ಬಿಜೆಪಿ ತನ್ನ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣಾ ಪ್ರಚಾರದಲ್ಲಿ ಬಳಸು ಉದ್ದೇಶಿಸಿರುವ ‘ಬಾಟಂಗೆ ತೋ ಕಟೆಂಗೆ’ (ವಿಭಜಿತವಾದರೆ, ನಾವು ನಾಶವಾಗುತ್ತೇವೆ) ಘೋಷಣೆಯನ್ನು, ಅದರ ಮೈತ್ರಿ ಪಾಲುದಾರ ಎನ್‌ಸಿಪಿಯ ನಾಯಕ ಅಜಿತ್ ಪವಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದೂ ಐಕ್ಯತೆಯ ಘೋಷಣೆಯು ಮಹಾರಾಷ್ಟ್ರದಲ್ಲಿ ಪ್ರತಿಧ್ವನಿಸುವುದಿಲ್ಲ ಎಂದ ಅವರು, ಅದರ ಬದಲಾಗಿ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಒತ್ತಿ ಹೇಳಿದರು.
‘ಇಂಡಿಯಾ ಟುಡೇ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, “ನಾನು ಅದನ್ನು ಬೆಂಬಲಿಸುವುದಿಲ್ಲ. ಇದನ್ನು ಹಲವಾರು ಬಾರಿ ಹೇಳಿದ್ದೇನೆ. ಮಹಾರಾಷ್ಟ್ರದಲ್ಲಿ ಇದು ಕೆಲಸ ಮಾಡುವುದಿಲ್ಲ. ಇದು ಯುಪಿ, ಜಾರ್ಖಂಡ್ ಅಥವಾ ಇತರ ಕೆಲವು ಸ್ಥಳಗಳಲ್ಲಿ ಕೆಲಸ ಮಾಡಬಹುದು” ಎಂದರು.
ಬಾಂಗ್ಲಾದೇಶದಲ್ಲಿ ಹಿಂದೂ ವಿರೋಧಿ ಹಿಂಸಾಚಾರವನ್ನು ಉಲ್ಲೇಖಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೊದಲು ಪರಿಚಯಿಸಿದ, ನಂತರ ಆರ್‌ಎಸ್‌ಎಸ್ ಮತ್ತು ಅನೇಕ ಬಿಜೆಪಿ ನಾಯಕರು ಅನುಮೋದಿಸಿದ ಈ ಘೋಷಣೆಯು ಮಹಾರಾಷ್ಟ್ರದಲ್ಲಿ ಬಿಜೆಪಿಯ ಕೇಂದ್ರ ಪ್ರಚಾರ ಮಾರ್ಗವಾಯಿತು. ಮಹಾರಾಷ್ಟ್ರದ ಚುನಾವಣಾ ರ್ಯಾಲಿಯಲ್ಲಿ ಆದಿತ್ಯನಾಥ್ ಅದನ್ನು ಪುನರಾವರ್ತಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಕೂಡ ಇತ್ತೀಚಿನ ಚುನಾವಣಾ ರ್ಯಾಲಿಯಲ್ಲಿ ಈ ಹೇಳಿಕೆಯನ್ನು ಪ್ರತಿಧ್ವನಿಸಿದರು. ಧುಲೆಯಲ್ಲಿ, “ನಾವು ಒಗ್ಗಟ್ಟಾಗಿ ಇದ್ದರೆ ನಾವು ಸುರಕ್ಷಿತವಾಗಿರುತ್ತೇವೆ” ಎಂದು ಪ್ರಧಾನಿ ಮೋದಿ ಹೇಳಿದರು.
