ಅತ್ಯಂತ ಅಪರೂಪದ ವೈದ್ಯಕೀಯ ವಿದ್ಯಮಾನದಲ್ಲಿ, ಮಹಾರಾಷ್ಟ್ರದ ಬುಲ್ಧಾನಾದಲ್ಲಿ ಹುಟ್ಟಲಿರುವ ಮಗುವಿನ ಹೊಟ್ಟೆಯೊಳಗೊಂದು ಬ್ರೂಣ ಪತ್ತೆಯಾಗಿದೆ.
ಎರಡು ದಿನಗಳ ಹಿಂದೆ 32 ವರ್ಷದ ಮಹಿಳೆಯೊಬ್ಬರು ‘ಸೋನೋಗ್ರಫಿ’ಗೆ ಒಳಗಾದಾಗ ಸರ್ಕಾರಿ ಆಸ್ಪತ್ರೆಯಲ್ಲಿ ‘ಭ್ರೂಣದಲ್ಲಿ ಭ್ರೂಣ’ ಪ್ರಕರಣ ಪತ್ತೆಯಾಗಿದೆ. ಈ ಅಪರೂಪದ ಜನ್ಮಜಾತ ಅಸಂಗತತೆಯನ್ನು ವಿಶ್ವಾದ್ಯಂತ ಸುಮಾರು 200 ಪ್ರಕರಣಗಳಲ್ಲಿ ಮಾತ್ರ ದಾಖಲಿಸಲಾಗಿದೆ, ಭಾರತದಲ್ಲಿ ಕೇವಲ 15-20 ಪ್ರಕರಣಗಳು ವರದಿಯಾಗಿವೆ.
“ಆರಂಭದಲ್ಲಿ ನನಗೆ ಆಶ್ಚರ್ಯವಾಯಿತು, ನಂತರ ಚಿತ್ರಗಳನ್ನು ಎಚ್ಚರಿಕೆಯಿಂದ ಮರುಪರಿಶೀಲಿಸಿದೆ” ಎಂದು ಭ್ರೂಣವನ್ನು ಕಂಡುಹಿಡಿದ ಸ್ತ್ರೀರೋಗ ತಜ್ಞ ಡಾ. ಪ್ರಸಾದ್ ಅಗರ್ವಾಲ್ ಹೇಳಿದರು.
“ಅದು ಬೆಳವಣಿಗೆಯಾಗುತ್ತಿರಲಿಲ್ಲ, ಇದು ನಿಜಕ್ಕೂ ಭ್ರೂಣದದೊಳಗೊಂದು ಭ್ರೂಣದ ಪ್ರಕರಣವಾಗಿತ್ತು” ಎಂದು ಅವರು ಹೇಳಿದರು.
ಮಹಿಳೆ ತನ್ನ ಒಂಬತ್ತನೇ ತಿಂಗಳ ಗರ್ಭಧಾರಣೆಯಲ್ಲಿದ್ದಳು, ಈ ಅಸಂಗತತೆಯು ಅತ್ಯಂತ ಅಪರೂಪ ಮತ್ತು ಅನಿರೀಕ್ಷಿತತೆಯಿಂದಾಗಿ ಹಿಂದಿನ ಸ್ಕ್ಯಾನ್‌ಗಳಲ್ಲಿ ಪತ್ತೆಯಾಗಲಿಲ್ಲ. “ಹಿಂದಿನ ಸೋನೋಗ್ರಫಿಯಲ್ಲಿ ಇದನ್ನು ಪತ್ತೆಯಾಗಿರಲಿಲ್ಲ. ಏಕೆಂದರೆ, ಇದು ಬಹಳ ಅಪರೂಪದ ಸ್ಥಿತಿಯಾಗಿದ್ದು, ಅಂತಹ ಸ್ಥಿತಿ ಅಸ್ತಿತ್ವದಲ್ಲಿರಬಹುದು ಎಂದು ಯಾರೂ ಊಹಿಸಲೂ ಸಾಧ್ಯವಿಲ್ಲ. ಆದ್ದರಿಂದ, ನಾನು ಒಂದೆರಡು ವೈದ್ಯರಿಂದ ವಿವರವಾದ ಅಧ್ಯಯನವನ್ನು ಮಾಡಿ ಅದನ್ನು ದೃಢಪಡಿಸಿದೆ” ಎಂದು ಡಾ. ಅಗರ್ವಾಲ್ ಹೇಳಿದರು.
“ತಾಯಿಗೆ ಸಾಮಾನ್ಯ ಹೆರಿಗೆಯಾಗುವ ಸಾಧ್ಯತೆಯಿದೆ” ಎಂದು ಬುಲ್ಧಾನಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಭಗವತ್ ಭೂಸಾರಿ ವಿವರಿಸಿದರು. “ಆದರೂ, ಜನನದ ನಂತರ ಮಗುವಿಗೆ ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರಬಹುದು” ಎಂದು ಅವರು ಹೇಳಿದರು.
ಈ ಸ್ಥಿತಿಯ ನಿಖರವಾದ ಕಾರಣವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗಿಲ್ಲ. ಆದರೆ, ಇದು ಒಂದೇ ರೀತಿಯ ಅವಳಿಗಳ ಬೆಳವಣಿಗೆಯ ಸಮಯದಲ್ಲಿ ಅಸಹಜತೆಯಿಂದ ಉಂಟಾಗುತ್ತದೆ ಎಂದು ನಂಬಲಾಗಿದೆ. ಪರಾವಲಂಬಿ ಅವಳಿ ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲವಾದ್ದರಿಂದ ಇದನ್ನು ನಿಜವಾದ ಅವಳಿ ಗರ್ಭಧಾರಣೆಯ ಬದಲು ಬೆಳವಣಿಗೆಯ ಅಸಂಗತತೆ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ; ಆಂಧ್ರ ಪ್ರದೇಶ| ₹1 ಕೋಟಿ ವಿಮೆ ಪಡೆಯಲು ತಂಗಿಯನ್ನೇ ಕೊಂದ ವ್ಯಕ್ತಿ; ಆರೋಪಿ ಬಂಧನ


