ವಿಧಾನಸಭೆ ಚುನಾವಣೆಗೆ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕವು 28 ಬಂಡಾಯ ನಾಯಕರನ್ನು ಭಾನುವಾರ (ನ.10) ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.
ರಾಮ್‌ಟೆಕ್ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವ ರಾಜೇಂದ್ರ ಮುಲಾಕ್, ಕಟೋಲ್‌ನಿಂದ ಯಜ್ಞವಾಲ್ಕ್ ಜಿಚ್ಕರ್, ಕಸ್ಬಾದಿಂದ ಕಮಲ್ ವ್ಯಾವಾರೆ, ಕೊಪ್ರಿ ಪಚ್ಪಖಾಡಿಯಿಂದ ಮನೋಜ್ ಶಿಂಧೆ ಮತ್ತು ಪಾರ್ವತಿಯಿಂದ ಆಬಾ ಬಾಗುಲ್ ಸೇರಿದಂತೆ ಪ್ರಮುಖ ನಾಯಕರನ್ನು ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ.
22 ವಿಧಾನಸಭಾ ಕ್ಷೇತ್ರಗಳಿಂದ 28 ಬಂಡಾಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಒಟ್ಟು 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಜಾರ್ಖಂಡ್ ಚುನಾವಣೆಯ ಜೊತೆಗೆ ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ), ಶರದ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ (ಎನ್‌ಸಿಪಿ ಎಸ್‌ಪಿ) ಮತ್ತು ಕಾಂಗ್ರೆಸ್ ಅನ್ನು ಒಳಗೊಂಡಿದೆ.
ಇದನ್ನೂ ಓದಿ : ಬಾಬಾ ಸಿದ್ದೀಕ್ ಹತ್ಯೆ ಪ್ರಕರಣ | ಪ್ರಮುಖ ಆರೋಪಿಯನ್ನು ಬಂಧಿಸಿದ ಪೊಲೀಸರು


