ಬೀಡ್ ಜಿಲ್ಲೆಯ ಸರ್‌ಪಂಚ್ (ಗ್ರಾಮದ ಮುಖ್ಯಸ್ಥ) ಸಂತೋಷ್ ದೇಶಮುಖ್ ಹತ್ಯೆ ಪ್ರಕರಣದಲ್ಲಿ ತಮ್ಮ ಆಪ್ತ ಸಹಾಯಕ ವಾಲ್ಮೀಕ್ ಕರಡ್ ಅವರನ್ನು ಆರೋಪಿಯನ್ನಾಗಿ ಹೆಸರಿಸಿದ ನಂತರ, ಸಚಿವ ಧನಂಜಯ ಮುಂಡೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಂಗಳವಾರ (ಮಾ.4) ತಿಳಿಸಿದ್ದಾರೆ.
“ಸಚಿವ ಧನಂಜಯ ಮುಂಡೆ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಾನು ರಾಜೀನಾಮೆಯನ್ನು ಅಂಗೀಕರಿಸಿದ್ದೇನೆ ಮತ್ತು ಮುಂದಿನ ಕ್ರಮಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಿದ್ದೇನೆ” ಎಂದು ಸಿಎಂ ಫಡ್ನವೀಸ್ ಹೇಳಿದ್ದಾರೆ.
मंत्री धनंजय मुंडे ने मुझे अपना इस्तीफा सौंप दिया है और मैंने इस्तीफा स्वीकार कर लिया है…
(मीडिया से संवाद | विधानभवन, मुंबई | 4-3-2025)#Maharashtra #MaharashtraPolitics pic.twitter.com/knrskUziA2
— Devendra Fadnavis (@Dev_Fadnavis) March 4, 2025
ಸಚಿವ ಸ್ಥಾನ ತೊರೆಯುವಂತೆ ಮುಂಡೆ ಅವರಿಗೆ ಸಿಎಂ ಫಡ್ನವಿಸ್ ಸೂಚಿಸಿದ್ದಾರೆ ಎಂದು ಫಡ್ನವೀಸ್ ಅವರ ಆಪ್ತ ಮೂಲಗಳು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿತ್ತು. ಈ ಬೆನ್ನಲ್ಲೇ ಮುಂಡೆ ರಾಜೀನಾಮೆ ನೀಡಿದ್ದಾಗಿ ಸಿಎಂ ಘೋಷಿಸಿದ್ದಾರೆ.
ಸರ್‌ಪಂಚ್ ದೇಶಮುಖ್ ಹತ್ಯೆ ಪ್ರಕರಣದ ಆರೋಪಪಟ್ಟಿಯನ್ನು ಸಿಐಡಿ ಸಲ್ಲಿಸಿದೆ ಮತ್ತು ಅದರಲ್ಲಿ ಧನಂಜಯ ಮುಂಡೆ ಆಪ್ತ ಸಹಾಯಕ ವಾಲ್ಮೀಕ್ ಕರಡ್ ಅವರನ್ನು ಮೊದಲ ಆರೋಪಿಯಾಗಿ ಹೆಸರಿಸಲಾಗಿದೆ. ಈ ಸಂಬಂಧ ಚರ್ಚಿಸಲು ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೋಮವಾರ (ಮಾ.3) ರಾತ್ರಿ ಸಿಎಂ ಫಡ್ನವೀಸ್ ಅವರನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಧನಂಜಯ ಮುಂಡೆ, ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪಾರ್ಲಿ ವಿಧಾನಸಭಾ ಕ್ಷೇತ್ರದ ಎನ್‌ಸಿಪಿ (ಅಜಿತ್ ಪವಾರ್ ಬಣ) ಶಾಸಕರಾಗಿದ್ದಾರೆ. ಅವರು ಈ ಹಿಂದೆ ಬೀಡ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.
ಪ್ರಸ್ತುತ, ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಪುಣೆ ಜೊತೆಗೆ ಬೀಡ್ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ.
ಬೀಡ್ ಜಿಲ್ಲೆಯ ಮಸಜೋಗ್ ಗ್ರಾಮದ ಸರ್‌ಪಂಚ್ ಸಂತೋಷ್ ದೇಶಮುಖ್ ಅವರನ್ನು ಕಳೆದ ವರ್ಷ (2024) ಡಿಸೆಂಬರ್ 9 ರಂದು ಜಿಲ್ಲೆಯ ಇಂಧನ ಕಂಪನಿಯನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ಅಪಹರಿಸಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು.
ದೇಶಮುಖ್ ಹತ್ಯೆ ಮತ್ತು ಅದಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಫೆಬ್ರವರಿ 27, 2025ರಂದು ಬೀಡ್ ಜಿಲ್ಲಾ ನ್ಯಾಯಾಲಯಕ್ಕೆ 1,200 ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದೆ.
ಸರ್‌ಪಂಚ್ ಕೊಲೆ, ಅವಾದಾ ಇಂಧನ ಕಂಪನಿಯಿಂದ ಹಣ ಸುಲಿಗೆ ಮಾಡಲು ಪ್ರಯತ್ನ ಮತ್ತು ಕಂಪನಿಯ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಸೇರಿ ಬೀಡ್‌ನ ಕೇಜ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ಈವರೆಗೆ ಏಳು ಜನರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಮೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಲ್ಲಿ ಒಬ್ಬ ಇನ್ನೂ ತಲೆಮರೆಸಿಕೊಂಡಿದ್ದಾನೆ.


