ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗೆ ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಸ್ಥಾನಗಳ ಪೈಕಿ 200 ವಿಧಾನಸಭಾ ಸ್ಥಾನಗಳಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಮಿತ್ರಪಕ್ಷಗಳು ಇದುವರೆಗೆ ಒಮ್ಮತಕ್ಕೆ ಬಂದಿವೆ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಗುರುವಾರ ಹೇಳಿದ್ದಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹರಿಯಾಣ ಚುನಾವಣೆಯ ಫಲಿತಾಂಶಗಳು, ಬಿಜೆಪಿ ಕೈಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು, ಮಹಾರಾಷ್ಟ್ರ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಹೇಳಿದ್ದಾರೆ.
“ನಾನು ಸೀಟು ಹಂಚಿಕೆ ಚರ್ಚೆಯಲ್ಲಿ ನೇರವಾಗಿ ಭಾಗಿಯಾಗಿಲ್ಲ. ಎನ್‌ಸಿಪಿ-ಎಸ್‌ಪಿ ರಾಜ್ಯ ಘಟಕದ ಮುಖ್ಯಸ್ಥ ಜಯಂತ್ ಪಾಟೀಲ್ ಅವರು ಮಾತುಕತೆಯಲ್ಲಿ ನಮ್ಮ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಹಂಚಿಕೊಂಡ ಮಾಹಿತಿಯ ಪ್ರಕಾರ, ಒಟ್ಟು 288 ಸ್ಥಾನಗಳ ಪೈಕಿ ಸರಿಸುಮಾರು 200 ಸ್ಥಾನಗಳ ಕುರಿತು ಒಮ್ಮತಕ್ಕೆ ಬರಲಾಗಿದೆ” ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಎನ್‌ಸಿಪಿ (ಎಸ್‌ಪಿ) ಸತಾರಾ ಜಿಲ್ಲೆಯಲ್ಲಿ ಯಾವ ಸ್ಥಾನಗಳಿಗೆ ಬೇಡಿಕೆ ಇಡುತ್ತದೆ ಎಂಬ ಪ್ರಶ್ನೆಗೆ ಅವರು, ಸೀಟು ಹಂಚಿಕೆ ಕುರಿತು ಪಾಟೀಲ್ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ), ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಶರರ್ ಚಂದ್ರ ಪವಾರ್) ಒಳಗೊಂಡಿರುವ ಎಂವಿಎ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಆಡಳಿತಾರೂಢ ಮಹಾಯುತಿ ಮೈತ್ರಿ ವಿರುದ್ಧ ಹೋರಾಡುತ್ತಿದೆ. ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳು ಕ್ರಮವಾಗಿ ಜೂನ್ 2022 ಮತ್ತು ಜುಲೈ 2023 ರಲ್ಲಿ ವಿಭಜನೆಯಾದ ನಂತರ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ಇಂಡಿಯಾ ಮೈತ್ರಿಕೂಟದ ಕಾರ್ಯತಂತ್ರದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಪವಾರ್, ಆ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ ಮತ್ತು ಅದು ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
“ನಾವು ಹರಿಯಾಣ ಫಲಿತಾಂಶಗಳನ್ನು ಅಧ್ಯಯನ ಮಾಡುತ್ತಿದ್ದೇವೆ, ಆದರೆ ಅದೇ ಸಮಯದಲ್ಲಿ ಜಮ್ಮು ಕಾಶ್ಮೀರದ ಚುನಾವಣಾ ಫಲಿತಾಂಶಗಳನ್ನು ನೋಡಿ. ಹರಿಯಾಣ ಫಲಿತಾಂಶಗಳು ಮಹಾರಾಷ್ಟ್ರ ಚುನಾವಣೆಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ, ವಿಶ್ವ ಸಮುದಾಯವು ಅದರ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತದೆ ಮತ್ತು ಅದರ ಚುನಾವಣೆಯ ಫಲಿತಾಂಶಗಳು ದೇಶಕ್ಕೆ ಹೆಚ್ಚು ಮಹತ್ವದ್ದಾಗಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಶೇಖ್ ಹಸೀನಾ ವಿರುದ್ಧ ಬಂಧನ ವಾರಂಟ್ ಹೊರಡಿಸಿದ ಬಾಂಗ್ಲಾದೇಶದ ನ್ಯಾಯಾಲಯ!
ಶೇಖ್ ಹಸೀನಾ ವಿರುದ್ಧ ಬಂಧನ ವಾರಂಟ್ ಹೊರಡಿಸಿದ ಬಾಂಗ್ಲಾದೇಶದ ನ್ಯಾಯಾಲಯ!


