ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ, ಮಹಾರಾಷ್ಟ್ರದಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರನ್ನು ಶುಕ್ರವಾರ ಪಕ್ಷದಿಂದ ಉಚ್ಛಾಟಿಸಲಾಗಿದೆ. ಈ ಪೈಕಿ ಒಬ್ಬರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ, ವಿಶೇಷವಾಗಿ ವಿಧಾನಪರಿಷತ್ತಿನ ಚುನಾವಣೆಯ ಸಂದರ್ಭದಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಮೇಲೆ ಶಾಸಕರಾದ ಜಿತೇಶ್ ಅಂತಪುರ್‌ಕರ್ ಮತ್ತು ಜೀಶನ್ ಸಿದ್ದಿಕ್ ಅವರನ್ನು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಅಧ್ಯಕ್ಷ ನಾನಾ ಪಟೋಲೆ ಉಚ್ಚಾಟನೆ ಮಾಡಿದ್ದಾರೆ. ಈ ಬೆನ್ನಲ್ಲೇ ಅಂತಪುರ್‌ಕರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಶಾಸಕರಾದ ಸಿದ್ದೀಕ್ ಮತ್ತು ಜಿತೇಶ್ ಅಂತಪುರ್‌ಕರ್ ಅಡ್ಡ ಮತದಾನ ಮಾಡಿದ್ದರು. ಆಂತರಿಕ ತನಿಖೆಯಲ್ಲಿ ಅಂತಪುರ್‌ಕರ್ ಮತ್ತು ಸಿದ್ದೀಕ್ ಜೊತೆಗೆ ಇನ್ನೂ ಐವರು ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬದಲು ವಿಧಾನಸಭೆ ಚುನಾವಣೆಗೆ ನಾಮಪತ್ರ ನಿರಾಕರಿಸಲು ನಿರ್ಧರಿಸಲಾಗಿತ್ತು. ಆದಾಗ್ಯೂ, ಎಐಸಿಸಿಯ ಅನುಮೋದನೆಯೊಂದಿಗೆ, ನಾನಾ ಪಟೋಲೆ ಅವರು ಇಬ್ಬರು ಶಾಸಕರನ್ನು ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿದ್ದಾರೆ. ಈಗ ಉಳಿದ ಐವರು ತಪ್ಪಿತಸ್ಥ ಶಾಸಕರನ್ನು ಉಚ್ಛಾಟಿಸುತ್ತಾರೋ ಅಥವಾ ವಿಧಾನಸಭಾ ಚುನಾವಣೆ ಘೋಷಣೆಯಾಗುವವರೆಗೆ ಕಾಯುತ್ತಾರೋ ಕಾದು ನೋಡಬೇಕಿದೆ.
ಸಿದ್ದೀಕ್ ಅವರು ಮಾಜಿ ಮೇಯರ್ ವಿಶ್ವನಾಥ್ ಮಹದೇಶ್ವರ್ ಅವರನ್ನು ಸೋಲಿಸುವ ಮೂಲಕ ಮುಂಬೈನ ಬಾಂದ್ರಾ (ಇ) ನಿಂದ ವಿಧಾನಸಭೆಗೆ ಚುನಾಯಿತರಾಗಿದ್ದರು. ಅಂತಪುರ್‌ಕರ್ ಅವರು ನಾಂದೇಡ್ ಜಿಲ್ಲೆಯ ದೆಗ್ಲೂರ್ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಗಮನಾರ್ಹವಾಗಿ, ಪಕ್ಷದಿಂದ ಹೊರಹಾಕುವ ಮೊದಲೇ, ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರ ವಿಶ್ವಾಸಾರ್ಹ ಸಹಾಯಕ ಅಂತಪುರ್‌ಕರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದಾರೆ.
ಅಂತಪುರ್‌ಕರ್ ಅವರಲ್ಲದೆ, ಅಶೋಕ್ ಚವಾಣ್ ಅವರ ನಾಯಕತ್ವದಲ್ಲಿ ನಂಬಿಕೆ ಹೊಂದಿರುವ ಮರಾಠವಾಡ ಪ್ರದೇಶದ ಇನ್ನೂ ಕೆಲವು ಶಾಸಕರು ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆಯಲಿದ್ದಾರೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ : ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ದೆಹಲಿಯ ಜಂತರ್ ಮಂತರ್‌ನಲ್ಲಿ ಏಮ್ಸ್ ವೈದ್ಯರಿಂದ ಪ್ರತಿಭಟನೆ


