ಮುಂಬರುವ ಮಹಾರಾಷ್ಟ್ರ ವಿಧಾನಸಭೆ ವಿಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ 125 ಸ್ಥಾನಗಳ ಭಿನ್ನಾಭಿಪ್ರಾಯಗಳು ನಿವಾರಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಉಳಿದ 163 ಸ್ಥಾನಗಳು ಯಾರಿಗೆ ಎಂಬ ವಿಚಾರದಲ್ಲಿ ಮಿತ್ರಪಕ್ಷಗಳ ನಡುವೆ ಇನ್ನೂ ತೀರ್ಮಾನವಾಗಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಆದಾಗ್ಯೂ, ಗಣೇಶ ಹಬ್ಬದ ನಂತರ ಮಿತ್ರಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಪರಿಹರಿಸಿ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದವನ್ನು ಪ್ರಕಟಿಸಲಿವೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ವಿಜಯ್ ವಡೆತ್ತಿವಾರ್ ಮಾತನಾಡಿ, “ಎಂವಿಎ ಮೈತ್ರಿಕೂಟದ ಪಕ್ಷಗಳ ನಡುವೆ ವಿಧಾನಸಭೆಯ 125 ಸ್ಥಾನಗಳ ಬಗ್ಗೆ ಯಾವುದೇ ಸಮಸ್ಯೆಗಳಿಲ್ಲ. ಆದರೆ ಉಳಿದ 163 ಸ್ಥಾನಗಳ ಬಗ್ಗೆಗಿನ ಭಿನ್ನಾಭಿಪ್ರಾಯಗಳನ್ನು ಇನ್ನಷ್ಟೆ ಪರಿಹರಿಸಬೇಕಾಗಿದೆ” ಎಂದು ಹೇಳಿದ್ದಾರೆ.
ಆದಾಗ್ಯೂ, ಗಣೇಶ ಹಬ್ಬದ ನಂತರ ಮಿತ್ರಪಕ್ಷಗಳಾದ ಕಾಂಗ್ರೆಸ್, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಶರದ್ ಪವಾರ್) ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಪರಿಹರಿಸಿ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದವನ್ನು ಪ್ರಕಟಿಸಲಿವೆ ಎಂದು ಅವರು ಹೇಳಿದ್ದಾರೆ.
“ನಾವು ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಆಂತರಿಕ ಮತ್ತು ಬಾಹ್ಯ ಸಮೀಕ್ಷೆಗಳು ಎಂವಿಎ ಪ್ರಬಲವಾಗಿದೆ ಮತ್ತು ಲೋಕಸಭೆಯ ಕಾರ್ಯಕ್ಷಮತೆ ಪುನರಾವರ್ತನೆಯಾಗುವ ಸಾಧ್ಯತೆಯಿದೆ ಎಂದು ಸುಳಿವು ನೀಡಿದೆ. ಹಾಗಾಗಿ ಫಲಿತಾಂಶ ಇನ್ನೂ ಉತ್ತಮವಾಗಿ ಬರಬಹುದು”ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಇದನ್ನೂಓದಿ:ತೆರಿಗೆಯಲ್ಲಿ ಶೇ.50ರಷ್ಟು ಪಾಲು ಕೊಡಿ : ಪ್ರತಿಪಕ್ಷಗಳ ಆಡಳಿತ ರಾಜ್ಯಗಳಿಂದ ಕೇಂದ್ರಕ್ಕೆ ಆಗ್ರಹ
“ಮಹಾರಾಷ್ಟ್ರ ವಿರೋಧಿ ಮಹಾಯುತಿ ಸರ್ಕಾರವನ್ನು ಅಧಿಕಾರದಿಂದ ಹೊರಹಾಕಲು ಮತ್ತು ಸ್ಥಳೀಯ ಜನರು ಮತ್ತು ರೈತರ ಹಿತಾಸಕ್ತಿಗಳ ಪರವಾಗಿರುವ ಸರ್ಕಾರವನ್ನು ಮರಳಿ ತರಲು ಮಹಾರಾಷ್ಟ್ರದ ಜನರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶದ ಆಧಾರದ ಮೇಲೆ ಪಕ್ಷವು 110ಕ್ಕೂ ಹೆಚ್ಚು ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 13 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶರದ್ ಪವಾರ್ ನೇತೃತ್ವದ ಎನ್‌ಸಿಪಿ ತಾನು ಸ್ಪರ್ಧಿಸಿದ್ದ 10 ಸ್ಥಾನಗಳಲ್ಲಿ ಎಂಟು ಸ್ಥಾನಗಳನ್ನು ಗೆದ್ದಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ತಾನು ಸ್ಪರ್ಧಿಸಿದ್ದ 21 ಸ್ಥಾನಗಳ ವಿರುದ್ಧ ಒಂಬತ್ತು ಸ್ಥಾನಗಳನ್ನು ಗೆದ್ದಿತ್ತು.
ಎನ್‌ಸಿಪಿ (ಎಸ್‌ಪಿ) ಕೂಡ ವಿಧಾನಸಭೆ ಚುನಾವಣೆಯಲ್ಲಿ ಸಮಾನ ಸಂಖ್ಯೆಯ ಸ್ಥಾನಗಳನ್ನು ಕೇಳುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಲೋಕಸಭೆ ಚುನಾವಣೆಯಲ್ಲಿ ಎನ್‌ಸಿಪಿ (ಎಸ್‌ಪಿ) ಹೊಂದಾಣಿಕೆ ಮಾಡಿಕೊಂಡಿತ್ತು. ಜೊತೆಗೆ ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ಗಿಂತ ಕಡಿಮೆ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನಕ್ಕೆ ಒಪ್ಪಿಕೊಳ್ಳಲು ಪಕ್ಷವೂ ಸಿದ್ಧವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಶಿವಸೇನೆ (ಯುಬಿಟಿ) ಕೂಡ 100ಕ್ಕೂ ಹೆಚ್ಚು ಸ್ಥಾನಗಳನ್ನು ಕೇಳುತ್ತಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ವಿಡಿಯೊ ನೋಡಿ: ಒಕ್ಕೂಟ ವ್ಯವಸ್ಥೆ ಮಣ್ಣು ಮುಕ್ಕಿದೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ಮೀನಾಕ್ಷಿ ಬಾಳಿ ಮಾತುಗಳು