“ಸಬ್ಕಾ ಸಾಥ್ ಸಬ್ಕಾ ವಿಕಾಸ್” ಮೇಲೆ ಕೇಂದ್ರೀಕರಿಸಬೇಕು ಎಂದು ಒತ್ತಿ ಹೇಳಿದ ಅವರು, ಮಹಾರಾಷ್ಟ್ರದಲ್ಲಿ ರಾಜಕೀಯ ವಿಭಿನ್ನವಾಗಿದೆ ಎಂದು ಬಿಜೆಪಿಗೆ ಸಲಹೆ ನೀಡಿದರು.
ಈ ಹಿಂದೆಯೂ ಈ ಘೋಷಣೆಯನ್ನು ಬಳಸಿದ್ದಕ್ಕೆ ಪವಾರ್ ವಿರೋಧ ವ್ಯಕ್ತಪಡಿಸಿದ್ದರು. ಕಳೆದ ವಾರ ಯೋಗಿ ಆದಿತ್ಯನಾಥ್ ಅವರ ರ್ಯಾಲಿಯ ನಂತರ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರದ ಜನರು ಯಾವಾಗಲೂ ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಶ್ರಮಿಸುತ್ತಿದ್ದಾರೆ ಎಂದರು.
“ಮಹಾರಾಷ್ಟ್ರವು ಛತ್ರಪತಿ ಶಿವಾಜಿ ಮಹಾರಾಜ್, ರಾಜರ್ಷಿ ಶಾಹು ಮಹಾರಾಜ್ ಮತ್ತು ಮಹಾತ್ಮ ಫುಲೆ ಅವರಿಗೆ ಸೇರಿದೆ. ನೀವು ಮಹಾರಾಷ್ಟ್ರವನ್ನು ಇತರ ರಾಜ್ಯಗಳೊಂದಿಗೆ ಹೋಲಿಸಲು ಸಾಧ್ಯವಿಲ್ಲ; ಮಹಾರಾಷ್ಟ್ರದ ಜನರು ಇದನ್ನು ಇಷ್ಟಪಡುವುದಿಲ್ಲ” ಎಂದು ಆದಿತ್ಯನಾಥ್ ಅವರ ಹೇಳಿಕೆಗಳ ಬಗ್ಗೆ ಕೇಳಿದಾಗ ಪವಾರ್ ಪ್ರತಿಕ್ರಿಯಿಸಿದರು.
ಇದನ್ನು ಒಡೆದು ಆಳುವ ರಾಜಕೀಯ ಎಂದು ಕಾಂಗ್ರೆಸ್ ಘೋಷಣೆ ಕೂಗಿದೆ. ಇದನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಒಂದು ಧರ್ಮವನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿಕಟ್ಟುತ್ತಿದೆ ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರವು ನವೆಂಬರ್ 20 ರಂದು ಒಂದೇ ಹಂತದಲ್ಲಿ ಮತದಾನ ಮಾಡಲಿದ್ದು, ಅಲ್ಲಿ ಬಿಜೆಪಿ, ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಒಳಗೊಂಡಿರುವ ಮಹಾಯುತಿ ಮೈತ್ರಿಕೂಟವು ಉದ್ಧವ್ ಠಾಕ್ರೆ ಅವರ ಶಿವಸೇನೆ, ಶರದ್ ಪವಾರ್ ಅವರನ್ನೊಳಗೊಂಡ ಎನ್‌ಸಿಪಿ ಮತ್ತು ಕಾಂಗ್ರೆಸ್ ಮಹಾ ವಿಕಾಸ್ ಅಘಾಡಿಯನ್ನು ಎದುರಿಸಲಿದೆ. ಮತ ಎಣಿಕೆ ಮೂರು ದಿನಗಳ ನಂತರ ನವೆಂಬರ್ 23 ರಂದು ನಡೆಯಲಿದೆ.
ಇದನ್ನೂ ಓದಿ; 370ನೇ ವಿಧಿಯ ಪರ ನಿರ್ಣಯ | ಕಾಶ್ಮೀರದ ವಿರುದ್ಧದ ಪಿತೂರಿ ಎಂದ ಮೋದಿ


