇದನ್ನೂ ಓದಿ : ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯನ್ನು ಗುರುತಿಸಿದ ಪೊಲೀಸರು : ವರದಿ


