ಹೊಸದಿಲ್ಲಿ: ಮಹಾರಾಷ್ಟ್ರ ಚುನಾವಣೆಯಲ್ಲಿ “ಮತ ಕಳ್ಳತನ” ನಡೆದಿದ್ದು, ಇದನ್ನು ಚುನಾವಣಾ ಆಯೋಗವು “ಮುಚ್ಚಿಹಾಕುತ್ತಿದೆ”. ಆಯೋಗವು ಚುನಾವಣೆಗೆ ಸಂಬಂಧಿಸಿ ಮೆಷಿನ್-ರೀಡೆಬಲ್ ಡಿಜಿಟಲ್ ಮತದಾರರ ಪಟ್ಟಿಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಇಂದು ಎಕ್ಸ್ ಖಾತೆಯಲ್ಲಿ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕ್ಷೇತ್ರದಲ್ಲಿ ಮತದಾರರ ಸೇರ್ಪಡೆ ಸಂದರ್ಭದಲ್ಲಿ ಕಡ್ಡಾಯ ಪರಿಶೀಲನೆ ನಡೆಸಲಾಗಿಲ್ಲ. ಅಲ್ಲದೇ ಆರು ತಿಂಗಳ ಅವಧಿಯಲ್ಲಿ ಸುಮಾರು 29,000 ಮತದಾರರನ್ನು ಸೇರಿಸಲಾಗಿದೆ ಎಂದು ವರದಿಯೊಂದು ಸೂಚಿಸಿದ ನಂತರ ರಾಹುಲ್ ಗಾಂಧಿಯವರು ಈ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಚುನಾವಣೆಗಳ ಮೊದಲು 2024ರ ನಂತರದ ಕರಡು ಮತದಾರರ ಪಟ್ಟಿಗಳ ಪ್ರತಿಗಳನ್ನು ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳಿಗೆ ನೀಡಲಾಗಿದೆ ಎಂದು ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ ಹೇಳಿದ್ದಾರೆ.
ಕರಡು ಮತ್ತು ಅಂತಿಮ ಮತದಾರರ ಪಟ್ಟಿಗಳ ಪ್ರಕಟಣೆಯ ನಡುವೆ 19,27,508ರಷ್ಟು ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ. ತಪ್ಪಾದ ಸೇರ್ಪಡೆಗಳು ಅಥವಾ ಅಳಿಸುವಿಕೆ ಕುರಿತು ಕೇವಲ 89 ಮನವಿಗಳನ್ನು ಮಾತ್ರ ಸ್ವೀಕರಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಮಾಹಿತಿ ನೀಡಿದರು.
ರಾಹುಲ್ ಮತದಾರರ ಪಟ್ಟಿಗಾಗಿ “ಸಂಪೂರ್ಣ ಪಾರದರ್ಶಕತೆ” ಗಾಗಿ ಪದೇ ಪದೇ ಒತ್ತಾಯಿಸಿದ್ದಾರೆ. ಆದರೆ ಚುನಾವಣಾ ಆಯೋಗವು ಮೆಷಿನ್-ರೀಡೆಬಲ್ ಮತದಾರರ ಪಟ್ಟಿಗಳನ್ನು ಬಹಿರಂಗಪಡಿಸಲು ನಿರಾಕರಿಸುತ್ತಿದೆ ಎಂದು ಅವರು ಹೇಳಿದರು.
ನಮ್ಮ ಚುನಾವಣಾ ವ್ಯವಸ್ಥೆಯ ಸಮಗ್ರತೆಯು ಅಧಃಪತನಕ್ಕೆ ತಲುಪಿದೆ. ಇದನ್ನು ಆಡಳಿತ ಪಕ್ಷದ ನಾಯಕರು ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ಮ್ಯಾಚ್ ಫಿಕ್ಸಿಂಗ್ ಅಲ್ಲವಲ್ಲದೆ ಇನ್ನೇನು? ಎಂದು ಅವರು ಪ್ರಶ್ನಿಸಿದರು.
ನ್ಯೂಸ್‌ಲಾಂಡ್ರಿ ತನ್ನ ವರದಿಯಲ್ಲಿ ನಾಗ್ಪುರ ನೈಋತ್ಯ ಕ್ಷೇತ್ರದಲ್ಲಿ ಆರು ತಿಂಗಳಲ್ಲಿ 29,219 ಹೊಸ ಮತದಾರರನ್ನು ಸೇರಿಸಲಾಗಿದೆ ಎಂದು ಹೇಳಿದೆ. ಇದು 8.25%ರಷ್ಟು ಹೆಚ್ಚಳವಾಗಿದೆ. ಇದು ಕಡ್ಡಾಯ ಪರಿಶೀಲನೆಗಳಿಗೆ ಚುನಾವಣಾ ಆಯೋಗವು ನಿಗದಿಪಡಿಸಿದ 4% ಹೆಚ್ಚಳದ ಮಿತಿಗಿಂತ ಹೆಚ್ಚಾಗಿದೆ. ಹಲವಾರು ಮತಗಟ್ಟೆಗಳಲ್ಲಿ ಪರಿಶೀಲನೆಗಳನ್ನು ಮಾಡಲಾಗಿಲ್ಲ ಎಂದು ವರದಿ ಹೇಳಿದೆ.
ಕನಿಷ್ಠ 4,000 ಮತದಾರರಿಗೆ ವಿಳಾಸಗಳಿಲ್ಲ ಎಂದು ವರದಿ ಹೇಳಿದೆ. 70% ಮತಗಟ್ಟೆಗಳಲ್ಲಿ 4%ಕ್ಕಿಂತ ಹೆಚ್ಚು ಮತ ಸೇರ್ಪಡೆಗಳಿದ್ದರೆ, 26 ಮತಗಟ್ಟೆಗಳಲ್ಲಿ 20%ಕ್ಕಿಂತ ಹೆಚ್ಚು ಮತ್ತು ನಾಲ್ಕು ಮತಗಟ್ಟೆಗಳಲ್ಲಿ 40%ಕ್ಕಿಂತ ಹೆಚ್ಚು ಸೇರ್ಪಡೆಗಳಿವೆ ಎಂದು ಅದು ಹೇಳಿದೆ. ಚುನಾವಣಾ ಆಯೋಗವು ಈ ಹೇಳಿಕೆಗಳನ್ನು ನಿರಾಕರಿಸಿದೆ.
ಆಂಧ್ರ: ದಲಿತ ಪ್ರಾಧ್ಯಾಪಕನ ಕುರ್ಚಿ ತೆಗೆದು ನೆಲದ ಮೇಲೆ ಕೂರಿಸಿದ ಪ್ರಿನ್ಸಿಪಾಲ್; ವ್ಯಾಪಕ ಆಕ್ರೋಶ


